ಲವಂಗ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅದು ಸಾಕಷ್ಟು ಔಷಧಿ ಗುಣವನ್ನು ಹೊಂದಿದೆ. ಚಳಿಗಾಲದಲ್ಲಿ ಲವಂಗದ ಟೀ ಕುಡಿದ್ರೆ ರೋಗನಿರೋಧಕ ಶಕ್ತಿ ಹೆಚ್ಚಾಗೋದಲ್ದೆ ಮತ್ತೇನೆಲ್ಲ ಲಾಭವಿದೆ, ಅದನ್ನು ತಯಾರಿಸೋದು ಹೇಗೆ ಎಂಬ ಮಾಹಿತಿ ಇಲ್ಲಿದೆ. 

ಈ ಮೈಕೊರೆಯುವ ಚಳಿಯಲ್ಲಿ ಬಿಸಿಬಿಸಿಯಾಗಿ ಟೀ, ಕಾಫಿ ಸಿಕ್ಕಿದ್ರೆ ಸ್ವರ್ಗ. ಚಳಿಗಾಲದಲ್ಲಿ ಕುಡಿಯೋ ಟೀ ಸಂಖ್ಯೆ ಹೆಚ್ಚಾಗುತ್ತೆ. ದಿನಕ್ಕೆ ಒಂದು- ಎರಡು ಕಪ್ ಗೆ ಸೀಮಿತ ಆಗಿದ್ದೋರು ಮೂರ್ನಾಲ್ಕು ಕಪ್ ಚಹಾ ಹೀರ್ತಾರೆ. ಮೈ ಬೆಚ್ಚಗೆ ಮಾಡ್ಕೊಳ್ಳೋಕೆ ಅಂತ ಪ್ರತಿ ದಿನ ನಾಲ್ಕೈದು ಬಾರಿ ಟೀ ಕುಡಿದ್ರೆ ಆರೋಗ್ಯ ಹಾಳಾಗೋದು ಗ್ಯಾರಂಟಿ. ಟೀ ಕುಡಿಲೇಬೇಕು ಅನ್ನೋರು ಅದನ್ನು ಆರೋಗ್ಯಕರವಾಗಿ ತಯಾರಿಸಿ ಸೇವನೆ ಮಾಡಿ. ನಿಮ್ಮ ಆಯಾಸ ಕಡಿಮೆ ಆಗ್ಬೇಕು, ಸೋಮಾರಿತನ ಹೋಗ್ಬೇಕು, ಆರೋಗ್ಯಕರ ಚಹಾ ಕುಡಿಬೇಕು ಅನ್ನೋರು ಲವಂಗದ ಟೀ ತಯಾರಿಸಿ ಕುಡಿರಿ.

ಲವಂಗದಲ್ಲಿ ಏನೇನಿದೆ? : 

ಅಡುಗೆ ಮನೆಯ ಮಸಾಲೆ ಡಬ್ಬದಲ್ಲಿರುವ ಲವಂಗ ಆರೋಗ್ಯಕ್ಕೆ ಒಳ್ಳೆಯದು. ವಿಟಮಿನ್ ಸಿ, ವಿಟಮಿನ್ ಕೆ, ವಿಟಮಿನ್ ಎ, ವಿಟಮಿನ್ ಇ, ಫೋಲೇಟ್, ಮ್ಯಾಂಗನೀಸ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ, ರಂಜಕ, ಸತು ಮತ್ತು ತಾಮ್ರವನ್ನು ಲವಂಗ ಹೊಂದಿದೆ. ಇದು ಫೈಬರ್, ಕಾರ್ಬೋಹೈಡ್ರೇಟ್ಗಳು ಮತ್ತು ಯುಜೆನಾಲ್ನಂತಹ ಉತ್ಕರ್ಷಣ ನಿರೋಧಕಗಳನ್ನು ಸಹ ಹೊಂದಿದೆ.

ಕುಕ್ಕರ್ ಶಿಳ್ಳೆ ಹೊಡೆಯಲ್ವಾ, ಮಸಿ ಬಟ್ಟೆ ಕ್ಲೀನ್ ಆಗ್ತಿಲ್ವಾ?.. ಇಲ್ಲಿವೆ ಟಾಪ್ 5 Kitchen and Home tips

ಲವಂಗದ ಟೀ ಕುಡಿಯುವುದ್ರಿಂದ ಆಗುವ ಪ್ರಯೋಜನ : 

ನೀವು ಲವಂಗದ ಟೀ ಕುಡಿದಾಗ ದೇಹ ಜೀರ್ಣಕಾರಿ ಕಿಣ್ವಗಳನ್ನು ಬಿಡುಗಡೆ ಮಾಡುತ್ತದೆ. ಇದು ಆಹಾರ ಉತ್ತಮವಾಗಿ ಜೀರ್ಣಗೊಳ್ಳಲು ಸಹಕಾರಿ. ಹೊಟ್ಟೆ ಉಬ್ಬರವನ್ನು ಇದು ಕಡಿಮೆ ಮಾಡುತ್ತದೆ. ಮಸಾಲೆ ಆಹಾರ ಅಥವಾ ಊಟ ಮಾಡಿದಾಗ ಹೊಟ್ಟೆ ಭಾರ ಎನ್ನಿಸಿದ್ರೆ ನೀವು ಲವಂಗದ ಟೀ ಕುಡಿಯಬಹುದು.

ರೋಗನಿರೋಧಕ ಶಕ್ತಿ ಹೆಚ್ಚಳ ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಬೇಗ ಅನಾರೋಗ್ಯಕ್ಕೆ ಒಳಗಾಗ್ತಾರೆ. ನೀವು ರೋಗದಿಂದ ದೂರ ಇರ್ಬೇಕು, ಯಾವುದೇ ಸೋಂಕು ನಿಮ್ಮನ್ನು ಕಾಡಬಾರದು ಅಂದ್ರೆ ನಿಮ್ಮ ಇಮ್ಯೂನಿಟಿ ಬೂಸ್ಟ್ ಆಗ್ಬೇಕು ಅಂದ್ರೆ ಲವಂಗ ಚಹಾ ಸೇವನೆ ಮಾಡಿ.

ಗಂಟಲು ನೋವು ನಿವಾರಕ ಲವಂಗದ ಉಷ್ಣತೆ ನಿಮ್ಮ ಗಂಟಲಿಗೆ ಪ್ರಯೋಜನಕಾರಿ. ಲವಂಗವು ಗಂಟಲಿನ ಕಿರಿಕಿರಿಯನ್ನು ಕಡಿಮೆ ಮಾಡುವ ನೈಸರ್ಗಿಕ ಗುಣಗಳನ್ನು ಹೊಂದಿದೆ. ಗಂಟಲಿನಲ್ಲಿ ಶುಷ್ಕತೆ ಅಥವಾ ತುರಿಕೆ ಕಂಡುಬಂದ್ರೆ, ನೀವು ಲವಂಗ ಚಹಾ ಕುಡಿಯಿರಿ.

Leftover Chapati Dough: ರಾತ್ರಿ ಕಲಿಸಿದ ಹಿಟ್ಟಿನಿಂದ ಮಾಡಿದ ಚಪಾತಿ ಆರೋಗ್ಯಕರವೇ?

ಲವಂಗದ ಟೀ ತಯಾರಿಸಲು ಅಗತ್ಯವಿರುವ ಪದಾರ್ಥ : 

ಲವಂಗದ ಟೀ ತಯಾರಿಸೋದು ಬಹಳ ಸುಲಭ. ಅದಕ್ಕೆ ಹೆಚ್ಚಿನ ಪದಾರ್ಥಗಳ ಅಗತ್ಯವಿಲ್ಲ. ನೀರು, ಟೀ ಪುಡಿ, ಲವಂಗ, ಜಜ್ಜಿದ ಶುಂಠಿ, ಸಕ್ಕರೆ ಮತ್ತು ಹಾಲು ಅಗತ್ಯವಿದೆ.

ಲವಂಗದ ಟೀ ತಯಾರಿಸುವ ವಿಧಾನ : 

ಲವಂಗದ ಟೀ ತಯಾರಿಸಲು ಒಂದು ಪಾತ್ರೆಗೆ ನೀರನ್ನು ಹಾಕಿ ಕುದಿಸಲು ಇಡಿ. ಆ ನೀರಿಗೆ ಲವಂಗ ಮತ್ತು ಶುಂಠಿಯನ್ನು ಸೇರಿಸಿ ಕೆಲ ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. ಆ ನಂತರ ಈ ಮಿಶ್ರಣಕ್ಕೆ ಟೀ ಪುಡಿಯನ್ನು ಹಾಕಿ ಕುದಿಸಿ. ಮಿಶ್ರಣ ಚೆನ್ನಾಗಿ ಕುದಿಯಲು ಶುರುವಾದ್ಮೇಲೆ ಅದಕ್ಕೆ ಸಕ್ಕರೆ ಹಾಗೂ ಹಾಲನ್ನು ಸೇರಿಸಿ. ಸ್ವಲ್ಪ ಸಮಯ ಬಿಟ್ಟು, ಚಹಾ ಸೋಸಿ ಕುಡಿಯಿರಿ. ಪ್ರತಿ ದಿನ ನೀವು ಲವಂಗದ ಟೀ ಸೇವನೆ ಮಾಡಬಹುದು.

ಯಾರು ಸೇವನೆ ಮಾಡಬಾರದು? ಲವಂಗವು ರಕ್ತ ತೆಳುಗೊಳಿಸುವ ಔಷಧಿಯಾಗಿ ಕೆಲ್ಸ ಮಾಡುತ್ತದೆ. ರಕ್ತ ತೆಳುವಾಗಿಸುವ ಔಷಧಿಗಳನ್ನು ತೆಗೆದುಕೊಳ್ಳುವ ಜನರಿಗೆ ಲವಂಗ ಹಾನಿಯನ್ನುಂಟುಮಾಡಬಹುದು. ಹಾಗಾಗಿ ವೈದ್ಯರ ಸಲಹೆ ಇಲ್ಲದೆ ಲವಂಗದ ಸೇವನೆ ಮಾಡಬೇಡಿ. ಲವಂಗವು ಯುಜೆನಾಲ್ ಅನ್ನು ಹೊಂದಿರುತ್ತದೆ. ಅದನ್ನು ಅತಿಯಾಗಿ ಸೇವನೆ ಮಾಡಿದ್ರೆ ಯಕೃತ್ತಿಗೆ ಹಾನಿಯಾಗಬಹುದು. ಹಾಗಾಗಿ ಈ ಬಗ್ಗೆ ಎಚ್ಚರವಹಿಸಿ.