ವಿಚಿತ್ರ ಆಹಾರ ಸಂಯೋಜನೆಗಳ ಟ್ರೆಂಡ್‌ನಲ್ಲಿ ಚಹಾ ಮತ್ತು ಮ್ಯಾಗಿಯನ್ನು ಒಟ್ಟಿಗೆ ಮಿಕ್ಸ್ ಮಾಡಿ ಹೊಸ ಪ್ರಯೋಗ ಮಾಡಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿವಿಧ ಆಹಾರಗಳನ್ನು ಮಿಕ್ಸ್ ಮಾಡಿ ಬೇರೆಯದೇ ಒಂದು ತಿನಿಸುಗಳನ್ನು ತಯಾರಿಸುವ ಹೊಸ ಪ್ರಯೋಗಗಳು ಈಗ ಹೊಸತೇನಲ್ಲ, ರುಚಿ ಚೆನ್ನಾಗಿದ್ದರೆ ಇದು ಕ್ಲಿಕ್ ಆಗುತ್ತೆ ಇಲ್ಲದಿದ್ದರೆ ಜನರಿಂದ ಬೈಗುಳವನ್ನು ತಿನ್ನಬೇಕಾಗುತ್ತದೆ. ದೋಸೆಗೆ ಚಟ್ನಿ, ಪೂರಿಗೆ ಸಾಗು, ಚಪಾತಿಗೆ ಟೊಮೆಟೋ ಗೊಜ್ಜು ಇವೆಲ್ಲಾ ಸಾಮಾನ್ಯ ಹಾಗೂ ಸಂಪ್ರದಾಯಿಕವಾದ ಆಹಾರದ ಸಂಯೋಜನೆಗಳು ಎರಡನ್ನು ಮಿಶ್ರಣಗೊಳಿಸಿ ತಿಂದರೆ ಸಖತ್ ರುಚಿ ಎನಿಸುತ್ತದೆ. ಆದರೆ ಇತ್ತೀಚೆಗೆ ಆಹಾರ ವಿಚಿತ್ರವಾದ ಸಂಯೋಜನೆಗಳ ಟ್ರೆಂಡ್ ಹೆಚ್ಚಾಗಿದೆ. ಬೀದಿ ವ್ಯಾಪಾರಿಗಳು ವಿಚಿತ್ರ ಆಹಾರಗಳನ್ನು ಸಂಯೋಜಿಸಿ ಹೊಸ ಹೊಸ ಪ್ರಯೋಗ ಮಾಡುತ್ತಿರುತ್ತಾರೆ. ಅವುಗಳ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ.
ಕೆಲವೊಂದು ಒಪ್ಪಲಾಗದಂತಹ ಈ ಆಹಾರದ ಕಾಂಬಿನೇಷನ್‌ಗಳನ್ನುನೋಡಿಯೇ ವಾಂತಿ ಬರುವಂತಿರುತ್ತದೆ. ನೂಡಲ್ಸ್ ತುಂಬಿದ ಪಾನಿಪುರಿ, ಕಲ್ಲಂಗಡಿಗೆ ಸಾಸ್ ಮಿಕ್ಸ್ ಮಾಡಿ ನೀಡುವುದು, ಅಂಬ್ಲೆಟ್‌ಗೆ ನೂಡಲ್ಸ್ ಮಿಕ್ಸ್ ಮಾಡಿ ನೀಡುವುದು ಮುಂತಾದವೆಲ್ಲಾ ವಿಚಿತ್ರವೆನಿಸುವ ಆಹಾರದ ಸಂಯೋಜನೆಗಳಾಗಿವೆ. ಅದೇ ರೀತಿ ಈಗ ಆಹಾರದ ವಿಚಿತ್ರ ಸಂಯೋಜನೆಯೊಂದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೀಡಿಯೋ ನೊಡಿದ ಜನ ಚಹಾ ಹಾಗೂ ಮ್ಯಾಗಿಗೆ ನ್ಯಾಯ ನೀಡುವಂತೆ ಆಗ್ರಹಿಸಿದ್ದಾರೆ.
ವೈರಲ್ ಆದ ವೀಡಿಯೋದಲ್ಲೇನಿದೆ?
ಸಾಮಾನ್ಯವಾಗಿ ಮ್ಯಾಗಿ ಜೊತೆ ಚಹಾ ಕುಡಿಯುವುದು ಸಾಮಾನ್ಯ, ಫಾಸ್ಟ್ ಫುಡ್ ಇಷ್ಟಪಡುವರಿಗೆ ಮ್ಯಾಗಿ ತಿಂದು ಒಂದು ಲೋಟ ಬಿಸಿ ಬಿಸಿ ಟೀ ಕುಡಿದರೆ ಮನಸ್ಸಿಗೆ ಸಮಾಧಾನ ಎನಿಸುತ್ತದೆ. ಆದರೆ ಚಹಾದೊಳಗೆ ಮ್ಯಾಗಿಯನ್ನು ಮಿಕ್ಸ್ ಮಾಡಿ ನೀಡಿದರೆ ಹೇಗನಿಸಬಹುದು. ನೀವೇ ಹೇಳಿ... ಇಂತಹ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಮ್ಯಾಗಿ ಹಾಗೂ ಚಹಾಕ್ಕೆ ಕೂಡಲೇ ನ್ಯಾಯ ನೀಡುವಂತೆ ಆಗ್ರಹಿಸಿದ್ದಾರೆ. ಬಿಸಿ ಬಿಸಿ ಚಹಾ ತುಂಬಿದ ಮಣ್ಣಿನ ಗ್ಲಾಸ್‌ನೊಳಗೆ ಒಂದು ಸೌಟಿನಷ್ಟು ಮ್ಯಾಗಿ ತುಂಬಿ ಗ್ರಾಹಕರಿಗೆ ನೀಡಲಾಗುತ್ತದೆ.
Year Ender 2024: ಕೇಳುವಾಗಲೇ ವಾಕರಿಕೆ ತರಿಸಿ, ಸೋಶಿಯಲ್ ಮೀಡಿಯಾಗೆ ಶಾಕ್ ನೀಡಿದ ವರ್ಷದ ರೆಸಿಪಿಗಳು!
ನೆಟ್ಟಿಗರ ಅಸಮಾಧಾನ
ಈ ವೀಡಿಯೋವನ್ನು ನೋಡಿದ ನೆಟ್ಟಿಗರು ಈ ವಿಚಿತ್ರ ಆಹಾರ ಸಂಯೋಜನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಈ ಪ್ರಯೋಗವನ್ನು ಎಲ್ಲಿ ಮಾಡಲಾಗಿದೆ ಎಂಬ ಮಾಹಿತಿ ಇಲ್ಲ. ಆದರೆ ಇನ್ಸ್ಟಾಗ್ರಾಮ್‌ನಲ್ಲಿ bhukkad_bagh ಹೆಸರಿನ ಪೇಜ್‌ನಿಂದ ಈ ವೀಡಿಯೋ ವೈರಲ್ ಆಗಿದ್ದು, ಸಾವಿರಾರು ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ.
ಅನೇಕರು ಈ ಆಹಾರದ ಸಂಯೋಜನೆಯನ್ನು ಅಸಹ್ಯ ಎಂದು ಕರೆದಿದ್ದಾರೆ. ಚಹಾಗೂ ಸಿದ್ಧಪಡಿಸಿದ ಆಹಾರಕ್ಕೂ ತುಂಬಾ ವ್ಯತ್ಯಾಸವಿದೆ, ಇವೆರಡನ್ನು ಮಿಕ್ಸ್ ಮಾಡಬೇಡಿ ಇದು ನಿಮ್ಮ ಆರೋಗ್ಯದ ಮೇಲೆ ನಕರಾತ್ಮಕ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ, ಜನರಿಗೆ ಏನಾಗಿದೆ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಕೆಲವರು ಆನ್ಲೈನ್ ವೀಡಿಯೋಗಾಗಿ ಏನು ಬೇಕಾದರು ಮಾಡುತ್ತಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಕೆಲವರು ಹಸಿವಿನಿಂದ ಬಳಲುತ್ತಿದ್ದಾರೆ ಇವರಿಲ್ಲಿ ವೀಡಿಯೋಗಾಗಿ ಆಹಾರವನ್ನು ವೇಸ್ಟ್ ಮಾಡುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಅಂದಹಾಗೆ ಈ ವೀಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.
