ಅರಿಶಿಣ ರೋಗನಿರೋಧಕ ಗುಣವನ್ನು ಹೊಂದಿದ್ದು,ಅನೇಕ ರೋಗಗಳನ್ನು ಬಾರದಂತೆ ತಡೆಯಬಲ್ಲದು. ನಿಯಮಿತ ಅರಿಶಿಣ ಸೇವನೆಯಿಂದ ಕ್ಯಾನ್ಸರ್‍ನಂತಹ ಮಾರಕ ರೋಗ ಬಾರದಂತೆ ತಡೆಯಬಹುದು ಎಂಬುದು ವೈಜ್ಞಾನಿಕವಾಗಿಯೂ ದೃಢಪಟ್ಟಿದೆ. ಚರ್ಮ ರೋಗಗಳಿಗೂ ಅರಿಶಿಣ ರಾಮಬಾಣ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಅರಿಶಿಣದ ಕೊಂಬು, ಅದರ ಪುಡಿಯನ್ನು ನಾವು ನಿತ್ಯದ ಆಹಾರದಲ್ಲಿ ಬಳಸುತ್ತೇವೆ. ಆದರೆ, ಅರಿಶಿಣದ ಎಲೆ ಬಳಕೆ ತುಂಬಾನೇ ಕಡಿಮೆ. ಕರಾವಳಿ ಭಾಗದಲ್ಲಿ ಅರಿಶಿಣದ ಎಲೆಯಿಂದ ಸಿಹಿ ಕಡುಬು ತಯಾರಿಸುತ್ತಾರೆ. ಅರಿಶಿಣ ಎಲೆ ಕಡುಬು ಅಥವಾ ಗಟ್ಟಿ ಎಂದು ಕರೆಯಲ್ಪಡುವ ಈ ತಿನಿಸನ್ನು ಒಮ್ಮೆ ಸವಿದರೆ ಸಾಕು, ಅದರ ರುಚಿ ಹಾಗೂ ಪರಿಮಳವನ್ನು ಮರೆಯಲು ಸಾಧ್ಯವೇ ಇಲ್ಲ.ಇದು ಬಾಯಿಗೆ ರುಚಿಕಾರಿ,ಆರೋಗ್ಯಕ್ಕೂ ಹಿತಕಾರಿ.

ಗರಿ ಗರಿ ಸಾಬೂದಾನ್ ವಡೆ ಮತ್ತು ಪನ್ನೀರ್‌ ಚಿಲ್ಲಿ ಫ್ರೈ

ಬೇಕಾಗುವ ಸಾಮಗ್ರಿಗಳು:
ಅರಿಶಿಣ ಎಲೆಗಳು
ಕುಚ್ಚಲಕ್ಕಿ
ತಿಂಡಿ ಅಕ್ಕಿ
ತೆಂಗಿನ ತುರಿ
ಬೆಲ್ಲದ ಪುಡಿ
ಉಪ್ಪು
ನೀರು

ಮಾಡುವ ವಿಧಾನ:
-ಅರಿಶಿಣ ಎಲೆ ಕಡುಬಿಗೆ ಕುಚ್ಚಲಕ್ಕಿ ಮತ್ತು ತಿಂಡಿ ಅಕ್ಕಿಯನ್ನು 2:1 ಅನುಪಾತದಲ್ಲಿ ಬಳಸಬೇಕು. ಕುಚ್ಚಲಕ್ಕಿ ಹಾಗೂ ತಿಂಡಿ ಅಕ್ಕಿಯನ್ನು 4 ಗಂಟೆ ನೆನೆಹಾಕಬೇಕು.
-ನೆನೆಹಾಕಿದ ಕುಚ್ಚಲಕ್ಕಿಯನ್ನು ಚೆನ್ನಾಗಿ ತೊಳೆದು ಮಿಕ್ಸಿಯಲ್ಲಿ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ಈ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ. ಈಗ ಅದೇ ಜಾರಿಗೆ ತೊಳೆದ ತಿಂಡಿ ಅಕ್ಕಿಯನ್ನು ಹಾಕಿ ಸ್ವಲ್ಪ ನೀರು ಸೇರಿಸಿ ರುಬ್ಬಿಕೊಂಡು ಕುಚ್ಚಲಕ್ಕಿ ಹಿಟ್ಟಿನೊಂದಿಗೆ ಮಿಕ್ಸ್ ಮಾಡಿ.ಹಿಟ್ಟು ಗಟ್ಟಿಯಾಗಿರಬೇಕು.ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.ಸಾಧ್ಯವಾದರೆ ನೀರು ಬಳಸದೆ ಅಕ್ಕಿಯನ್ನು ರುಬ್ಬಿಕೊಳ್ಳಿ.
-ತೆಂಗಿನ ಕಾಯಿ ತುರಿಗೆ ಬೆಲ್ಲ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಸ್ಟೌವ್ ಮೇಲಿಟ್ಟು 2-3 ನಿಮಿಷ ಬಿಸಿ ಮಾಡಿ. ಹೀಗೆ ಮಾಡುವಾಗ ಸೌಟ್‍ನಿಂದ ಮಗುಚುತ್ತಿರಿ. ಇಲ್ಲವಾದರೆ ಬೆಲ್ಲ ಮತ್ತು ಕಾಯಿ ಪಾತ್ರೆಯ ತಳಕ್ಕೆ ಹಿಡಿದು ಸೀದು ಹೋಗುವ ಸಾಧ್ಯತೆಯಿದೆ. 
-ಈಗ ಅರಿಶಿಣ ಎಲೆಗಳನ್ನು ಚೆನ್ನಾಗಿ ತೊಳೆದು ಶುದ್ಧವಾದ ಬಟ್ಟೆಯಿಂದ ಒರೆಸಿ. 
-ಕೈಯನ್ನು ಒದ್ದೆ ಮಾಡಿಕೊಂಡು ಅರಿಶಿಣ ಎಲೆ ಮೇಲೆ ಸವರಿ. ಬಳಿಕ ಸ್ವಲ್ಪ ಅಕ್ಕಿ ಹಿಟ್ಟವನ್ನು ಎಲೆಯ ಮಧ್ಯಭಾಗದಲ್ಲಿಟ್ಟು ಕೈಯಿಂದ ಎಲೆಯ ಎಲ್ಲ ಭಾಗಕ್ಕೂ ಹರಡಿ.ಆದಷ್ಟು ತೆಳುವಾಗಿರುವಂತೆ ಹಿಟ್ಟನ್ನು ಎಲೆಗೆ ಹಚ್ಚಿ. ಎಲೆಯ ಬದಿಗಳಿಗೆ ಹಿಟ್ಟು ತಾಗದಂತೆ ನೋಡಿಕೊಳ್ಳಿ.

ಈ ದೇಸಿ ರೆಸಿಪಿ ಟ್ರೈ ಮಾಡಿ, ಸಖತ್ ರುಚಿ, ದೇಹಕ್ಕೂ ಒಳ್ಳೆಯದು

-ಈಗ ಹಿಟ್ಟಿನ ಮೇಲೆ ಕಾಯಿ ಮತ್ತು ಬೆಲ್ಲದ ಮಿಶ್ರಣವನ್ನು ಹರಡಿ.ಎಲೆಯನ್ನು ಜಾಗ್ರತೆಯಿಂದ ಅರ್ಧಭಾಗಕ್ಕೆ ಬರುವಂತೆ ಅಡ್ಡಲಾಗಿ ಮಡಚಿ.ಎಲೆಯ ಬದಿಗಳನ್ನು ಕೈಗಳಿಂದ ನಿಧಾನವಾಗಿ ಒತ್ತಿ ಹಿಟ್ಟು ಹೊರಬಾರದಂತೆ ಪ್ಯಾಕ್ ಮಾಡಿ. ಎಲೆಗಳನ್ನು ಇಡ್ಲಿ ಪಾತ್ರೆಯಲ್ಲಿಟ್ಟು 15-20 ನಿಮಿಷ ಹಬೆಯಲ್ಲಿ ಬೇಯಿಸಿ.
-ಬೆಂದ ಬಳಿಕ ಇಡ್ಲಿ ಪಾತ್ರೆಯಿಂದ ಎಲೆಯನ್ನು ಹೊರತೆಗೆದು ಅದರ ಮೇಲಿನ ಎಲೆಯನ್ನು ತೆಗೆದು ಸರ್ವ್ ಮಾಡಿ. ಅರಿಶಿಣದ ಎಲೆಯಲ್ಲಿ ಬೇಯಿಸಿದ ಕಾರಣಕ್ಕೆ ಕಡುಬಿಗೂ ಅದರ ಪರಿಮಳ ಹರಡಿರುತ್ತದೆ. ತುಂಬಾ ಸುವಾಸನೆ ಭರಿತವಾದ ಈ ಕಡುಬಿಗೆ ಕಾಯಿ ಮತ್ತು ಬೆಲ್ಲದ ಹೂರಣ ಸೇರಿರುವುದರಿಂದ ತಿನ್ನಲು ರುಚಿಯಾಗಿರುತ್ತದೆ.ಈ ಕಡುಬು ಎರಡು ದಿನಗಳ ಕಾಲವಿಟ್ಟರೂ ಹಾಳಾಗದು.
-ಸಿಹಿ ಬೇಡ ಎನ್ನುವವರು ಕಾಯಿ ಹೂರಣವನ್ನು ಬಳಸದೆ ಹಾಗೆಯೇ ಬೇಯಿಸಬಹುದು. ಸಿಹಿ ಹಾಕದ ಕಡುಬನ್ನು ಚಟ್ನಿ ಅಥವಾ ಸಾಂಬಾರ್‍ನೊಂದಿಗೆ ಸವಿಯಬಹುದು.
-ಅರಿಶಿಣ ಎಲೆ ಸಿಗದಿದ್ದರೆ ಅದರ ಬದಲಿಗೆ ಬಾಳೆ ಎಲೆ ಬಳಸಿ ಕೂಡ ಈ ಕಡುಬು ಮಾಡಬಹುದು. ಆದರೆ, ಬಾಳೆಎಲೆಯಲ್ಲಿ ಮಾಡಿದ ಕಡುಬಿಗೆ ಅರಿಶಿಣ ಎಲೆಯ ಕಡುಬಿನಷ್ಟು ಸುವಾಸನೆ ಹಾಗೂ ರುಚಿಯಿರುವುದಿಲ್ಲ. 
-ಕುಚ್ಚಲಕ್ಕಿ ಬೇಡ ಎನ್ನುವವರು ತಿಂಡಿ ಅಕ್ಕಿಯನ್ನು ಮಾತ್ರವೇ ಬಳಸಬಹುದು. ಆದರೆ, ಕುಚ್ಚಲಕ್ಕಿ ಬಳಸಿದ್ರೆ ರುಚಿ ಚೆನ್ನಾಗಿರುತ್ತದೆ.