Asianet Suvarna News Asianet Suvarna News

ರೆಡಿಯಾಗಿ ಸಿಗುವ ಯಾವುದೂ ಒಳಿತಲ್ಲ, ಇನ್ಸ್‌ಟೆಂಟ್ ನೂಡಲ್ಸ್ ಇದಕ್ಕೆ ಹೊರತಲ್ಲ!

ಅನುಮಾನವಿದ್ದರೆ ಯಾವ ವೈದ್ಯರನ್ನಾದರೂ ಕೇಳಿ ನೋಡಿ, ಇನ್ಸ್‌ಟೆಂಟ್ ನೂಡಲ್ಸ್ ಆರೋಗ್ಯಕ್ಕೆ ಒಳ್ಳೆಯದೆನ್ನುವ ಒಬ್ಬರಾದರೂ ಸಿಕ್ಕರೆ ಆಮೇಲೆ ಮಾತಾಡಿ. ಜೀವನದಲ್ಲಿ ಕಷ್ಟಪಡದೆ ಸಿಕ್ಕುವುದು ಯಾವುದೂ ಹೇಗೆ ಒಳ್ಳೆಯದಲ್ಲವೋ, ಸುಲಭವಾಗಿ ತಯಾರಾಗುವ ನೂಡಲ್ಸ್ ಕೂಡಾ ಹಾಗೆಯೇ. 

Top 10 Reasons to Avoid Instant Noodles
Author
Bangalore, First Published Dec 10, 2019, 4:01 PM IST

ಇನ್ಸ್‌ಟೆಂಟ್ ನೂಡಲ್ಸ್ ಎಂಬುದು ಜಂಕ್ ಫುಡ್‌ನ ಅತಿ ಕರಾಳ ರೂಪ. ದಿನಸಿ ಅಂಗಡಿಯಲ್ಲಿ ಸಿಗುವ ಫಾಸ್ಟ್ ಫುಡ್ ಆದ ಕಾರಣಕ್ಕೆ ಹಲವರು ಇದನ್ನು ಆರೋಗ್ಯಕರ ಎಂದು ಭಾವಿಸುತ್ತಾರೆ. ಸ್ವಲ್ಪ ತರಕಾರಿ ಸೇರಿಸಿದರೆ ಅದರ ಕೆಟ್ಟದ್ದೆಲ್ಲ ನಾಶವಾಗುತ್ತದೆ ಎಂದುಕೊಳ್ಳುತ್ತಾರೆ.

ಆದರೆ ತರಕಾರಿ ಸಹವಾಸದಿಂದ ನೂಡಲ್ಸ್ ಏನೂ ಒಳ್ಳೆಯದಾಗುವುದಿಲ್ಲ. ತರಕಾರಿಯ ಲಾಭ ದೇಹಕ್ಕೆ ಎಷ್ಟು ಸಿಗುತ್ತದೋ ನೂಡಲ್ಸ್‌ನ ಕೆಡುಕು ಕೂಡಾ ದೇಹಕ್ಕೆ ಅಷ್ಟೇ ಸೇರುತ್ತದೆ. ಹೆಚ್ಚೇನು ಪೋಷಕಸತ್ವಗಳನ್ನು ಹೊಂದಿಲ್ಲದಿದ್ದರೂ, ದೇಹದ ವ್ಯವಸ್ಥೆಯನ್ನು ಹದಗೆಡಿಸುವ ಸಾಮರ್ಥ್ಯವಂತೂ ಈ ಇನ್ಸ್‌ಸ್ಟ್ಯಾಂಟ್ ನೂಡಲ್ಸ್‌ಗೆ ಚೆನ್ನಾಗೇ ಇದೆ. 
ಇಷ್ಟಕ್ಕೂ ಇನ್ಸ್‌ಟೆಂಟ್ ನೂಡಲ್ಸ್ ಏಕೆ ಕೆಟ್ಟದ್ದು ಎಂದರೆ, 

ಕೊರೆವ ಚಳಿಗೆ ಮಾಡಿ ಮ್ಯಾನ್ ಚೋ ಸೂಪ್,ಕ್ಯಾರೆಟ್ ಸೂಪ್,ಪಾಲಕ್ ಸೂಪ್!

1. ನ್ಯೂಟ್ರಿಶನಲ್ ವ್ಯಾಲ್ಯೂ ಇಲ್ಲ

ವಿಟಮಿನ್ಸ್, ಮಿನರಲ್ಸ್, ಫೈಬರ್ ಇತ್ಯಾದಿಗಳ ವಿಷಯದಲ್ಲಿ ಹೇಗೇ ಲೆಕ್ಕ ಹಾಕಿದರೂ ಇನ್ಸ್‌ಟೆಂಟ್ ನೂಡಲ್ಸ್‌ನಲ್ಲಿ ನಯಾಪೈಸೆ ಪೋಷಕಸತ್ವಗಳು ಸಿಗುವುದಿಲ್ಲ. ಅದೇನಿದ್ದರೂ ನಾಲಿಗೆಗಷ್ಟೇ, ಹೊಟ್ಟೆಗೆ ಹಿತವಲ್ಲ. ಮಾಡಲು ಸುಲಭ, ತಿನ್ನಲು ರುಚಿ ಎಂಬುದನ್ನು ಬಿಟ್ಟರೆ ಇದನ್ನು ಸೇವಿಸಲು ಒಂದೇ ಒಂದು ಉತ್ತಮ ಕಾರಣ ಸಿಗುವುದಿಲ್ಲ. ಇದರಲ್ಲಿರುವುದೇನಿದ್ದರೂ ಶುಗರ್, ಸ್ಯಾಚುರೇಟೆಡ್ ಫ್ಯಾಟ್ ಹಾಗೂ ಸಿಕ್ಕಾಪಟ್ಟೆ ಕ್ಯಾಲೋರಿಗಳು. 

2. ಅಧಿಕ ಸೋಡಿಯಂ

ನೂಡಲ್ಸ್‌ಗಳಲ್ಲಿ ಸೋಡಿಯಂ ಅಧಿಕವಾಗಿರುತ್ತದೆ. ಪದೇ ಪದೆ ಸೇವಿಸುವ ಅಭ್ಯಾಸವಿದ್ದರೆ ಇದರಿಂದ ಕಿಡ್ನಿಗೆ ಹಾನಿಯುಂಟಾಗಬಹುದು. ಜೊತೆಗೆ, ಸ್ಟ್ರೋಕ್ ರಿಸ್ಕ್ ಕೂಡಾ ಹೆಚ್ಚುತ್ತದೆ.

3. ಹೈ ಕಾರ್ಬೋರೇಟ್

ಇನ್ಸ್‌ಟೆಂಟ್ ನೂಡಲ್ಸ್‌ಗಳಲ್ಲಿ ಅನಾರೋಗ್ಯಕಾರಿ ಕಾರ್ಬೋಹೈಡ್ರೇಟ್ ತುಂಬಿಹೋಗಿದ್ದು, ಇದು ತೂಕ ಹೆಚ್ಚಳ, ಡಯಾಬಿಟೀಸ್ ಹಾಗೂ ಹೃದಯದ ಕಾಯಿಲೆಗಳಿಗೆ ಎಡೆ ಮಾಡಿಕೊಡಬಹುದು.

ಈ ಕೆಫೆಯಲ್ಲಿ ಕಸ ಕೊಟ್ರೆ ಫುಡ್ ಕೊಡ್ತಾರೆ!

4. ಕೆಮಿಕಲ್ ಕಪ್ಸ್

ಕಪ್‌ನಲ್ಲಿ ಕೂಡಾ ಇನ್ಸ್‌ಟೆಂಟ್ ನೂಡಲ್ಸ್ ಸಿಗುವುದು ಗೊತ್ತೇ ಇದೆ. ಈ ಕಪ್‌ಗಳನ್ನು ಡೈಯೋಕ್ಸಿನ್ ಹಾಗೂ ಮನುಷ್ಯರ ಹಾರ್ಮೋನುಗಳನ್ನು ಹೋಲುವ ಇತರೆ ವಸ್ತುಗಳಿಂದ ತಯಾರಿಸಲಾಗಿರುತ್ತದೆ. ಇದಕ್ಕೆ ಬಿಸಿ ನೀರು ಹಾಕಿದಾಗ ಈ ಕೆಮಿಕಲ್‌ಗಳು ತಿನ್ನುವ ನೂಡಲ್ಸ್ ಜೊತೆ ಸೇರಿಕೊಳ್ಳಬಹುದು. 

5. ಎಂಎಸ್‌ಜಿ ಫ್ಲೇವರಿಂಗ್

ಇನ್ಸ್‌ಟೆಂಟ್ ನೂಡಲ್ಸ್‌ನ ಸೀಸನಿಂಗ್ ಆಗಿ ಬರುವ ಮಸಾಲೆ ಪೂರ್ತಿ ಮೋನೋಸೋಡಿಯಂ ಗ್ಲುಟಮೇಟ್(ಎಂಎಸ್‌ಜಿ)ನಿಂದ ಕೂಡಿರುತ್ತದೆ. ರುಚಿ ಹೆಚ್ಚಿಸುವ ಸಲುವಾಗಿ ಇದನ್ನು ಬಳಸಲಾಗಿರುತ್ತದೆ. ಇದು ಬಹಳಷ್ಟು ಜನರಲ್ಲಿ ತಲೆ ಹಾಗೂ ಎದೆಯಲ್ಲಿ ಉರಿ ತರುವ ಜೊತೆಗೆ ತಲೆನೋವು, ಮೈಕೈ ನೋವಿಗೆ ಕಾರಣವಾಗುತ್ತದೆ. ಆದರೂ ಎಂಎಸ್‌ಜಿಯ ಕಾರಣದಿಂದ ಜನ ನೂಡಲ್ಸ್‌ಗೆ ಅಡಿಕ್ಟ್ ಆಗುವ ಸಾಧ್ಯತೆ ಹೆಚ್ಚು. ಒಮ್ಮೆ ಅಡಿಕ್ಟ್ ಆಗಿದುದರಿಂದ ಹೊರಬರುವುದು ಎಷ್ಟು ಕಷ್ಟವೆಂಬುದು ನಿಮಗೆ ಗೊತ್ತೇ ಇದೆ. 

6. ಅಪಾಯಕಾರಿ ಇನ್‌ಗ್ರೀಡಿಯಂಟ್ಸ್

ನೂಡಲ್ಸ್ ಒಣಗಬಾರದೆಂಬ ಕಾರಣಕ್ಕೆ ಇನ್ಸ್‌ಟೆಂಟ್ ನೂಡಲ್ಸ್‌ನಲ್ಲಿ ಪ್ರಾಪಿಲಿನ್ ಗ್ಲೈಕಾಲ್ ಬಳಸಲಾಗುತ್ತದೆ. ಇದನ್ನೇ ಆ್ಯಂಟಿಫ್ರೀಜ್‌‌ಗಾಗಿ ಬಳಸಲಾಗುತ್ತದೆ. 

7. ಬೊಜ್ಜು

ಇನ್ಸ್‌ಟೆಂಟ್ ನೂಡಲ್ಸ್‌ನಿಂದ ಬೊಜ್ಜು ಬರುವ ಜೊತೆಗೆ, ಮಲಬದ್ಧತೆ ಸೇರಿದಂತೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಹಲವು ಸಮಸ್ಯೆಗಳು ತಲೆದೋರಬಹುದು. 

ಸಂಜೆಯ ಕುರುಕಲು ಕರುಮಾಕುರುಂ ಟೊಮ್ಯಾಟೋ ಸೇವ್ !

8. ಆರ್ಟಿಫಿಶಿಯಲ್ ಅಡಿಟಿವ್ಸ್

ನೂಡಲ್ಸ್‌ಗಳಲ್ಲಿ ಸಿಕ್ಕಾಪಟ್ಟೆ ಆರ್ಟಿಫಿಶಿಯಲ್ ಫ್ಲೇವರ್ಸ್ ಹಾಗೂ ಕಲರ್‌ಗಳನ್ನು ಬಳಸಲಾಗುತ್ತದೆ. ಅಷ್ಟು ಸಾಲದೆಂಬಂತೆ ಅವು ಹೆಚ್ಚು ಕಾಲ ಕೆಡದಂತೆ ಉಳಿಯಲಿ ಎಂದು ಪ್ರಿಸರ್ವೇಟಿವ್‌ಗಳನ್ನು ಯಥೇಚ್ಛ ಬಳಸಲಾಗುತ್ತದೆ. ಇವು ನಮ್ಮ ಮೆಟಾಬಾಲಿಕ್ ವ್ಯವಸ್ಥೆಯನ್ನೇ ಅಲ್ಲೋಲಕಲ್ಲೋಲಗೊಳಿಸಬಲ್ಲವು. ಇದರಿಂದಾಗಿ ತೂಕ ಇಳಿಸುವುದು ಬಹಳ ಕಷ್ಟವಾಗುತ್ತದೆ.

9. ಬೆಳವಣಿಗೆ ಕುಗ್ಗುತ್ತದೆ

ಐದು ವರ್ಷ ವಯಸ್ಸಿನೊಳಗಿನ ಮಕ್ಕಳು ಪ್ರತಿದಿನ ಇನ್ಸ್‌ಟೆಂಟ್ ನೂಡಲ್ಸ್ ಸೇವನೆ ಮಾಡಿದರೆ ಅವರ ದೇಹವು ನ್ಯೂಟ್ರಿಯೆಂಟ್ಸ್ ಸೆಳೆದುಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಇದರಿಂದಾಗಿ ಆ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ. 

10. ಗರ್ಭಿಣಿಯರಿಗೆ  ಅಪಾಯಕಾರಿ

ಪ್ರಗ್ನೆನ್ಸಿ ಆರಂಭದಲ್ಲಿ ಹುಚ್ಚಾಪಟ್ಟೆ ಇನ್ಸ್‌ಟೆಂಟ್ ನೂಡಲ್ಸ್ ತಿಂದರೆ  ಅದು ಭ್ರೂಣದ ಬೆಳವಣಿಗೆ ತಡೆಯುತ್ತದೆ. ಇದರಿಂದ ಅಬಾರ್ಶನ್ ಆಗುವ ಸಾಧ್ಯತೆಗಳು ಹೆಚ್ಚು ಎಂದು ಕೆಲ ವರದಿಗಳು ತಿಳಿಸಿವೆ. ಈ ವರದಿ ಕುರಿತ ಸಂಶೋಧನೆ ಇನ್ನಷ್ಟೇ ನಡೆಯಬೇಕಿದೆಯಾದರೂ ಯಾವ ವೈದ್ಯರು ಕೂಡಾ ಪ್ರಗ್ನೆನ್ಸಿಯಲ್ಲಿ ಇನ್ಸ್‌ಟೆಂಟ್ ನೂಡಲ್ಸ್ ತಿನ್ನುವುದನ್ನು ಒಪ್ಪುವುದಿಲ್ಲ ಎಂಬುದು ಗಮನಾರ್ಹ. ಏಕೆಂದರೆ, ಇವುಗಳಲ್ಲಿ ನ್ಯೂಟ್ರಿಶನ್ ಇಲ್ಲದಿರುವ ಕಾರಣದಿಂದ ತಾಯಿ ಹಾಗೂ ಮಗು ಇಬ್ಬರೂ ಅನಾರೋಗ್ಯಕ್ಕೊಳಗಾಗಬಹುದು ಎಂಬುದು ಅವರು ಕೊಡುವ ಕಾರಣ.

Follow Us:
Download App:
  • android
  • ios