ಕೆಫೆ, ರೆಸ್ಟೋರೆಂಟ್‌ಗಳು ಎಲ್ಲ ನಗರಗಳಲ್ಲೂ ನಾಯಿಕೊಡೆಗಳಂತೆ ಎದ್ದಿವೆ. ಆದರೆ, ಅವುಗಳ ಮಧ್ಯೆ ತಮ್ಮ ವಿಭಿನ್ನ ಸ್ವರೂಪದಿಂದ, ವಿಶಿಷ್ಠತೆಯಿಂದ ಸೆಳೆಯುವಂಥ ಕೆಲವು ಕೆಫೆಗಳು ವಿಶೇಷವೆನಿಸುತ್ತವೆ. 

ಗಾರ್ಬೇಜ್ ಕೆಫೆ, ಅಂಬಿಕಾಪುರ

ದೇಶದಲ್ಲೇ ಈ ರೀತಿಯ ಕೆಫೆ ಇದೇ ಮೊದಲು. ಛತ್ತೀಸ್‌ಘಢದಲ್ಲಿ ಆರಂಭವಾಗಿರುವ ಈ ಕೆಫೆ ಹೊಸ ರೀತಿಯ ಕೆಫೆ ಮಾಡಬೇಕೆನ್ನುವವರಿಗೆ ಮಾದರಿ. ಲಂಡನ್‌ನ ರಬ್ಬಿಶ್ ಕೆಫೆಯಿಂದ ಸ್ಪೂರ್ತಿ ಪಡೆದು ಆರಂಭಿಸಿರುವ ಈ ಕೆಫೆಯಲ್ಲಿ ನೀವು ಪ್ಲ್ಯಾಸ್ಟಿಕ್ ಕಸ ಕೊಟ್ಟು ಬದಲಿಗೆ ಫ್ರೀ ಊಟ ಪಡೆಯಬಹುದು. ಇಲ್ಲಿನ ಅಂಬಿಕಾನಗರದ ಮುನಿಸಿಪಲ್ ಕಾರ್ಪೋರೇಶನ್‌ನ ಕಮಿಶನರ್ ಮನೋಜ್ ಸಿಂಗ್ ಅವರ ಕನಸಿನ ಕೂಸಾದ ಇದು, ಕಸ ಹೆಕ್ಕುವವರು ಸೇರಿದಂತೆ ಊಟಕ್ಕೆ ಪರದಾಡುವಂಥ ವರ್ಗದ ಜನರಿಗೆ ಕೂಡಾ ವರದಾನವಾಗಿದೆ. ಇಲ್ಲಿ 1 ಕೆಜಿ ಪ್ಲ್ಯಾಸ್ಟಿಕ್ ಕಸ ಕೊಟ್ಟರೆ ಫುಲ್ ಮೀಲ್ ಕಡುತ್ತಾರೆ. ಒಂದೂವರೆ ಕೆಜಿ ಪ್ಲ್ಯಾಸ್ಟಿಕ್ ಕೊಟ್ಟರೆ ಬಾಯಲ್ಲಿ ನೀರೂರಿಸುವ ತಿಂಡಿ ಕೊಡಲಾಗುತ್ತದೆ. ಹೀಗೆ ಸಂಗ್ರಹಿಸಿದ ತ್ಯಾಜ್ಯವನ್ನು ನಗರದ ರಸ್ತೆ ನಿರ್ಮಾಣದಲ್ಲಿ ಬಳಸಲಾಗುತ್ತದೆ. ಈಗಾಗಲೇ ಛತ್ತೀಸ್‌ಗಡದ ರಸ್ತೆಯೊಂದು ಪ್ಲ್ಯಾಸ್ಟಿಕ್‌ನಿಂದ ನಿರ್ಮಾಣವಾಗಿದೆ. 

ಬ್ರೆಡ್‌ನ 10 ಯುನಿಕ್ ಬ್ರೇಕ್ ಫಾಸ್ಟ್‌ಗಳಿವು

ಭಾರತದಲ್ಲಿ ಸುಮಾರು 1 ಲಕ್ಷ ಕಿಲೋಮೀಟರ್‌ನಷ್ಟು ಪ್ಲ್ಯಾಸ್ಟಿಕ್ ರೋಡ್ ನಿರ್ಮಾಣವಾಗಿದ್ದು, ಬೆಳೆಯುತ್ತಿರುವ ಪ್ಲ್ಯಾಸ್ಟಿಕ್ ಸಮಸ್ಯೆಗೆ ಇದೊಂದು ಉತ್ತಮ ಪರಿಹಾರವಾಗಬಲ್ಲದು. ಏಕೆಂದರೆ ಸಾಮಾನ್ಯ ಡಾಂಬರು ರಸ್ತೆಗಿಂತ ಪ್ಲ್ಯಾಸ್ಟಿಕ್ ರಸ್ತೆ ಮೂರು ಪಟ್ಟು ಹೆಚ್ಚು ಬಾಳಿಕೆ ಬರುತ್ತದೆ. 

ಅಂದ ಹಾಗೆ ಅಂಬಿಕಾಪುರವು ಭಾರತದಲ್ಲಿ ಎರಡನೇ ಅತ್ಯಂತ ಸ್ವಚ್ಛ ನಗರ ಖ್ಯಾತಿಗೆ ಪಾತ್ರವಾಗಿದೆ. ಈ ಹೆಸರು ಉಳಿಸಿಕೊಳ್ಳಲು ಹಾಗೂ ನಗರವನ್ನು ಕಸಮುಕ್ತವಾಗಿಸುವ ನಿಟ್ಟಿನಲ್ಲಿ ಈ ಗಾರ್ಬೇಜ್ ಕೆಫೆ ಆರಂಭವಾಗಿದೆ. 

ಕುಂಝುಮ್ ಕೆಫೆ, ಹಾಝ್ ಖಾಸ್ ವಿಲೇಜ್, ದೆಲ್ಲಿ

ಈ ಕುಂಝುಮ್ ಕೆಫೆ ಟ್ರಾವೆಲರ್‌ಗಳಿಗೆ ಮೀಟಿಂಗ್ ಪಾಯಿಂಟ್. ಇದರ ಮಾಲೀಕ ಅಜಯ್ ಜೈನ್ ಸ್ವತಃ ಟ್ರಾವೆಲ್ ಪ್ರಿಯರಾಗಿದ್ದು, ಇಲ್ಲಿ ಬಂದ ಟ್ರಾವೆಲರ್‌ಗಳು ಗೋಡೆಯ ಮೇಲೆ ಅವರ ನೆನಪುಗಳನ್ನು ಬಿಟ್ಟು ಹೋಗಲು ಅವಕಾಶ ಕಲ್ಪಿಸಿದ್ದಾರೆ. ಈ ಕೆಫೆಯ ವಿಶೇಷತೆ ಏನು ಕೇಳಿದ್ರಾ ? ಉಳಿದ ಕೆಫೆಗಳಂತೆ ಇಲ್ಲಿ ಮೆನು ಇಲ್ಲ, ಆಹಾರಕ್ಕೆ ರೇಟ್ ಇಲ್ಲ, ಟೀ, ಕಾಫಿ, ಕುಕೀಸ್ ಹೊರತಾಗಿ ಬೇರೆ ಆಹಾರವೂ ಸಿಗುವುದಿಲ್ಲ. ಆದರೆ, ಗ್ರಾಹಕರು ತಾವು ಸೇವಿಸಿದ ಕಾಫಿ, ಬಿಸ್ಕೇಟ್‌ಗಾಗಿ ಏನನ್ನು ಬೇಕಾದರೂ ಇಲ್ಲಿ ಬಿಟ್ಟು ಹೋಗಬಹುದು. ಅಥವಾ ಏನೂ ಕೊಡದೆಯೂ ಹೋಗಬಹುದು. ಪೇಂಟಿಂಗ್ ಎಕ್ಸಿಬಿಶನ್ ಹಾಗೂ ಇತರೆ ವರ್ಕ್‌ಶಾಪ್‌ಗಳನ್ನು ನಡೆಸುವ ಮೂಲಕ ಈ ಕೆಫೆ ನಡೆಸಲು ಬೇಕಾದ ಹಣ ಸಂಗ್ರಹಿಸಲಾಗುತ್ತದೆ. ಇಲ್ಲಿ ಪುಸ್ತಕಗಳನ್ನು ಓದಬಹುದು, ಟ್ರಾವೆಲ್ ಪ್ಲ್ಯಾನಿಂಗ್ ಮಾಡಬಹುದು, ಕವನ ವಾಚನ ನಡೆಸಬಹುದು, ಯಾವ ಪುಟ್ಟ ಕಾರ್ಯಕ್ರಮಗಳನ್ನು ಬೇಕಾದರೂ ನಡೆಸಬಹುದು. ಒಟ್ಟಿನಲ್ಲಿ ಬಂದವರೆಲ್ಲರೂ ಇಲ್ಲೊಂದು ನೆನಪನ್ನು ಉಳಿಸಿ, ತೆಗೆದುಕೊಂಡು ಹೋಗುತ್ತಾರೆ. 

ಬಾಯಲ್ಲಿ ನೀರು ಬರಿಸೋ ಬೆಸ್ಟ್ ಚಟ್ನಿ ಬೆಂಗಳೂರಲ್ಲಿ ಎಲ್ಲಿ ಸಿಗುತ್ತೆ?

ತಿಹಾರ್ ಫುಡ್ ಕೋರ್ಟ್, ತಿಹಾರ್

ಈ ಏರ್ ಕಂಡಿಶನ್ಡ್ ರೆಸ್ಟೋರೆಂಟ್‌ನಲ್ಲಿ ಕುಳಿತರೆ ಸ್ಟಾಫ್‌ಗಳು ನಗುಮೊಗದಿ ಸರ್ವ್ ಮಾಡುತ್ತಾರೆ. ವರ್ಕಿಂಗ್ ಡೇ ದಿನದ ಊಟಕ್ಕೆ ಸರಿಯಾದ ತಾಣ ಎನಿಸುತ್ತದೆ. ಆದರೆ, ಇಲ್ಲೊಂದು ಟ್ವಿಸ್ಟ್ ಇದೆ, ಈ ಹೋಟೆಲ್‌ನ ಸ್ಟಾಫ್ ಮೆಂಬರ್‌ಗಳೆಲ್ಲರೂ ದೊಡ್ಡ ದೊಡ್ಡ ಅಪರಾಧ ಮಾಡಿ ಅದಕ್ಕಾಗಿ ಶಿಕ್ಷೆ ಅನುಭವಿಸುತ್ತಿರುವವರೇ. ಹೌದು, ಇದು ತಿಹಾರ್ ಜೈಲ್‌ನ ಫುಡ್ ಕೋರ್ಟ್. 
ದೇಶದ ಅತಿ ದೊಡ್ಡ ಜೈಲೆನಿಸಿಕೊಂಡಿರುವ ತಿಹಾರ್‌ ಜೈಲಿನಲ್ಲಿ ಅಧಿಕಾರಿಗಳು, ಪೋಲೀಸ್ ವರ್ಗ ಇಲ್ಲಿನ ಅಪರಾಧಿಗಳಿಗೆ ಹೊರ ಹೋದ ಮೇಲೆ ಉತ್ತಮ ಜೀವನ ನಡೆಸಲು ಸಹಾಯವಾಗುವಂತೆ ಸಾಧ್ಯವಾದ ತರಬೇತಿಯನ್ನು ನೀಡುತ್ತಾರೆ. ಅದರ ಭಾಗವಾಗಿ ಈ ಫುಡ್ ಕೋರ್ಟ್ ಕೂಡಾ ನಡೆಯುತ್ತಿದೆ. ಇಲ್ಲಿ ಅಪರಾಧಿಗಳೇ ವೇಯ್ಟರ್ಸ್, ಮ್ಯಾನೇಜರ್, ಅಡುಗೆ ಮಾಡುವವರು ಎಲ್ಲವೂ. ಅಡುಗೆಯಲ್ಲಿ ಆಸಕ್ತಿ ಇರುವ ಯಾವುದೇ ಅಪರಾಧಿ ಇಲ್ಲಿ ಬಂದು ಅಡುಗೆ ತಯಾರಿಸಬಹುದು. ಥಾಲಿ, ಸಮೋಸಾ, ಕಚೋರಿ, ರಾಜ್ಮಾ ಚಾವಲ್ ಸೇರಿದಂತೆ ಚಿಕ್ಕ ಮೆನುವಿನೊಂದಿಗೆ ಚೊಕ್ಕದಾಗಿ ನಡೆಯುತ್ತಿದೆ ತಿಹಾರ್ ಫುಡ್ ಕೋರ್ಟ್. 

ಗೋಲ್ಡನ್ ಪರ್ಲ್, ಹೆಬ್ಬಾಳ, ಬೆಂಗಳೂರು

ಈ ಚೆಂದದ ರೆಸ್ಟೋರೆಂಟ್ ನೀರಿನಲ್ಲಿ ತೇಲುತ್ತಿದೆ. ಹೌದು, ನಾಗವಾರ ಕೆರೆಯಲ್ಲಿ ತೇಲುವ ಈ ರೆಸ್ಟೋರೆಂಟ್ ಎಕೋ ಫ್ರೆಂಡ್ಲಿ ಕೂಡಾ ಆಗಿರುವುದು ವಿಶೇಷ. ಇದರ ಚಾವಣಿ ಮೇಲಿರುವ ಸೋಲಾರ್ ಪ್ಯಾನೆಲ್ ಒಂದೇ ರೆಸ್ಟೋರೆಂಟ್‌ಗೆ ಏಕೈಕ ಎಲೆಕ್ಟ್ರಿಸಿಟಿ ಸಪ್ಲೈಯರ್. ನಗರದ ಸಾಯುತ್ತಿರುವ ಕೆರೆಗಳ ರಕ್ಷಣೆಗೆ ಪಣ ತೊಟ್ಟಿರುವ ರೆಸ್ಟೋರೆಂಟ್ ಕೆರೆಯನ್ನು ಸ್ವಚ್ಚವಾಗಿಡುವತ್ತ ಗಮನ ಹರಿಸುತ್ತಿದೆ. ಕೆರೆಯ ಸ್ವಚ್ಛತೆ ಕಾಪಾಡುವ ಸಲುವಾಗಿ ಈ ರೆಸ್ಟೋರೆಂಟ್‌ನಲ್ಲಿ ಟಾಯ್ಲೆಟ್‌ಗಳಾಗಲೀ, ವಾಶ್‌ಬೇಸಿನ್ ಆಗಲೀ ಇಡಲಾಗಿಲ್ಲ. ಈ ಸೌಲಭ್ಯಗಳನ್ನು ಹತ್ತಿರದ ನೆಲದಲ್ಲಿ ಅಳವಡಿಸಲಾಗಿದೆ. ಮಾಲಿನ್ಯಕ್ಕೆ ಕಾರಣವಾಗಬಾರದೆಂದೇ ಇದಕ್ಕೆ ಯಾವುದೇ ಇಂಜಿನ್ ಬಳಸಿಲ್ಲ. ಬದಲಿಗೆ ಜೆಟ್ಟಿಯ ಸಹಾಯದಿಂದ ಗ್ರಾಹಕರು ಬೋಟ್‍‌ನತ್ತ ಹೋಗಬಹುದು. ಈ ಹೋಟೆಲ್‌ ಮೆನುವಿನ ಹೈಲೈಟ್ ಸೀಫುಡ್. ಇದರೊಂದಿಗೆ ದಕ್ಷಿಣ ಭಾರತೀಯ, ಉತ್ತರ ಭಾರತೀಯ, ಚೈನೀಸ್, ಕಾಂಟಿನೆಂಟಲ್ ಫುಡ್ ಜೊತೆಗೆ ಬಾರ್ ಮೆನು ಕೂಡಾ ಇದೆ. 

ಬೆಂಗಳೂರಿನಲ್ಲಿ ಮಿಸ್ ಮಾಡದೇ ಮಸಾಲ ದೋಸೆ ತಿನ್ನಬೇಕಾದ ಜಾಗಗಳು!

ಸೇವಾ ಕೆಫೆ, ಅಹಮದಾಬಾದ್

ಕೊಡುವುದರಲ್ಲಿ ಖುಷಿಯಿದೆ ಎಂಬ ಆದರ್ಶದ ಮೇಲೆ ಈ ರೆಸ್ಟೋರೆಂಟ್ ಕೆಲಸ ಮಾಡುತ್ತಿದೆ. ಇಲ್ಲಿ ಯಾವ ಆಹಾರಕ್ಕೂ ಹಣವಿಲ್ಲ. ಆದರೆ, ಮೆನುವಿನಲ್ಲಿ "ನೀವು ತಿನ್ನುತ್ತಿರುವ ಊಟ ನಿಮಗಿಂತ ಮುಂಚೆ ಬಂದವರ ಉಡುಗೊರೆ. ಈ ಉಡುಗೊರೆಯ ಚೈನ್ ಜೀವಂತವಾಗಿಡಲು, ನಿಮ್ಮ ನಂತರ ಉಣ್ಣುವವರ ಖರ್ಚನ್ನು ನೀವು ಭರಿಸಿ" ಎಂಬ ನೋಟ್ ಇದೆ. ಹೌದು, ಈ ರೆಸ್ಟೋರೆಂಟ್‌ನಲ್ಲಿ ಪ್ರತಿಯೊಬ್ಬರೂ ಪರಿಚಯವೇ ಇರದ, ಪರಿಚಯವೂ ಆಗದ ತಮ್ಮ ನಂತರ ಬರುವ ಗ್ರಾಹಕರ ಊಟಕ್ಕಾಗಿ ಬೆಲೆ ತೆತ್ತು ಹೋಗುತ್ತಾರೆ. ಇಲ್ಲಿ ನಿಮ್ಮನ್ನು ಯಾರೂ ಗ್ರಾಹಕರಂತೆ ನೋಡದೆ ಅತಿಥಿಯಂತೆ ನಡೆಸಿಕೊಳ್ಳುತ್ತಾರೆ. ಇಲ್ಲಿನ ಹಣಕಾಸಿನ ಎಲ್ಲ ವಿಷಯಗಳನ್ನೂ ಪಾರದರ್ಶಕವಾಗಿಡಲಾಗುತ್ತದೆ ಹಾಗೂ ಲಾಭ ಬಂದರೆ ಅದು ಸಾಮಾಜಿಕ ಅಭಿವೃದ್ಧಿ ಕಾರ್ಯಗಳಿಗೆ ಹೋಗುತ್ತದೆ. ಎಂಥ ಚೆಂದದ ಯೋಚನೆಯಲ್ಲವೇ?