ಅಡುಗೆ ಮಾಡೋರಿಗೆ ಗೊತ್ತಿರಲೇಬೇಕಾದ ವಿಷಯ ಇದು!
ಮಿಕ್ಕಿ ಉಳಿದ ಅನ್ನ,ಸಾಂಬಾರನ್ನು ಮತ್ತೆ ಬಿಸಿ ಮಾಡಿ ತಿನ್ನೋದು ಕಾಮನ್. ಆದ್ರೆ ಕೆಲವು ಆಹಾರ ಪದಾರ್ಥಗಳನ್ನು ಮತ್ತೆ ಬೇಯಿಸೋದ್ರಿಂದ ಅವು ವಿಷಯುಕ್ತವಾಗಿ,ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ.
ಅಡುಗೆಮನೆಯಲ್ಲಿ ಜಾಸ್ತಿ ಸಮಯ ಕಳೆಯಲು ಆಧುನಿಕ ಮಹಿಳೆಗೆ ಟೈಮ್ ಇಲ್ಲ. ಮನೆ ಜೊತೆ ಆಫೀಸ್ ಜವಾಬ್ದಾರಿಗಳನ್ನೂ ನಿಭಾಯಿಸಬೇಕಾದ ಕಾರಣ ಅಡುಗೆ ವಿಚಾರದಲ್ಲೂ ಮಹಿಳೆ ಸ್ಮಾರ್ಟ್ ವರ್ಕರ್ ಆಗಿದ್ದಾಳೆ. ಇದಕ್ಕಾಗಿಯೇ ವರ್ಕಿಂಗ್ ವಿಮೆನ್ ಪದೇಪದೆ ಅಡುಗೆ ಮಾಡುವ ಕಷ್ಟವನ್ನು ಮೈ ಮೇಲೆ ಎಳೆದುಕೊಳ್ಳಲ್ಲ. ಒಂದು ದಿನ ಸಾಂಬಾರ್ ಮಾಡಿದ್ರೆ ಅದನ್ನೇ ಎರಡು ದಿನಕ್ಕೆ ಬಳಸುತ್ತಾರೆ. ಇವರ ಈ ಪ್ಲ್ಯಾನ್‍ಗೆ ನೆರವು ನೀಡೋದು ಫ್ರಿಜ್. ಹೌದು, ಬಳಸಿ ಉಳಿದ ತಿಂಡಿ-ತಿನಿಸು, ಸಾಂಬಾರು ಎಲ್ಲವನ್ನೂ ಫ್ರಿಜ್‍ವೊಳಗೆ ತುಂಬಿಸಿಡುತ್ತಾರೆ. ಬಳಸುವ ಮುನ್ನ ಬಿಸಿ ಮಾಡುತ್ತಾರೆ. ಆದ್ರೆ ಈ ರೀತಿ ಆಹಾರ ಪದಾರ್ಥಗಳನ್ನು ಸಂಗ್ರಹಿಸಿಡೋದು, ಮತ್ತೆ ಬಿಸಿ ಮಾಡೋದ್ರಿಂದ ಕೆಲವು ಪದಾರ್ಥಗಳು ವಿಷಯುಕ್ತವಾಗುತ್ತವೆ. ಅನೇಕ ಅಧ್ಯಯನಗಳು ಇದನ್ನು ಸಾಬೀತುಪಡಿಸಿವೆ ಕೂಡ. ಹಾಗಾದ್ರೆ ಯಾವೆಲ್ಲ ಆಹಾರ ಪದಾರ್ಥಗಳನ್ನು ಮತ್ತೆ ಬಿಸಿ ಮಾಡಬಾರದು ಎಂಬುದನ್ನು ನೋಡೋಣ ಬನ್ನಿ.
ಚಾಕಲೇಟ್ ತಿನ್ನಿ, ತಿನ್ನಿಸಿ; ಚಾಕಲೇಟ್ ಡೇ ಆಚರಿಸಿ!
ಅನ್ನ
ಬಹುತೇಕ ಎಲ್ಲ ಮನೆಗಳಲ್ಲೂ ಮಿಕ್ಕಿದ ಅನ್ನವನ್ನು ಹಾಗೆಯೇ ಇಟ್ಟು ಮತ್ತೆ ಬಳಸುವ ಅಭ್ಯಾಸವಂತೂ ಇದೆ. ರಾತ್ರಿ ಮಿಕ್ಕಿ ಉಳಿದ ಅನ್ನದಿಂದ ಬೆಳಗ್ಗೆ ಚಿತ್ರಾನ್ನ ತಯಾರಿಸುತ್ತಾರೆಯೇ ಹೊರತು ತಂಗಳು ಎಂದು ಹೊರಗೆಸೆಯೋದು ಕಡಿಮೇನೆ. ಈ ರೀತಿ ತಂಗಳನ್ನ ಬಿಸಿ ಮಾಡಿಕೊಂಡು ತಿನ್ನೋದ್ರಿಂದ ಹೊಟ್ಟೆ ಕೆಡುವ ಸಾಧ್ಯತೆಯೂ ಇದೆ. ಅನ್ನ ಮಿಕ್ಕಿದಾಗ ಬಹುತೇಕರು ಅದನ್ನು ಫ್ರಿಜ್‍ನಲ್ಲಿಡೋದಿಲ್ಲ. ಬದಲಿಗೆ ಹೊರಗಡೆಯೇ ಇಟ್ಟಿರುತ್ತಾರೆ. ಅನ್ನ ಬೇಗ ಹಾಳಾಗೋದಿಲ್ಲ ಎಂಬ ಕಾರಣಕ್ಕೆ ಹೀಗೆ ಮಾಡುತ್ತಾರೆ. ಆದ್ರೆ ಕೋಣೆಯ ಸಾಮಾನ್ಯ ತಾಪಮಾನದಲ್ಲಿ ಅನ್ನದಲ್ಲಿ ಬ್ಯಾಕ್ಟೀರಿಯಾಗಳ ಸಂಖ್ಯೆ ಹೆಚ್ಚುತ್ತದೆ, ಬಿಸಿ ಮಾಡಿದ್ರೂ ಇದು ಕಡಿಮೆಯಾಗೋದಿಲ್ಲ. ಇಂಥ ಅನ್ನ ತಿನ್ನೋದ್ರಿಂದ ವಾಂತಿ ಹಾಗೂ ಭೇದಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಮೊಟ್ಟೆ
ಮೊಟ್ಟೆಯಿಂದ ಆಮ್ಲೇಟ್ ಮಾಡುತ್ತೇವೆ,ಬೇಯಿಸಿಕೊಂಡು ತಿನ್ನುತ್ತೇವೆ, ಬಿರಿಯಾನಿ, ಕರಿ..ಹೀಗೆ ಏನೆಲ್ಲ ಮಾಡುತ್ತೇವೆ. ಮೊಟ್ಟೆ ಪರಿಪೂರ್ಣ ಆಹಾರವಾಗಿದ್ದು, ದಿನಕ್ಕೊಂದು ಮೊಟ್ಟೆ ಆರೋಗ್ಯಕ್ಕೆ ಉತ್ತಮ ಎಂಬುದು ವೈದ್ಯರ ಸಲಹೆ. ಆದ್ರೆ ಬೇಯಿಸಿದ ಮೊಟ್ಟೆಯನ್ನು ಅಧಿಕ ತಾಪಮಾನದಲ್ಲಿ ಮತ್ತೆ ಬಿಸಿ ಮಾಡಿ ತಿನ್ನೋದು ವಿಷಕಾರಿಯಾಗಿದ್ದು, ಇದ್ರಿಂದ ಜೀರ್ಣ ನಾಳದಲ್ಲಿ ಸೋಂಕು ಉಂಟಾಗುವ ಸಾಧ್ಯತೆಯಿದೆ.
ಆಲೂಗಡ್ಡೆ
ಅಡುಗೆಮನೆಯಲ್ಲಿ ಟೊಮ್ಯಾಟೋ ನಂತರದ ಸ್ಥಾನ ಆಲೂಗಡ್ಡೆಯದು. ಆಲೂಗಡ್ಡೆ ರುಚಿಯನ್ನು ಇಷ್ಟಪಡದವರು ಕಡಿಮೆ. ಆದ್ರೆ ಬೇಯಿಸಿದ ಆಲೂಗಡ್ಡೆಯನ್ನು ಮತ್ತೆ ಬಿಸಿ ಮಾಡಿದ್ರೆ ಅದರಲ್ಲಿರುವ ಪೌಷ್ಟಿಕಾಂಶ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ, ಬೇಯಿಸಿದ ಆಲೂಗಡ್ಡೆಯನ್ನು ದೀರ್ಘಕಾಲದ ತನಕ ಕೋಣೆಯ ಸಾಮಾನ್ಯ ತಾಪಮಾನದಲ್ಲಿಟ್ಟರೆ ಅದು ವಿಷಯುಕ್ತವಾಗುವ ಸಾಧ್ಯತೆಯಿದೆ. ಇದನ್ನು ಸೇವಿಸೋದ್ರಿಂದ ಫುಡ್ ಪಾಯಿಸ್ನಿಂಗ್ ಆಗಬಹುದು.
ಕರಾವಳಿಗರ ಮಳೆಗಾಲದ ಮೆಚ್ಚಿನ ತಿನಿಸು ಪತ್ರೊಡೆ
ಚಿಕನ್
ಚಿಕನ್‍ನಲ್ಲಿ ಪ್ರೋಟೀನ್ ಅಧಿಕ ಪ್ರಮಾಣದಲ್ಲಿರುವ ಕಾರಣ ಬೇಯಿಸಿದ ಬಳಿಕ ಅದನ್ನು ಮತ್ತೆ ಮತ್ತೆ ಬಿಸಿ ಮಾಡಿ ಸೇವಿಸೋದ್ರಿಂದ ಅಜೀರ್ಣದಂತಹ ಸಮಸ್ಯೆ ಉಂಟಾಗುತ್ತದೆ. ಒಂದು ವೇಳೆ ಬೇಯಿಸಿದ ಚಿಕನ್ ಅನ್ನು ಬಿಸಿ ಮಾಡಲೇಬೇಕಾದ ಅಗತ್ಯವಿದ್ರೆ ಕಡಿಮೆ ಉಷ್ಣತೆಯಲ್ಲಿ ಸ್ವಲ್ಪ ಹೆಚ್ಚು ಹೊತ್ತು ಬಿಸಿ ಮಾಡಿ ಸೇವಿಸಿ.
ಹಸಿರು ಸೊಪ್ಪುಗಳು
ಹಸಿರು ಸೊಪ್ಪುಗಳಲ್ಲಿ ನೈಟ್ರೇಟ್ಸ್ ಹಾಗೂ ಕಬ್ಬಿಣಾಂಶ ಹೇರಳವಾಗಿರುತ್ತವೆ. ಬೇಯಿಸಿದ ಸೊಪ್ಪನ್ನು ಮತ್ತೆ ಬಿಸಿ ಮಾಡಿದಾಗ ನೈಟ್ರೇಟ್ಸ್ ನೈಟ್ರೀಟ್ಸ್ ಹಾಗೂ ಕ್ಯಾನ್ಸರ್‍ಕಾರಕ ಪದಾರ್ಥಗಳ ಉತ್ಪಾದನೆಗೆ ಕಾರಣವಾಗುತ್ತದೆ.
ಮಶ್ರೂಮ್
ಮಶ್ರೂಮ್‍ಗಳು ಕೂಡ ಪ್ರೋಟೀನ್‍ನಿಂದ ಸಮೃದ್ಧವಾಗಿವೆ. ಹೀಗಾಗಿ ಮಶ್ರೂಮ್ ಅನ್ನು ಮರು ಬಿಸಿ ಮಾಡೋದ್ರಿಂದ ಅದರ ಪ್ರೋಟೀನ್ ರಚನೆಯಲ್ಲಿ ಬದಲಾವಣೆಯಾಗುತ್ತದೆ. ಇದು ನಮ್ಮ ದೇಹಕ್ಕೆ ಅಪಾಯಕಾರಿ. ಹೀಗಾಗಿ ಮಶ್ರೂಮ್‍ನಿಂದ ಖಾದ್ಯ ತಯಾರಿಸಿದ್ರೆ ಅದೇ ದಿನ ತಿಂದು ಖಾಲಿ ಮಾಡೋದು ಒಳ್ಳೆಯದು. ಮರುದಿನ ಅದನ್ನು ಬಿಸಿ ಮಾಡಿ ತಿಂದ್ರೆ ಜೀರ್ಣ ಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳ ಜೊತೆ ಗಂಭೀರ ಹೃದಯ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಸಾಂಪ್ರದಾಯಿಕ ಇಡ್ಲಿಗೆ ಹೊಸ ರುಚಿ ನೀಡಿ ಆಸಕ್ತಿಕರವಾಗಿಸಿ
ಆಯಿಲ್
ವಾಲ್‍ನಟ್, ಅವಕಡೋ. ಗ್ರೇಪ್‍ಸೀಡ್ ಆಯಿಲ್‍ಗಳನ್ನು ಮರುಬಿಸಿ ಮಾಡೋದು ಆರೋಗ್ಯಕ್ಕೆ ಹಾನಿಕಾರಕ. ಆದಕಾರಣ ಈ ಆಯಿಲ್‍ಗಳನ್ನು ಅಡುಗೆ ಅಥವಾ ಫ್ರೈ ಮಾಡೋದಕ್ಕೆ ಬಳಸಬಾರದು. ಅಡುಗೆಯ ಕೊನೆಯಲ್ಲಿ ಅಥವಾ ಊಟಕ್ಕೂ ಮೊದಲು ಖಾದ್ಯಗಳ ಮೇಲೆ ಈ ಎಣ್ಣೆಗಳನ್ನು ಸಿಂಪಡಿಸುವ ಮೂಲಕ ರುಚಿಯನ್ನು ಹೆಚ್ಚಿಸಬಹುದು.