ಮಳೆಗಾಲ ಬಂತೆಂದ್ರೆ ಕರಾವಳಿ ಹಾಗೂ ಮಲೆನಾಡಿನ ಜನರಿಗೆ ಮನೆಯೊಳಗೆ ಬೆಚ್ಚಗೆ ಕುಳಿತು ಬಿಸಿ ಬಿಸಿ ತಿನಿಸುಗಳನ್ನು ತಯಾರಿಸುವ ಹುಮ್ಮಸ್ಸು. ಮನೆ ಸುತ್ತಮುತ್ತ ನೈಸರ್ಗಿಕವಾಗಿ ಸಿಗುವ ಸೊಪ್ಪು, ತರಕಾರಿಗಳಿಂದಲೇ ವೈವಿಧ್ಯಮಯ ಖಾದ್ಯ ಸಿದ್ಧಪಡಿಸುತ್ತಾರೆ. ಕರಾವಳಿ ಭಾಗದಲ್ಲಿ  ಸಿದ್ಧಪಡಿಸುವ ಇಂಥ ಖಾದ್ಯಗಳಲ್ಲಿ ಅತ್ಯಂತ ಜನಪ್ರಿಯವಾದದ್ದು ಪತ್ರೊಡೆ. ಅದೂ ಆಟಿ ತಿಂಗಳಲ್ಲಿ ಪತ್ರೊಡೆಯನ್ನು ಒಮ್ಮೆಯಾದ್ರೂ ತಿನ್ನಲೇಬೇಕು ಅನ್ನೋದು ಇಲ್ಲಿನ ಜನರ ನಂಬಿಕೆ. ಇನ್ನು ಕೆಸುವಿನ ಎಲೆ ಆರೋಗ್ಯದ ದೃಷ್ಟಿಯಿಂದ ಅತ್ಯುತ್ತಮವಾದ ಆಹಾರ. ಇದ್ರಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ಕಡಿಮೆ ಫ್ಯಾಟ್ ಹಾಗೂ ಅಧಿಕ ಪ್ರೋಟೀನ್ ಅನ್ನು ಒಳಗೊಂಡಿದೆ.ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆ ಅನೇಕ ಆರೋಗ್ಯ ಲಾಭಗಳನ್ನು ಕೂಡ ಇದು ಒಳಗೊಂಡಿದೆ. ಹೀಗಾಗಿ ಪತ್ರೊಡೆ ಮಕ್ಕಳಿಂದ ಹಿಡಿದು ವೃದ್ಧರ ತನಕ ಮನೆಮಂದಿಯೆಲ್ಲ ತಿನ್ನಬಹುದಾದ ಆರೋಗ್ಯಕರ ಖಾದ್ಯವಾಗಿದೆ.

ಸಾಂಪ್ರದಾಯಿಕ ಇಡ್ಲಿಗೆ ಹೊಸ ರುಚಿ ನೀಡಿ ಆಸಕ್ತಿಕರವಾಗಿಸಿ

ಬೇಕಾಗುವ ಸಾಮಗ್ರಿಗಳು
ಕೆಸುವಿನ ಎಲೆ-15, ಅಕ್ಕಿ- 2 ಕಪ್,ಉದ್ದಿನ ಬೇಳೆ-4 ಟೇಬಲ್ ಚಮಚ,ತೆಂಗಿನಕಾಯಿ ತುರಿ-1.5 ಕಪ್, ಕೊತ್ತಂಬರಿ-2 ಟೀ ಚಮಚ, ಜೀರಿಗೆ-2 ಟೀ ಚಮಚ, ಮೆಂತೆ- 1/2 ಟೀ ಚಮಚ, ಅರಿಶಿಣ-1/4 ಟೀ ಚಮಚ, ಬೆಲ್ಲ-1 ಕಪ್, ಲಿಂಬೆಹಣ್ಣಿನ ಗಾತ್ರದ ಹುಣಸೆಹುಳಿ, ಕೆಂಪು ಮೆಣಸು-10, ಬಾಳೆ ಎಲೆ- 4, ರುಚಿಗೆ ತಕ್ಕಷ್ಟು ಉಪ್ಪು
ಒಗ್ಗರಣೆಗೆ
ಎಣ್ಣೆ -2 ಟೇಬಲ್ ಚಮಚ, ಸಾಸಿವೆ- 1 ಟೀ ಚಮಚ, ಉದ್ದಿನಬೇಳೆ-1 ಟೀ ಚಮಚ, ಕಡಲೆಬೇಳೆ-1 ಟೀ ಚಮಚ, ಕರಿಬೇವು, ತೆಂಗಿನ ತುರಿ-1/2 ಕಪ್, ಬೆಲ್ಲ- ಸ್ವಲ್ಪ

ಒತ್ತಡಕ್ಕೆ ಗೋಲಿ ಹೊಡೆಯಲು ಮೂಗಿಗೆ ಕೆಲಸ ಕೊಡಿ

ತಯಾರಿಸುವ ವಿಧಾನ
-ಒಂದು ಪಾತ್ರೆಯಲ್ಲಿ ಅಕ್ಕಿ, ಉದ್ದಿನ ಬೇಳೆ ಹಾಗೂ ಮೆಂತೆಯನ್ನು 3 -4 ಗಂಟೆಗಳ ಕಾಲ ನೆನೆ ಹಾಕಿ.
-ನೆನೆ ಹಾಕಿದ ಅಕ್ಕಿ ಮತ್ತಿತರ ಸಾಮಗ್ರಿಯನ್ನು ತೊಳೆದು ಮಿಕ್ಸಿ ಜಾರಿಗೆ ಹಾಕಿ, ಅದಕ್ಕೆ ತೆಂಗಿನ ತುರಿ, ಕೊತ್ತಂಬರಿ, ಜೀರಿಗೆ, ಕೆಂಪು ಮೆಣಸು, ಅರಿಶಿಣ, ಹುಣಸೆಹುಳಿ, ಬೆಲ್ಲ ಹಾಗೂ ಉಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಹಿಟ್ಟು ಗಟ್ಟಿಯಾಗಿರಲಿ,ಜಾಸ್ತಿ ನೀರು ಸೇರಿಸಬೇಡಿ.
-ಈಗ ಕೆಸವಿನ ಎಲೆಗಳನ್ನು ಚೆನ್ನಾಗಿ ತೊಳೆದು ಹಿಂಭಾಗದ ದಂಟು ತೆಗೆದು ಸಣ್ಣಗೆ ಹಚ್ಚಿಕೊಳ್ಳಿ.
-ಸಣ್ಣಗೆ ಹಚ್ಚಿದ ಕೆಸವಿನ ಎಲೆಗಳನ್ನು ಈಗಾಗಲೇ ರುಬ್ಬಿಕೊಂಡಿರುವ ಮಸಾಲಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
-ಬಾಳೆ ಎಲೆ ತೊಳೆದು ಬಟ್ಟೆಯಿಂದ ಒರೆಸಿ. ಸ್ಟೌವ್ ಆನ್ ಮಾಡಿ ಅದರ ಮೇಲೆ ಬೆಂಕಿಗೆ ತಾಗದಂತೆ ಬಾಳೆಎಲೆ ಹಿಡಿದು ಬಾಡಿಸಿ. ಈಗ ಇದಕ್ಕೆ ಕೆಸವಿನ ಎಲೆ ಸೇರಿಸಿದ ಹಿಟ್ಟನ್ನು ಹಾಕಿ ಕೈಯಿಂದ ದಪ್ಪಗೆ ಹರಡಿ. ಈಗ ಬಾಳೆಎಲೆಯನ್ನು ಹಿಟ್ಟು ಹೊರಗೆ ಬಾರದಂತೆ ನಿಧಾನವಾಗಿ ಮಡಚಿ. ಬೇಕಿದ್ದರೆ ಮಡಚಿದ ಬಳಿಕ ಒಂದು ದಾರವನ್ನು ಕಟ್ಟಿ. ಹೀಗೆ ಮಾಡೋದ್ರಿಂದ ಬಾಳೆಎಲೆ ಬಿಚ್ಚಿಕೊಳ್ಳುತ್ತೆ ಎಂಬ ಭಯ ಇರೋದಿಲ್ಲ.

ಗೊತ್ತೇ, ಪೀನಟ್‌ ಬಟರ್‌ನಿಂದ ವಜ್ರ ತೆಗೆಯಬಹುದು!

-ಮಡಚಿದ ಬಾಳೆಎಲೆಗಳನ್ನು ಇಡ್ಲಿ ಪಾತ್ರೆಯಲ್ಲಿಟ್ಟು ಹಬೆಯಲ್ಲಿ 30 ನಿಮಿಷಗಳ ಕಾಲ ಬೇಯಿಸಿ.
-ಈಗ ಬಾಳೆಎಲೆ ಬಿಡಿಸಿ ಅದರೊಳಗಿರುವ ಪತ್ರೊಡೆ ಕಡುಬನ್ನು ನಿಧಾನಕ್ಕೆ ಹೊರತೆಗೆದು ಚಿಕ್ಕ  ತುಂಡುಗಳನ್ನಾಗಿ ಕತ್ತರಿಸಿ. 
-ಒಂದು ಪಾತ್ರೆಯನ್ನು ಸ್ಟೌವ್ ಮೇಲಿಟ್ಟು ಅದಕ್ಕೆ ಎಣ್ಣೆ ಹಾಕಿ. ಎಣ್ಣೆ ಕಾದ ಬಳಿಕ ಸಾಸಿವೆ, ಕಡಲೆ ಬೇಳೆ, ಉದ್ದಿನ ಬೇಳೆ, ಕರಿಬೇವು ಹಾಕಿ ಒಗ್ಗರಣೆ ಸಿದ್ಧಪಡಿಸಿ. ಇದಕ್ಕೆ ಈಗಾಗಲೇ ಕತ್ತರಿಸಿರುವ ಕಡುಬಿನ ತುಂಡುಗಳು, ಕಾಯಿತುರಿ ಹಾಗೂ ಬೆಲ್ಲ ಸೇರಿಸಿ ಮಿಕ್ಸ್ ಮಾಡಿದ್ರೆ ಪತ್ರೊಡೆ ಸವಿಯಲು ರೆಡಿ.
ಹೀಗೂ ಮಾಡಬಹುದು: ಬಾಳೆಎಲೆಯ ಬದಲು ಹಿಟ್ಟು ಹಚ್ಚಿದ 3-4 ಕೆಸುವಿನ ಎಲೆಗಳನ್ನು ಒಂದರ ಮೇಲೆ ಒಂದರಂತೆ ಇಟ್ಟು, ಹಿಟ್ಟು ಹೊರಬಾರದಂತೆ ಸುರುಳಿಯಾಕಾರದಲ್ಲಿ ಮಡಚಿ ಹಬೆಯಲ್ಲಿ ಬೇಯಿಸಬೇಕು. ಆ ಬಳಿಕ ಬೆಂದ ಎಲೆಗಳನ್ನು ಸಣ್ಣಗೆ ಕತ್ತರಿಸಿ ಸಿದ್ಧಪಡಿಸಿದ ಒಗ್ಗರಣೆಗೆ ಸೇರಿಸಿ ಮಿಕ್ಸ್ ಮಾಡಬೇಕು.