Asianet Suvarna News Asianet Suvarna News

ಚುಮುಚುಮು ಚಳಿಗಾಲಕ್ಕೆ 5 ಬಿಸಿಬಿಸಿ, ಖಾರಖಾರ ರಸಂ ಹಾಗೂ ತಿಳಿಸಾರು ರೆಸಿಪಿಗಳು!

ಚಳಿಗಾಲದಲ್ಲಿ ಏನಾದರೂ ಬಿಸಿ ಬಿಸಿಯಾಗಿ ಅನ್ನದ ಜೊತೆಗೆ ಸೇವಿಸಬೇಕು ಎನಿಸುತ್ತಿದ್ದರೆ ಮನೆಯಲ್ಲಿಯೇ ನೀವು ಸುಲಭವಾಗಿ ಸ್ಪ್ರೈಸಿ ರಸಂ ಹಾಗೂ ತಿಳಿಸಾರು ಮಾಡಬಹುದು. ಇಲ್ಲಿದೆ ವೆರೈಟಿ ರೆಸಿಪಿ....
 

Spicy and tasty rasam and sambar recipe vcs
Author
Bangalore, First Published Nov 29, 2020, 9:51 AM IST

ಧರ್ಮಶ್ರೀ ಅಯ್ಯಂಗಾರ್‌, ಮೈಸೂರು

1.ಜೀರಿಗೆ ಮೆಣಸಿನ ಸಾರು

ಬೇಕಾಗುವ ಪದಾರ್ಥಗಳು : ಕಾಲು ಕಪ್‌ ಜೀರಿಗೆ, ಕಾಲು ಕಪ್‌ ಕಾಳು ಮೆಣಸು, ಒಂದೂವರೆ ಕಪ್‌ ಕೊತ್ತಂಬರಿ ಬೀಜ, ಎರಡು ಚಮಚ ತೊಗರಿಬೇಳೆ, ಒಂದೆರಡು ಬ್ಯಾಡಗಿ ಮೆಣಸಿನಕಾಯಿ, ಸ್ವಲ್ಪ ಕರಿಬೇವು, ಇಂಗು.

ಮಾಡುವ ವಿಧಾನ: ಎಲ್ಲ ಸಾಮಗ್ರಿಗಳನ್ನೂ ಬೇರೆ ಬೇರೆಯಾಗಿ ಘಮ್‌ ಎನ್ನುವವರೆಗೂ ಹುರಿದಿಟ್ಟುಕೊಳ್ಳಿ. ಆರಿದ ಮೇಲೆ ನುಣ್ಣಗೆ ಪುಡಿ ಮಾಡಿ.ಒಂದು ಲೋಟ ನೀರಿನ ಅಳತೆಗೆ ಒಂದು ಚಮಚದಷ್ಟುಜೀರಿಗೆ ಮೆಣಸಿನ ರಸಂ ಪುಡಿ ಹಾಕಿ, ರುಚಿಗೆ ತಕ್ಕಷ್ಟುಉಪ್ಪು ಹಾಕಿ, ಸ್ವಲ್ಪ ಹುಣಸೆ ರಸ, ಬೆಲ್ಲ ಹಾಕಿ ಕುದಿಸಿರಿ.

ಬಿಸಿಬಿಸಿಯಾಗಿ ಸವಿಯಿರಿ.

ದಿನಾ ಒಂದ್ ಲೋಟ ರಸಂ ಕುಡೀರಿ, ರೋಗಕ್ಕೆ ಗುಡ್ ಬೈ ಹೇಳಿ

2. ಮೆಣಸಿನ ಸಾರು

ಬೇಕಾಗುವ ಪದಾರ್ಥಗಳು: ಕಾಳು ಮೆಣಸು ಕಾಲು ಕಪ್‌, ಉದ್ದಿನಬೇಳೆ ಒಂದು ಕಪ್‌, ಒಂದೆರಡು ಗುಂಟೂರ್‌ ಮೆಣಸಿನಕಾಯಿ , ಕರಿಬೇವು , ಇಂಗು

ಮಾಡುವ ವಿಧಾನ : ಎಲ್ಲ ಸಾಮಗ್ರಿಗಳನ್ನೂ ಬೇರೆಬೇರೆಯಾಗಿ ಘಮ್‌ ಎನ್ನುವವರೆಗೂ ಹುರಿದಿಟ್ಟುಕೊಳ್ಳಿ. ಆರಿದ ಮೇಲೆ ನುಣ್ಣಗೆ ಪುಡಿ ಮಾಡಿ.

ಒಂದು ಲೋಟ ನೀರಿಗೆ ಒಂದು ಚಮಚದಷ್ಟುಮೆಣಸಿನ ಸಾರಿನ ಪುಡಿ ಹಾಕಿ, ರುಚಿಗೆ ತಕ್ಕಷ್ಟುಉಪ್ಪು ಹಾಕಿ ಕುದಿಸಿರಿ. ಬಿಸಿಬಿಸಿಯಾಗಿ ಸವಿಯಿರಿ.

ಅದೇ ಬೇಳೆ, ಟೊಮ್ಯಾಟೋ ರಸಂ ತಿಂದು ಬೇಜಾರಾ? ಇಲ್ಲಿದೆ ಹೊಸ ರಸಂ ರೆಸಿಪಿ

3. ಟೊಮೆಟೊ ಸಾರು

ಬೇಕಾಗುವ ಪದಾರ್ಥಗಳು: ಚೆನ್ನಾಗಿ ಹಣ್ಣಾಗಿರುವ ಹುಳಿ ಟೊಮೆಟೊ, ಜೀರಿಗೆ, ಸಾಸುವೆ, ಇಂಗು, ಕರಿಬೇವು, ಹಸಿಮೆಣಸಿನಕಾಯಿ, ಉಪ್ಪು, ಎಣ್ಣೆ, ಬೆಲ್ಲ, ಅರಿಶಿನ,ಮೆಂತ್ಯ , ಕೊತ್ತಂಬರಿ ಸೊಪ್ಪು.

ಮಾಡುವ ವಿಧಾನ : ಟೊಮೇಟೊವನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಒಂದು ಪಾತ್ರೆಯಲ್ಲಿ ಒಂದೆರಡು ಚಮಚ ಎಣ್ಣೆ ಹಾಕಿ. ಎಣ್ಣೆ ಕಾದ ಬಳಿಕ ಸಾಸುವೆ, ಜೀರಿಗೆ, ಇಂಗು, ಕರಿಬೇವು, ನಾಲ್ಕು ಕಾಳು ಮೆಂತ್ಯ, ಹಸಿಮೆಣಸಿನಕಾಯಿ ಒಗ್ಗರಣೆ ಕೊಡಿ. ಹೆಚ್ಚಿಟ್ಟುಕೊಂಡ ಟೊಮೆಟೊ ಹಣ್ಣು ಸೇರಿಸಿ ಚೆನ್ನಾಗಿ ಬಾಡಿಸುತ್ತೀರಿ. ಟೊಮೆಟೊ ಬೆಂದ ಬಳಿಕ ಅಗತ್ಯಕ್ಕೆ ತಕ್ಕಷ್ಟುನೀರು ಬೆರೆಸಿ. ರುಚಿಗೆ ತಕ್ಕಷ್ಟುಉಪ್ಪು, ಸ್ವಲ್ಪ ಬೆಲ್ಲ ಹಾಕಿ ಕುದಿಸಿ. ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಉದುರಿಸಿ ಬಿಸಿಬಿಸಿಯಾಗಿ ಸವಿಯಿರಿ.

ಆರೋಗ್ಯ ವೃದ್ಧಿಸುವ ಐದು ರುಚಿಕರ ಪಾಯಸಗಳು! 

4. ಹುರುಳಿಕಟ್ಟು ಬೆಳ್ಳುಳ್ಳಿ ಸಾರು

ಬೇಕಾಗುವ ಪದಾರ್ಥಗಳು : ಹುರುಳಿಕಾಳು, 5-6 ಎಸಳು ಬೆಳ್ಳುಳ್ಳಿ, ಒಂದು ಚಮಚ ಕಾಳು ಮೆಣಸು, ಒಂದು ಚಮಚ ಜೀರಿಗೆ, ಅರ್ಧ ಇಂಚಿನಷ್ಟುಹಸಿಶುಂಠಿ, ಕರಿಬೇವು, ತುಪ್ಪ, ಜೀರಿಗೆ, ಉಪ್ಪು, ಕೆಂಪುಮೆಣಸಿನಕಾಯಿ.

ಮಾಡುವ ವಿಧಾನ : ಹುರುಳಿ ಕಾಳನ್ನು ಇಡೀ ರಾತ್ರಿ ನೀರಲ್ಲಿ ನೆನೆಸಿ. ನಂತರ ನೀರಲ್ಲಿ ಚೆನ್ನಾಗಿ ಬೇಯಿಸಿ. ಹುರುಳಿ ಕಟ್ಟು ಬಸಿದು ಇಟ್ಟುಕೊಳ್ಳಿ. ಬೆಳ್ಳುಳ್ಳಿ, ಹಸಿ ಶುಂಠಿ ಮತ್ತು ಕಾಳು ಮೆಣಸು ಮತ್ತು ಜೀರಿಗೆಯನ್ನು ಜಜ್ಜಿಕೊಳ್ಳಿ.ಜಜ್ಜಿದ ಮಿಶ್ರಣವನ್ನು ಬಸಿದ ಹುರುಳಿ ಕಟ್ಟಿಗೆ ಸೇರಿಸಿ, ರುಚಿಗೆ ತಕ್ಕಷ್ಟುಉಪ್ಪು ಹಾಕಿ ಕುದಿಸಿ. ನಂತರ ಇದಕ್ಕೆ ತುಪ್ಪದಲ್ಲಿ ಹಾಕಿದ, ಜೀರಿಗೆ, ಕರಿಬೇವು, ಕೆಂಪು ಮೆಣಸಿನಕಾಯಿ ಒಗ್ಗರಣೆ ಕೊಟ್ಟು ಬಿಸಿಬಿಸಿಯಾಗಿ ಸವಿಯಿರಿ.

ನಳ ಮಹಾರಾಜ ನಟ ಅರವಿಂದ್‌ ಐಯ್ಯರ್ ಹೇಳಿ ಕೊಟ್ಟ 4 ರೆಸಿಪಿಗಳು! 

5. ನಿಂಬೆಹಣ್ಣಿನ ಸಾರು

ಬೇಕಾಗುವ ಪದಾರ್ಥ: ತೊಗರಿಬೇಳೆ, ಉಪ್ಪು, ಇಂಗು, ನಿಂಬೆಹಣ್ಣು, ಕರಿಬೇವು, ಹಸಿಮೆಣಸಿನಕಾಯಿ.

ಮಾಡುವ ವಿಧಾನ : ತೊಗರಿಬೇಳೆಗೆ ಅಗತ್ಯಕ್ಕೆ ತಕ್ಕಷ್ಟು ಹಸಿಮೆಣಸಿನಕಾಯಿ ಹಾಕಿ ಚೆನ್ನಾಗಿ ಬೇಯಿಸಿ. ಮೆತ್ತಗೆ ಬೆಂದ ಬೇಳೆಯನ್ನು ನುಣ್ಣಗೆ ಕಡೆದಿಟ್ಟುಕೊಳ್ಳಿ. ಅಗತ್ಯಕ್ಕೆ ತಕ್ಕಷ್ಟುನೀರು ಸೇರಿಸಿ, ರುಚಿಗೆ ತಕ್ಕಷ್ಟುಉಪ್ಪು ಹಾಕಿ ಕುದಿಸಿ. ಒಲೆ ಆರಿಸಿದ ನಂತರ ರುಚಿಗೆ ತಕ್ಕಷ್ಟುನಿಂಬೆಯ ರಸ ಸೇರಿಸಿ. ಇದಕ್ಕೆ ತುಪ್ಪದಲ್ಲಿ ಜೀರಿಗೆ, ಕರಿಬೇವು, ಇಂಗಿನ ಒಗ್ಗರಣೆ ಕೊಟ್ಟು ಬಿಸಿಬಿಸಿಯಾಗಿ ಸವಿಯಿರಿ.

(ಈ ರಸಂ/ತಿಳಿಸಾರುಗಳು ಬಿಸಿಬಿಸಿ ಅನ್ನಕ್ಕೆ ಕಲೆಸಿಕೊಳ್ಳಲೂ ಸೈ, ಚುಮುಚುಮು ಚಳಿಗೆ ಹಾಗೇ ಕುಡಿಯಲೂ ಸೈ )

Follow Us:
Download App:
  • android
  • ios