Navratri recipe : ನವರಾತ್ರಿ ಉಪವಾಸದ ಟೈಂನಲ್ಲಿ ತಿನ್ನಲು ಆರೋಗ್ಯಕರ ಆಹಾರ ಬೇಕು. ದೇಹಕ್ಕೆ ಶಕ್ತಿ ನೀಡುವ, ಬಾಯಿಗೆ ರುಚಿ ಎನ್ನಿಸುವ ಕ್ರಿಸ್ಪಿ ರೆಸಿಪಿ ಬಗ್ಗೆ ಮಾಹಿತಿ ಇಲ್ಲಿದೆ.
ನವರಾತ್ರಿ ಹಬ್ಬ ಶುರುವಾಗುತ್ತಿದ್ದಂತೆ ಉಪವಾಸ ಮಾಡುವವರಿಗೆ ಸಂಜೆ ಟೀ ಜೊತೆ ಏನು ತಿನ್ನಬೇಕು ಅನ್ನೋ ಪ್ರಶ್ನೆ ಎದುರಾಗುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಪ್ಯಾಕೆಟ್ ಫ್ರೂಟ್ಫುಲ್ ನಮ್ಕೀನ್ ದುಬಾರಿ. ಹಾಗೇ ಆರೋಗ್ಯಕ್ಕೆ ಒಳ್ಳೆಯದು ಎನ್ನಲು ಸಾಧ್ಯವಿಲ್ಲ. ಹಾಗಾಗಿ ಈ ನವರಾತ್ರಿಯಲ್ಲಿ ನೀವು ರುಚಿಕರವಾದ ಮತ್ತು ಕ್ರಿಸ್ಪಿಯಾಗಿರುವ ಸಾಬುದಾನಾ ಹಾಗೂ ಶೇಂಗಾ ಮಿಕ್ಸ್ಚರ್ ತಯಾರಿಸಿ ತಿನ್ಬಹುದು.
ಬೇಕಾಗುವ ಸಾಮಗ್ರಿಗಳು
• ದೊಡ್ಡ ಸಾಬುದಾನಾ – 1 ಕಪ್
• ಹಸಿ ಶೇಂಗಾ – ಅರ್ಧ ಕಪ್
• ಮಖಾನಾ – 1 ಕಪ್
• ಕರಿಬೇವಿನ ಎಲೆಗಳು – 8 ರಿಂದ 10
• ಹಸಿಮೆಣಸಿನಕಾಯಿ – 2
• ಸೈಂಧವ ಉಪ್ಪು – 1 ಚಿಕ್ಕ ಚಮಚ
• ಪುಡಿ ಮಾಡಿದ ಕಾಳುಮೆಣಸು – ಅರ್ಧ ಚಿಕ್ಕ ಚಮಚ
• ಹುರಿದ ಜೀರಿಗೆ ಪುಡಿ – ಅರ್ಧ ಚಿಕ್ಕ ಚಮಚ
• ಪುಡಿ ಸಕ್ಕರೆ – ಅರ್ಧ ಚಿಕ್ಕ ಚಮಚ (ಬೇಕಿದ್ದರೆ ಮಾತ್ರ)
• ಕರಿಯಲು ಶೇಂಗಾ ಎಣ್ಣೆ ಅಥವಾ ತುಪ್ಪ
ತಯಾರಿಸುವ ವಿಧಾನ
ಮೊದಲು ಬಾಣಲೆಯಲ್ಲಿ ಎಣ್ಣೆ ಅಥವಾ ತುಪ್ಪವನ್ನು ಚೆನ್ನಾಗಿ ಬಿಸಿ ಮಾಡಿಕೊಳ್ಳಿ. ನಂತರ ದೊಡ್ಡ ಸಾಬುದಾನಾವನ್ನು ಸ್ವಲ್ಪ ಸ್ವಲ್ಪವೇ ಜರಡಿಯಲ್ಲಿ ಹಾಕಿ ಬಿಸಿ ಎಣ್ಣೆಯಲ್ಲಿ ಮುಳುಗಿಸಿ. ಸಾಬುದಾನಾ ತಕ್ಷಣ ಉಬ್ಬಿಕೊಂಡು ಬಿಳಿ ಬಣ್ಣಕ್ಕೆ ತಿರುಗಿ ಗಾತ್ರದಲ್ಲಿ ದೊಡ್ಡದಾಗುತ್ತದೆ. ಕೂಡಲೇ ತೆಗೆದು ಟಿಶ್ಯೂ ಪೇಪರ್ ಮೇಲೆ ಹಾಕಿ. ಸಾಬುದಾನಾ ಚೆನ್ನಾಗಿ ಉಬ್ಬಲು ಎಣ್ಣೆ ಸರಿಯಾದ ಪ್ರಮಾಣದಲ್ಲಿ ಬಿಸಿಯಾಗಿರುವುದು ಮುಖ್ಯ.
ಅದೇ ಎಣ್ಣೆಯಲ್ಲಿ ಶೇಂಗಾವನ್ನು ಗರಿಗರಿಯಾಗುವವರೆಗೆ ಕರಿಯಿರಿ. ನಂತರ ಮಖಾನಾವನ್ನು ಕೂಡ ಸ್ವಲ್ಪ ಕರಿದು ತೆಗೆದಿಟ್ಟುಕೊಳ್ಳಿ. ಒಂದು ಚಿಕ್ಕ ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ. ಅದಕ್ಕೆ ಕರಿಬೇವಿನ ಎಲೆಗಳು ಮತ್ತು ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ ಸೇರಿಸಿ ಗರಿಗರಿಯಾಗುವವರೆಗೆ ಹುರಿಯಿರಿ. ಒಂದು ದೊಡ್ಡ ಪಾತ್ರೆಯಲ್ಲಿ ಕರಿದ ಸಾಬುದಾನಾ, ಶೇಂಗಾ, ಮಖಾನಾ ಮತ್ತು ಕರಿಬೇವಿನ ಒಗ್ಗರಣೆಯನ್ನು ಹಾಕಿ. ಇದಕ್ಕೆ ಸೈಂಧವ ಉಪ್ಪು, ಕಾಳುಮೆಣಸಿನ ಪುಡಿ, ಹುರಿದ ಜೀರಿಗೆ ಪುಡಿ ಮತ್ತು ಬೇಕಿದ್ದರೆ ಸ್ವಲ್ಪ ಪುಡಿ ಸಕ್ಕರೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಮಿಕ್ಸ್ಚರ್ ಸಂಪೂರ್ಣ ತಣ್ಣಗಾದ ನಂತರ ಗಾಳಿಯಾಡದ ಡಬ್ಬದಲ್ಲಿ ತುಂಬಿಡಿ. ತೇವಾಂಶ ಸೇರದಂತೆ ನೋಡಿಕೊಂಡರೆ ಗರಿಗರಿತನ ಹೆಚ್ಚು ಕಾಲ ಉಳಿಯಲು ಸಹಾಯವಾಗುತ್ತದೆ.

