Health Tips : ಸಾತ್ವಿಕ ಭೋಜನ ಆರೋಗ್ಯದ ಮೇಲೆ ಮಾಡುತ್ತೆ ಮ್ಯಾಜಿಕ್!
ಆಹಾರದಲ್ಲಿ ಮೂರು ವಿಧವಿದೆ. ಸಾತ್ವಿಕ, ರಾಜಸ ಮತ್ತು ತಾಮಸ. ಒಂದೊಂದು ಆಹಾರ ಸೇವನೆಯಿಂದ ನಮ್ಮ ದೇಹದ ಮೇಲೆ ಒಂದೊಂದು ಪ್ರಭಾವ ಉಂಟಾಗುತ್ತದೆ. ಇದ್ರಲ್ಲಿ ಎಲ್ಲಕ್ಕಿಂತ ಸಾತ್ವಿಕ ಆಹಾರ ದಿ ಬೆಸ್ಟ್ ಎಂದು ಪರಿಗಣಿಸಲಾಗಿದೆ.
ಸಾತ್ವಿಕ ಎಂದರೆ ಧನಾತ್ಮಕ ಎಂಬ ಅರ್ಥವನ್ನು ಸೂಚಿಸುತ್ತದೆ. ಸಾತ್ವಿಕ ಜೀವನ, ಸಾತ್ವಿಕ ಆಹಾರ, ಸಾತ್ವಿಕ ಗುಣಗಳು ವ್ಯಕ್ತಿಯ ಉತ್ತಮ ಜೀವನಕ್ಕೆ ಭದ್ರ ಬುನಾದಿಯಾಗಿದೆ. ಸಾತ್ವಿಕ ಜೀವನದಿಂದ ವ್ಯಕ್ತಿ ಹೇಗೆ ಉತ್ಕೃಷ್ಠ ಜೀವನವನ್ನು ನಡೆಸುತ್ತಾನೋ ಹಾಗೆಯೇ ಸಾತ್ವಿಕ ಆಹಾರವು ಕೂಡ ಮನುಷ್ಯನ ಆರೋಗ್ಯವನ್ನು ಸುಸ್ಥಿತಿಯಲ್ಲಿಡುತ್ತದೆ. ಸಾತ್ವಿಕ-ರಾಜಸ-ತಾಮಸ ಆಹಾರಗಳು ಒಂದೊಂದು ರೀತಿಯಲ್ಲಿ ವ್ಯಕ್ತಿಯ ಶರೀರದ ಮೇಲೆ ಪರಿಣಾಮ ಬೀರುತ್ತದೆ.
ಈಗಿನ ಫಾಸ್ಟ್ ಫುಡ್ (Fast Food) ಮತ್ತು ಪ್ಯಾಕ್ಡ್ ಫುಡ್ ಯುಗದಲ್ಲಿ ಸಾತ್ವಿಕ ಆಹಾರ ಅರ್ಥವೂ ತಿಳಿದಿರದವರು ಅದೆಷ್ಟೋ ಮಂದಿ ಇದ್ದಾರೆ. ನಾವು ಯಾವ ಆಹಾರವನ್ನು ಎಷ್ಟು ತೆಗೆದುಕೊಳ್ಳಬೇಕು ಎಂಬುದು ನಮ್ಮ ಇಚ್ಛೆ. ಆದರೆ ನಾವು ತಿನ್ನುವ ಆಹಾರದಿಂದ ನಮ್ಮ ಸ್ವಭಾವ ಕೂಡ ಬದಲಾಗುತ್ತಾ ಹೋಗುತ್ತದೆ. ಸಾಮಾನ್ಯವಾಗಿ ಪೂಜೆ ಪುನಸ್ಕಾರಗಳು ಇರುವಾಗ ಸಾತ್ವಿಕ (Sattvic) ಭೋಜನವನ್ನು ಸೇವಿಸುವುದು ವಾಡಿಕೆ. ಸಾತ್ವಿಕ ಆಹಾರವನ್ನು ನೈಸರ್ಗಿಕ ಮತ್ತು ಶುದ್ಧ ಆಹಾರ ಎನ್ನಲಾಗುತ್ತೆ. ಇದರಲ್ಲಿ ಹಸಿರು ತರಕಾರಿಗಳು, ಹಣ್ಣುಗಳು, ಜೇನುತುಪ್ಪ, ಬೆಲ್ಲ, ಧಾನ್ಯ (Grain) ಗಳನ್ನು ಹೇರಳವಾಗಿ ಬಳಕೆ ಮಾಡಲಾಗುತ್ತದೆ. ಸಸ್ಯಾಹಾರಿ ಮತ್ತು ಕಡಿಮೆ ಮಸಾಲೆಯುಕ್ತ ಆಹಾರವನ್ನು ಬಳಸಿ ತಯಾರಿಸುವ ಅಡುಗೆಯೇ ಸಾತ್ವಿಕ ಭೋಜನ. ಇದರಲ್ಲಿ ಈರುಳ್ಳಿ ಬೆಳ್ಳುಳ್ಳಿಯೂ ಇರುವುದಿಲ್ಲ. ಇತ್ತೀಚೆಗೆ ಆರೋಗ್ಯದ ಮೇಲೆ ಸಕಾರಾತ್ಮಕ ಪ್ರಭಾವ ಬೀರುವ ಈ ಸಾತ್ವಿಕ ಭೋಜನವನ್ನು ಜನರು ಹೆಚ್ಚು ಸೇವಿಸುತ್ತಿದ್ದಾರೆ. ಪೂಜೆಯ ದಿನದ ಹೊರತಾಗಿ ಸಾಮಾನ್ಯ ದಿನದಲ್ಲಿಯೂ ಜನರು ಇದನ್ನು ಫಾಲೋ ಮಾಡ್ತಿದಾರೆ. ಸಾತ್ವಿಕ ಭೋಜನದಿಂದ ನಮ್ಮ ಆರೋಗ್ಯಕ್ಕಾಗುವ ಲಾಭವೇನು ಎಂಬುದನ್ನು ನೋಡೋಣ.
Health Tips: ತೂಕ ಇಳಿಸೋಕೆ ಅಂತ ಈ ಡಯಟ್ ಮಾಡಿ ಪ್ರಾಣ ಕಳ್ಕೋಬೇಡಿ
ಸಾತ್ವಿಕ ಭೋಜನದ ಲಾಭಗಳು
ಇಮ್ಯುನಿಟಿ ಬೂಸ್ಟ್ ಮಾಡುತ್ತೆ : ಗರಿಷ್ಠ ಪ್ರಮಾಣದ ತರಕಾರಿ, ಸಲಾಡ್, ಖನಿಜ ಮಿಟಮಿನ್, ಪ್ರೊಟೀನ್ ಗಳನ್ನು ಹೊಂದಿರುವ ಸಾತ್ವಿಕ ಆಹಾರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸಾತ್ವಿಕ ಆಹಾರದಲ್ಲಿ ಇಮ್ಯುನಿಟಿಯನ್ನು ವೃದ್ಧಿಮಾಡುವಂತ ಪ್ರೊಟೀನ್ ಮತ್ತು ಎಂಟಿಆಕ್ಸಿಡೆಂಟ್ ಗಳು ಹೆಚ್ಚಿನ ಪ್ರಮಾಣದಲ್ಲಿ ಇರುತ್ತವೆ. ಇದು ನಮ್ಮ ಶರೀರಕ್ಕೆ ಹೆಚ್ಚಿನ ಪ್ರಮಾಣದ ಎನರ್ಜಿಯನ್ನು ನೀಡುತ್ತೆ. ಕೇವಲ ಹತ್ತು ದಿನ ನೀವು ಸಾತ್ವಿಕ ಆಹಾರ ಸೇವಿಸಿದರೂ ನಿಮ್ಮ ದೇಹದಲ್ಲಿ ಎನರ್ಜಿ ಹೆಚ್ಚಾಗುವುದು ನಿಮ್ಮ ಗಮನಕ್ಕೆ ಬರುತ್ತದೆ ಎನ್ನುತ್ತಾರೆ ಡಯಟೀಶಿಯನ್.
ಮನಸ್ಸು ಮತ್ತು ಬುದ್ಧಿ ಎರಡೂ ಶಾಂತವಾಗಿರುತ್ತೆ : ಅತೀ ಕಡಿಮೆ ಮಸಾಲೆ ಮತ್ತು ತೈಲಗಳನ್ನು ಬಳಸಿ ಸಾತ್ವಿಕ ಅಡುಗೆಯನ್ನು ತಯಾರಿಸಲಾಗುತ್ತದೆ. ಕಡಿಮೆ ಮಸಾಲೆಗಳನ್ನು ಬಳಸುವ ಕಾರಣ ಹೊಟ್ಟೆ ಮತ್ತು ಮೆದುಳು ಎರಡೂ ದೇಹ ಹಾಗೂ ಮನಸ್ಸನ್ನು ಶಾಂತವಾಗಿಡುತ್ತೆ.
ತೂಕ ಇಳಿಸುವಲ್ಲಿ ಪ್ರಯೋಜನಕಾರಿ : ಸಾತ್ವಿಕ ಆಹಾರದಲ್ಲಿ ಹಣ್ಣುಗಳು, ಹಸಿ ತರಕಾರಿಗಳು, ಸಲಾಡ್ ಗಳ ಬಳಕೆಯೇ ಹೆಚ್ಚಿಗೆ ಇರುತ್ತದೆ. ಇಂತಹ ಆಹಾರದಲ್ಲಿ ಕಡಿಮೆ ಕ್ಯಾಲೊರಿಗಳು ಕಂಡುಬರುತ್ತವೆ. ಜೊತೆಗೆ ಎಣ್ಣೆ ಮಸಾಲೆಗಳು ಕೂಡ ಕಡಿಮೆ ಇರುವುದರಿಂದ ಸಾತ್ವಿಕ ಆಹಾರ ಸೇವಿಸುವವರ ತೂಕ ಬೇಗ ಇಳಿಯುತ್ತದೆ.
ಜೀರ್ಣಕ್ರಿಯೆಯಲ್ಲಿ ಸುಧಾರಣೆ : ಜೀರ್ಣಕ್ರಿಯೆಯ ಸಮಸ್ಯೆ ಇರುವವರು ಸಾತ್ವಿಕ ಆಹಾರವನ್ನು ಸೇವಿಸಬೇಕು. ಇವು ತಾಜಾ ಆಹಾರವಾಗಿರುತ್ತದೆ ಹಾಗಾಗಿ ಅದರಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಇರುತ್ತದೆ. ಆದ್ದರಿಂದಲೇ ಇದು ಜೀರ್ಣಕ್ರಿಯೆಯನ್ನು ಸರಾಗವಾಗಿಸುತ್ತದೆ. ಜೀರ್ಣಕ್ರಿಯೆ ಸರಾಗವಾಗಿ ನಡೆದಾಗ ಹೊಟ್ಟೆನೋವು, ಗ್ಯಾಸ್ ಮತ್ತು ಮಲಬದ್ಧತೆಯ ಸಮಸ್ಯೆಗೆ ಮುಕ್ತಿ ದೊರೆಯುತ್ತದೆ.
Recipe : ಅದೇ ಕಾಯಿ ಚಟ್ನಿ ಬೋರ್ ಆದ್ರೆ ರಾಜಸ್ತಾನಿ ಬೆಳ್ಳುಳ್ಳಿ ಚಟ್ನಿ ಟ್ರೈ ಮಾಡಿ
ಚರ್ಮಕ್ಕೂ ಒಳ್ಳೆಯದು : ಸಾತ್ವಿಕ ಆಹಾರ ಧಾನ್ಯ, ಸೀಸನಲ್ ಫ್ರುಟ್ಸ್, ತರಕಾರಿಗಳನ್ನು ಒಳಗೊಂಡಿರುತ್ತದೆ. ಇವೆಲ್ಲವುಗಳಲ್ಲಿರುವ ವಿಟಮಿನ್, ಖನಿಜ ಮತ್ತು ಪೋಷಕಾಂಶಗಳು ಚರ್ಮವನ್ನು ಆರೋಗ್ಯವಂತವಾಗಿಸಿ ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಇದರ ಸೇವನೆಯಿಂದ ದೇಹವು ಸರಿಯಾಗಿ ಡಿಟಾಕ್ಸ್ ಆಗುತ್ತದೆ.
ದೀರ್ಘಕಾಲದ ಖಾಯಿಲೆಯನ್ನು ಕಡಿಮೆ ಮಾಡುತ್ತೆ : ನಾವು ತಿನ್ನುವ ಹಳಸಿದ ಮತ್ತು ಕರಿದ ಪದಾರ್ಥಗಳೇ ದೀರ್ಘಕಾಲದ ಖಾಯಿಲೆಗೆ ಪ್ರಮುಖ ಕಾರಣವಾಗಿದೆ. ಸಾತ್ವಿಕ ಆಹಾರ ಸೇವನೆಯು ಇದರಿಂದ ನಮ್ಮನ್ನು ರಕ್ಷಿಸುತ್ತೆ. ಏಕೆಂದರೆ ಇದರಲ್ಲಿ ಎಣ್ಣೆಯ ಬದಲಿಗೆ ಫೈಬರ್ ಮತ್ತು ಎಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ.