ಅಮೆರಿಕದ ನ್ಯೂಯಾರ್ಕ್‌ನ ಓಸ್ವೆಗೊ ಸರೋವರದಲ್ಲಿ ಅಪರೂಪದ ಹೊಳೆಯುವ ಹಳದಿ ಬಣ್ಣದ 'ಬರ್ಬೋಟ್' (ಲೋಟಾ-ಲೋಟಾ) ಮೀನೊಂದು ಪತ್ತೆಯಾಗಿದೆ. 'ಜಾಂಥೋಕ್ರೋಮಿಸಂ' ಎಂಬ ಜೈವಿಕ ಸ್ಥಿತಿಯಿಂದ ಈ ಬಣ್ಣ ಹೊಂದಿದೆ.

ನ್ಯೂಯಾರ್ಕ್‌ (ನ.19): ಅಮೆರಿಕದ ನ್ಯೂಯಾರ್ಕ್‌ನ ಜಲಪ್ರದೇಶದಲ್ಲಿ ವಿಜ್ಞಾನಿಗಳನ್ನೇ ಅಚ್ಚರಿಗೊಳಿಸುವಂತಹ ವಿಶಿಷ್ಟ ಮೀನೊಂದು ಪತ್ತೆಯಾಗಿದೆ. ಸಾಮಾನ್ಯವಾಗಿ ಗಾಢ ಕಂದು (Dark Brown) ಅಥವಾ ಬೂದು (Slate) ಬಣ್ಣದಲ್ಲಿರುವ ಈ ಪ್ರಭೇದದ ಮೀನು, ಇಲ್ಲಿ ಹೊಳೆಯುವ ಹಳದಿ ಬಣ್ಣದಲ್ಲಿ (Bright Yellow) ಕಾಣಿಸಿಕೊಂಡಿದ್ದು, ತಜ್ಞರು ಇದನ್ನು 'ಲಕ್ಷಕ್ಕೊಂದು' (One-in-a-million) ಎಂದು ಬಣ್ಣಿಸಿದ್ದಾರೆ. ನೋಡಲು ಅತ್ಯಂತ ಸುಂದರವಾಗಿ ಕಾಣುವ ಈ ಮೀನು, ತನ್ನ ಭಯಾನಕ ಬೇಟೆಯಾಡುವ ಸ್ವಭಾವದಿಂದಾಗಿ ಅಷ್ಟೇ ಅಪಾಯಕಾರಿಯಾಗಿದೆ. ಅಳಿವಿನಂಚಿನಲ್ಲಿರುವ (Endangered) ಪ್ರಭೇದಗಳ ಪಟ್ಟಿಯಲ್ಲಿರುವ ಈ ಮೀನಿನ ಅಧ್ಯಯನದಿಂದ ಆ ಪ್ರಭೇದದ ಉಳಿವಿನ ಬಗ್ಗೆ ಮಹತ್ವದ ಸುಳಿವುಗಳು ಸಿಗಬಹುದು ಎಂದು ವಿಜ್ಞಾನಿಗಳು ಆಶಿಸಿದ್ದಾರೆ.

ನ್ಯೂಯಾರ್ಕ್‌ನ ಓಸ್ವೆಗೊ ಸರೋವರದಲ್ಲಿ ಸಿಕ್ಕಿದ 'ಲಕ್ಷಕ್ಕೊಂದು' ಲೋಟಾ-ಲೋಟಾ

ವರದಿಯೊಂದರ ಪ್ರಕಾರ, ನ್ಯೂಯಾರ್ಕ್‌ನ ಓಸ್ವೆಗೊ ಸರೋವರದಲ್ಲಿ (Lake Oswego) ಹೊಳೆಯುವ ಹಳದಿ ಬಣ್ಣದ 'ಬರ್ಬೋಟ್' (Burbot - Lota Lota) ಮೀನನ್ನು ಹಿಡಿಯಲಾಗಿದೆ. ಸಾಮಾನ್ಯವಾಗಿ ಈ ಪ್ರಭೇದದ ಮೀನುಗಳು ಗಾಢ ಕಂದು, ಕಪ್ಪು ಅಥವಾ ಬೂದು ಬಣ್ಣದಲ್ಲಿದ್ದು, ಮೈಮೇಲೆ ಚುಕ್ಕೆಗಳನ್ನು ಹೊಂದಿರುತ್ತವೆ. ಆದರೆ ಈ ಹಳದಿ ಬಣ್ಣದ ಮೀನು ವಿಜ್ಞಾನಿಗಳನ್ನು ಬೆರಗುಗೊಳಿಸಿದೆ. ಸದ್ಯ ಹೆಚ್ಚಿನ ಸಂಶೋಧನೆಗಾಗಿ ಈ ಮೀನನ್ನು ಪ್ರತಿಷ್ಠಿತ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ (Cornell University) ಇರಿಸಲಾಗಿದೆ. ಈ ಮೀನಿನ ವಿಚಿತ್ರ ರೂಪಕ್ಕೆ 'ಜಾಂಥೋಕ್ರೋಮಿಸಂ' (Xanthochromism) ಎಂಬ ಅಪರೂಪದ ಜೈವಿಕ ಸ್ಥಿತಿಯೇ ಕಾರಣವಾಗಿದೆ. ಇದು ಆನುವಂಶಿಕ ರೂಪಾಂತರಕ್ಕೆ (Genetic Mutation) ಸಂಬಂಧಿಸಿದ ಸ್ಥಿತಿಯಾಗಿದ್ದು, ಇದರಲ್ಲಿ ದೇಹದ ಸಾಮಾನ್ಯ ವರ್ಣದ್ರವ್ಯ ಬದಲಾಗಿ ಮೀನಿನ ಬಣ್ಣವು ಹೊಳೆಯುವ ಹಳದಿ ಅಥವಾ ಕಿತ್ತಳೆ ಬಣ್ಣಕ್ಕೆ ತಿರುಗುತ್ತದೆ.

ಯುಎಸ್ ಫಿಶ್ ಅಂಡ್ ವೈಲ್ಡ್‌ಲೈಫ್ ಸರ್ವಿಸ್ (USFWS) ಮಾಹಿತಿ: ವರದಿಯ ಪ್ರಕಾರ, ಕಾಡು ಮೀನುಗಳಲ್ಲಿ ಅಲ್ಬಿನಿಸಂ (Albinism) ಅಥವಾ ಮೆಲನಿಸಂಗೆ (Melanism) ಹೋಲಿಸಿದರೆ ಈ 'ಜಾಂಥೋಕ್ರೋಮಿಸಂ' ಸ್ಥಿತಿ ಕಂಡುಬರುವುದು ಅತ್ಯಂತ ವಿರಳ. ಇದೇ ಕಾರಣಕ್ಕೆ ಈ ಸಂಶೋಧನೆಯು ಅತ್ಯಂತ ವಿಶೇಷ ಮತ್ತು ಅನನ್ಯವಾಗಿದೆ.

ಜಲಚರಗಳ ಸಮೀಕ್ಷೆ ವೇಳೆ ಪತ್ತೆ

ಜೀವವಿಜ್ಞಾನಿಗಳ ತಂಡವು ಓಸ್ವೆಗೊ ಬಂದರಿನಲ್ಲಿ (Oswego Harbor) ಆಕ್ರಮಣಕಾರಿ ಜಲಚರ ಪ್ರಭೇದಗಳ ಕುರಿತು ನಿಯಮಿತ ಸಮೀಕ್ಷೆ ನಡೆಸುತ್ತಿದ್ದಾಗ ಈ ಹಳದಿ ಮೀನು ಪತ್ತೆಯಾಗಿದೆ. 'ಬರ್ಬೋಟ್' ಈ ಪ್ರದೇಶದ ಸ್ಥಳೀಯ ಪ್ರಭೇದವಾಗಿದ್ದರೂ, ಸರೋವರದಲ್ಲಿ ಇವುಗಳ ಸಂಖ್ಯೆ ತೀರಾ ಕಡಿಮೆಯಿದೆ. ಇವು ಸಾಮಾನ್ಯವಾಗಿ ಬಂದರಿನ ಆ ಭಾಗಕ್ಕಿಂತಲೂ ಹೆಚ್ಚು ಆಳವಾದ ಮತ್ತು ತಂಪಾದ ನೀರಿನಲ್ಲಿ ವಾಸಿಸಲು ಇಷ್ಟಪಡುತ್ತವೆ. ಈ ಮೀನು ತುಂಬಾ ದುರ್ಬಲವಾಗಿತ್ತು ಮತ್ತು ಅದರ ಆರೋಗ್ಯ ಸ್ಥಿತಿ ಹದಗೆಟ್ಟಿರುವುದನ್ನು ಸಂಶೋಧಕರು ಗಮನಿಸಿದರು. ಅದರ ಆರೋಗ್ಯ ತಪಾಸಣೆಯ ಅಗತ್ಯವನ್ನು ಮನಗಂಡ USFWS, ಹೆಚ್ಚಿನ ಚಿಕಿತ್ಸೆ ಮತ್ತು ಅಧ್ಯಯನಕ್ಕಾಗಿ ಮೀನನ್ನು ಕಾರ್ನೆಲ್ ವಿಶ್ವವಿದ್ಯಾಲಯದ ಪಶುವೈದ್ಯಕೀಯ ಕಾಲೇಜಿಗೆ (College of Veterinary Medicine) ಕಳುಹಿಸಲು ನಿರ್ಧರಿಸಿತು. ಈ ಮೀನಿನ ಅಧ್ಯಯನದಿಂದ ಇಡೀ ಜಲಾನಯನ ಪ್ರದೇಶದಲ್ಲಿ ಬರ್ಬೋಟ್ ಮೀನುಗಳ ಸಂತತಿಯ ಸ್ಥಿತಿಗತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ಭವಿಷ್ಯದಲ್ಲಿ ಅವುಗಳ ಸಂರಕ್ಷಣೆ ಹಾಗೂ ನಿರ್ವಹಣಾ ಪ್ರಯತ್ನಗಳಿಗೆ ದಿಕ್ಕು ತೋರಿಸಲು ಸಾಧ್ಯವಾಗುತ್ತದೆ ಎಂದು USFWS ನಂಬಿದೆ.

'ಬರ್ಬೋಟ್' (ಲೋಟಾ-ಲೋಟಾ) ಹೆಸರಿನ ಹಿಂದಿನ ಕುತೂಹಲಕಾರಿ ಕಥೆ

'ಬರ್ಬೋಟ್' (Burbot) ಎಂಬ ಹೆಸರು ಲ್ಯಾಟಿನ್ ಪದ 'ಬಾರ್ಬಾ' (Barba) ದಿಂದ ಬಂದಿದೆ. ಇದರರ್ಥ 'ಗಡ್ಡ' (Beard) ಎಂದಾಗಿದ್ದು, ಮೀನಿನ ಗಲ್ಲದ ಮೇಲಿರುವ ಒಂದೇ ಒಂದು ಕೂದಲಿನಂತಹ ಭಾಗವನ್ನು (Barbel) ಇದು ಸೂಚಿಸುತ್ತದೆ. ಇದರ ವೈಜ್ಞಾನಿಕ ಹೆಸರಾದ 'ಲೋಟಾ ಲೋಟಾ' (Lota Lota) ಹಳೆಯ ಫ್ರೆಂಚ್ ಪದ 'ಲೋಟೆ' (Lote - ಮೀನು) ನಿಂದ ಬಂದಿದ್ದು, ಹಳೆಯ ಫ್ರೆಂಚ್‌ನಲ್ಲಿ ಇದನ್ನು 'ಬಾರ್ಬೋಟ್' ಎಂದೂ ಕರೆಯಲಾಗುತ್ತಿತ್ತು.

ಏನಿದು ಬರ್ಬೋಟ್ ಮೀನು? ಎಲ್ಲಿ ಕಂಡುಬರುತ್ತವೆ?

ವಿಕಿಪೀಡಿಯಾ ಮತ್ತು 'ಅನಿಮೇಲಿಯಾ' (Animalia) ವೆಬ್‌ಸೈಟ್ ಸಂಶೋಧನೆಯ ಪ್ರಕಾರ ಈ ಮೀನಿನ ವಿಶೇಷತೆಗಳು ಹೀಗಿವೆ, ಈ ಮೀನಿಗೆ ಬಬೋಟ್, ಮಾರಿಯಾ, ಲೋಚ್, ಕಸ್ಕ್, ಫ್ರೆಶ್‌ವಾಟರ್ ಕಾಡ್ (Freshwater Cod), ಫ್ರೆಶ್‌ವಾಟರ್ ಲಿಂಗ್, ದಿ ಲಾಯರ್, ಕೋನಿ-ಫಿಶ್, ಲಿಂಗ್‌ಕಾಡ್ ಅಥವಾ ಈಲ್‌ಪೌಟ್ ಸೇರಿದಂತೆ ಇನ್ನೂ ಹಲವು ಹೆಸರುಗಳಿವೆ.

ತಂಪಾದ ನೀರಿನಲ್ಲಿ ವಾಸಿಸುವ ರೆಕ್ಕೆಗಳಿರುವ (Ray-finned) ಮೀನು ಇದು. ಇದು 'ಲೋಟಾ' ಕುಲದ ಏಕೈಕ ಸದಸ್ಯ ಹಾಗೂ ಸಿಹಿನೀರಿನಲ್ಲಿ ವಾಸಿಸುವ 'ಗ್ಯಾಡಿಫಾರ್ಮ್ಸ್' (Gadiformes) ಗಣದ ಏಕೈಕ ಪ್ರಭೇದವಾಗಿದೆ. ಸಮುದ್ರದ 'ಕಾಮನ್ ಲಿಂಗ್' ಮತ್ತು 'ಕಸ್ಕ್' ಮೀನುಗಳನ್ನು ಹೋಲುವ ಇವು 'ಲೋಟಿಡೆ' (Lotidae - Rocklings) ಕುಟುಂಬಕ್ಕೆ ಸೇರಿವೆ. ಉತ್ತರ ಗೋಳಾರ್ಧದ ಉಪ-ಆರ್ಕ್ಟಿಕ್ ಮತ್ತು 40° ಉತ್ತರಕ್ಕಿಂತ ಮೇಲಿನ ಧ್ರುವ ಪ್ರದೇಶಗಳಲ್ಲಿ ಕಂಡುಬರುತ್ತವೆ. ಫ್ರಾನ್ಸ್‌ನಿಂದ ಯುರೋಪ್ ಮತ್ತು ಏಷ್ಯಾದ ಮೂಲಕ ಬೇರಿಂಗ್ ಜಲಸಂಧಿಯವರೆಗೆ ಹರಡಿವೆ.

ಅಲಾಸ್ಕಾದ ಸೆವಾರ್ಡ್ ಪರ್ಯಾಯ ದ್ವೀಪದಿಂದ ಅಟ್ಲಾಂಟಿಕ್ ಕರಾವಳಿಯ ನ್ಯೂ ಬ್ರನ್ಸ್‌ವಿಕ್‌ವರೆಗೆ, ವಿಶೇಷವಾಗಿ ಎರಿ ಸರೋವರ (Lake Erie) ಮತ್ತು ಗ್ರೇಟ್ ಲೇಕ್ಸ್‌ಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಬಾಲ್ಟಿಕ್ ಸಮುದ್ರದ ಉಪ್ಪುನೀರಿನಲ್ಲೂ ಇವುಗಳ ಒಂದು ಸಂತತಿ ವಾಸಿಸುತ್ತದೆ.

ಮಂಜುಗಡ್ಡೆಯ ಕೆಳಗೆ ಮೊಟ್ಟೆ ಇಡುತ್ತವೆ ಮತ್ತು ಹಾವು-ಪಕ್ಷಿಗಳನ್ನೂ ಬೇಟೆಯಾಡುತ್ತವೆ!

ಬರ್ಬೋಟ್ ಮೀನುಗಳು 4 ರಿಂದ 7 ವರ್ಷಗಳ ವಯಸ್ಸಿನಲ್ಲಿ ಪ್ರೌಢಾವಸ್ಥೆಗೆ ತಲುಪುತ್ತವೆ. ಇವುಗಳ ಸಂತಾನೋತ್ಪತ್ತಿ ಕಾಲ ಡಿಸೆಂಬರ್‌ನಿಂದ ಮಾರ್ಚ್ ನಡುವೆ ಇದ್ದು, ಮಂಜುಗಡ್ಡೆಯ ಕೆಳಗೆ 1 ರಿಂದ 4 °C ಅತ್ಯಂತ ಕಡಿಮೆ ತಾಪಮಾನದಲ್ಲಿ ಮೊಟ್ಟೆ ಇಡುತ್ತವೆ. ಎರಡರಿಂದ ಮೂರು ವಾರಗಳ ಈ ಅವಧಿಯಲ್ಲಿ ಹಲವು ಬಾರಿ ಮೊಟ್ಟೆ ಇಡುತ್ತವೆಯಾದರೂ, ಪ್ರತಿ ವರ್ಷ ಸಂತಾನೋತ್ಪತ್ತಿ ಮಾಡುವುದಿಲ್ಲ.ಇವು ಮುಖ್ಯವಾಗಿ ರಾತ್ರಿಯಲ್ಲಿ ಬೇಟೆಯಾಡುತ್ತವೆ. ಮರಿ ಮೀನುಗಳು ಜೂಪ್ಲಾಂಕ್ಟನ್ ಮತ್ತು ಜಲಚರ ಕೀಟಗಳನ್ನು ತಿಂದರೆ, ಒಂದು ತಿಂಗಳ ಲಾರ್ವಾ ಹಂತದ ನಂತರ ಬಾಯಿಯ ಮೂಲಕ ಆಹಾರ ಸೇವಿಸಲು ಆರಂಭಿಸುತ್ತವೆ.

ಬೆಳೆದಂತೆ ಇವು ಲ್ಯಾಂಪ್ರೆ, ವೈಟ್‌ಫಿಶ್, ಗ್ರೇಲಿಂಗ್, ನಾರ್ದರ್ನ್ ಪೈಕ್ ಮರಿಗಳು, ಸಕ್ಕರ್, ಸ್ಟಿಕಲ್‌ಬ್ಯಾಕ್, ಟ್ರೌಟ್ ಮತ್ತು ಪರ್ಚ್‌ನಂತಹ ಮೀನುಗಳನ್ನು ಬೇಟೆಯಾಡುತ್ತವೆ. ಇಷ್ಟೇ ಅಲ್ಲದೆ, ಕಪ್ಪೆಗಳು, ಹಾವುಗಳು ಮತ್ತು ಪಕ್ಷಿಗಳನ್ನೂ ಸಹ ತನ್ನ ಬೇಟೆಯನ್ನಾಗಿಸಿಕೊಳ್ಳುತ್ತವೆ! ಆಹಾರದ ಈ ವಿಶಾಲ ವ್ಯಾಪ್ತಿಯಿಂದಾಗಿ ಇವು ಗಾಳದ ಆಮಿಷಕ್ಕೆ (Bait) ಸುಲಭವಾಗಿ ಬೀಳುತ್ತವೆ. ಮತ್ತೊಂದೆಡೆ, ನಾರ್ದರ್ನ್ ಪೈಕ್, ಮಸ್ಕೆಲಂಜ್ ಮತ್ತು ಕೆಲವು ಲ್ಯಾಂಪ್ರೆ ಪ್ರಭೇದಗಳು ಈ ಬರ್ಬೋಟ್ ಮೀನನ್ನು ಬೇಟೆಯಾಡುತ್ತವೆ.

Scroll to load tweet…