ಬೆಂಗಳೂರು ವಿಮಾನ ನಿಲ್ದಾಣದಲ್ಲಿರುವ ರಾಮೇಶ್ವರಂ ಕೆಫೆಯು ಪ್ರಯಾಣಿಕರ ಅನುಕೂಲಕ್ಕಾಗಿ ಹೊಸದಾಗಿ 'ದೋಸೆ ವ್ರ್ಯಾಪ್' ಪರಿಚಯಿಸಿದೆ. ಬಾಳೆ ಎಲೆ ಮತ್ತು ಫಾಯಿಲ್ ಪೇಪರ್ನಲ್ಲಿ ಪ್ಯಾಕ್ ಮಾಡಲಾದ ಈ ದೋಸೆಯನ್ನು ಪ್ಲೇಟ್ ಇಲ್ಲದೆ ಸುಲಭವಾಗಿ ತಿನ್ನಬಹುದು. ಈ ವಿನೂತನ ಐಡಿಯಾ ಇದೀಗ ಯುವಜನತೆಯ ಗಮನ ಸೆಳೆದಿದ್ದು, ವಿಡಿಯೋ ವೈರಲ್ ಆಗುತ್ತಿದೆ.
ಈಗ ಹೋಟೆಲ್ನಲ್ಲೋ, ಇನ್ನೆಲ್ಲೋ ಕುಳಿತು ಪ್ಲೇಟ್ನಲ್ಲಿ ತಿಂಡಿ ಹಾಕಿಕೊಂಡು ಅದನ್ನು ಮನಸಾರೆ ಸವಿಯುತ್ತಾ ಕುಳಿತುಕೊಳ್ಳುವ ಪುರುಸೊತ್ತು ಯಾರಿಗೆ ಇದೆ ಸ್ವಾಮಿ? ದುಡಿಯುವ ಧಾವಂತ. ಕೈಯಲ್ಲಿ ಯಾವುದೋ ತಿಂಡಿ ಸುತ್ತಿ ಸುತ್ತಿ ಕೊಟ್ಟರೆ ಅದರಲ್ಲಿಯೂ ಈ Gen Z ಗಳಿಗೆ ಅದನ್ನು ಹಿಡಿದು ಊರೆಲ್ಲಾ ಸುತ್ತಾಡುತ್ತಾ ರಸ್ತೆಯ ಮೇಲಿನಿಂದ ಹಿಡಿದು ಬಸ್ ಸ್ಟ್ಯಾಂಡ್ ಒಳಗೋ ಕೊನೆಗೆ ವಿಮಾನ ನಿಲ್ದಾಣದಲ್ಲಿಯೋ ಆ ತಿನಿಸಿನ ಸುರುಳಿಯನ್ನು ಬಿಚ್ಚಿ ತಿನ್ನುತ್ತಾ, ಇನ್ನೊಂದು ಕೈಯಲ್ಲಿ ಇನ್ನೊಂದು ಏನೋ ಕೆಲಸ ಮಾಡುತ್ತಾ ಹೋದರೆ ಅದು ಹಲವರಿಗೆ ನೆಮ್ಮದಿ ಕೊಡುವಂಥದ್ದು. ದಿಢೀರ್ ಎಂದು ಎಲ್ಲವೂ ಆಗಬೇಕು. ಅದಕ್ಕಾಗಿಯೇ Wrapper ತಿನಿಸುಗಳ ಈಗ ಸಕತ್ ಫೇಮಸ್ ಆಗ್ತಿರೋದು. ಅದಕ್ಕಾಗಿಯೇ ಈ ಯುವ ಪೀಳಿಗೆಯನ್ನು ಗಮನದಲ್ಲಿ ಇಟ್ಟುಕೊಂಡೇ ರಾಮೇಶ್ವರಂ ಕೆಫೆ ದೋಸೆಯನ್ನೂ ಸುರುಳಿ ಮಾಡಿಕೊಡುವ ಹೊಸ ಉಪಾಯ ಮಾಡಿದ್ದು, ಅದೀಗ ಸಿಕ್ಕಾಪಟ್ಟೆ ಫೇಮಸ್ ಆಗ್ತಿದೆ.
ಹೇಳಿ ಕೇಳಿ ರಾಮೇಶ್ವರಂ ಕೆಫೆ ಎಷ್ಟು ಫೇಮಸ್ಸೋ, ಅಲ್ಲಿಯ ಆಹಾರಗಳೂ ಅಷ್ಟೇ ದುಬಾರಿ ಅನ್ನಿ. ಆದರೂ ಒಮ್ಮೆಯಾದರೂ ಇಲ್ಲಿಯ ತಿನಿಸು ತಿನ್ನಬೇಕು ಎಂದು ಬಯಸುವವರು ಹಲವರು. ಅದೇ ಟೇಸ್ಟ್ ಬೇರೆ ಕಡೆ ಸಿಕ್ಕರೂ, ಇಷ್ಟೊಂದು ದುಬಾರಿ ಬೆಲೆ ತೆತ್ತು ಐಷಾರಾಮಿ ಹೋಟೆಲ್ ಒಳಗೆ ಕುಳಿತು ತಿನ್ನುವಾಗ ಅದು ರುಚಿಸದೇ ಇರುತ್ತದೆಯೇ? ಇನ್ನು ವಿಮಾನ ನಿಲ್ದಾಣಗಳಲ್ಲಿ ಹೋಟೆಲ್ ಇದ್ದರೆ ಅದರ ರೇಟ್ ಎಷ್ಟು ಎಂದು ಸಾಮಾನ್ಯ ಜನರು ಯೋಚಿಸೋದೇ ಬೇಡ ಬಿಡಿ. ಆದರೆ ವಿಮಾನಕ್ಕೆ ಹೋಗುವವರಿಗೆ ತಕ್ಕನಾಗಿ ರಾಮೇಶ್ವರಂ ಕೆಫೆ ದೋಸೆ ವ್ರ್ಯಾಪ್ (Dosa Wrapper) ರೆಡಿ ಮಾಡಿದ್ದು, ಅದು ಅಂದುಕೊಂಡಂತೆ ಲಗುಬಗೆಯಿಂದ ತಿಂಡಿ ತಿನ್ನುವವರಿಂದಾಗಿ Gen Zಗಳ ಫೆವರೆಟ್ ಆಹಾರವಾಗಿ ಈಗ ಸಕತ್ ಫೇಮಸ್ ಆಗುತ್ತಿದೆ.
ವಿಡಿಯೋ ವೈರಲ್
ಬೆಂಗಳೂರು ವಿಮಾನ ನಿಲ್ದಾಣದ ವಿಡಿಯೋವೊಂದು ಆಹಾರ ಪ್ರಿಯರಿಗೆ ರಾಮೇಶ್ವರಂ ಕೆಫೆಯಲ್ಲಿ ದಕ್ಷಿಣ ಭಾರತದ ಪರಿಚಿತ ಖಾದ್ಯವೊಂದು ಅನುಕೂಲಕರ, ಪ್ರಯಾಣ ಸ್ನೇಹಿ ಮೇಕ್ ಓವರ್ ಪಡೆಯುವ ಬಗ್ಗೆ ಪರಿಚಯಿಸಿದೆ. ಹೊಸದಾಗಿ ತಯಾರಿಸಿದ ದೋಸೆಯನ್ನು ವ್ರ್ಯಾಪ್ ಮಾಡಿ ಕೊಟ್ಟಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಪ್ರಯಾಣದಲ್ಲಿರುವಾಗ ಕ್ಲಾಸಿಕ್ ಖಾದ್ಯವನ್ನು ಆನಂದಿಸಲು ಇದು ಸೂಕ್ತವಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿರುವ ರಾಮೇಶ್ವರಂ ಕೆಫೆಯ ಅಡುಗೆಮನೆಯಲ್ಲಿ ತಯಾರಿಸಲಾದ ದೋಸೆಯನ್ನು ಆಲೂ ಮಸಾಲಾದಿಂದ ಪದರಗಳಾಗಿ ಲೇಯರ್ ಮಾಡಲಾಗುತ್ತದೆ ಮತ್ತು ಚಟ್ನಿಯೊಂದಿಗೆ ಬಡಿಸಲಾಗುತ್ತದೆ, foodietraveller_dharak ಇನ್ಸ್ಟಾಗ್ರಾಮ್ನಲ್ಲಿ ಇದರ ವಿಡಿಯೋ ಶೇರ್ ಮಾಡಲಾಗಿದೆ.
ಪದಾರ್ಥಗಳನ್ನು ಪದರಗಳಾಗಿ ಲೇಯರ್ ಮಾಡಿದ ನಂತರ, ಎಚ್ಚರಿಕೆಯಿಂದ ದೋಸೆಯನ್ನು ಸುತ್ತುತ್ತಾರೆ ಮತ್ತು ಬಾಳೆ ಎಲೆಗಳು ಮತ್ತು ಫಾಯಿಲ್ ಪೇಪರ್ನಲ್ಲಿ ಪ್ಯಾಕ್ ಮಾಡುತ್ತಾರೆ. ಇದರಿಂದ ನೋಡಲು ಕೂಡ ಅಚ್ಚುಕಟ್ಟಾಗಿ, ಪೋರ್ಟಬಲ್ ಊಟವಾಗಿ ಸಿದ್ಧವಾಗುತ್ತದೆ. ಪ್ರಯಾಣಿಕರಿಗೆ ಪ್ಲೇಟ್ ಮತ್ತು ಕಟ್ಲರಿ ಅಗತ್ಯವಿಲ್ಲದೇ ತಮ್ಮ ದೋಸೆಯನ್ನು ಆನಂದಿಸಲು ಅನುವು ಮಾಡಿಕೊಡುತ್ತದೆ.
ದಕ್ಷಿಣ ಭಾರತದ ಟೇಸ್ಟಿ ತಿನಿಸು
ಹೆಚ್ಚು ಇಷ್ಟಪಡುವ ದಕ್ಷಿಣ ಭಾರತದ ತಿನಿಸನ್ನು ಕೈಯಲ್ಲಿಯೇ ಹಿಡಿದುಕೊಂಡು ತಿನ್ನುವವರಿಗೆ ಇದು ಸೂಪರ್ ಆಯ್ಕೆಯಾಗಿದೆ. ವಿಮಾನ ಹಿಡಿಯಲು ಧಾವಿಸುವ ಜನರಿಗೆ ಅನುಕೂಲಕರವಾಗಿಸುವ ನಿಟ್ಟಿನಲ್ಲಿ ಇದನ್ನು ಸುತ್ತಿ ನೀಡಲಾಗುತ್ತಿದೆ. ವಿಮಾನ ಹತ್ತುವ ಮೊದಲು ತ್ವರಿತ ಉಪಹಾರವಾಗಲಿ ಅಥವಾ ವಿಮಾನಗಳ ನಡುವೆ ತಿಂಡಿಯಾಗಲಿ, ದೋಸೆ ಹೊದಿಕೆಯು ಸಾಮಾನ್ಯ ವಿಮಾನ ನಿಲ್ದಾಣದ ಸ್ಯಾಂಡ್ವಿಚ್ಗಳು ಮತ್ತು ಪ್ಯಾಕ್ ಮಾಡಿದ ತಿಂಡಿಗಳಿಗೆ ಪರ್ಯಾಯವನ್ನು ನೀಡುತ್ತದೆ.
ಸಾಮಾಜಿಕ ಮಾಧ್ಯಮ ಬಳಕೆದಾರರು ಇದನ್ನು ಸಿಕ್ಕಾಪಟ್ಟೆ ಶೇರ್ ಮಾಡುತ್ತಿದ್ದಾರೆ. “ಇದು ತುಂಬಾ ಅನುಕೂಲಕರ ಮತ್ತು ರುಚಿಕರವಾಗಿದೆ”. “ಇದು ಒಳ್ಳೆಯ ಐಡಿಯಾ” ಎಂದೆಲ್ಲಾ ಕರೆಯುತ್ತಿದ್ದಾರೆ. ರಾಮೇಶ್ವರಂ ಕೆಫೆಯು ಭಾರತೀಯ ಸಾಂಪ್ರದಾಯಿಕ ಭಾರತೀಯ ಆಹಾರವನ್ನು ಅದರ ಪರಿಚಿತ ಸುವಾಸನೆಗಳನ್ನು ಕಳೆದುಕೊಳ್ಳದೆ ಆಧುನಿಕ ಆಹಾರ ಪದ್ಧತಿಗೆ ಹೇಗೆ ಹೊಂದಿಕೊಳ್ಳಬಹುದು ಎಂಬುದಕ್ಕೆ ದೋಸೆ ರ್ಯಾಪರ್ ಹೊದಿಕೆ ಮತ್ತೊಂದು ಉದಾಹರಣೆಯಾಗಿದೆ.


