ಸಸ್ಯಾಹಾರಿಗಳಿಗಾಗಿ ವಿಶೇಷವಾಗಿ ತಯಾರಿಸಿದ ಚಿಲ್ಲಿ ಪನೀರ್ ಮಾಡುವ ವಿಧಾನ ಇಲ್ಲಿದೆ. ರೆಸ್ಟೋರೆಂಟ್ ಶೈಲಿಯಲ್ಲಿ ಮನೆಯಲ್ಲೇ ರುಚಿಕರವಾದ ಮತ್ತು ಆರೋಗ್ಯಕರ ಚಿಲ್ಲಿ ಪನೀರ್ ತಯಾರಿಸಿ.

ಮಾಂಸಹಾರಿಗಳು ಚಿಕನ್‌ ಮಟನ್‌ನಲ್ಲೇ ಚಿಕನ್ ಚಿಲ್ಲಿ, ಚಿಕನ್ 65, ಕಬಾಬ್ ಅಂತ ಹಲವಾರು ವೆರೈಟಿಗಳನ್ನು ಮಾಡುತ್ತಾರೆ. ಆದರೆ ಸಸ್ಯಹಾರಿಗಳಿಗೆ ಇಂತಹ ಆಯ್ಕೆಗಳು ತುಸು ಕಡಿಮೆ ಹೀಗಿರುವಾಗ ನಾವು ಸಸ್ಯಹಾರಿಗಳ ಇಷ್ಟದ ತಿನಿಸಾದ ಪನ್ನೀರಿನಿಂದ ಮಾಡಬಹುದಾದ ಪನೀರ್ ಚಿಲ್ಲಿ ಮಾಡುವುದು ಹೇಗೆ ಎಂಬ ಮಾಹಿತಿಯನ್ನು ನಾವು ಇಲ್ಲಿ ನೀಡುತ್ತಿದ್ದೇವೆ. ಈ ಚಿಲ್ಲಿ ಪನೀರ್ ವಿಶೇಷವಾಗಿ ಸಸ್ಯಾಹಾರಿ ಆಹಾರಪ್ರಿಯರನ್ನು ತೃಪ್ತಿಪಡಿಸಲು ತಯಾರಿಸಿದ ಇಂಡೋ-ಚೈನೀಸ್ ಮಿಶ್ರಿತ ಖಾದ್ಯ. ಇದು ಈ ಸಿಹಿ ಮತ್ತು ಖಾರ ಎರಡರ ಮಿಶ್ರಣವಾಗಿದ್ದು, ನೋಡಿದ ಕೂಡಲೇ ತಿನ್ನುವಂತೆ ನಿಮ್ಮನ್ನು ಪ್ರೇರೇಪಿಸುತ್ತದೆ. ಹೆಚ್ಚಿನ ರೆಸ್ಟೋರೆಂಟ್‌ಗಳಲ್ಲಿ ಇದನ್ನು ಹೆಚ್ಚಿನ ಪ್ರಮಾಣದ ಕೃತಕ ಬಣ್ಣಗಳು, ಎಣ್ಣೆಗಳಿಂದ ತಯಾರಿಸಲಾಗುತ್ತದೆ. ಇದರಿಂದ ನಿಮ್ಮ ಕರುಳಿಗೆ ಹಾನಿಯಾಗುತ್ತದೆ. ಆದರೆ ಆರೋಗ್ಯಕ್ಕೆ ಯಾವುದೇ ಹಾನಿ ಇಲ್ಲದಂತೆ ಹೇಗೆ ಆರೋಗ್ಯಕರವಾಗಿ ಮಾಡಬಹುದು ಎಂಬ ಪಾಕವಿಧಾನದ ಮಾಹಿತಿ ಇಲ್ಲಿದೆ.

ಚಿಲ್ಲಿ ಪನೀರ್‌ಗೆ ಬೇಕಾಗುವ ಸಾಮಗ್ರಿಗಳು

  • ಪನೀರ್ 200 ಗ್ರಾಂ
  • ಮೈದಾ ಹಿಟ್ಟು 2 ಚಮಚ
  • ಜೋಳದ ಹಿಟ್ಟು 2 ಚಮಚ
  • ಉಪ್ಪು 1 ಚಮಚ
  • ಕೆಚಪ್ 1 ಚಮಚ
  • ಶುಂಠಿ ಪೇಸ್ಟ್ 1 ಚಮಚ
  • ಬೆಳ್ಳುಳ್ಳಿ 2 ಎಸಳು
  • ಹಸಿ ಮೆಣಸಿನಕಾಯಿ 2 ದೊಡ್ಡದು
  • ಈರುಳ್ಳಿ ಒಂದು ಸಣ್ಣದು
  • ಕ್ಯಾಪ್ಸಿಕಂ ಒಂದು ಸಣ್ಣದು
  • ಸೋಯಾ ಸಾಸ್ 1 ಚಮಚ
  • ವಿನೆಗರ್ 1 ಚಮಚ

ಪನೀರನ್ನು ಮೊದಲಿಗೆ ಹುರಿದುಕೊಳ್ಳಿ
ಮೊದಲಿಗೆ ಪಾತ್ರವೊಂದರಲ್ಲಿ ಮೈದಾ ಹಾಗೂ ಜೋಳದ ಹಿಟ್ಟು ಮಿಶ್ರಣ ಮಾಡಿ ಹಿಟ್ಟು ತಯಾರಿಸಿ ಇಟ್ಟುಕೊಳ್ಳಿ. ನಂತರ ಪನೀರನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ, ತಯಾರಿಸಿದ ಹಿಟ್ಟಿನಲ್ಲಿ ಮುಳುಗಿಸಿ, ಬಳಿಕ ಬಾಣಲೆಯೊಂದರಲ್ಲಿ ಎಣ್ಣೆಯನ್ನು ಕಾಯಲು ಇಡಿ, ಎಣ್ಣೆ ಬಿಸಿಯಾಗುತ್ತಿದ್ದಂತೆ ಹಿಟ್ಟಿನಲ್ಲಿ ಮುಳುಗಿಸಿದ ಪನೀರನ್ನು ಎಣ್ಣೆಗೆ ಬಿಡಿ, ಬಳಿಕ ಅದು ಚಿನ್ನದ ಬಣ್ಣ ಬರುವವರೆಗೆ ಹುರಿಯಿರಿ.

ನಂತರ ಸಾಸ್ ತಯಾರಿಸಿ
ಅತ್ತ ಪನ್ನೀರು ಹುರಿಯುತ್ತಿದ್ದರೆ, ಇತ್ತ ಹಸಿ ಮೆಣಸಿನಕಾಯಿ, ಕ್ಯಾಪ್ಸಿಕಂ ಹಾಗೂ ಈರುಳ್ಳಿಯನ್ನು ಕತ್ತರಿಸಿಟ್ಟುಕೊಳ್ಳಿ, ನಂತರ ಒಂದು ಸ್ಟೀಲ್ ಪಾತ್ರೆ ಅಥವಾ ಬಾಣಲೆಯಲ್ಲಿ ತುಸು ಎಣ್ಣೆ ಹಾಕಿ ಎಣ್ಣೆ ಕಾದ ನಂತರ ಹಸಿರು ಮೆಣಸಿನಕಾಯಿ, ಬೆಳ್ಳುಳ್ಳಿ ಪೇಸ್ಟ್ ಮತ್ತು ನುಣ್ಣಗೆ ಕತ್ತರಿಸಿದ ಶುಂಠಿ, ತುಂಡು ಮಾಡಿದ ಕ್ಯಾಪ್ಸಿಕಂ ಮತ್ತು ಈರುಳ್ಳಿಯನ್ನು ಒಂದೊಂದೇ ಹಾಕಿ ಹುರುಯಿರಿ. ಚೆನ್ನಾಗಿ ಹುರಿದ ನಂತರ ಇದಕ್ಕೆ ಸೋಯಾ ಸಾಸ್, ವಿನೆಗರ್, ಕೆಚಪ್ ಮತ್ತು ಸ್ವಲ್ಪ ನೀರು ಸೇರಿಸಿ. ಇದನ್ನು ಕುದಿಯಲು ಬಿಡಿ ಮತ್ತು ನಿಮ್ಮ ರುಚಿಗೆ ತಕ್ಕಂತೆ ಉಪ್ಪು, ಮೆಣಸು ಮತ್ತು ಕೆಂಪು ಮೆಣಸಿನ ಪುಡಿಯಂತಹ ಒಣ ಮಸಾಲೆಗಳನ್ನು ಇದಕ್ಕೆ ಸೇರಿಸಿ. ಇದು ಸ್ವಲ್ಪ ದಪ್ಪವಾಗಬೇಕು ಎಂದು ಬಯಸಿದರೆ ನಂತರ ಒಂದು ಬಟ್ಟಲಿನಲ್ಲಿ, 2 ಚಮಚ ಜೋಳದ ಹಿಟ್ಟಿಗೆ ತುಸು ನೀರು ಸೇರಿಸಿ ಹಿಟ್ಟು ಉಂಡೆ ಕಟ್ಟದಂತೆ ಹದ ಮಾಡಿ ಅದನ್ನು ಒಲೆ ಮೇಲೆ ಕುದಿಯುತ್ತಿರುವ ಸಾಸ್‌ಗೆ ಸೇರಿಸಿ ಅದು ತುಸು ದಪ್ಪವಾಗುವಂತೆ ಮಾಡಿ. ನಂತರ ಈ ಸಾಸ್‌ ಮಿಶ್ರಣಕ್ಕೆ ನೀವು ಈಗಾಗಲೇ ಎಣ್ಣೆಯಲ್ಲಿ ಹುರಿದು ಇಟ್ಟ ಪನೀರುಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಬಳಿಕ ಅದಕ್ಕೆ ಸ್ಪ್ರಿಂಗ್ ಆನಿಯನ್‌ ಹಾಗೂ ಬಿಳ್ಳಿ ಎಳ್ಳು ಬೇಕಿದ್ದರೆ ಮೇಲಿನಿಂದ ಹಾಕಿ. ನಂತರ ತಟ್ಟೆಗೆ ಹಾಕಿ ಸರ್ವ್‌ ಮಾಡಿ ಈಗ ನಿಮ್ಮ ಚಿಲ್ಲಿ ರೆಡಿ