Paneer Butter Masala Recipe: ಪನೀರ್ ಬಟರ್ ಮಸಾಲಾ ಬಹುತೇಕ ಎಲ್ಲರಿಗೂ ಇಷ್ಟವಾಗುವ ಜನಪ್ರಿಯ ಡಿಶ್‌. ಬೆಣ್ಣೆಯ ಸುವಾಸನೆ, ಟೊಮೆಟೊದ ಹುಳಿ-ಸಿಹಿ ರುಚಿ ಹಾಗೂ ಕ್ರೀಮಿ ಗ್ರೇವಿಯೊಂದಿಗೆ ಈ ಖಾದ್ಯ ರೊಟ್ಟಿ, ನಾನ್‌, ಚಪಾತಿ ಅಥವಾ ಜೀರಾ ರೈಸ್‌ ಜೊತೆ ಸವಿಯಲು ಅದ್ಭುತವಾಗಿರುತ್ತದೆ.

Paneer Butter Masala Recipe: ಪನೀರ್‌ನಿಂದ ಮಾಡುವ ವಿವಿಧ ಖಾದ್ಯಗಳಲ್ಲಿ ಪನೀರ್ ಬಟರ್ ಮಸಾಲಾ ಬಹುತೇಕ ಎಲ್ಲರಿಗೂ ಇಷ್ಟವಾಗುವ ಜನಪ್ರಿಯ ಡಿಶ್‌. ಬೆಣ್ಣೆಯ ಸುವಾಸನೆ, ಟೊಮೆಟೊದ ಹುಳಿ-ಸಿಹಿ ರುಚಿ ಹಾಗೂ ಕ್ರೀಮಿ ಗ್ರೇವಿಯೊಂದಿಗೆ ಈ ಖಾದ್ಯ ರೊಟ್ಟಿ, ನಾನ್‌, ಚಪಾತಿ ಅಥವಾ ಜೀರಾ ರೈಸ್‌ ಜೊತೆ ಸವಿಯಲು ಅದ್ಭುತವಾಗಿರುತ್ತದೆ. ಕೇವಲ 30 ನಿಮಿಷಗಳಲ್ಲಿ ಮನೆಯಲ್ಲೇ ರೆಸ್ಟೋರೆಂಟ್‌ ಶೈಲಿಯ ಪನೀರ್ ಬಟರ್ ಮಸಾಲಾ ತಯಾರಿಸಬಹುದು.

ಪನೀರ್ ಬಟರ್ ಮಸಾಲಾಗೆ ಬೇಕಾಗುವ ಸಾಮಗ್ರಿಗಳು

ಪನೀರ್‌ – 200 ಗ್ರಾಂ, ಚೌಕಾಕಾರವಾಗಿ ಕತ್ತರಿಸಿದ್ದು

ಬೆಣ್ಣೆ – 3 ದೊಡ್ಡ ಚಮಚ

ಎಣ್ಣೆ – 1 ದೊಡ್ಡ ಚಮಚ

ಈರುಳ್ಳಿ – 2, ಹೆಚ್ಚಿದ್ದು

ಮಾಗಿದ ಟೊಮೆಟೊ – 4

ಗೋಡಂಬಿ – 10-12

ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ – 1 ದೊಡ್ಡ ಚಮಚ

ಕಾಶ್ಮೀರಿ ಖಾರದ ಪುಡಿ – 1.5 ದೊಡ್ಡ ಚಮಚ

ಗರಂ ಮಸಾಲ – 1 ಸಣ್ಣ ಚಮಚ

ಕಸೂರಿ ಮೇಥಿ – 1 ಸಣ್ಣ ಚಮಚ

ಫ್ರೆಶ್ ಕ್ರೀಮ್‌ – 2 ದೊಡ್ಡ ಚಮಚ

ಸಕ್ಕರೆ – ¾ ಸಣ್ಣ ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಪನೀರ್ ಬಟರ್ ಮಸಾಲಾ ಮಾಡುವ ವಿಧಾನ

ಹಂತ 1: ಮೊದಲು ಬಾಣಲೆಗೆ 1 ದೊಡ್ಡ ಚಮಚ ಬೆಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ ಹೆಚ್ಚಿದ ಈರುಳ್ಳಿ, ಟೊಮೆಟೊ ಹಾಗೂ ನೆನೆಸಿಟ್ಟ ಗೋಡಂಬಿ ಹಾಕಿ ಮೆತ್ತಗಾಗುವವರೆಗೆ ಬಾಡಿಸಿಕೊಳ್ಳಿ. ಹಂತ 2: ಬಾಡಿಸಿದ ಮಿಶ್ರಣವನ್ನು ತಣ್ಣಗಾಗಲು ಬಿಟ್ಟು, ನಂತರ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರೆಸ್ಟೋರೆಂಟ್‌ ಶೈಲಿಯ ಸ್ಮೂತ್‌ ಗ್ರೇವಿಗಾಗಿ ಈ ಪ್ಯೂರಿಯನ್ನು ಸೋಸಿಕೊಳ್ಳಿ. ಹಂತ 3: ಈಗ ಬಾಣಲೆಗೆ ಉಳಿದ ಬೆಣ್ಣೆ ಹಾಗೂ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ ಮತ್ತು ಕಾಶ್ಮೀರಿ ಖಾರದ ಪುಡಿ ಸೇರಿಸಿ ಸಣ್ಣ ಉರಿಯಲ್ಲಿ ಚೆನ್ನಾಗಿ ಕೈಯಾಡಿಸಿ. ಹಂತ 4: ಇದಕ್ಕೆ ತಯಾರಿಸಿಟ್ಟ ಟೊಮೆಟೊ ಪ್ಯೂರಿ ಸೇರಿಸಿ, ಎಣ್ಣೆ ಮೇಲಕ್ಕೆ ತೇಲುವವರೆಗೆ ಸುಮಾರು 5-6 ನಿಮಿಷ ಬೇಯಿಸಿಕೊಳ್ಳಿ. ಹಂತ 5: ಅಗತ್ಯವಿರುವಷ್ಟು ನೀರು, ಉಪ್ಪು, ಸಕ್ಕರೆ ಹಾಗೂ ಗರಂ ಮಸಾಲ ಸೇರಿಸಿ ಗ್ರೇವಿಯನ್ನು ಕುದಿಸಿಕೊಳ್ಳಿ. ಹಂತ 6: ಈಗ ಚೌಕಾಕಾರವಾಗಿ ಕತ್ತರಿಸಿದ ಪನೀರ್ ತುಂಡುಗಳನ್ನು ಗ್ರೇವಿಗೆ ಹಾಕಿ. ಸಣ್ಣ ಉರಿಯಲ್ಲಿ 2-3 ನಿಮಿಷ ಮಾತ್ರ ಬೇಯಿಸಿಕೊಳ್ಳಿ. ಹಂತ 7: ಕೊನೆಯಲ್ಲಿ ಕಸೂರಿ ಮೇಥಿ ಮತ್ತು ಫ್ರೆಶ್ ಕ್ರೀಮ್ ಸೇರಿಸಿ ನಿಧಾನವಾಗಿ ಮಿಶ್ರಣ ಮಾಡಿ. ನಂತರ ಸ್ಟವ್‌ ಆಫ್‌ ಮಾಡಿ.

ರೆಸ್ಟೋರೆಂಟ್‌ ಶೈಲಿಯ ರುಚಿಗೆ ಈ ಟಿಪ್ಸ್‌ ಪಾಲಿಸಿ

ಪನೀರ್ ಬಟರ್ ಮಸಾಲಾದ ಗ್ರೇವಿಯನ್ನು ರುಬ್ಬಿದ ಬಳಿಕ ಸೋಸಿಕೊಳ್ಳುವುದರಿಂದ ರೆಸ್ಟೋರೆಂಟ್‌ ಶೈಲಿಯ ಸಿಲ್ಕಿ ಹಾಗೂ ಮೃದುವಾದ ಟೆಕ್ಸ್ಚರ್ ಸಿಗುತ್ತದೆ. ಪನೀರ್ ತುಂಡುಗಳನ್ನು ಹೆಚ್ಚು ಹೊತ್ತು ಬೇಯಿಸಬೇಡಿ. ಹೆಚ್ಚು ಬೇಯಿಸಿದರೆ ಪನೀರ್ ಗಟ್ಟಿಯಾಗಿ ರಬ್ಬರ್‌ನಂತೆ ಆಗಬಹುದು. ಬಿಸಿ ಬಿಸಿ ಪನೀರ್ ಬಟರ್ ಮಸಾಲಾವನ್ನು ಚಪಾತಿ, ನಾನ್‌, ರೊಟ್ಟಿ, ಪರೋಟಾ ಅಥವಾ ಜೀರಾ ರೈಸ್‌ ಜೊತೆ ಸವಿಯಬಹುದು.