ನೀಲಗಿರಿ ಸ್ಟೈಲ್ ಚಿಕನ್ ರೆಸಿಪಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಷ್ಟವಾಗುವ ಖಾದ್ಯ. ಚಪಾತಿ, ನಾನ್, ಪುಲ್ಕಾ, ದೋಸೆ, ಅನ್ನ ಎಲ್ಲದರ ಜೊತೆ ತಿನ್ನಲು ಚೆನ್ನಾಗಿರುತ್ತೆ.
ಮಾಂಸಾಹಾರಿಗಳಿಗೆಲ್ಲಾ ಇಷ್ಟವಾದ ಕರಿ ಅಂದ್ರೆ ಚಿಕನ್ ಅಂತಾನೆ ಹೇಳ್ಬಹುದು. ಚಿಕನ್‌ನಿಂದ ತರತರದ ರೆಸಿಪಿಗಳನ್ನು ಮಾಡಿ ತಿಂತಾರೆ. ಚಿಕನ್ ಗ್ರೇವಿ, ಚಿಕನ್ ಕುರ್ಮಾ, ಚಿಕನ್ ಸಾರು ಹೀಗೆ ನಾನಾ ರೀತಿಯಲ್ಲಿ ಚಿಕನ್ ಖಾದ್ಯಗಳನ್ನು ಸವಿಯುತ್ತಾರೆ. ಪ್ರತಿ ಊರಿನಲ್ಲೂ ಆ ಊರಿನದ್ದೇ ಆದ ಅಡುಗೆ ವಿಧಾನಗಳಿರುತ್ತವೆ. ಚೆಟ್ಟಿನಾಡ್, ಕೊಂಗುನಾಡು, ಮದುರೈ, ಮಂಗಳೂರು ಕೋರಿ ರೊಟ್ಟಿ, ಕೂರ್ಗ್ ಪೋರ್ಕ್, ಹೀಗೆ ಪ್ರತಿ ಊರಿಗೂ ಅದರದ್ದೇ ಆದ ವಿಶೇಷ ಖಾದ್ಯಗಳಿರುತ್ತವೆ. ಅದೇ ರೀತಿ ಇವತ್ತು ನಾವು ನೀಲಗಿರಿ ಶೈಲಿಯ ಚಿಕನ್ ರೆಸಿಪಿ ಮಾಡೋಣ. ಇದು ನಾವು ಸಾಮಾನ್ಯವಾಗಿ ಮಾಡುವ ಚಿಕನ್ ಗ್ರೇವಿಗಿಂತ ಸ್ವಲ್ಪ ಡಿಫರೆಂಟ್ ಆಗಿರುತ್ತೆ.
ಇದು ತುಂಬಾ ರುಚಿಯಾಗಿರೋದ್ರಿಂದ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಷ್ಟು ಸಲ ಮಾಡಿಕೊಟ್ಟರು ಬೇಜಾರಾಗದೆ ತಿಂತಾರೆ. ಚಪಾತಿ, ನಾನ್, ಪುಲ್ಕಾ, ದೋಸೆ, ಅನ್ನ ಎಲ್ಲದಕ್ಕೂ ಸೂಪರ್ ಸೈಡ್ ಡಿಶ್ ನೀಲಗಿರಿ ಚಿಕನ್ ಆಘಗಿದ್ದು, ಅದನ್ನು ತಯಾರಿಸುವ ವಿಧಾನದ ಬಗ್ಗೆ ಇಲ್ಲಿದೆ ಮಾಹಿತಿ.
ಬೇಕಾಗುವ ಸಾಮಗ್ರಿಗಳು:
ಚಿಕನ್ - 1/2 ಕೆಜಿ, ಈರುಳ್ಳಿ - 1, ಹಸಿಮೆಣಸಿನಕಾಯಿ - 2, ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಚಮಚ, ಬೆಳ್ಳುಳ್ಳಿ - 5 ಎಸಳು, ಕೊತ್ತಂಬರಿ ಪುಡಿ - 1 ಚಮಚ, ಸೋಂಪು ಪುಡಿ - 1 ಚಮಚ, ಅರಿಶಿನ ಪುಡಿ - 1/2 ಚಮಚ, ಕೊತ್ತಂಬರಿ ಸೊಪ್ಪು - ಅಗತ್ಯವಿರುವಷ್ಟು, ಪುದೀನಾ - ಅಗತ್ಯವಿರುವಷ್ಟು, ಉಪ್ಪು - ರುಚಿಗೆ ತಕ್ಕಷ್ಟು
ನೀಲಿಗಿರಿ ಚಿಕನ್ ಮಾಡುವ ವಿಧಾನ
ಒಂದು ಮಿಕ್ಸಿ ಜಾರಿನಲ್ಲಿ ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಸೋಂಪು, ಪುದೀನಾ, ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿಕೊಳ್ಳಿ. ಒಲೆಯ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದ ನಂತರ ಲವಂಗ, ಚಕ್ಕೆ, ಏಲಕ್ಕಿ ಸೇರಿಸಿ ಹುರಿದು, ಹೆಚ್ಚಿದ ಈರುಳ್ಳಿ ಸೇರಿಸಿ ಈರುಳ್ಳಿ ಕೆಂಪಾಗುವವರೆಗೆ ಹುರಿಯಿರಿ. ಈಗ ಅರೆದಿಟ್ಟ ಮಸಾಲೆ ಸೇರಿಸಿ ಚೆನ್ನಾಗಿ ಹುರಿಯಿರಿ. ನಂತರ ಉಪ್ಪು ಅರಿಶಿಣದಲ್ಲಿ ನೆನೆಸಿಟ್ಟ ಚಿಕನ್ ಸೇರಿಸಿ ತಿರುವಿ, ಉಪ್ಪು ಸೇರಿಸಿ, ನೀರು ಹಾಕಿ ಮುಚ್ಚಳ ಮುಚ್ಚಿ ಸುಮಾರು 20 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಿ. ನಂತರ ಮುಚ್ಚಳ ತೆಗೆದು ಚಿಕನ್ ಬೆಂದಿದೆಯಾ ಎಂದು ಖಚಿತಪಡಿಸಿಕೊಂಡು ಒಲೆಯಿಂದ ಇಳಿಸಿ ಕೊತ್ತಂಬರಿ ಸೊಪ್ಪು ಉದುರಿಸಿ.