ಬೆಂಗಳೂರು(ಮೇ.29) ಕೊರೋನಾ ವೈರಸ್ ಎಂಬ ಮಾರಿ ಆವರಿಸಿಕೊಂಡ ಮೇಲೆ ರೆಸ್ಟೊರೆಂಟ್, ಹೋಟೆಲ್ ಗಳನ್ನು ಬಂದ್ ಮಾಡಲಾಗಿದೆ. ಕೇವಲ ಪಾರ್ಸಲ್ ಗೆ ಮಾತ್ರ ಅವಕಾಶ ನೀಡಲಾಗಿದೆ. ಸಂಜೆ ವೇಳೆ ಕುಳಿತು ಬೆಚ್ಚನೆ ಟೀ ಕುಡಿಯೋಣ, ಕಾಫಿ ಹೀರೋಣ.. ಒಂದು ಮಸಾಲೆ ದೋಸೆಯನ್ನು ಗಟ್ಟಿ ಚಟ್ನಿಯೊಂದಿಗೆ ಸವಿಯೋಣ... ಆಗುತ್ತಿಲ್ಲ...ಸದ್ಯಕ್ಕೆ ಕೊರೋನಾ ಬಿಡುತ್ತಿಲ್ಲ.

ಬೆಂಗಳೂರಿನ ವಿದ್ಯಾರ್ಥಿ ಭವನದ ಮಸಾಲೆ ದೋಸೆ ಸವಿಯದವರು ಯಾರಿದ್ದಾರೆ? ಗಾಂಧಿ ಬಝಾರಿನ ಈ ಹೋಟೆಲ್ಲೂ ಬಲು ಫೆಮಸ್ಸು.. ದೊಡ್ಡ ದೊಡ್ಡ ಸಾಹಿತಿಗಳಿಂದ ಹಿಡಿದು ಸಿನಿಮಾದ ಗಣ್ಯರಿಗೂ ಅಚ್ಚುಮೆಚ್ಚು.. ದೋಸೆಯೇ ಅಂಥ ಸ್ಪೆಷಲ್ಲು..

ಎಲ್ಲಾ ಲಾಕ್ ಡೌನ್ ಮಾಯೆ, ಪ್ರಯೋಗ ಶಾಲೆಯಾಗಿ ಬದಲಾದ ಅಡುಗೆ ಮನೆ

ಪಾರ್ಸಲ್ಲಿಗೆ ಮಾತ್ರ ಅವಕಾಶ ಎಂದು ಹೋಟೆಲ್ ಗಳೆಲ್ಲ ಬೋರ್ಡ್ ತಗಲಾಕಿಕೊಂಡಿವೆ.  ಏನು ಮಾಡಲಿಕ್ಕಾಗಲ್ಲ. ಸರ್ಕಾರದ ನಿಯಮ ಪಾಲಿಸಲೇಬೇಕು. ಹೋಟೆಲ್ ಓಪನ್ ಮಾಡಲು ಅವಕಾಶ ಕೊಡಿ ಎಂದು ಮೈಸೂರಿನಿಂದಲೂ ಮನವಿ ಬಂದಿದೆ.

ಜೂನ್ ಒಂದರಿಂದ ಆರಂಭ ಮಾಡಲಾಗುತ್ತದೆ ಎಂದು ಹೇಳಿದ್ದರೂ ಅಧಿಕೃತ ಮುದ್ರೆ ಬೀಳಲೇಬೇಕಲ್ಲ. ಇದೆಲ್ಲದರ ನಡುವೆ ವಿದ್ಯಾರ್ಥಿಭವನ ಸೋಶಿಯಲ್ ಡಿಸ್ಟಂಸಿಂಗ್ ಅಂದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾಸ್ಟರ್ ಪ್ಲಾನ್ ಒಂದನ್ನು ಮಾಡಿದೆ.

ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಹೇಗೆ ಎಂಬ ಮಾದರಿಯನ್ನು ತಯಾರು ಮಾಡಿ ಮುಂದಿಟ್ಟಿದೆ. ಕಾಫಿ-ಟೀ ಹೀರುತ್ತ ಮಸಾಲೆ ದೋಸೆ ಸವಿಯಲು ಅವಕಾಶ ಸದ್ಯವೇ ಸಿಗಲಿದೆ ಬಿಡಿ.  ಟೆಬಲ್ ಗೆ ಗಾಜನ್ನು ಅಳವಡಿಸಿ ಹೋಟೆಲ್ ಟೇಬಲ್ ಅನ್ನೇ ಕಂಪಾರ್ಟ್ ಮೆಂಟ್ ತರಹ ಮಾಡಲಾಗಿದೆ.   ಹಾಗಾಗಿ ಗ್ರಾಹಕ ಆರಾಮಾಗಿ ಬಂದು ಕುಳಿತು ತಿಂದು ತೇಗಿ ಹೋಗಬಹುದು. ಇಲ್ಲಿ ಕೊರೋನಾ  ಪ್ರವೇಶ ಮಾಡುವುದು ಕಷ್ಟ ಸಾಧ್ಯವಾಗುತ್ತದೆ. ಏನೇ ಇರಲಿ ಕೊರೋನಾ ಕಾರಣಕ್ಕೆ ಹೊಸದೊಂದು ಪ್ಲಾನ್ ಹುಟ್ಟಿಕೊಂಡಿದೆ. ಆದಷ್ಟು ಬೇಗ ಎಲ್ಲರಿಗೂ ಮಸಾಲೆ ದೋಸೆ ತಿನ್ನುವ ಯೋಗ ಸಿಗಲಿ!