ದೇವೇಂದ್ರ ಇಡ್ಲಿಹಿಟ್ಟು ರುಬ್ಬಿದ್ದೂ... ಕವಳ ಹಾಕಿ ಉಗುಳಿದ್ದೂ?
ಆಗಷ್ಟೇ ನಿಂತ ಮಳೆಯನ್ನೇ ಕಾದು ಯಾಕ್‌ನ ಕೂದಲುಗಳನ್ನು ದೇವಾಲಯದ ಹೆಂಚಿನ ಮೇಲೆ ಒಣಗಲು ಹಾಕಿ ಕಾಲು ಚಾಚಿ ಚಹಾ ಕುಡಿಯುತ್ತಾ, ನನ್ನ ನೋಡಿ ‘ಚಾಯ್ ಪೀಯೋಗೇ?’ ಎಂದ ಈ ಹಿಂದಿ ದೇವೇಂದ್ರನಿಗೂ, ನನ್ನ ತಲೆಯೊಳಗಣ ದೇವೇಂದ್ರನಿಗೂ ಯಾವ ವ್ಯತ್ಯಾಸವೂ ಕಾಣಲಿಲ್ಲ
- ರಾಧಿಕಾ ವಿಟ್ಲ
ಆಗೆಲ್ಲ ಅಮ್ಮ ನಾಳಿನ ತಿಂಡಿಗೆಂದು ನೆನೆ ಹಾಕಿದ್ದ ಅಕ್ಕಿಯನ್ನು ಕಲ್ಲಿಗೆ ಹಾಕಿ, ಉಟ್ಟಿದ್ದ ಸೀರೆ ಸ್ವಲ್ಪ ಎತ್ತಿ ಕಟ್ಟಿರುಬ್ಬುವ ಕಲ್ಲ ಮುಂದೆ ಕೂತು ಗುಡುಗುಡು ಎಂದು ಕಲ್ಲು ತಿರುಗಿಸಲು ಹೊರಟರೆ, ಆಕಾಶ ಕಪ್ಪಿಟ್ಟು ಧೋ ಎಂದು ಮಳೆ ಸುರಿಯುತ್ತಿತ್ತು. ಜೂನ್ ಬಂತೆಂದರೆ ಹೀಗೆ. ಹೆಚ್ಚು ಕಡಿಮೆ ಪ್ರತಿದಿನದ ಸಂಜೆಯ ಕತೆಯಿದು. ಕೆಲವೊಮ್ಮೆ ಅಮ್ಮನ ಈ ಕಲ್ಲಿನ ಗುಡುಗುಡು ಸದ್ದಿಗೂ, ಆಗಸದ ಗುಡುಗುಡು ಸದ್ದಿಗೂ, ಸದ್ದೇ ಇಲ್ಲದೆ ಸ್ಪರ್ಧೆ ಏರ್ಪಟ್ಟಾಗಲೆಲ್ಲ ನನ್ನೊಳಗೆ ಏನೋ ತಳಮಳ. ಅಮ್ಮನ ಗುಡುಗುಡು ನಿಂತರೂ ಆಗಸದ ಗುಡುಗುಡು ನಿಲ್ಲದೆ ಮುಂದುವರಿದರೆ, ಕರೆಂಟಿಲ್ಲದ ಕಗ್ಗತ್ತಲ ಸಂಜೆಗಳಲ್ಲಿ ಹೊತ್ತಿಸಿಟ್ಟದೀಪದ ಮುಂದೆ ಕೂತು ಪೇಪರು ಸುರುಳಿ ಸುತ್ತಿ ಹೊತ್ತಿಸುತ್ತಾ, ಬೆಂಕಿಯ ಜೊತೆ ಆಟವಾಡುತ್ತಿದ್ದೆ. ಆಗೆಲ್ಲ ಅಮ್ಮ, ‘ನೋಡು, ದೇವೇಂದ್ರನ ಅರಮನೆಯಲ್ಲೂ ನಾಳೆಗೆ ಇಡ್ಲಿಯಂತೆ’ ಎಂದು ಗಂಭೀರವಾಗಿ ತಮಾಷೆ ಮಾಡುತ್ತಿದ್ದಳು.
ಜೂನ್ ಬಂದರೆ, ದೇವೇಂದ್ರ ಸ್ವರ್ಗಲೋಕದಲ್ಲಿ ಕೂತು ಇಡ್ಲಿ ಮಾಡುವ ಸಂದರ್ಭ ಹೆಚ್ಚಿರುತ್ತಿತ್ತು. ಬಹುಶಃ ಆತ ಇಡ್ಲಿ ಪ್ರಿಯ. ಸಂಜೆಯಾಗುವ ಮೊದಲೇ ಮರುದಿನ ಬೆಳಗಿಗೆ ಇಡ್ಲಿ ಹಿಟ್ಟು ರೆಡಿ ಮಾಡುವ ಅವನ ಕೆಲಸ ಕೆಲವೊಮ್ಮೆ ಎಷ್ಟು ಹೊತ್ತಾದರೂ ಮುಗಿಯುತ್ತಿರಲಿಲ್ಲ. ಸುರಿವ ಮಳೆ, ರುಬ್ಬುವ ಕಲ್ಲಿನ ಗುಡುಗುಡು ಸದ್ದು ಹೆಚ್ಚಾಗುತ್ತಿರುವಾಗ ಸುಮ್ಮನೆ ಚಿರಿಪಿರಿ ಗಲಾಟೆ ಮಾಡಿದರೆ, ಅಮ್ಮ ನಮ್ಮ ಬಾಯಿ ಮುಚ್ಚಿಸಲು ಹೆದರಿಸಿಬಿಡುತ್ತಿದ್ದಳು. ಅದರಿಂದ ದೇವೇಂದ್ರನಿಗೆ ಜೋರು ಸಿಟ್ಟು ಗಿಟ್ಟು ಏನಾದರೂ ಬಂದು, ಮೇಲಿನಿಂದ ಆ ರುಬ್ಬುವ ಕಲ್ಲನ್ನೇನಾದರೂ ಎತ್ತಿ ಒಗೆದು ಬಿಟ್ಟರೆ, ಅದು ಸೀದಾ ನಮ್ಮ ಮನೆಯ ಮೇಲೇನಾದರೂ ಬಿದ್ದು ಆತನ ಇಡ್ಲಿಗೆ ನಾವೇ ಚಟ್ನಿಯಾಗಿಬಿಟ್ಟರೆ !
ಡೆಂಗ್ಯೂ-ಮಲೇರಿಯಾ ತಡೆಗಟ್ಟಲು ಮಳೆಗಾಲದಲ್ಲಿ ಹೀಗಿರಲಿ ಆರೋಗ್ಯ ಕಾಳಜಿ
ಆಗೆಲ್ಲ ನಮ್ಮೊಳಗೇ ನಡೆಯುತ್ತಿದ್ದ ಮಳೆಗಾಲದ ಇಂತಹ ಸುಖಾಸುಮ್ಮನೆ ಕತೆಗಳಿಗೂ ನಿಜವಾಗಿಯೂ ಜೀವ ಇರುತ್ತಿತ್ತು. ನೀಲಾಕಾಶದಲ್ಲಿ ತೇಲುವ ಬೆಳ್ಳನೆ ಮೋಡಗಳ ನಡುವೆ ಕಿರೀಟ ತೊಟ್ಟುಕೊಂಡು ಲುಂಗಿ ಎತ್ತಿ ಕಟ್ಟಿದೇವೇಂದ್ರನೆಂಬ ಸುಂದರಾಂಗ (ಆಗ ನಾನು ನೋಡಿದ ಸಿನೆಮಾ ಹಾಗೂ ಯಕ್ಷಗಾನಗಳ ಪ್ರಭಾವವೇ ಇರಬಹುದು) ರುಬ್ಬುವ ಕಲ್ಲಿನ ಮುಂದೆ ಕೂತು ಕೆಜಿಗಟ್ಟಲೆ ಹಿಟ್ಟು ರುಬ್ಬುತ್ತಿರುವಂತೆ ಕಲ್ಪನೆ ಮಾಡಿಕೊಂಡರೆ ಮಜಾ ಬರುತ್ತಿತ್ತು. ಮರುದಿನ ಬೆಳಗ್ಗೆದ್ದು ಅಂಗಳ ತುಂಬ ನಡೆದಾಡಿದರೆ ಅಲ್ಲಲ್ಲಿ ಹರಿದಾಡುವ ಕೆಂಪು ಕೆಂಪಿನ ಮುದ್ದು ಮುದ್ದು ವೆಲ್ವೆಟ್ ದೇವರ ಹುಳಗಳನ್ನು (ಮಳೆಗಾಲದಲ್ಲೇ ಜೀವತಳೆವ ಕೆಂಪು ಬಣ್ಣದ ಕೀಟ) ನೋಡಿ, ‘ಓಹೋ ದೇವೇಂದ್ರ ಗಡದ್ದಾಗಿ ತಿಂಡಿ ತಿಂದಿದ್ದೂ ಅಲ್ಲದೆ, ಮಂಚದಲ್ಲಿ ಕೈಕಾಲು ಬಿಟ್ಟು ಕೂತು, ರಂಭೆ ಊರ್ವಶಿ ಮೇನಕೆಯರ ನೃತ್ಯ ನೋಡುತ್ತಾ ಕವಳ ಹಾಕಿ, ನಮ್ಮ ಭೂಮಿ ತುಂಬ ಉಗುಳಿದ್ದಾನೆ’ ಎಂದು ಈ ಕೆಂಪು ಮುದ್ದಾದ ಹುಳವನ್ನು ಅಂಗೈಲಿಡುತ್ತಿದ್ದೆ.
ಆಗೆಲ್ಲ, ಮಳೆಗಾಲದಲ್ಲಿ ಇಷ್ಟೆಲ್ಲ ಕೆಲಸ ಮಾಡುವ ದೇವೇಂದ್ರ ಬೇರೆ ಕಾಲದಲ್ಲೆಲ್ಲ ಯಾಕಪ್ಪಾ ಸುಮ್ಮನಿರುತ್ತಾನೆ? ಯಾಕೆ ಖಾಲಿ ಕೂರುತ್ತಾನೆ ಎಂಬ ಒಂದು ಸಣ್ಣ ಡೌಟೂ ಸುಳಿಯದಷ್ಟುಕತೆಯೊಳಗೆ ಇಳಿದುಬಿಡುತ್ತಿದ್ದೆ.
ಈಗೆಲ್ಲ ಮಳೆಗಾಲದಲ್ಲಿ ಇಂಥ ಕತೆಗಳಿಲ್ಲ. ಅಂದು ಬಾಲ್ಯದಲ್ಲಿ ಕಟ್ಟಿದ ಇಂತಹ ಲೊಟ್ಟೆಕತೆಗಳನ್ನು ಈಗ ಹೇಳಲೂ ಕೇಳಲೂ ಯಾರಿಗೂ ಪುರುಸೊತ್ತೂ ಇಲ್ಲ. ಅಂದು ನನ್ನ ತಲೆಯೊಳಗೆ ಕೂತ ದೇವೆಂದ್ರ ಈಗಿನವರೆಗೂ ಅಲ್ಲೇ ಇರುವ ಕಾರಣವೋ ಏನೋ ಮೊನ್ನೆ ಮೊನ್ನೆ ಅದೆಲ್ಲೋ, ಹಿಮಾಚಲದ ಮೂಲೆಯ ಹಳ್ಳಿಯೊಂದರಲ್ಲಿ, ಕಶ್ಯಪ ಮುನಿಯ ದೇವಾಲಯದಲ್ಲಿ ಕವಳ ಹಾಕುತ್ತಾ ಕೂತಿದ್ದ ದೇವೇಂದ್ರನು ನಿಜಕ್ಕೂ ಸಾಕ್ಷಾತ್ ದೇವೇಂದ್ರನ ಹಾಗೆಯೇ ಕಂಡ! ಆಗಷ್ಟೇ ನಿಂತ ಮಳೆಯನ್ನೇ ಕಾದು ಯಾಕ್‌ನ ಕೂದಲುಗಳನ್ನು ದೇವಾಲಯದ ಹೆಂಚಿನ ಮೇಲೆ ಒಣಗಲು ಹಾಕಿ ಕಾಲು ಚಾಚಿ ಚಹಾ ಕುಡಿಯುತ್ತಾ, ನನ್ನ ನೋಡಿ ‘ಚಾಯ್ ಪೀಯೋಗೇ?’ ಎಂದ ಈ ಹಿಂದಿ ದೇವೇಂದ್ರನಿಗೂ, ನನ್ನ ತಲೆಯೊಳಗಣ ದೇವೇಂದ್ರನಿಗೂ ಯಾವ ವ್ಯತ್ಯಾಸವೂ ಕಾಣಲಿಲ್ಲ!
ಮಳೆಗಾಲದಲ್ಲಿ ಬಿಸಿಬಿಸಿ ಬಿರಿಯಾನಿ, ಕಬಾಬ್ ತಿನ್ನೋ ಮುನ್ನ ಈ ವಿಚಾರ ತಿಳ್ಕೊಂಡಿರಿ
‘ನಿಮ್ಮ ಹೆಸರು?’ ಎಂದ ನನ್ನ ನೋಡಿ, ‘ದೇವೇಂದ್ರ’ ಎಂದು ಹೇಳಿ ಒಂದು ಕ್ಷಣ ಅವಕ್ಕಾಗಿಸಿ, ಒಂದು ಚಹಾ ಹಿಡಿದು, ಉಭಯ ಕುಶಲೋಪರಿ ಸಾಂಪ್ರತದಿಂದ ಮೊದಲ್ಗೊಂಡು ಗಂಟೆಗಟ್ಟಲೆ ಮಾತಾಡುವಷ್ಟುಪುರುಸೊತ್ತಿದ್ದ ಹಿಮದೂರಿನ ಅವನ ಕತೆಗಳೂ ಮಳೆಯೂರಿನ ನನ್ನ ಕತೆಗಳೂ ಹೆಚ್ಚು ಕಡಿಮೆ ಒಂದೇ ಆಗಿದ್ದವು.
ಈಗೆಲ್ಲ ಮಳೆಗಾಲದ ಕತೆಗಳಿಗೆ ಯಾರಿಗೂ ಪುರುಸೊತ್ತಿಲ್ಲ ಅಂತ ಊರಿಗೆ ಹೋದಾಗಲೆಲ್ಲ ಅನಿಸಿದ್ದರೂ, ಈ ಹಿಮಾಚಲಿ ದೇವೇಂದ್ರನ ಮುಂದೆ ನನ್ನ ಎಣಿಕೆ ತಪ್ಪಾಗಿತ್ತು. ದಪ್ಪದಪ್ಪ ಮರದ ತೊಲೆಗಳಿಂದ ಕಟ್ಟಿದ್ದ ಮನೆಯ ಕೆಳ ಅಂತಸ್ತಿನಲ್ಲಿ, ಮಳೆಗಾಲಕ್ಕೂ ಚಳಿಗಾಲಕ್ಕೂ ವರ್ಷಪೂರ್ತಿ ಸಾಕಾಗುವಷ್ಟೆಲ್ಲವನ್ನೂ ಶೇಖರಿಸಿಟ್ಟು, ಉಪ್ಪರಿಗೆಯಲ್ಲಿ ಕಾಲು ಚಾಚಿ ಕೂತಿದ್ದ ಆತನ ಮುಂದೆ ನಾನೂ ಕೂತೆ. ಒಳಗೆಲ್ಲೋ ಅಡುಗೆ ಕೆಲಸ ಮಾಡಿಕೊಂಡು ಒಮ್ಮೆ ಹೊರಗಿಣುಕಿ ಹೋದ ಆತನ ಹೆಂಡತಿ ಎಂಬ ಸುಂದರಿಗೆ ಚಹಾ ಮಾಡಲು ಹೇಳಿ ಕತೆ ಶುರು ಮಾಡಿದ್ದ. ಬಂದ ಮಳೆ ಬಂದೇ ಇಲ್ಲವೆಂಬಂತೆ ಬಿಸಿಲು ಕಾಯಲು ಶುರುವಾಗಿತ್ತು.
***
ಮಳೆಯೆಂಬುದು ಎಲ್ಲೇ ಹೋದರೂ ಹೆಚ್ಚು ಕಮ್ಮಿ ಒಂದೇ ಆದರೂ, ಒಂದೊಂದು ಊರಿನ ಮಳೆಗೂ ಒಂದೊಂದು ಸುಖವಿದೆ. ಈ ಎಲ್ಲ ಮಳೆಗಳೂ ಒಂದೇ ದಾರದಲ್ಲಿ ಕಟ್ಟಲು ಹೊರಟ ಬಗೆಬಗೆಯ, ಆದರೆ ಒಂದಕ್ಕೊಂದು ಹೊಂದಿಕೆಯಾಗುವ ಹೂಗಳಂತೆ. ಚಳಿಯೂರುಗಳೂ ಹೆಚ್ಚು ಕಮ್ಮಿ ಮಳೆಯೂರುಗಳ ಹಾಗೆಯೇ. ಇನ್ನೇನು ಮಳೆಗಾಲ ಶುರುವಾಗಲಿದೆ ಎಂದು ಮಲೆನಾಡಿನಲ್ಲಿ ಪ್ರತಿ ಕುಟುಂಬವೂ ಮಳೆಗಾಲದ ತಯಾರಿ ಶುರು ಮಾಡುವಂತೆಯೇ, ಹಿಮ ಬೀಳುವ ಚಳಿಯೂರುಗಳ ಮಂದಿಯೂ ತಯಾರಿ ಮಾಡುತ್ತಾರೆ. ಎಡೆಬಿಡದೆ ಸುರಿವ ಮಳೆಗೆ ಹೊರಗೆ ಹೋಗಲಾಗದೆ, ಬೆಚ್ಚಗೆ ಮನೆಯೊಳಗೆ ಕೂತು, ಬೇಸಗೆಯಲ್ಲಿ ಮಾಡಿ ಶೇಖರಿಸಿಟ್ಟಹಪ್ಪಳವೋ, ಹಲಸಿನ ಬೀಜವೋ ಒಂದೊಂದೇ ಕೆಂಡದಲ್ಲಿ ಸುಟ್ಟು ತಿಂದು ನಾನು ಬೆಳೆದಿರುವುದಕ್ಕೂ, ಹಿಮ ಸುರಿವ ಹಳ್ಳಿಯ ಕಿರುಗಣ್ಣ ಬಿರುಕು ಕೆಂಪು ಕೆನ್ನೆಯ ಹುಡುಗಿ ಅಕ್ರೋಟು ಗುದ್ದಿ ತಿನ್ನುವುದಕ್ಕೂ ವ್ಯತ್ಯಾಸವೇ ಇಲ್ಲವಲ್ಲ ಅಂತ ಅನಿಸಿತ್ತು. ಸುರಿವ ಮಳೆಯಲ್ಲಿ ಮರದಲ್ಲಿ ನೇತಾಡುವ ಕೊಳೆತ ಹಲಸಿನ ಹಣ್ಣು ಯಾರಿಗೂ ಬೇಡವೆಂಬಂತೆ ದೊಪ್ಪನೆ ಬೀಳುವುದಕ್ಕೂ, ಅದ್ಯಾವುದೋ ನಾಲಗೆ ಹೊರಳದಂತಹ ಹೆಸರಿನ ಮೇಘಾಲಯದ ಹಳ್ಳಿಯಲ್ಲಿ ಮಳೆಗಾಳಿಗುದುರಿ ಅನಾಥವಾಗಿ ಬಿದ್ದ ರಾಶಿ ರಾಶಿ ಸೋಶಂಗ್ ಹಣ್ಣುಗಳಿಗೂ ಏನು ವ್ಯತ್ಯಾಸವಿದೆ!
ಉತ್ತರಾಖಂಡದ ಹೂಕಣಿವೆಯ ಮುಗಿಲೆತ್ತರಕ್ಕೆ ಚಾಚಿ ನಿಂತಿರುವ ಹಿಮಬೆಟ್ಟಗಳನ್ನೂ ಮರೆಮಾಚಿ, ಭೂಮಿಯನ್ನೂ ಆಗಸವನ್ನೂ ಒಂದು ಮಾಡುವಂತೆ ಸುರಿಯುವ ಧಾರಾಕಾರ ಮಳೆಗೂ, ಆಗುಂಬೆಯ ತಿರುವಿನ ಹೆಬ್ಬಾವಿನಂಥಾ ಹಾದಿಯಲ್ಲಿ ಸಾಗುವಾಗ ಇದಿರಾಗುವ ಘೋರಂಕಾರ ಮಳೆಗೂ, ಚಿರಾಪುಂಜಿಯ ಕಾಡಿನ ಹಾದಿಯಲ್ಲಿ ಸಿಕ್ಕಿಹಾಕಿಕೊಂಡಾಗ ಸುರಿದ ಕುಂಭದ್ರೋಣ ಮಳೆಗೂ ಹೆಚ್ಚು ವ್ಯತ್ಯಾಸವಿಲ್ಲ. ಮೇಘಾಲಯದ ಶಾಂಗ್‌ಪೆಡಂಗ್ ಹಳ್ಳಿಯ ಮೂಲಕವಾಗಿ ಹರಿದು ಬಾಂಗ್ಲಾ ಗಡಿಗೆ ಮಗುಚಿ ಬೀಳುವ ಸ್ಪಟಿಕ ಶುದ್ಧ ಡೌಕಿ ನದಿಯೂ, ನನ್ನೂರಿನ ನೇತ್ರಾವತಿ ಕುಮಾರಧಾರವೂ ಯಾವುದೇ ಬೇಧಭಾವವಿಲ್ಲದಂತೆ ಒಂದೇ ಮಳೆಗೆ ಒಮ್ಮಿಂದೊಮ್ಮೆಗೇ ಕೆಂಪಾಗುತ್ತಾರೆ. ತಾನು ಹೊಂದಿದ ಎಂಥ ಬಣ್ಣವನ್ನೂ ಮರೆತು ಮಳೆ ಬಂದಾಗ ಏಕೀಭಾವದಿಂದ ಕೆನ್ನೀರಾಗಿ ಬದಲಾಗಿ ಅದೇ ಭಾವದಲ್ಲಿ ಹರಿದು ಕಡಲು ಸೇರುತ್ತವೆ. ಅಸ್ಸಾಮಿನ ಬ್ರಹ್ಮಪುತ್ರನ ತೀರದಲ್ಲಿ ಮಳೆ ಬಂದಾಗ ಜೀವ ಕೈಲಿ ಹಿಡಿದು ಮಳೆ ನಿಲ್ಲಲಿ ಎಂದು ಏಕೋಧ್ಯಾನದಲ್ಲಿ ದೇವರಿಗೆ ಮೊರೆಯಿಡುವ ಮಂದಿಗೂ, ಕಾಶಿಯ ಘಾಟೊಂದರಲ್ಲಿ ಮೆಟ್ಟೀಲೇರಿ ಅಬ್ಬರಿಸುವ ಗಂಗೆಯಲ್ಲೂ ಕಣ್ಣು ಮೂಗು ಮುಚ್ಚಿ ಮುಳುಗೇಳುವ ಭಕ್ತರಿಗೂ ಹೆಚ್ಚು ವ್ಯತ್ಯಾಸವಿಲ್ಲ. ಮಳೆಯೆನ್ನುವ ಮಳೆ, ಹಿಮವೆನ್ನುವ ಹಿಮ ಮತ್ತೆ ಮತ್ತೆ ಬೇಕೆಂದು ಕಾಯುವಂತೆ ಮಾಡುವ, ಆದರೆ ಹೆಚ್ಚಾದರೆ ನಡುಗಿಸಿಬಿಡುವ ಮಾತೃಸ್ವರೂಪಿ.
***
ಹಬೆಯಾಡುವ ಬಿಸಿ ಬಿಸಿ ಚಹಾ ನನ್ನ ಗಂಟಲೊಳಗೆ ಹೊಗೆಯಾಡಿಸುತ್ತಲೇ ಇಳಿಯತೊಡಗಿದಾಗ, ಅಲ್ಲೇ ಮನೆಯಿಂದ ಹೊರಬಿದ್ದ ದೇವೇಂದ್ರನ ಪುಟಾಣಿ ಮಗಳು, ಆಗಷ್ಟೇ ಬಿದ್ದ ಹಿಮ ಮಿಶ್ರಿತ ಮಳೆಯ ಹಿಮವನ್ನು ಬೊಗಸೆಯಲ್ಲಿ ಹಿಡಿದು ಹಾಗೇ ಬಾಯಿಗಿಟ್ಟಳು. ಕುಡಿದ ಚಹಾ ಲೋಟವನ್ನು ಕೆಳಗಿಟ್ಟದೇವೇಂದ್ರ ಏನೂ ಹೇಳದೆ ಮಗಳ ಈ ಕೆಲಸ ನೋಡಿ ಮುಗುಳ್ನಕ್ಕ. ಒಂದಾನೊಂದು ಕಾಲದಲ್ಲಿ ಹುಲ್ಲಿನ ಬಿಳಲುಗಳಲ್ಲಿ ತೊಟ್ಟಿಕ್ಕದೆ ಅಲ್ಲೇ ಗಟ್ಟಿಯಾದ ನೀರಬಿಂದುವನ್ನು ಕಣ್ಣಿಗೆ, ಬಾಯಿಗೆ ಬಿಟ್ಟುಕೊಳ್ಳುತ್ತಿದ್ದ ನಾನೇ ನೆನಪಾದೆ. ನನಗೂ ಅವಳಿಗೂ ವ್ಯತ್ಯಾಸವೇ ಇಲ್ಲ!
ಇನ್ನು ದೇವೇಂದ್ರ ಹೇಳಿದ ಮಳೆಗಾಳಿ ಹಿಮದ ಕತೆಗಳಿಗಿಲ್ಲಿ ಜಾಗವಿಲ್ಲ!