ಸ್ಪೆಷಲ್ ತಿಂಡಿ ಬೇಕೆಂಬ ಮಕ್ಕಳಿಗೆ ಮಾಡಿ ಕೊಡಿ ಮಂಗಳೂರು ಬನ್ಸ್
ಸಂಜೆಯ ಸ್ನಾಕ್ಸ್ಗೆ ಏನಾದರೂ ಸ್ಪೆಷಲ್ ತಿಂಡಿ ಮಾಡಬೇಕು ಎಂದು ನೀವು ಯೋಚಿಸುತ್ತಿದ್ದರೆ,ಮಂಗಳೂರು ಬನ್ಸ್ ರೆಸಿಪಿ ಟ್ರೈ ಮಾಡಿ ನೋಡಬಹುದು.ಮನೆಮಂದಿಗೆಲ್ಲ ಇದು ಇಷ್ಟವಾಗುವುದರಲ್ಲಿ ಅನುಮಾನವೇ ಇಲ್ಲ.
ದಕ್ಷಿಣ ಕನ್ನಡ ಅಥವಾ ಉಡುಪಿ ಭಾಗದ ಮನೆಗಳಲ್ಲಿ ಬೆಳಗ್ಗೆ ಬ್ರೇಕ್‍ಫಾಸ್ಟ್ ಅಥವಾ ಸಂಜೆ ಸ್ನಾಕ್ಸ್ಗೆ ಸಿದ್ಧಪಡಿಸುವ ತಿಂಡಿಗಳಲ್ಲಿ ಬನ್ಸ್ ಕೂಡ ಒಂದು.ಈ ಭಾಗದ ಹೋಟೆಲ್‍ಗಳಲ್ಲಿ ಕೂಡ ಇದು ಅತ್ಯಧಿಕ ಬೇಡಿಕೆಯಿರುವ ತಿಂಡಿಗಳಲ್ಲೊಂದು.ಬನ್ಸ್ಗೆ ಪೂರಿಯ ಹೋಲಿಕೆಯಿದ್ದರೂ ರುಚಿಯಲ್ಲಿ ಸಿಹಿಯಾಗಿರುವ ಕಾರಣ ಸಂಬಾರು ಅಥವಾ ಚಟ್ನಿ ಇಲ್ಲದೆಯೋ ತಿನ್ನಬಹುದು. ಸ್ಕೂಲಿನಿಂದ ಮನೆಗೆ ಮರಳಿದ ತಕ್ಷಣ ಏನಾದರೂ ಸ್ಪೆಷಲ್ ತಿಂಡಿ ಬೇಕೆಂಬ ಮಕ್ಕಳಿಗೆ ಅಮ್ಮಂದಿರು ಈ ಡಿಸ್ ಟ್ರೈ ಮಾಡಬಹುದು. ಸಿಹಿಯಾಗಿರುವ ಕಾರಣ ಮಕ್ಕಳಿಗೆ ಇದು ಇಷ್ಟವಾಗುತ್ತದೆ ಕೂಡ. ಹಾಗಾದ್ರೆ ಮಂಗಳೂರು ಬನ್ಸ್ ಮಾಡೋದು ಹೇಗೆ?
ದಚ್ಚು, ಕಿಚ್ಚ, ರಕ್ಚಿತ್ ಶೆಟ್ಟಿ ಫೇವರೆಟ್ ಫುಡ್ ಯಾವ್ದು ಗೊತ್ತಾ?
ತಯಾರಿ ಸಮಯ: 8 ಗಂಟೆ
ಮಾಡಲು ಬೇಕಾಗುವ ಸಮಯ: 20 ನಿಮಿಷ
ಒಟ್ಟು ಸಮಯ: 8.20 ಗಂಟೆ
ಬೇಕಾಗುವ ಸಾಮಗ್ರಿಗಳು:
ಬಲಿತ ಬಾಳೆಹಣ್ಣು-2-3
ಮೈದಾ ಹಿಟ್ಟು – 2 ಕಪ್
ಸಕ್ಕರೆ-3 ಟೇಬಲ್ ಚಮಚ
ಜೀರಿಗೆ-1 ಟೀ ಚಮಚ
ಮೊಸರು- 1/4 ಕಪ್
ಬೇಕಿಂಗ್ ಸೋಡಾ- ಚಿಟಿಕೆಯಷ್ಟು
ಉಪ್ಪು-1/2 ಟೀ ಚಮಚ
ಅಡುಗೆ ಎಣ್ಣೆ- ಕರಿಯಲು ಬೇಕಾಗುವಷ್ಟು
ಮ್ಯೂಸಿಯಂ ಥರಾ ಇದೆ ಸುದೀಪ್ ಅವರ ಕಿಚನ್!
ಮಾಡುವ ವಿಧಾನ:
-ಸಿಪ್ಪೆ ತೆಗೆದ ಬಾಳೆಹಣ್ಣುಗಳನ್ನು ಒಂದು ಪಾತ್ರೆಗೆ ಹಾಕಿ ಚಮಚ ಅಥವಾ ಫೋರ್ಕ್ ಮುಖಾಂತರ ನಯವಾದ ಪೇಸ್ಟ್ ರೀತಿ ಮಾಡಿಕೊಳ್ಳಿ. ಕೈಗಳನ್ನು ಬಳಸಿ ಕೂಡ ಬಾಳೆಹಣ್ಣುಗಳನ್ನು ಕಿವುಚಬಹುದು.
-ಇದಕ್ಕೆ 2 ಟೇಬಲ್ ಚಮಚ ಸಕ್ಕರೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಆ ಬಳಿಕ ಜೀರಿಗೆ ಮತ್ತು ಉಪ್ಪು ಸೇರಿಸಿ. ಇದೇ ಮಿಶ್ರಣಕ್ಕೆ ಮೊಸರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
-ಈ ಮಿಶ್ರಣಕ್ಕೆ ಮೈದಾ ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಹಿಟ್ಟು ಮೃದುವಾಗಲು 5 ನಿಮಿಷ ನಾದಿಕೊಳ್ಳಿ. ಬಳಿಕ ಇದನ್ನು ದೊಡ್ಡ ಉಂಡೆಯನ್ನಾಗಿ ಮಾಡಿ ಅದಕ್ಕೆ ಎಣ್ಣೆ ಹಚ್ಚಿ.
-ಒಂದು ತೆಳುವಾದ ಬಟ್ಟೆಯನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ತೊಳೆದು ಹಿಂಡಿಕೊಳ್ಳಿ. ಬಟ್ಟೆಯಲ್ಲಿರುವ ನೀರನ್ನು ಸಂಪೂರ್ಣವಾಗಿ ಹಿಂಡಿಕೊಳ್ಳುವುದು ಅಗತ್ಯ. ಇಲ್ಲವಾದರೆ ಹಿಟ್ಟಿನ ಮೇಲೆ ನೀರು ಬೀಳುವ ಸಾಧ್ಯತೆಯಿರುತ್ತದೆ.ಒದ್ದೆ ಬಟ್ಟೆಯನ್ನು ಹಿಟ್ಟಿನ ಮೇಲೆ ಮುಚ್ಚಿದ ಬಳಿಕ ಅದನ್ನು ಬೆಚ್ಚಗಿನ ಸ್ಥಳದಲ್ಲಿ 8 ಗಂಟೆಗಳ ಕಾಲ ಇಡಿ.
- 8 ಗಂಟೆಗಳಾದ ಬಳಿಕ ಈ ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಉಂಡೆಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಮೈದಾವನ್ನು ಡಸ್ಟ್ ಮಾಡಿಕೊಂಡು ಪೂರಿಗಿಂತ ಸ್ವಲ್ಪ ದಪ್ಪವಿರುವಂತೆ ಲಟ್ಟಿಸಿಕೊಳ್ಳಿ.
-ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ.
-ಎಣ್ಣೆ ಬಿಸಿಯಾದ ಬಳಿಕ ಲಟ್ಟಿಸಿಕೊಂಡ ಬನ್ಸ್ ಹಾಕಿ ಕಂದು ಬಣ್ಣ ಬರುವ ತನಕ ಕರಿಯಿರಿ.
-ಬನ್ಸ್ನ ಎರಡೂ ಬದಿಯನ್ನು ಚೆನ್ನಾಗಿ ಕರಿಯುವುದು ಮುಖ್ಯ.
-ಕೊಬ್ಬರಿ ಚಟ್ನಿ ಅಥವಾ ಆಲೂಗಡ್ಡೆ ಸಾಗು ಜೊತೆಗೆ ಬನ್ಸ್ ಸವಿಯಲು ಚೆನ್ನಾಗಿರುತ್ತದೆ. ಬನ್ಸ್ ಅನ್ನು ಚಟ್ನಿ ಅಥವಾ ಸಂಬಾರ್ ಇಲ್ಲದೆ ಹಾಗೆಯೂ ತಿನ್ನಬಹುದು.
-ಬನ್ಸ್ ಹಿಟ್ಟು ಉಳಿದಿದ್ದರೆ ಅದನ್ನು ಏರ್‍ಟೈಟ್ ಕಂಟೈನರ್‍ನಲ್ಲಿ ಹಾಕಿ ಫ್ರಿಜ್‍ನಲ್ಲಿ 2-3 ದಿನಗಳ ಕಾಲ ಇಡಬಹುದು.
ಬಂಗುಡೆ ಮೀನು ಗಸಿ ಮಾಡೋದು ಹೇಗೆ ಗೊತ್ತಾ?
ವಿಶೇಷ ಸೂಚನೆಗಳು:1. ಬನ್ಸ್ಗೆ ಹಿಟ್ಟು ಕಲಸುವಾಗ ನೀರು ಸೇರಿಸಬೇಡಿ. ಇದರಿಂದ ಹಿಟ್ಟು ತೆಳ್ಳಗಾಗುತ್ತದೆ. ಮೊಸರಿನ ಜೊತೆಗೆ ಬಾಳೆಹಣ್ಣು ಹಾಗೂ ಸಕ್ಕರೆ ಸೇರಿಸಿರುವ ಕಾರಣ ಹಿಟ್ಟು ಕಲಿಸಲು ನೀರಿನ ಅಗತ್ಯವಿರುವುದಿಲ್ಲ.
2. ಬನ್ಸ್ ಮಾಡಲು ಬಲಿತ ಮೈಸೂರು ಬಾಳೆಹಣ್ಣು ಅಥವಾ ಪಚ್ಚೆಬಾಳೆಹಣ್ಣನ್ನು ಬಳಸಿದರೆ ಟೇಸ್ಟ್ ಚೆನ್ನಾಗಿರುತ್ತದೆ.
3. ಬನ್ಸ್ನ ಎರಡೂ ಬದಿ ಚೆನ್ನಾಗಿ ಫ್ರೈ ಮಾಡಬೇಕು.ಇಲ್ಲವಾದರೆ ಒಳಭಾಗದಲ್ಲಿರುವ ಹಿಟ್ಟು ಸರಿಯಾಗಿ ಬೇಯುವುದಿಲ್ಲ.
4. ಮೈದಾಹಿಟ್ಟು ಬೇಡವೆಂದೆನಿಸಿದರೆ ಗೋಧಿ ಹಿಟ್ಟನ್ನು ಬಳಸಿ ಕೂಡ ಬನ್ಸ್ ಮಾಡಬಹುದು. ಗೋಧಿ ಹಾಗೂ ಮೈದಾವನ್ನು ಸಮ ಪ್ರಮಾಣದಲ್ಲಿ ಬಳಸಿ ಕೂಡ ಬನ್ಸ್ ಮಾಡಬಹುದು.
5.ನಿಮಗೆ ಸಿಹಿ ಜಾಸ್ತಿ ಬೇಕೆಂದರೆ ಸಕ್ಕರೆಯನ್ನು ಸ್ವಲ್ಪ ಹೆಚ್ಚೇ ಬಳಸಬಹುದು.