ಸಾಮಾನ್ಯವಾಗಿ ಬಿಸಾಕೋ ಖರ್ಜೂರದ ಬೀಜಗಳಿಂದ್ಲೇ ಸಖತ್ ಟೇಸ್ಟಿ ಮತ್ತು ಹೆಲ್ದೀ ಕಾಫಿ ಮಾಡ್ಬಹುದು ಗೊತ್ತಾ? ಕೆಫೀನ್ ಇಲ್ಲದ ಈ ಡ್ರಿಂಕ್ ಕುಡಿಯೋಕೆ ರುಚಿಯಾಗಿರೋದು ಮಾತ್ರವಲ್ಲ, ಶಕ್ತಿ ಕೂಡ ಕೊಡುತ್ತೆ.
ಈಗಿನ ಕಾಲದಲ್ಲಿ ಜನ ಹೆಲ್ದೀ, ನ್ಯಾಚುರಲ್ ಡ್ರಿಂಕ್ಸ್ ಕಡೆಗೆ ಹೆಚ್ಚು ಗಮನ ಕೊಡ್ತಿದ್ದಾರೆ. ಅಂಥದ್ದೇ ಒಂದು ಹೋಮ್‌ಮೇಡ್ ಕಾಫಿ ರೆಸಿಪಿ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ವಿಶೇಷ ಅಂದ್ರೆ, ಇದನ್ನ ಮಾಡೋದು ಖರ್ಜೂರದ ಬೀಜಗಳಿಂದ! ಸಾಮಾನ್ಯವಾಗಿ ನಾವು ಖರ್ಜೂರ ತಿಂದು ಬೀಜ ಬಿಸಾಕ್ತೀವಿ, ಅಲ್ವಾ? ಆದ್ರೆ, ಅದೇ ಬೀಜಗಳಿಂದ ಸಖತ್ ಟೇಸ್ಟಿಯಾಗಿರೋ, ಒಳ್ಳೆ ಪರಿಮಳ ಇರೋ ಡ್ರಿಂಕ್ ತಯಾರಿಸಬಹುದು. ಈ ಪಾನೀಯದಲ್ಲಿ ಕೆಫೀನ್ ಇರೋದಿಲ್ಲ, ಆದ್ರೂ ದೇಹಕ್ಕೆ ಎನರ್ಜಿ ಕೊಡುತ್ತೆ. ಇದರ ರುಚಿ ಸ್ವಲ್ಪ ಕಾಫಿಯಂತೆಯೇ ಇರೋದ್ರಿಂದ, ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಇರೋರು ಇದನ್ನ ತುಂಬಾ ಇಷ್ಟಪಡ್ತಿದ್ದಾರೆ.

ಬೇಕಾಗುವ ಸಾಮಗ್ರಿಗಳು
ಈ ಸ್ಪೆಷಲ್ ಡ್ರಿಂಕ್ ಮಾಡೋಕೆ ಜಾಸ್ತಿ ಸಾಮಾನು ಏನೂ ಬೇಕಾಗಿಲ್ಲ. 10-12 ಒಣಗಿದ ಖರ್ಜೂರದ ಬೀಜ, 2 ಕಪ್ ನೀರು, ಅರ್ಧ ಕಪ್ ಹಾಲು, ರುಚಿಗೆ ತಕ್ಕಷ್ಟು ಜೇನುತುಪ್ಪ ಅಥವಾ ಸಕ್ಕರೆ ಮತ್ತು ಸ್ವಲ್ಪ ದಾಲ್ಚಿನ್ನಿ ಪುಡಿ ಸಾಕು. ನಿಮಗೆ ಇನ್ನೂ ಹೆಚ್ಚಿನ ಫ್ಲವೇರ್ ಬೇಕು ಅಂದ್ರೆ, ಏಲಕ್ಕಿ ಪುಡಿ ಕೂಡ ಸೇರಿಸ್ಕೊಬಹುದು. ಈ ಎಲ್ಲ ವಸ್ತುಗಳು ಮನೆಯಲ್ಲಿ ಸುಲಭವಾಗಿ ಸಿಗುತ್ತೆ. ಕಡಿಮೆ ಖರ್ಚಿನಲ್ಲಿ ರುಚಿಕರವಾದ ಪಾನೀಯ ರೆಡಿಯಾಗುತ್ತೆ.
ಹಂತ 1: ಖರ್ಜೂರದ ಬೀಜಗಳನ್ನು ರೆಡಿ ಮಾಡಿಕೊಳ್ಳಿ
ಮೊದಲಿಗೆ, ಖರ್ಜೂರದ ಬೀಜಗಳನ್ನ ಚೆನ್ನಾಗಿ ನೀರಿನಲ್ಲಿ ತೊಳೆಯಿರಿ. ಅದರ ಮೇಲಿರೋ ಸಿಹಿ ಮತ್ತೆ ಕೊಳೆ ಪೂರ್ತಿಯಾಗಿ ಹೋಗ್ಬೇಕು. ಆಮೇಲೆ, ಬೀಜಗಳನ್ನ ಬಿಸಿಲಲ್ಲಿ ಅಥವಾ ಫ್ಯಾನ್ ಕೆಳಗೆ ಇಟ್ಟು ಪೂರ್ತಿಯಾಗಿ ಒಣಗಿಸಿ. ನಂತರ, ಒಂದು ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ 10-15 ನಿಮಿಷ ಹುರಿಯಿರಿ. ಬೀಜಗಳಿಂದ ಕಾಫಿಯಂತಹ ಪರಿಮಳ ಬರಲು ಶುರುವಾಗಿ, ಅದರ ಬಣ್ಣ ಡಾರ್ಕ್ ಆದಾಗ ಗ್ಯಾಸ್ ಆಫ್ ಮಾಡಿ.
ಹಂತ 2: ಬೀಜಗಳ ಪುಡಿ ತಯಾರಿಸಿ
ಹುರಿದ ಬೀಜಗಳು ಪೂರ್ತಿಯಾಗಿ ತಣ್ಣಗಾದ ಮೇಲೆ, ಮಿಕ್ಸರ್ ಜಾರ್‌ಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಈ ಪುಡಿ ನೋಡೋಕೆ ಕಾಫಿ ಪೌಡರ್ ತರಾನೇ ಕಾಣುತ್ತೆ. ನೀವು ಈ ಪುಡಿಯನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟು ಹಲವು ದಿನಗಳವರೆಗೆ ಸ್ಟೋರ್ ಮಾಡಬಹುದು. ಬೇಕಾದಾಗ ತಕ್ಷಣ ಬಳಸಬಹುದು.
ಹಂತ 3: ಕಾಫಿ ಡ್ರಿಂಕ್ ರೆಡಿ ಮಾಡಿ
ಈಗ ಒಂದು ಪಾತ್ರೆಯಲ್ಲಿ ನೀರು ಬಿಸಿ ಮಾಡಿ, ಅದಕ್ಕೆ 2 ಚಮಚ ಖರ್ಜೂರದ ಬೀಜದ ಪುಡಿ ಹಾಕಿ. 5-7 ನಿಮಿಷ ಚೆನ್ನಾಗಿ ಕುದಿಸಿ. ಆಗ ಅದರ ಫ್ಲೇವರ್ ನೀರಿಗೆ ಇಳಿಯುತ್ತೆ. ಆಮೇಲೆ ಹಾಲು ಸೇರಿಸಿ ಇನ್ನೆರಡು ನಿಮಿಷ ಕುದಿಸಿ. ಕೊನೆಗೆ, ಇದನ್ನ ಸೋಸಿಕೊಂಡು ರುಚಿಗೆ ತಕ್ಕಷ್ಟು ಜೇನುತುಪ್ಪ ಅಥವಾ ಸಕ್ಕರೆ ಬೆರೆಸಿ ಬಿಸಿ ಬಿಸಿಯಾಗಿ ಸರ್ವ್ ಮಾಡಿ.
ಈ ವೈರಲ್ ಡ್ರಿಂಕ್ ಯಾಕೆ ಇಷ್ಟು ಸ್ಪೆಷಲ್?
ಖರ್ಜೂರದ ಬೀಜದಿಂದ ಮಾಡಿದ ಈ ಡ್ರಿಂಕ್‌ನಲ್ಲಿ ಕೆಫೀನ್ ಇರೋದಿಲ್ಲ. ಹಾಗಾಗಿ ಇದು ಹೊಟ್ಟೆಗೆ ಭಾರ ಅನ್ನಿಸಲ್ಲ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು ಇರೋದ್ರಿಂದ ದೇಹಕ್ಕೆ ಶಕ್ತಿ ಕೊಡುತ್ತೆ. ಜೊತೆಗೆ, ಇದರ ರುಚಿ ಕೂಡ ತುಂಬಾ ವಿಭಿನ್ನ ಮತ್ತು ಶ್ರೀಮಂತವಾಗಿದೆ. ಯಾರು ಹೆಚ್ಚು ಕಾಫಿ ಕುಡಿಯುವುದನ್ನು ತಪ್ಪಿಸಬೇಕು ಅಂದುಕೊಂಡಿದ್ದಾರೋ, ಅವರಿಗೆ ಇದು ಒಂದು ಉತ್ತಮ ಆರೋಗ್ಯಕರ ಆಯ್ಕೆಯಾಗಬಹುದು.


