ರಂಜಾನ್ ಇಫ್ತಾರ್‌ಗಾಗಿ ಬೆಂಗಳೂರಿನಲ್ಲಿ ತಯಾರಿಸಲಾಗುವ ವಿಶೇಷ 'ಆಶ್' ಸೂಪ್ ಬಗ್ಗೆ ಈ ಲೇಖನ ವಿವರಿಸುತ್ತದೆ. ಅಕ್ಕಿ, ಹೆಸರುಬೇಳೆ ಮತ್ತು ಮಟನ್ ಬಳಸಿ ಮನೆಯಲ್ಲಿಯೇ ಸುಲಭವಾಗಿ ಈ ರುಚಿಕರ ಹಾಗೂ ಹೊಟ್ಟೆ ತುಂಬಿಸುವ ಪಾನೀಯವನ್ನು ತಯಾರಿಸುವ ಸಂಪೂರ್ಣ ವಿಧಾನವನ್ನು ಇಲ್ಲಿ ನೀಡಲಾಗಿದೆ.

ರಂಜಾನ್ ಮಾಸದಲ್ಲಿ ಇಫ್ತಾರ್‌ಗೆ ಏನು ಮಾಡಬೇಕೆಂದು ಯೋಚಿಸುತ್ತಿದ್ರೆ ಆಶ್ ಮಾಡ್ಕೊಳ್ಳಿ. ಬೆಂಗಳೂರಿನಲ್ಲಿ ಈ ವಿಶೇಷವಾದ ಜ್ಯೂಸ್ ತಯಾರಿಸಲಾಗುತ್ತದೆ. ಒಂದು ಗ್ಲಾಸ್ ಆಶ್ ಕುಡಿದ್ರೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಮನೆಯಲ್ಲಿಯೇ ಇದನ್ನು ಸುಲಭವಾಗಿ ಮತ್ತು ಕಡಿಮೆ ಸಮಯದಲ್ಲಿ ತಯಾರಿಸಿಕೊಳ್ಳಬಹುದು. ರಂಜಾನ್ ಮಾತ್ರವಲ್ಲ ಸಂಜೆಗೆ ಸ್ನ್ಯಾಕ್ಸ್ ರೂಪದಲ್ಲಿಯೂ ಇದನ್ನು ತಯಾರಿಸಬಹುದು. ಈ ರುಚಿಯಾದ ಸೂಪ್ ಒಮ್ಮೆ ಕುಡಿದ್ರೆ ಪದೇ ಪದೇ ಕೇಳುತ್ತೀರಿ. ಈ ವಿಶೇಷವಾದ ಸೂಪ್‌ ಯಾವ ಹೋಟೆಲ್‌ಗಳಲ್ಲಿಯೂ ಸಿಗಲ್ಲ. ಆಶ್ ಸೂಪ್ ತಯಾರಿಸೋದು ಹೇಗೆ ಅಂತ ನೋಡೋಣ ಬನ್ನಿ.

ಆಶ್ ಸೂಪ್ ತಯಾರಿಸಲು ಬೇಕಾಗುವ ಸಾಮಗ್ರಿಗಳು

ಅಕ್ಕಿ: ಒಂದು ಕಪ್

ಹೆಸರುಬೇಳೆ: 1/2 ಕಪ್

ಮಟನ್: 50 ಗ್ರಾಂ

ಹಸಿಮೆಣಸಿನಕಾಯಿ: 2

ಟೊಮೆಟೋ: 2

ಈರುಳ್ಳಿ: 1

ಅಡುಗೆ ಎಣ್ಣೆ: 2 ಟೀ ಸ್ಪೂನ್

ಬೆಳ್ಳುಳ್ಳಿ-ಶುಂಠಿ ಪೇಸ್ಟ್; 1 ಟೀ ಸ್ಪೂನ್

ಅರಿಶಿನ: 1/2 ಟೀ ಸ್ಪೂನ್

ಅಚ್ಚ ಖಾರದ ಪುಡಿ: 1 ಟೀ ಸ್ಪೂನ್

ಉಪ್ಪು: ರುಚಿಗೆ ತಕ್ಕಷ್ಟು

ಪುದೀನಾ

ಕೋತಂಬರಿ ಸೊಪ್ಪು

ಉಪ್ಪು: ರುಚಿಗೆ ತಕ್ಕಷ್ಟು

ಆಶ್ ಸೂಪ್ ಮಾಡುವ ವಿಧಾನ

ಮೊದಲಿಗೆ ಅಕ್ಕಿ ಮತ್ತು ಹೆಸರುಬೇಳೆಯನ್ನು ಎರಡ್ಮೂರು ನೀರಿನಲ್ಲಿ ತೊಳೆದುಕೊಂಡು 15 ನಿಮಿಷ ಎತ್ತಿಟ್ಟುಕೊಳ್ಳಿ. ತದನಂತರ ಸ್ವಲ್ಪ ನೀರು ಸೇರಿಸಿ ಎರಡನ್ನೂ ತರಿತರಿಯಾಗಿ ರುಬ್ಬಿಕೊಳ್ಳಿ. ನಂತರ ಹಸಿಮೆಣಸಿನಕಾಯಿ, ಟೊಮೆಟೋ, ಕೋತಂಬರಿ, ಪುದೀನಾ ಮತ್ತು ಈರುಳ್ಳಿಯನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ. ಹಾಗೆಯೇ ಮಟನ್‌ನ್ನು ಸಣ್ಣದಾಗಿ ಕತ್ತರಿಸಿ ಅಥವಾ ಜಜ್ಜಿಕೊಳ್ಳಿ.

ಈಗ ಒಲೆ ಆನ್ ಮಾಡ್ಕೊಂಡು ಕುಕ್ಕರ್ ಇರಿಸಿಕೊಳ್ಳಿ. ಮೊದಲಿಗೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾಗ್ತಿದ್ದಂತೆ ಈರುಳ್ಳಿ ಹಾಕಿ ಹಸಿ ವಾಸನೆ ಹೋಗುವರೆಗೂ ಬಾಡಿಸಿಕೊಳ್ಳಿ. ನಂತರ ಹಸಿಮೆಣಸಿನಕಾಯಿ ಮತ್ತು ಟೊಮೆಟೋ ಸೇರಿಸಿ ಮಿಕ್ಸ್ ಮಾಡಿಕೊಳ್ಳಬೇಕು. ಟೊಮೆಟೋ ಸಾಫ್ಟ್ ಆಗ್ತಿದ್ದಂತೆ ಜಜ್ಜಿಟ್ಟುಕೊಂಡಿರುವ ಮಟನ್ ಸೇರಿಸಿಕೊಳ್ಳಬೇಕು. ಮಟನ್ ಮಸಾಲೆ ಜೊತೆ ಮಿಕ್ಸ್ ಆಗ್ತಿದ್ದಂತೆ ರುಬ್ಬಿಕೊಂಡಿರುವ ಅಕ್ಕಿ ಮತ್ತು ಹೆಸರುಬೇಳೆ ಮಿಶ್ರಣ ಸೇರಿಸಿಕೊಳ್ಳಿ.

ಇದನ್ನೂ ಓದಿ: Ramadan 2026: ಇಡೀ ದಿನ ಹಸಿವು ಆಗದಿರಲು ಸೆಹ್ರಿಗೆ ಇದನ್ನೆಲ್ಲಾ ತನ್ನಿ; ಇವುಗಳನ್ನು ಮುಟ್ಟಲೂಬೇಡಿ

ಈಗ ಇದಕ್ಕೆ ಬೆಳ್ಳುಳ್ಳಿ-ಶುಂಠಿ ಪೇಸ್ಟ್, ಅರಿಶಿನ, ಅಚ್ಚ ಖಾರದ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಂಡು ನಾಲ್ಕರಿಂದ ಐದು ನಿಮಿಷ ಬೇಯಿಸಿಕೊಳ್ಳಿ. ಈಗ ಕತ್ತರಿಸಿಕೊಂಡಿರುವ ಕೋತಂಬರಿ ಮತ್ತು ಪುದೀನಾ ಹಾಕಿಕೊಳ್ಳಿ. ಕೊನೆಗೆ ನಾಲ್ಕರಿಂದ ಐದು ಗ್ಲಾಸ್ ನೀರು ಸೇರಿಸಿಕೊಂಡು ಕುಕ್ಕರ್ ಮುಚ್ಚಿ ಮೂರರಿಂದ ನಾಲ್ಕು ವಿಷಲ್ ಕೂಗಿಸಿಕೊಂದ್ರೆ ರುಚಿಯಾದ ಆಶ್ ಕುಡಿಯಲು ಸಿದ್ಧವಾಗುತ್ತದೆ.

ಇದನ್ನೂ ಓದಿ: ರಂಜಾನ್ ಮಾಸದಲ್ಲಿ ರಿಫ್ರೆಶ್ ಅನುಭವ ನೀಡುವ ಮೊಹಬ್ಬತ್ ಕಾ ಶರಬತ್ ಪಾನೀಯ ತಯಾರಿಸುವ ವಿಧಾನ