ಪುಟ್ಟ ಬಾಲಕ ಚಪಾತಿ ಲಟ್ಟಿಸುತ್ತಿದ್ದಾನೆ. ಅದು ಯಾವ ಲೆವೆಲ್‌ಗೆ ಅಂದ್ರೆ ಹುಡುಗಿಯರೂ ಕೂಡ ನಾಚಿಕೊಳ್ಳಬೇಕು. 

ಈಗಷ್ಟೇ ಅಡುಗೆ ಕಲಿಯುತ್ತಿರುವ ಹೆಣ್ಮಕ್ಕಳಿಗೆ ಕೆಲವು ಅಡುಗೆ ಮಾಡುವುದು ಕಷ್ಟಕಷ್ಟ. ಈ ಪೈಕಿ ಚಪಾತಿ ಲಟ್ಟಿಸುವುದು, ರೊಟ್ಟಿ ತಟ್ಟುವುದು, ಮುದ್ದೆ ಗುಂಡಗೆ ಮಾಡುವುದು ದೊಡ್ಡ ಟಾಸ್ಕೇ ಸರಿ. ನಾವೇ ಮನೆಯವರು ಹೇಗೋ ಅಡ್ಜಸ್ಟ್ ಮಾಡಿಕೊಂಡು ಊಟ ಮಾಡುತ್ತೇವೆ. ಆದರೆ ಹೊರಗಿನಿಂದ ಬಂದವರಿಗೆ ಅಡುಗೆ ಮಾಡಿ ಬಡಿಸುವುದು ಇದೆಯಲ್ಲಾ ಆಗ ನಾವೆಂಥ ಅನುಭವಿಗಳಾಗಿದ್ದರೂ ಸ್ವಲ್ಪ ಸಂಕೋಚಪಡುತ್ತೇವೆ. ಏಕೆಂದರೆ ಅವರು ಸ್ವಲ್ಪ ಸಪ್ಪೆಯಿದ್ದರೂ "ಇನ್ನು ಸ್ವಲ್ಪ ಸಿಹಿ ಬೇಕಿತ್ತು" ಎನ್ನುತ್ತಾರೆ. ಇಲ್ಲವೇ ಹುಳಿ ಜಾಸ್ತಿಯಾದರೆ "ನಿಮ್ಮ ಮನೆಯಲ್ಲಿ ಹುಳಿ ಜಾಸ್ತಿ ತಿಂತೀರಾ" ಎನ್ನುವ ಕೊಂಕು ಮಾತುಗಳನ್ನು ಕೇಳುತ್ತಿರುತ್ತೇವೆ. ಇನ್ನು ಚಪಾತಿ, ರೊಟ್ಟಿಯಂತಹ ಅಡುಗೆಯಾದರೆ ಕಥೆ ಮುಗಿದುಹೋಯಿತು. ಏಕೆಂದರೆ ಸ್ವಲ್ಪ ಶೇಪ್ ಚೇಂಜ್ ಆದರೂ "ಇದೇನು ಅಮೆರಿಕಾ, ಆಸ್ಟ್ರೇಲಿಯಾ ಮ್ಯಾಪ್ ಆಗಿದೆಯಲ್ಲಾ" ಎಂದು ನಮ್ಮ ಮನೆಯವರೇ ಹೇಳುವುದನ್ನು ಕೇಳಿದ್ದೇವೆ.

ಇಷ್ಟೆಲ್ಲಾ ಪೀಠಿಕೆ ಯಾಕೆ ಅಂತೀರಾ?, ಇಲ್ಲೋರ್ವ ಪುಟ್ಟ ಬಾಲಕ ಚಪಾತಿ ಲಟ್ಟಿಸುತ್ತಿದ್ದಾನೆ. ಅದು ಯಾವ ಲೆವೆಲ್‌ಗೆ ಅಂದ್ರೆ ಹುಡುಗಿಯರೂ ಕೂಡ ನಾಚಿಕೊಳ್ಳಬೇಕು. ಹೌದು, ಆ ಪುಟ್ಟ ಮಗು ನಾದಿರುವ ಹಿಟ್ಟನ್ನು ತೆಗೆದುಕೊಂಡು ಚಪಾತಿ ರೌಂಡಾಗಿ ಲಟ್ಟಿಸಿದ್ದಾನೆ. ಅವನ ಪಕ್ಕದಲ್ಲಿ ಅಮ್ಮನೋ, ಚಿಕ್ಕಮ್ಮನೋ ಕೂತಿರುವ ಹಾಗಿದೆ. ಆದರೆ ಆ ಬಾಲಕ ಅವರ್ಯಾರ ಸಹಾಯವೂ ತೆಗೆದುಕೊಂಡಿಲ್ಲ. ಸದ್ಯ ನೆಟ್ಟಿಗರು ಬಾಲಕ ಚಪಾತಿ ಲಟ್ಟಿಸುವ ಸ್ಟೈಲ್‌ಗೆ ಫಿದಾ ಆಗಿದ್ದಾರೆ. "ಡಿಯರ್ ಗರ್ಲ್ಸ್ ಯಾರಾದ್ರೂ ಇದೀರಾ...ನಮ್ಮ ಹುಡುಗನ ಜೊತೆ ಕಾಂಪಿಟೇಶನ್‌ ಕೊಡುವವರು" ಎಂದು ವಿಡಿಯೋಗೆ ಶೀರ್ಷಿಕೆ ಕೊಡಲಾಗಿದೆ. ಸದ್ಯ ಈ ವಿಡಿಯೋ ಎಲ್ಲಿಯದು ಎಂಬುದು ತಿಳಿದಿಲ್ಲ.

ವಿಡಿಯೋವನ್ನು forever_karnataka_ಎಂಬ ಥ್ರೆಡ್‌ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಪ್ರತಿಯೊಬ್ಬರು ವಿಡಿಯೋವನ್ನು ಇಷ್ಟಪಟ್ಟು ನೋಡುತ್ತಿದ್ದಾರೆ. ವಿಡಿಯೋ ಅಪ್‌ಲೋಡ್ ಮಾಡಿ ಕೆಲವೇ ಕ್ಷಣಗಳಲ್ಲಿ ಅನೇಕ ಜನರು ಶೇರ್ ಮಾಡಿದ್ದು, ಇದಕ್ಕೆ ಹಾರ್ಟ್ ಇಮೋಜಿಯನ್ನು ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದರೆ ಬಹುಶಃ ಖಂಡಿತ ನಿಮಗೂ ಇಷ್ಟವಾಗಬಹುದು. ಚಪಾತಿ ಲಟ್ಟಿಸುವುದು ಒಂದು ಕಲೆ. ಯಾರಾದರೂ ಅದನ್ನು ಕಲಿಯಬಹುದಾದರೂ ಬಾಲಕ ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಕಲಿತಿರುವುದು ನೆಟ್ಟಿಗರ ಹೃದಯ ಗೆದ್ದಿದೆ. ಹಾಗೆಯೇ ವಿಡಿಯೋ ನೋಡಿದಾಗ "ಚಪಾತಿ ಮಾಡೋದು ಇಷ್ಟು ಸುಲಭನಾ" ಎಂದು ನಿಮಗನಿಸದೆ ಇರದು. ಮತ್ಯಾಕೆ ತಡ, ನೀವು ವಿಡಿಯೋ ನೋಡಿ ರೌಂಡಾಗಿ ಚಪಾತಿ ಲಟ್ಟಿಸೋದು ಹೇಗೆಂದು ತಿಳಿಯಿರಿ.

ಡ್ರೆಸ್‌ ಹಾಕಿಕೊಳ್ಳುವ ವಿಡಿಯೋ
ಇತ್ತೀಚೆಗಷ್ಟೇ ಇಂತಹುದೇ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋದಲ್ಲಿಯೂ ಪುಟ್ಟ ಬಾಲಕ ಶಾಲೆಗೆ ಬಹಳ ಬೇಗ ರೆಡಿಯಾಗುವುದನ್ನು ತೋರಿಸಲಾಗಿತ್ತು. ವೈರಲ್ ವಿಡಿಯೋದಲ್ಲಿ ತೋರಿಸಿರುವ ಹಾಗೆ ಆ ಪುಟ್ಟ ಬಾಲಕ ಅದೆಷ್ಟು ಬೇಗ ರೆಡಿಯಾಗುತ್ತಿದ್ದಾನೆ ಎಂದರೆ ನೀವೇ ಮನಸಾರೆ ಹೊಗಳುವಿರಿ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಿಡಿಯೋವನ್ನು ಅನಂತ್‌ಕುಮಾರ್ ಎಂಬುವವರು ಹಂಚಿಕೊಂಡಿದ್ದು, ಸದ್ಯ ವಿಡಿಯೋ ನೋಡಿದರೆ ಆ ತಂದೆ-ಮಗ ನಮ್ಮ ದೇಶದವರಂತೂ ಅಲ್ಲ ಎಂಬುದು ಸ್ಪಷ್ಟವಾಗುತ್ತದೆ. ಸದ್ಯ ವಿಡಿಯೋವನ್ನು ಎಲ್ಲರೂ ಇಷ್ಟಪಡುತ್ತಿದ್ದಾರೆ. ಒಮ್ಮೆ ನೀವು ಈ ವಿಡಿಯೋ ನೋಡಿದ್ರೆ ಅಥವಾ ಮಕ್ಕಳಿಗೆ ತೋರಿಸಿದ್ರೆ ಬಹುಶಃ ಇದೇ ರೀತಿ ರೆಡಿಯಾಗಬಹುದೇನೋ ಟ್ರೈ ಮಾಡಿ ನೋಡಿ. ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳಾಗಿ ಶಾಲೆಗೆ ಕಳುಹಿಸೋದು ಇಷ್ಟೊಂದು ಈಸಿನಾ ಅಂದೆನಿಸುತ್ತದೆ.

ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಇಂತಹ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಕೆಲವೊಂದು ನಮಗೆ ಅದೆಷ್ಟು ಉಪಯುಕ್ತವೆನಿಸುತ್ತದೆ ಅಂದ್ರೆ ನಾವು ಯಾಕೆ ಈ ರೀತಿ ಟ್ರೈ ಮಾಡಬಾರದೆಂದು ಅಂದುಕೊಳ್ಳುತ್ತೇವೆ.