Asianet Suvarna News Asianet Suvarna News

ಬೆಳಗ್ಗೆ ಖಾಲಿ ಹೊಟ್ಟೆಗೆ ಟೀ ಕುಡಿಯೋ ಅಭ್ಯಾಸವಿದ್ಯಾ ? ಎಷ್ಟೊಂದು ತೊಂದ್ರೆಯಿದೆ ತಿಳ್ಕೊಳ್ಳಿ

ಮಾರ್ನಿಂಗ್ (Morning) ತಿಂಡಿ ಇಲ್ಲಾಂದ್ರೂ ಆಗ್ಬೋದು, ಒಂದ್ ಲೋಟ ಬಿಸಿ ಬಿಸಿ ಟೀ (Tea) ಕುಡೀಲೇಬೇಕು ಅನ್ನೋರು ಹಲವರು. ಬೆಳಗ್ಗೆ ಚಹಾ ಕುಡಿದರೆ ದಿನಪೂರ್ತಿ ರಿಲ್ಯಾಕ್ಸ್ (Relax) ಆಗಿರ್ಬೋದು ಅನ್ನೋದು ಹೆಚ್ಚಿನವರ ಮನಸ್ಥಿತಿ. ಆದ್ರೆ ಇದ್ರಿಂದ ಆರೋಗ್ಯಕ್ಕೆಷ್ಟು (Health) ಅಪಾಯವಿದೆ. ನಿಮ್ಗೊತ್ತಾ ?

International Tea Day 2022: Side Effects of Drinking Tea Every Day Vin
Author
Bengaluru, First Published May 21, 2022, 3:00 PM IST

ಬೆಳಗ್ಗೆ (Morning) ಎದ್ದ ತಕ್ಷಣ ಹಾಗೂ ಸಂಜೆಯಾದ ಕೂಡ್ಲೇ ಒಂದು ಕಪ್‌ ಚಹಾ (Tea) ಕುಡಿದ್ರೆ ರಿಲ್ಯಾಕ್ಸ್ ಅಗಿಬಿಡುತ್ತೆ. ಇದಲ್ಲದೆ ದಿನಪೂರ್ತಿ ನಾನಾ ನೆಪವೊಡ್ಡಿ ಟೀ ಕುಡಿಯೋರು ಬೇರೆಯೇ ಇದ್ದಾರೆ. ಚಹಾ ಭಾರತೀಯರ ಅಚ್ಚುಮೆಚ್ಚಿನ ಪಾನೀಯ ಎಂದ್ರೆ ತಪ್ಪಾಗಲಾರದು. ಇವತ್ತು ಅಂತಾರಾಷ್ಟ್ರೀಯ ಚಹಾ ದಿನ (International Tea Day). ಈ ಸಂದರ್ಭದಲ್ಲಿ ಚಹಾ ಕುಡಿಯುವುದರಿಂದಾಗುವ ತೊಂದರೆಗಳ ಬಗ್ಗೆ ತಿಳಿದುಕೊಳ್ಳೋಣ.

ಮುಂಜಾನೆ ಎದ್ದ ಕೂಡಲೇ ಒಂದು ಲೋಟಾ ಬಿಸಿ ಬಿಸಿ ಟೀ ಕುಡಿಯುವುದು ಹಲವರ ಅಭ್ಯಾಸ (Habit). ಹಾಗೆ ಮಾಡದಿದ್ದರೆ ದಿನವಿಡೀ ಮಂಕಾಗಿರುತ್ತೆ, ಶಕ್ತಿಯೇ ಇರೋಲ್ಲ ಎಂಬುದು ಕೆಲವರ ಅಭಿಪ್ರಾಯ. ಇನ್ನು ಕೆಲವರಿಗೆ ಟೀ ಹೊಟ್ಟೆಗೆ ಬೀಳದಿದ್ದರೆ ಕರುಳಿನಲ್ಲಿ ಸಂಗ್ರಹವಾಗಿದ್ದು ಆಚೆ ಹೋಗುವುದೇ ಇಲ್ಲವಂತೆ. ಇದೆಲ್ಲವೂ ಅಭ್ಯಾಸದ ಪರಿಣಾಮವೇ ಹೊರತು ಮತ್ತೇನಲ್ಲ. ಖಾಲಿ ಹೊಟ್ಟೆಗೆ (Empty stomach) ಟೀ ಕುಡಿಯುವುದರಿಂದ ಈ ಕೆಳಗಿನ ಅಪಾಯಗಳು ಉಂಟಾಗುತ್ತವೆ ಅನ್ನೋದು ನಿಮ್ಗೆ ಗೊತ್ತಾ ?

International Tea Day 2022: ಅಂತಾರಾಷ್ಟ್ರೀಯ ಚಹಾ ದಿನದ ಇತಿಹಾಸ ಮತ್ತು ಮಹತ್ವ

ಬೆಳಗ್ಗೆ ಖಾಲಿ ಹೊಟ್ಟೆಗೆ ಟೀ ಕುಡಿಯುವುದರಿಂದಾಗುವ ಪ್ರಯೋಜನಗಳು

ಚಯಾಪಚಯ ಕ್ರಿಯೆ: ಬೆಳಗ್ಗೆ ಖಾಲಿ ಹೊಟ್ಟೆ ಚಹಾ ಕುಡಿಯುವುದರಿಂದ ಹೊಟ್ಟೆಯಲ್ಲಿ ಆಮ್ಲೀಯ ಮತ್ತು ಕ್ಷಾರೀಯ ಪದಾರ್ಥಗಳ ಅಸಮತೋಲನದಿಂದಾಗಿ ಚಯಾಪಚಯ ವ್ಯವಸ್ಥೆಗೆ ಅಡ್ಡಿ ಉಂಟಾಗುವ ಸಾಧ್ಯತೆ ಇರುತ್ತದೆ. ಇದು ದೇಹದ ಸಾಮಾನ್ಯ ಚಯಾಪಚಯ ಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ವ್ಯಕ್ತಿಯನ್ನು ದಿನವಿಡೀ ಸತಾಯಿಸಬಹುದು.

ಆಸಿಡಿಕ್ ಕಂಟೆಂಟ್: ಟೀ ರಿಸರ್ಚ್ ಅಸೋಸಿಯೇಷನ್ ​​ಆಫ್ ಇಂಡಿಯಾ ನಡೆಸಿರುವ ಒಂದು ಅಧ್ಯಯನದ ಪ್ರಕಾರ, ಹಾಲನ್ನು ಚಹಾದೊಂದಿಗೆ ಬೆರೆಸಿದಾಗ, ಹಾಲಿನಲ್ಲಿ ತೂಕ ನಷ್ಟಕ್ಕೆ ಕಾರಣವಾಗಿರುವ ವಸ್ತುಗಳ ಪ್ರಭಾವ ಕಡಿಮೆಯಾಗುತ್ತವೆ. ಇದಲ್ಲದೇ, ಹಾಲಿನಿಂದ ಮಾಡಿದ ಚಹಾವು ಹೊಟ್ಟೆಯ ಆಮ್ಲವನ್ನು ಹೆಚ್ಚಿಸುವ ಮೂಲಕ ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ತೂಕ ಹೆಚ್ಚಳ ಮಾಡುವ ಪ್ರಮುಖ ಕಾರಣಗಳಲ್ಲಿ ಇದೂ ಕೂಡ ಒಂದು.

ಅಲ್ಸರ್ ಸಮಸ್ಯೆ: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ಬಿಸಿ ಚಹಾ ಕುಡಿಯುವುದರಿಂದ ಹೊಟ್ಟೆಯ ಒಳ ಭಾಗಕ್ಕೆ ಹಾನಿಯಾಗಬಹುದು, ಇದು ಹೊಟ್ಟೆಯ ಹುಣ್ಣುಗಳಿಗೆ ಅಥವಾ ಅಲ್ಸರ್ ಗೆ ಕಾರಣವಾಗಬಹುದು.

ಬೊಜ್ಜು ಸಮಸ್ಯೆ: ಖಾಲಿ ಹೊಟ್ಟೆ ಚಹಾ ಸೇವಿಸುವುದರಿಂದ ಅದರಲ್ಲಿ ಕರಗಿರುವ ಸಕ್ಕರೆ ಕೂಡ ಹೊಟ್ಟೆ ಸೇರುತ್ತದೆ. ಇದರಿಂದ ವ್ಯಕ್ತಿಯ ತೂಕದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತದೆ.

ಹಲ್ಲುಗಳ ಬಣ್ಣಗೆಡಿಸೋ ಆಹಾರಗಳಿವು, ತಿಂದ್ರೆ ಕಲೆ ಹಾಗೇ ಉಳಿದುಬಿಡುತ್ತೆ !

ಮೂಳೆಗಳ ಆರೋಗ್ಯ: ಖಾಲಿ ಹೊಟ್ಟೆಯಲ್ಲಿ ದೀರ್ಘಕಾಲದವರೆಗೆ ಪ್ರತಿದಿನ ಹಲವಾರು ಕಪ್ ಚಹಾ ಕುಡಿಯುವುದರಿಂದ ಸ್ಕೆಲೆಟ್ಲ್ ಫ್ಲೋರೋಸಿಸ್‌ನಂತಹ ಕಾಯಿಲೆಯು ಉಂಟಾಗಬಹುದು, ಈ ರೋಗವು ಮೂಳೆಗಳನ್ನು ಒಳಭಾಗದಿಂದ ಟೊಳ್ಳು ಮಾಡುತ್ತದೆ. ಈ ಕಾರಣದಿಂದಾಗಿ ಅನೇಕ ಗಂಭೀರ ರೋಗಗಳು ಸಹ ಸಂಭವಿಸಬಹುದು.

ಆಯಾಸ ಮತ್ತು ಕಿರಿಕಿರಿ: ಚಹಾ ಕುಡಿಯುವುದರಿಂದ ತಾಜಾತನ ಬರುತ್ತದೆ ಎಂದು ಹೇಳಲಾಗುತ್ತದೆ. ಆದರೆ ಬೆಳಗ್ಗೆ ಖಾಲಿ ಹೊಟ್ಟೆ ಹಾಲಿನೊಂದಿಗೆ ಚಹಾ ಕುಡಿಯುವುದರಿಂದ ಅದು ಕೆಲಸದಲ್ಲಿ ಆಯಾಸ ಮತ್ತು ಕಿರಿಕಿರಿ ಉಂಟುಮಾಡುತ್ತದೆ.

ಪಚನ ಕ್ರಿಯೆಯ ಮೇಲೆ ಕೆಟ್ಟ ಪರಿಣಾಮ: ಇದರಿಂದ ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಎದುರಾಗುತ್ತದೆ. ಜೊತೆಗೆ ಇದರಿಂದ ಪಚನ ಕ್ರಿಯೆ ಕೂಡ ಕುಂಠಿತಗೊಳ್ಳುತ್ತದೆ. ಇದು ಪಿತ್ತ ಪ್ರಕ್ರಿಯೆಯಲ್ಲಿ ಅಡಚಣೆ ಉಂಟು ಮಾಡುತ್ತದೆ ಮತ್ತು ಇದರಿಂದ ವಾಂತಿ ಮತ್ತು ಪ್ರಕ್ಷುಬ್ಧತೆಯ ಅನುಭವ ಉಂಟಾಗುತ್ತದೆ.

ಒತ್ತಡ ಹೆಚ್ಚಾಗುತ್ತದೆ: ಬೆಳಗ್ಗೆ ಎದ್ದಕ್ಷಣ ತಾಜಾತನ ಅಥವಾ ಫ್ರೆಶ್ ನೆಸ್ ಅನುಭವ ಪಡೆಯಲು ಹಲವರು ಖಾಲಿ ಹೊಟ್ಟೆ ಚಹಾ ಸೇವಿಸುತ್ತಾರೆ. ಇಂತಹ ವ್ಯಕ್ತಿಗಳ ಶರೀರದಲ್ಲಿ ಕ್ಯಾಫಿನ್ ಪ್ರಮಾಣ ಸಾಕಷ್ಟು ಹೆಚ್ಚಾಗುತ್ತದೆ ಹಾಗೂ ಅವರು ನಿದ್ರಾಹೀನತೆಯ ಜೊತೆಗೆ ಒತ್ತಡ ಹಾಗೂ ಖಿನ್ನತೆಯಂತಹ ಸಮಸ್ಯೆಗೆ ಒಳಗಾಗುತ್ತಾರೆ.

ಹೃದ್ರೋಗದ ಅಪಾಯ: ಖಾಲಿ ಹೊಟ್ಟೆಯಲ್ಲಿ ಚಹಾ ಸೇವಿಸುವುದರಿಂದ ಕೆಫೀನ್ ದೇಹದಲ್ಲಿ ಬೇಗನೆ ಸೇರಿಕೊಳ್ಳುತ್ತದೆ. ಇದು ವ್ಯಕ್ತಿಗಳ ಬ್ಲಡ್ ಪ್ರೆಶರ್ ಹೆಚ್ಚಿಸುತ್ತದೆ ಮತ್ತು ಹೃದಯದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ನೀವು ನಿಜಕ್ಕೂ ಮುಂಜಾನೆ ಟೀ ಸೇವಿಸಲೇಬೇಕಿದ್ದರೆ ಹೀಗೆ ಮಾಡಿ:

ಎದ್ದ ಕೂಡಲೇ ಒಂದು ಲೋಟ ಹದ ಬಿಸಿಯಾದ ನೀರು ಕುಡಿಯಿರಿ. ಐದು ನಿಮಿಷ ಬಿಟ್ಟು ಟೀ ಸೇವಿಸಿ. ಹಿಂದಿನ ರಾತ್ರಿಯೇ ನಾಲ್ಕು ಬಾದಾಮಿಗಳನ್ನು ನೆನೆಸಿಟ್ಟು, ಮುಂಜಾನೆ ಅದರ ಸಿಪ್ಪೆ ಸುಲಿದು, ತಿನ್ನಿ. ನಂತರವೇ ಟೀ ಕುಡಿಯಿರಿ. ಇದು ನಿಮ್ಮ ಜೀರ್ಣಶಕ್ತಿಯನ್ನು ಸುಧಾರಿಸುತ್ತದೆ. ಜಠರವನ್ನು ದಿನದ ಕ್ರಿಯೆಗೆ ಸಿದ್ಧಪಡಿಸುತ್ತದೆ. 

Follow Us:
Download App:
  • android
  • ios