ಪ್ಲಾಸ್ಟಿಕ್ ಬಳಕೆ ನಮ್ಮ ಜೀವನದಲ್ಲಿ ಅವಿಭಾಜ್ಯವಾಗಿದೆ. ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕ. ನ್ಯಾನೊ ಪ್ಲಾಸ್ಟಿಕ್ ಕಣಗಳು ಜೀವಕೋಶ, ಮೆದುಳಿಗೆ ಪ್ರವೇಶಿಸಿ ಹಾರ್ಮೋನ್, ಸಂತಾನೋತ್ಪತ್ತಿ ಸಮಸ್ಯೆ, ಕ್ಯಾನ್ಸರ್, ಹೃದ್ರೋಗಗಳಿಗೆ ಕಾರಣವಾಗಬಹುದು. ಸ್ಟೀಲ್, ಗಾಜಿನ ಬಾಟಲಿಗಳ ಬಳಕೆ ಆರೋಗ್ಯಕರ, ಪರಿಸರ ಸ್ನೇಹಿ ಪರ್ಯಾಯ.

ನಾವು ಬೆಳಗ್ಗೆ ಎದ್ದು ಹಲ್ಲುಜ್ಜುವ ಬ್ರಷ್‌ನಿಂದ ರಾತ್ರಿ ಮಲಗುವವರೆಗೆ ನಮ್ಮ ಜೀವನ ಪ್ಲಾಸ್ಟಿಕ್‌ ಮಯವಾಗಿ ಹೋಗಿದೆ. ಇಂದಿನ ದಿನಗಳಲ್ಲಿ ಪ್ಲಾಸ್ಟಿಕ್‌ ಮೇಲೆ ನಾವು ಎಷ್ಟು ಅವಲಂಬಿತರಾಗಿದ್ದೇವೆ ಅಂದರೆ ನಮ್ಮ ಪ್ರತಿಯೊಂದು ಅಗತ್ಯ ವಸ್ತುಗಳಿಗೂ ಪ್ಲಾಸ್ಟಿಕ್‌ ಮೊರೆ ಹೋಗುತ್ತಿದ್ದೇವೆ. ಸಾವಿಲ್ಲದ ಮನೆಯಲ್ಲಿ ಸಾಸಿವೆ ತರುವುದು ಎಷ್ಟು ಕಷ್ಟವೋ ಅಷ್ಟೆ ಕಷ್ಟ ಪ್ಲಾಸ್ಟಿಕ್‌ ಇಲ್ಲದ ಮನೆಯನ್ನ ಹುಡುಕುವುದು. ಪ್ಲಾಸ್ಟಿಕ್‌ನಿಂದ ದೇಹಕ್ಕೆ ಹಾನಿಯೆಂಬುದು ಗೊತ್ತಿದ್ದರೂ ಅದನ್ನ ತಿರಸ್ಕರಿಸಲಾಗದಷ್ಟು ನಮ್ಮ ಜೀವನದಲ್ಲಿ ಆವರಿಸಿಬಿಟ್ಟಿದೆ. 

 ಅದರಲ್ಲೂ ಪ್ಲಾಸ್ಟಿಕ್‌ ಬಾಟಲಿಯಲ್ಲಿ ನೀರು ಕುಡಿಯುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದು, ಆಫೀಸ್‌ಗಳಿಗೆ, ಶಾಲೆ ಕಾಲೇಜುಗಳಿಗೆ ಹೋಗುವವರು ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್‌ ಬಾಟಲಿಗಳನ್ನ ಬಳಸುತ್ತಿದ್ದಾರೆ. ಬಾಟಲಿಗಳನ್ನ ಬಳಸುವುದರಿಂದ ತಾತ್ಕಾಲಿಕವಾಗಿ ಯಾವುದೇ ಪರಿಣಾಮ ಬೀರುವುದಿಲ್ಲ. ದೀರ್ಘಕಾಲಿಕವಾಗಿ ಪರಿಣಾಮ ಬೀರುತ್ತದೆ. ಅಂದರೆ ಪ್ಲಾಸ್ಟಿಕ್‌ ಬಾಟಲಿಗಳನ್ನ ಒಂದೆರಡು ದಿನ ಬಳಸಿದಾಗ ಏನು ಪರಿಣಾಮ ಬೀರದೇ ಇರಬಹುದು. ಆದರೆ ಹೆಚ್ಚೆಚ್ಚು ಬಳಸುತ್ತಾ ಹೋದಾಗ ದೇಹಕ್ಕೆ ಅದರ ಪರಿಣಾಮ ಬೀರುತ್ತಾ ಹೋಗುತ್ತದೆ. 
ಇಗಂತು ಬೇಸಿಗೆ ಇರುವುದರಿಂದ ಹೊದಲ್ಲೆಲ್ಲಾ ಪ್ಲಾಸ್ಟಿಕ್‌ ಬಾಟಲಿಗಳಿಂದಲೇ ನೀರು ಕುಡಿಯುವ ಅಭ್ಯಾಸ ಹೆಚ್ಚಾಗಿಹೋಗಿದೆ. ಪ್ಲಾಸ್ಟಿಕ್‌ ಬಾಟಲಿಗಳು ಕಡಿಮೆ ಭಾರ ಇರುವುದರಿಂದ, ವಿವಿಧ ಬಣ್ಣಗಳಿಂದ ಆಕರ್ಷಿತವಾಗಿರುವುದರಿಂದ ಜನ ಹೆಚ್ಚಾಗಿ ಪ್ಲಾಸ್ಟಿಕ್‌ ಬಾಟಲಿಗಳಿಗೆ ಮಾರು ಹೊಗುತ್ತಿದ್ದಾರೆ.

 ನ್ಯಾಷ್ನಲ್‌ ಅಕಾಡೆಮಿ ಆಫ್‌ ಸೈನ್ಸಸ್‌ ಪ್ರೊಸಿಡಿಂಗ್ಸ್‌ನಲ್ಲಿ ಇತ್ತೀಚಿಗೆ ಪ್ರಕಟವಾದ ಅಧ್ಯಯನದಲ್ಲಿ ಪ್ಲಾಸ್ಟಿಕ್‌ ಬಗ್ಗೆ ಹಲವಾರು ಚರ್ಚೆ ಆಗಿದ್ದು, ಅದರಲ್ಲಿ ಪ್ಲಾಸ್ಟಿಕ್‌ ಬಾಟಲಿಗಳು ಅತ್ಯಂತ ಹಾನಿಕಾರಕ ಎಂದು ಹೇಳಲಾಗಿದೆ. ಪ್ಲಾಸ್ಟಿಕ್‌ ಬಾಟಲಿಗಳಲ್ಲಿ ಸಂಗ್ರಹಿಸಲಾದ ಪ್ರತಿ ಲೀಟರ್‌ ನೀರಿನಲ್ಲಿ ಒಂದು ಸಾವಿರ ನ್ಯಾನೊ ಪ್ಲಾಸ್ಟಿಕ್‌ ಅಣುಗಳು ಇದ್ದು, ಇವು ನಮ್ಮ ಜೀವಕೋಶಗಳಿಗೆ ಮತ್ತು ಮೆದುಳಿಗೆ ಸುಲಭವಗಿ ಪ್ರವೇಶಿಸುತ್ತವೆ. ನೀರಿನಲ್ಲಿ ಮುಳುಗುವ ಬಿಸ್ಪೆನಾಲ್‌ ಎ ಮತ್ತು ಥಾಲೇಟ್‌ಗಳಂತಹ ಬಹು ಹಾನಿಕಾರಕ ರಾಸಾಯನಿಕಗಳು ಪ್ಲಾಸ್ಟಿಕ್‌ ಬಾಟಲಿಗಳಲ್ಲಿ ಇರುತ್ತವೆ. ಅದರಲ್ಲಿಯೂ ಬಾಟಲಿಯನ್ನ ಬಿಸಿಲಿಗೆ ಒಡ್ಡಿದಾಗ ಆ ಹಾನಿಕಾರಕ ಅಂಶಗಳು ಹೆಚ್ಚಾಗಿ ಬಿಡುಗಡೆಯಾಗುತ್ತವೆ. ಹಾಗೇ ಬಿಡುಗಡೆಯಾದಂತಹ ಸಮಯದಲ್ಲಿ ನೀರನ್ನ ಕುಡಿದಾಗ ಆ ಹಾನೀಕಾರಕ ಅಂಶಗಳು ನೇರವಾಗಿ ದೇಹದ ಭಾಗಗಳನ್ನ ತಲುಪುತ್ತವೆ.
 ಬಿಸ್ಪೆನಾಲ್‌ ಎ ಮತ್ತು ಥಾಲೇಟ್‌ಗಳಂತಹ ಅಂಶಗಳು ದೇಹಕ್ಕೆ ಸೇರಿದಾಗ ಸಂತಾನೋತ್ಪತ್ತಿ ಮತ್ತು ಹಾರ್ಮೊನ್‌ಗಳಲ್ಲಿ ವ್ಯತ್ಯಾಸವಾಗುವಂತಹ ಸಂಭವವಿರುತ್ತದೆ. ಒಂದು ಅಧ್ಯಯನದ ಪ್ರಕಾರ ಪ್ಲಾಸ್ಟಿಕ್‌ ಬಾಟಲಿಗಳಲ್ಲಿ ಇರುವಂತಹ ಅಂಶಗಳು ಪದೇ ಪದೇ ನಮ್ಮ ದೇಹವನ್ನ ಸೇರುತ್ತಿದ್ದರೆ ಕ್ಯಾನ್ಸರ್‌ ಮತ್ತು ಹೃದಯ ರಕ್ತನಾಳಗಳ ಅಸ್ವಸ್ಥತೆಗಳಿಗೆ ಗುರಿಯಾಗಬೇಕಾಗುತ್ತದೆ. 

ಪ್ಲಾಸ್ಟಿಕ್‌ ಬಾಟಲಿಗಳಿಗೆ ಪರ್ಯಾಯವಾಗಿ ಸ್ಟೀಲಿನ ಬಾಟಲಿಗಳು ಅಥವಾ ಗಾಜಿನ ಬಾಟಲಿಗಳನ್ನ ಬಳಸಬಹುದು. ಇವು ಪರಿಸರ ಪೇಮಿಯಾಗಿದ್ದು, ಆರೋಗ್ಯಕ್ಕೂ ಹಾನಿ ಮಾಡುವುದಿಲ್ಲ. ಸ್ಟೀಲಿನ ಬಾಟಲಿಗಳು ಮತ್ತು ಗಾಜಿನ ಬಾಟಲಿಗಳು ಹಾನಿಕಾರಕ ಅಂಶಗಳನ್ನ ಬಿಡುವುದಿಲ್ಲ. ಏಕ ಬಳಕೆಯ ಪ್ಲಾಸ್ಟಿಕ್‌ಗಳನ್ನ ತಪ್ಪಿಸಬೇಕು ಇದರಿಂದ ಮಾಲಿನ್ಯ ಸಹ ತಪ್ಪುತ್ತದೆ. ಮನೆಗಳಲ್ಲಿ ಹೆಚ್ಚಾಗಿ ಪ್ಲಾಸ್ಟಿಕ್‌ ಬದಲು ಸ್ಟೀಲ್‌, ಗಾಜು, ಮಣ್ಣಿನ ಪಾತ್ರೆಗಳನ್ನ ಉಪಯೋಗಿಸುವುದರಿಂದ ಆರೋಗ್ಯವನ್ನ ಉತ್ತಮ ರೀತಿಯಲ್ಲಿ ಇಟ್ಟುಕೊಳ್ಳಬಹುದು 

ಪ್ರತಿ ದಿನ ನೀರು ಕುಡಿಯುವುದು ಒಳ್ಳೆಯದು, ದಿನಕ್ಕೆ ಏಳರಿಂದ ಏಂಟು ಲೀಟರ್‌ ನೀರು ಕುಡಿಯುವುದು ಒಳ್ಳೆಯದು, ಇಗಂತು ಬೇಸಿಗೆ ದಿನವಾದ್ದರಿಂದ ದಾಹ ಹೆಚ್ಚಾಗಿಯೇ ಇರುತ್ತದೆ. ಪದೇ ಪದೇ ನೀರು ಕುಡಿಯಬೇಕು ಎನ್ನಿಸುವುದು ಸಾಮಾನ್ಯ. ಹಾಗಂತ ಅಪ್ಪಿ ತಪ್ಪಿಯೂ ಪ್ಲಾಸ್ಟಿಕ್‌ ಬಾಟಲಿಗಳಲ್ಲಿ ನೀರನ್ನ ಕುಡಿಯುವುದನ್ನು ನಿಲ್ಲಿಸಿ, ಇದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳಿಂದ ದೂರ ವಿರಬಹುದು.