ಆನ್‌ಲೈನ್‌ ಫುಡ್ ಆರ್ಡರ್‌ ಮಾಡಿದಾಗ ಕೆಲವೊಮ್ಮೆ ಕೆಲವೊಂದು ಐಟಂ ಕಡಿಮೆಯಾಗಿರೋದು, ಆಹಾರದ ಟೇಸ್ಟ್ ಚೆನ್ನಾಗಿ ಇಲ್ಲದಿರೋದು ಕಾಮನ್‌. ಆದ್ರೆ ಇಲ್ಲೊಂದೆಡೆ ಝೊಮೆಟೋದಲ್ಲಿ ಆರ್ಡರ್ ಮಾಡಿದ ಆಹಾರದಲ್ಲಿ ಸತ್ತ ಹಲ್ಲಿಯೇ ಸಿಕ್ಕಿದೆ. ಇದನ್ನು ನೋಡಿ ಮನೆ ಮಂದಿ ಗಾಬರಿಯಾಗಿದ್ದಾರೆ.

ಹೈದರಾಬಾದ್‌: ಝೊಮೆಟೋದಲ್ಲಿ ಆರ್ಡರ್ ಮಾಡಿದ ಬಿರಿಯಾನಿಯಲ್ಲಿ ವ್ಯಕ್ತಿಯೊಬ್ಬರಿಗೆ ಸತ್ತ ಹಲ್ಲಿ ಸಿಕ್ಕಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ವ್ಯಕ್ತಿಯೊಬ್ಬರು ಆನ್​ಲೈನ್​ನಲ್ಲಿ ಆರ್ಡರ್ ಮಾಡಿದ್ದ ಚಿಕನ್ ಬಿರಿಯಾನಿಯಲ್ಲಿ ಸತ್ತ ಹಲ್ಲಿ ಪತ್ತೆಯಾಗಿದೆ. ಅಂಬರ್‌ಪೇಟೆಯ ಡಿಡಿ ಕಾಲೋನಿಯ ವಿಶ್ವ ಆದಿತ್ಯ ಎಂಬವರು ಫುಡ್ ಡೆಲಿವರಿ ಆಪ್ ಝೊಮಾಟೊದಲ್ಲಿ ಬಿರಿಯಾನಿ ಆರ್ಡರ್ ಮಾಡಿದ್ದರು. ಝೊಮೇಟೋದವರು ಬಿರಿಯಾನಿಯನ್ನು ಮನೆಗೆ ತಲುಪಿಸಿದ್ದರು. ಆದಿತ್ಯ ಪ್ಯಾಕೆಟ್ ಓಪನ್ ಮಾಡಿ ಬಿರಿಯಾನಿ ತಿನ್ನಲು ಮುಂದಾದಾಗ ಅದರಲ್ಲಿ ಸತ್ತ ಹಲ್ಲಿ ಕಂಡುಬಂದಿದೆ. 

ಬಿರಿಯಾನಿಯನ್ನು ಆರ್‌ಟಿಸಿ ಕ್ರಾಸ್‌ ರಸ್ತೆಯಲ್ಲಿರುವ ಬಾವರ್ಚಿ ಹೋಟೆಲ್‌ನಿಂದ ಆಹಾರ (Food) ಆರ್ಡರ್ ಮಾಡಲಾಗಿತ್ತು. ಅಡುಗೆಯವರು ನಿರ್ಲಕ್ಷ್ಯದಿಂದ ಬಿರಿಯಾನಿ ತಯಾರಿಸಿರುವುದೇ ಇದಕ್ಕೆ ಕಾರಣ ಎಂದು ಆದಿತ್ಯ ಆರೋಪಿಸಿದ್ದಾರೆ. ಬಿರಿಯಾನಿಯಲ್ಲಿ ಹಲ್ಲಿ ಸಿಕ್ಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗಿದೆ. 

ಕಿಚನ್‌ನಲ್ಲಿ ಇಲಿ, ಆಹಾರದಲ್ಲಿ ಜಿರಳೆ; ಬಡೆಮಿಯಾ ಕಬಾಬ್ ರೆಸ್ಟೋರೆಂಟ್‌ಗೆ ಬೀಗ ಜಡಿದ FDA!

ಬಿರಿಯಾನಿ ಜೊತೆ ಹಲ್ಲಿಯೂ ಫ್ರೀ!
ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಇದರಲ್ಲಿ ಬಾವರ್ಚಿ ಹೊಟೇಲ್‌ ಪ್ಯಾಕೇಜಿಂಗ್‌ ಸಹ ಕಂಡು ಬರುತ್ತದೆ. ಪ್ಲೇಟ್​ನಲ್ಲಿ ಬಿರಿಯಾನಿ ನಡುವೆ ಹಲ್ಲಿ (Lizard) ಇರುವುದು ಕೂಡ ಕಾಣುತ್ತದೆ. ನೆಟ್ಟಿಗರು ಇದನ್ನು ನೋಡಿ ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು, 'ಝೊಮೆಟೋದಲ್ಲಿ ಆರ್ಡರ್ ಮಾಡಿದ ಆಹಾರದಲ್ಲಿ ಹೀಗೆಲ್ಲಾ ಆಗಿರುವುದು ವಿಪರ್ಯಾಸ' ಎಂದಿದ್ದಾರೆ. ಇನ್ನೊಬ್ಬರು, 'ಬಿರಿಯಾನಿ ಜೊತೆ ಹಲ್ಲಿಯನ್ನೂ ಆರ್ಡರ್ ಮಾಡಿದ್ದೀರಾ' ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಮತ್ತೊಬ್ಬ ವ್ಯಕ್ತಿ, 'ನಾನು ಹೈದರಾಬಾದಿ ಬಿರಿಯಾನಿ ತಿನ್ನುವ ಆಸೆಯನ್ನು ಬಿಟ್ಟುಬಿಟ್ಟೆ' ಎಂದು ಬರೆದುಕೊಂಡಿದ್ದಾರೆ.

ಈ ಘಟನೆಯು ಆಹಾರ ವಿತರಣೆಗಾಗಿ ಗುಣಮಟ್ಟದ (Quality) ನಿಯಂತ್ರಣ ಕ್ರಮಗಳ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಗ್ರಾಹಕರ ಮನೆ ಬಾಗಿಲಿಗೆ ತಲುಪುವ ಊಟದ ಸುರಕ್ಷತೆ ಮತ್ತು ನೈರ್ಮಲ್ಯವನ್ನು ಖಚಿತಪಡಿಸಿಕೊಳ್ಳಲು ರೆಸ್ಟೋರೆಂಟ್‌ಗಳು ಮತ್ತು ವಿತರಣಾ ವೇದಿಕೆಗಳ ಜವಾಬ್ದಾರಿಯಾಗಿದೆ ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದ್ದಾರೆ.

ವಿಮಾನದಲ್ಲಿ ವಿತರಿಸಿದ ಆಹಾರದಲ್ಲಿ ಕೂದಲು ಪತ್ತೆ, ಸಂಸದೆಯ ಟ್ವೀಟ್‌ ವೈರಲ್

ಝೊಮಾಟೊ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದು, 'ನಾವು ಸಮಸ್ಯೆಯನ್ನು ಗುರುತಿಸಿದ್ದೇವೆ ಮತ್ತು ಗ್ರಾಹಕರೊಂದಿಗೆ ಮಾತನಾಡಿದ್ದೇವೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ" ಎಂದು ಹೇಳಿದೆ.