ಆರೋಗ್ಯದ ದೃಷ್ಟಿಯಿಂದ ಮನೆಯಲ್ಲಿಯೇ ಸ್ಪಾಂಜ್ ಕೇಕ್ ತಯಾರಿಸಿ. ಓವನ್‌ನಲ್ಲಿ ಬೇಯಿಸಿ. ಮೃದುವಾದ, ರುಚಿಕರವಾದ ಅಯ್ಯಂಗಾರ್ ಶೈಲಿಯ ಕೇಕ್ ಸವಿಯಿರಿ.
ಕೇಕ್ ಪದ ಕೇಳಿದರೆ ಸಾಕು ಮಕ್ಕಳು ಮಾತ್ರವಲ್ಲ, ಹಿರಿಯರು ಹಿರಿ ಹಿರಿ ಹಿಗ್ಗುತ್ತಾರೆ. ಆದರೆ ಇತ್ತೀಚೆಗೆ ನಡೆದ ಕೆಲವು ಘಟನೆಗಳನ್ನು ನೋಡಿ ಹವಲರು ಬೇಕರಿಗಳಲ್ಲಿ ಕೇಕ್ ತಿನ್ನಲು ಹೆದರುತ್ತಾರೆ ಅಥವಾ ಹೊರಗಿನಿಂದ ತರಿಸಿ ತಿನ್ನಲು ಹಿಂದೇಟು ಹಾಕುತ್ತಾರೆ. ಹಾಗಾಗಿ ಮನೆಯಲ್ಲಿಯೇ ಸಖತ್ ಟೇಸ್ಟಿಯಾಗಿರುವ, ಸ್ವಚ್ಛವಾಗಿರುವ ಕೇಕ್ ತಿನ್ನಬೇಕೆಂದು ಬಯಸುವವರು ಸ್ಪಾಂಜ್ ಕೇಕ್ ಟ್ರೈ ಮಾಡಿ. ಇನ್ನು ಹೊರಗಡೆ ಕೇಕ್ ತಿನ್ನುವ ಅಭ್ಯಾಸ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಏಕೆಂದರೆ ಅಲ್ಲಿ ತಯಾರಾಗುವ ಉತ್ಪನ್ನಗಳಿಗೆ ವಿವಿಧ ಸಂರಕ್ಷಕಗಳನ್ನು ಹಾಕುವ ಸಾಧ್ಯತೆ ಹೆಚ್ಚಿರುತ್ತದೆ. ಅದರ ಬದಲಾಗಿ ಮನೆಯಲ್ಲಿಯೇ ಸುಲಭವಾಗಿ "ವೆನಿಲ್ಲಾ ಸ್ಪಾಂಜ್ ಕೇಕ್" ತಯಾರಿಸಿ. ಇದರ ರುಚಿಯೂ ಅಯ್ಯಂಗಾರ್ ಬೇಕರಿ ಶೈಲಿಗಿಂತ ಯಾವುದೇ ರೀತಿಯಲ್ಲಿ ಕಡಿಮೆಯಿಲ್ಲ. ಸ್ಪಾಂಜ್ ಕೇಕ್ ಬಹುತೇಕರ ಫೇವರಿಟ್. ಅದರಲ್ಲೂ ಹೆಚ್ಚಿನ ಜನರು ಇದರಲ್ಲಿ ವೆನಿಲ್ಲಾ ಪರಿಮಳವನ್ನು ಇಷ್ಟಪಡುತ್ತಾರೆ. ಹಾಗಾದರೆ ಸ್ಪಾಂಜ್ ಕೇಕ್ ಗೆ ಬೇಕಾಗುವ ಪದಾರ್ಥಗಳು ಮತ್ತು ತಯಾರಿಸುವ ವಿಧಾನವನ್ನು ಒಮ್ಮೆ ನೋಡೋಣ...
ಬೇಕಾಗುವ ಪದಾರ್ಥಗಳು
ಕೋಳಿ ಮೊಟ್ಟೆ - ನಾಲ್ಕು
ಸಕ್ಕರೆ - ½ ಕಪ್ (150 ಗ್ರಾಂ)
ವೆನಿಲ್ಲಾ ಎಕ್ಸ್ ಟ್ರಾಕ್ಟ್ - 1 ಟೀಸ್ಪೂನ್
ಮೈದಾ ಹಿಟ್ಟು - 130 ಗ್ರಾಂ
ಬೇಕಿಂಗ್ ಪೌಡರ್ - ½ ಟೀಚಮಚ
ಉಪ್ಪು - ಒಂದು ಚಿಟಿಕೆ
ಎಣ್ಣೆ - ¼ ಕಪ್ (50 ಗ್ರಾಂ)
ತುಪ್ಪ - ಸ್ವಲ್ಪ (ಕೇಕ್ ಬೌಲ್‌ಗೆ)
Amla Chutney Recipe: ಅರ್ಜೆಂಟಿದ್ದಾಗ ಮಾಡಿ ನೆಲ್ಲಿಕಾಯಿ ಚಟ್ನಿ...ಬಾಯಿಗೂ ರುಚಿ, ಆರೋಗ್ಯಕ್ಕಂತೂ ಭಾರೀ ಬೆಸ್ಟು
ತಯಾರಿಸುವ ವಿಧಾನ
* ಮೊದಲು ಮೊಟ್ಟೆಗಳನ್ನು ಒಡೆದು ಬಟ್ಟಲಿಗೆ ಸುರಿಯಿರಿ. ನಂತರ ಇದಕ್ಕೆ ಸಕ್ಕರೆ ಸೇರಿಸಿ ಮೊಟ್ಟೆಯ ಮಿಶ್ರಣ ತಿಳಿ ಕೆನೆ ಬಣ್ಣಕ್ಕೆ ತಿರುಗುವವರೆಗೆ ಹೆಚ್ಚಿನ ವೇಗದಲ್ಲಿ ಹ್ಯಾಂಡ್ ಬ್ಲೆಂಡರ್‌ನಿಂದ ಚೆನ್ನಾಗಿ ಬೀಟ್ ಮಾಡಿ.
* ಒಮ್ಮೆ ಬೀಟ್ ಮಾಡಿದ ನಂತರ ವೆನಿಲ್ಲಾ ಎಕ್ಸ್ ಟ್ರಾಕ್ಟ್ ಸೇರಿಸಿ. ಮತ್ತೆ ಮೊಟ್ಟೆಯ ಮಿಶ್ರಣವು ಹೆಚ್ಚು ಕೆನೆ ಮತ್ತು ನೊರೆಯಾಗುವವರೆಗೆ ಹ್ಯಾಂಡ್ ಬ್ಲೆಂಡರ್‌ನಿಂದ ಮತ್ತೊಮ್ಮೆ ಚೆನ್ನಾಗಿ ಬೀಟ್ ಮಾಡಿ.
* ಮಿಶ್ರಣವು ತಿಳಿ ಕೆನೆ ಬಣ್ಣಕ್ಕೆ ತಿರುಗಿದಾಗ ಹ್ಯಾಂಡ್ ಬ್ಲೆಂಡರ್ ಪಕ್ಕಕ್ಕೆ ಇಡಿ. ನಂತರ ಬೇಕಿಂಗ್ ಪೌಡರ್ ಮತ್ತು ಮೈದಾ ಹಿಟ್ಟನ್ನು ಮಿಶ್ರಣಕ್ಕೆ ಶೋಧಿಸಿ ಸೇರಿಸಿ. ನಂತರ ಹಿಟ್ಟನ್ನು ಚೆನ್ನಾಗಿ ಮಿಶ್ರಣವಾಗುವವರೆಗೆ ಕಲಸಿ.
* ಪುನಃ ಎಣ್ಣೆ ಮತ್ತು ಉಪ್ಪನ್ನು ಸೇರಿಸಿ, ಸಂಪೂರ್ಣವಾಗಿ ಮಿಶ್ರಣವಾಗುವವರೆಗೆ ಹ್ಯಾಂಡ್ ಬ್ಲೆಂಡರ್ ಸಹಾಯದಿಂದ ನಿಧಾನವಾಗಿ ಮತ್ತೆ ಬೀಟ್ ಮಾಡಿ ನಂತರ ಮಿಶ್ರಣವನ್ನು ಸ್ವಲ್ಪ ಹೊತ್ತು ಪಕ್ಕಕ್ಕೆ ಇರಿಸಿ.
* ಈಗ ಒಂದು ಕೇಕ್ ಪ್ಯಾನ್ ತೆಗೆದುಕೊಂಡು ಅದರ ಒಳಭಾಗಕ್ಕೆ ತುಪ್ಪ ಸವರಿ .
* ನಂತರ, ಪ್ಯಾನ್‌ನ ಕೆಳಭಾಗದಲ್ಲಿ ಬಟರ್ ಪೇಪರ್ ಇರಿಸಿ. ಮಿಶ್ರಣವನ್ನು ಸಂಪೂರ್ಣವಾಗಿ ಇದಕ್ಕೆ ಹಾಕಿ.
* ನಂತರ ಒಂದು ಟೂತ್‌ಪಿಕ್ ತೆಗೆದುಕೊಂಡು ಅದನ್ನು ಹಿಟ್ಟಿನಲ್ಲಿ ಸ್ವಲ್ಪ ಹೊತ್ತು ಮಿಕ್ಸ್ ಮಾಡಿ. ಹೀಗೆ ಮಾಡುವುದರಿಂದ ಹಿಟ್ಟಿನ ಮೇಲೆ ಹರಡಿರುವ ಎಲ್ಲಾ ಸಣ್ಣ ಗುಳ್ಳೆಗಳು ಸಿಡಿಯುತ್ತವೆ.
* ಕೊನೆಗೆ ಎತ್ತಿ ಪ್ಯಾನ್ ಒಮ್ಮೆ ತಟ್ಟಿ. ನೀವು ಹೀಗೆ ಮಾಡಿದರೆ, ಅಲ್ಲಿ ಇನ್ನೂ ಇರಬಹುದಾದ ಯಾವುದೇ ಗುಳ್ಳೆಗಳು ಮಾಯವಾಗುತ್ತವೆ.
* ನಂತರ ಇದನ್ನು ಓವನ್ ನಲ್ಲಿ 35 ರಿಂದ 40 ನಿಮಿಷಗಳ ಕಾಲ ಕೆಳಗಿನ ರಾಕ್ ಮಾತ್ರ ಆನ್ ಮಾಡಿ ಬೇಯಿಸಿ ಅಥವಾ ಟೂತ್‌ಪಿಕ್ ಸ್ವಚ್ಛವಾಗಿ ಹೊರಬರುವವರೆಗೆ ಬೇಯಿಸಿ.
* ಬೇಯಿಸಿದ ನಂತರ ಕೇಕ್ ಪ್ಯಾನ್ ಅನ್ನು ಓವನ್‌ನಿಂದ ತೆಗೆದು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ.
ನಂತರ ಕೇಕ್ ಅನ್ನು ಒಂದು ತಟ್ಟೆಯಲ್ಲಿ ಮಗುಚಿ ಹಾಕಿ. ನಂತರ ಅದನ್ನು ನಿಮಗೆ ಬೇಕಾದ ಗಾತ್ರದ ತುಂಡುಗಳಾಗಿ ಕತ್ತರಿಸಿ. ಅಷ್ಟೇ, ಮನೆಯಲ್ಲಿಯೇ ಅದ್ಭುತವಾದ ಮೃದು ಮತ್ತು ರುಚಿಕರವಾದ ಅಯ್ಯಂಗಾರ್ ಬೇಕರಿ ಶೈಲಿಯ ವೆನಿಲ್ಲಾ ಸ್ಪಾಂಜ್ ಕೇಕ್ ಸಿದ್ಧವಾಗಿರುತ್ತದೆ.
