ವಿಟಮಿನ್ ಸಿ ಯುಕ್ತ ನೆಲ್ಲಿಕಾಯಿ ಚಟ್ನಿ ಆರೋಗ್ಯಕರ ಹಾಗೂ ರುಚಿಕರ. ಇದನ್ನು ಚಪಾತಿ, ಪರೋಟ, ಸಮೋಸ ಜೊತೆ ಸವಿಯಿರಿ. ಬೇಸಿಗೆಯಲ್ಲಿ ದೇಹ ತಂಪಾಗಿಸಲು ನೆಲ್ಲಿಕಾಯಿ ಸಹಕಾರಿ.

Amla Chutney: ವಿಟಮಿನ್ ಸಿ ಯಿಂದ ಸಮೃದ್ಧವಾಗಿರುವ ನೆಲ್ಲಿಕಾಯಿ ಚಟ್ನಿ ಬಹಳ ರುಚಿಯಾಗಿರುತ್ತದೆ. ಅಷ್ಟೇ ಅಲ್ಲ, ಆರೋಗ್ಯಕ್ಕೂ ಪ್ರಯೋಜನಕಾರಿ. ಹಾಗಾದ್ರೆ ಬಹಳ ಸುಲಭವಾಗಿ ನೆಲ್ಲಿಕಾಯಿ ಚಟ್ನಿ ಮಾಡೋದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ...

ಬಾಯಾರಿಕೆಯಾದ ತಕ್ಷಣ ಬರೀ ನೀರು ಕುಡಿಯಬೇಕೆಂದಿಲ್ಲ, ಬಾಯಾರಿಕೆ ನೀಗಿಸುವಂತಹ ಹಣ್ಣು, ತರಕಾರಿ ಮತ್ತು ಕೆಲವು ಆಹಾರ ಪದಾರ್ಥಗಳು ಸಹ ಇವೆ. ಬಿಸಿಲಿಗೆ ಹೋದಾಗ ದಿನವಿಡೀ ತಣ್ಣೀರು ಕುಡಿಯುತ್ತಲೇ ಇರುಬೇಕೇ ಎಂದು ಬೇಸರಿಕೊಳ್ಳುವವರು ನಿಮ್ಮ ಊಟದ ತಟ್ಟೆಗೆ ಬಗೆಬಗೆಯಾದ ಚಟ್ನಿಗಳನ್ನು ಸೇರಿಸಿಕೊಳ್ಳುವ ಮೂಲಕ ಹೈಡ್ರೇಟ್ ಆಗಿರಬಹುದು. ಅದರಲ್ಲೂ ನೆಲ್ಲಿಕಾಯಿ ಆರೋಗ್ಯಕ್ಕೆ ವರದಾನವೆಂದು ಪರಿಗಣಿಸಲಾಗಿದೆ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಬಿ ಕಾಂಪ್ಲೆಕ್ಸ್, ಕಾರ್ಬೋಹೈಡ್ರೇಟ್‌ಗಳು ಮತ್ತು ಫೈಬರ್ ಸೇರಿದಂತೆ ಅನೇಕ ಪೋಷಕಾಂಶಗಳು ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತವೆ. ಇದಕ್ಕಾಗಿಯೇ ಆರೋಗ್ಯ ತಜ್ಞರು ಆಹಾರದಲ್ಲಿ ನೆಲ್ಲಿಕಾಯಿ ಸೇರಿಸಲು ಶಿಫಾರಸ್ಸು ಮಾಡುತ್ತಾರೆ.

ನೆಲ್ಲಿಕಾಯಿಯಲ್ಲಿ ಕಂಡುಬರುವ ಅಂಶಗಳು ನಿಮ್ಮ ಕರುಳಿನ ಆರೋಗ್ಯವನ್ನು ಸುಧಾರಿಸಲಿದೆ. ಜೊತೆಗೆ ಮಲಬದ್ಧತೆ ಮತ್ತು ಗ್ಯಾಸ್‌ ನಂತಹ ಹೊಟ್ಟೆಯ ಸಮಸ್ಯೆಗಳನ್ನು ತೊಡೆದುಹಾಕಲು ಸೇವಿಸಬಹುದು. ಉತ್ತಮ ಫಲಿತಾಂಶಗಳನ್ನು ಪಡೆಯಲು ನೆಲ್ಲಿಕಾಯಿಯನ್ನು ಸರಿಯಾದ ಪ್ರಮಾಣದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಸೇವಿಸುವುದು ಬಹಳ ಮುಖ್ಯ.ವಿಶೇಷವಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ತಿನ್ನುವುದು ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಹಾಗಾದರೆ ತಡಮಾಡದೆ ನಿಮ್ಮ ರುಚಿ ಮತ್ತು ಆರೋಗ್ಯ ಎರಡನ್ನೂ ಕಾಪಾಡುವ ನೆಲ್ಲಿಕಾಯಿ ಚಟ್ಟಿಯನ್ನು ಮಾಡುವುದು ಹೇಗೆಂದು ನೋಡೋಣ... 

ಬೇಕಾಗುವ ಪದಾರ್ಥಗಳು 
* 5-6 ನೆಲ್ಲಿಕಾಯಿ (ಬೇಯಿಸಿ ಬೀಜಗಳನ್ನು ತೆಗೆಯಬೇಕು) 
* 1/2 ಕಪ್ ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು
* 5 ಹಸಿರು ಮೆಣಸಿನಕಾಯಿ 
* 1 ಇಂಚಿನಷ್ಟು ದೊಡ್ಡ ಶುಂಠಿ ತುಂಡು
* 1 ಟೀಸ್ಪೂನ್ ಹುರಿದ ಜೀರಿಗೆ ಪುಡಿ
* 1/2 ಟೀಸ್ಪೂನ್ ಕಪ್ಪು ಉಪ್ಪು
* 1 ಚಮಚ ನಿಂಬೆ ರಸ
* 1-2 ಚಮಚ ಬೆಲ್ಲ ಅಥವಾ ಸಕ್ಕರೆ
* ರುಚಿಗೆ ತಕ್ಕಷ್ಟು ಉಪ್ಪು
* 2-3 ಚಮಚ ನೀರು

ನೆಲ್ಲಿಕಾಯಿ ಚಟ್ನಿ ಮಾಡುವುದು ಹೇಗೆ? 
ನೆಲ್ಲಿಕಾಯಿ ಚಟ್ನಿ ಮಾಡುವ ಮೊದಲು ಅದನ್ನು ತೊಳೆದು ಕುದಿಸಿ. ನೆಲ್ಲಿಕಾಯಿ ತಣ್ಣಗಾದ ನಂತರ ಅವುಗಳ ಬೀಜಗಳನ್ನು ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿ. ಈಗ ಕತ್ತರಿಸಿಟ್ಟುಕೊಂಡ ನೆಲ್ಲಿಕಾಯಿ ತುಂಡುಗಳು, ಕೊತ್ತಂಬರಿ ಸೊಪ್ಪು, ಹಸಿರು ಮೆಣಸಿನಕಾಯಿ, ಶುಂಠಿ, ಹುರಿದ ಜೀರಿಗೆ ಪುಡಿ, ಕಪ್ಪು ಉಪ್ಪು, ನಿಂಬೆ ರಸ, ಬೆಲ್ಲ ಮತ್ತು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ರುಬ್ಬಿದ ನಂತರ ಸವಿಯಿರಿ ಮತ್ತು ಅಗತ್ಯಕ್ಕೆ ಅನುಗುಣವಾಗಿ ಉಪ್ಪು ಮತ್ತು ನಿಂಬೆ ರಸವನ್ನು ಸೇರಿಸಿ. ಚಟ್ನಿ ಸ್ವಲ್ಪ ಗಟ್ಟಿಯಿದೆ ಎಂದು ನೀವು ಭಾವಿಸಿದರೆ ಅದಕ್ಕೆ ಸ್ವಲ್ಪ ನೀರು ಸೇರಿಸಬಹುದು. ಈಗ ತಯಾರಾದ ನೆಲ್ಲಿಕಾಯಿ ಚಟ್ಟಿಯನ್ನು ಒಂದು ಬಟ್ಟಲಿನಲ್ಲಿ ತೆಗೆದು ಚಪಾತಿ, ಪರಾಠ, ಸಮೋಸ ಜೊತೆಗೆ ಸೇವಿಸಬಹುದು.

ಚಟ್ನಿಯನ್ನು ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿ ಒಂದು ವಾರ ಫ್ರಿಜ್‌ ನಲ್ಲಿ ಇಡಬಹುದು. 
ರುಚಿಗೆ ಬೇಕಾದರೆ ಪುದೀನಾ ಎಲೆಗಳು ಮತ್ತು ಬೆಳ್ಳುಳ್ಳಿ ಎಸಳನ್ನು ಸೇರಿಸಬಹುದು. 


ನೆಲ್ಲಿಕಾಯಿಂದ ಸಿಗುವ ಲಾಭಗಳು 
ನೆಲ್ಲಿಕಾಯಿ ದೇಹವನ್ನು ತಂಪಾಗಿಡುವ ಗುಣವನ್ನು ಹೊಂದಿದೆ. ಅದರ ತಂಪಾಗಿಸುವ ಪರಿಣಾಮದಿಂದಾಗಿ ವಿಶೇಷವಾಗಿ ಬೇಸಿಗೆಯಲ್ಲಿ ನೆಲ್ಲಿಕಾಯಿ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಬೇಸಿಗೆ ಕಾಲದಲ್ಲಿ ಕೇವಲ ಒಂದು ತಿಂಗಳ ಕಾಲ ಪ್ರತಿದಿನ ನೆಲ್ಲಿಕಾಯಿಯನ್ನು ನಿಮ್ಮ ಆಹಾರ ಯೋಜನೆಯ ಭಾಗವಾಗಿ ಮಾಡಿಕೊಳ್ಳಿ ಮತ್ತು ಸಕಾರಾತ್ಮಕ ಪರಿಣಾಮಗಳನ್ನು ನೀವೇ ನೋಡಿ. ಒಂದು ಬಾರಿ ನೆಲ್ಲಿಕಾಯಿಯ ಅದ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದರೆ ನಂತರ ನೀವು ಅದನ್ನು ಪ್ರತಿದಿನ ಸೇವಿಸಲು ಪ್ರಾರಂಭಿಸುತ್ತೀರಿ. ಆಯುರ್ವೇದದ ಪ್ರಕಾರ ನೆಲ್ಲಿಕಾಯಿ ದೇಹದ ಪಿತ್ತರಸ, ವಾತ ಮತ್ತು ಕಫವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.