Rava chapati recipe: ಪ್ರತಿದಿನ ಅದೇ ಗೋಧಿ ಚಪಾತಿ ತಿಂದು ಬೇಜಾರಾಗಿದ್ದರೆ, ಚಿರೋಟಿ ರವೆಯಿಂದ ಹತ್ತಿಯಂತೆ ಮೃದುವಾಗಿ ಬರುವ ‘ರವಾ ಚಪಾತಿ’ ಒಮ್ಮೆ ಟ್ರೈ ಮಾಡಿ ನೋಡಿ. ಇದರ ಜೊತೆಗೆ ಉತ್ತರ ಕರ್ನಾಟಕ ಶೈಲಿಯ ಘಮಘಮಿಸುವ ಹೀರೆಕಾಯಿ ಪಲ್ಯವಿದ್ದರೆ ಉಪಹಾರಕ್ಕೆ ಹಾಗೂ ಊಟಕ್ಕೆ ತಟ್ಟೆ ಕ್ಷಣಾರ್ಧದಲ್ಲಿ ಖಾಲಿಯಾಗುವುದು ಗ್ಯಾರಂಟಿ!
ಗೋಧಿ ಹಿಟ್ಟು ಬಳಸದೆ, ಚಿರೋಟಿ ರವೆಯಿಂದ ಹತ್ತಿಯಂತೆ ಮೃದುವಾಗಿ ಬರುವ ‘ರವಾ ಚಪಾತಿ’ (ರವಾ ರೊಟ್ಟಿ) ಮತ್ತು ಅದಕ್ಕೆ ಹೇಳಿಮಾಡಿಸಿದ ಉತ್ತರ ಕರ್ನಾಟಕ ಶೈಲಿಯ ಹೀರೆಕಾಯಿ ಪಲ್ಯ ಮಾಡುವ ಪರಿಪೂರ್ಣ ವಿಧಾನ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು
ರವಾ ಚಪಾತಿಗೆ
ಚಿರೋಟಿ ರವೆ: 1 ಬಟ್ಟಲು (ಚಿರೋಟಿ ರವೆ ಇಲ್ಲದಿದ್ದರೆ ಉಪ್ಪಿಟ್ಟು ರವೆಯನ್ನು ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿ ಬಳಸಬಹುದು)
ನೀರು: 2 ಬಟ್ಟಲು
ಎಣ್ಣೆ: ½ ಚಮಚ
ಉಪ್ಪು: ರುಚಿಗೆ ತಕ್ಕಷ್ಟು
ಉತ್ತರ ಕರ್ನಾಟಕ ಶೈಲಿಯ ಹೀರೆಕಾಯಿ ಪಲ್ಯಕ್ಕೆ
ಹೀರೆಕಾಯಿ: 3 (ಉದ್ದವಾಗಿ, ತೆಳುವಾಗಿ ಹೆಚ್ಚಿದ್ದು)
ಟೊಮೆಟೊ: 1 (ಸಣ್ಣಗೆ ಹೆಚ್ಚಿದ್ದು)
ಬೆಳ್ಳುಳ್ಳಿ: 8 ರಿಂದ 10 ಎಸಳು (ಜಜ್ಜಿದ್ದು)
ಎಣ್ಣೆ: 1 ದೊಡ್ಡ ಚಮಚ
ಸಾಸಿವೆ & ಜೀರಿಗೆ: ತಲಾ ½ ಚಮಚ
ಅರಿಶಿಣ: ¼ ಚಮಚ
ಮಸಾಲೆ ಖಾರ: 1½ ಚಮಚ (ಅಥವಾ ಅಚ್ಚಖಾರದ ಪುಡಿ + ಗರಂ ಮಸಾಲಾ)
ಗುರೆಳ್ಳು / ಖಾರಾಳ ಪುಡಿ: 1 ಚಮಚ
ಪುಟಾಣಿ (ಹುರಿಗಡಲೆ) ಪುಡಿ: 1 ಚಮಚ
ಕೊತ್ತಂಬರಿ ಸೊಪ್ಪು: ಸ್ವಲ್ಪ
ಉಪ್ಪು & ನೀರು: ಅಗತ್ಯಕ್ಕೆ ತಕ್ಕಷ್ಟು
ಮಾಡುವ ಹಂತ-ಹಂತದ ವಿಧಾನ
ರವಾ ಚಪಾತಿಗೆ ಹಿಟ್ಟು ಸಿದ್ಧಪಡಿಸಿಕೊಳ್ಳಿ
ಬಾಣಲೆಗೆ 2 ಬಟ್ಟಲು ನೀರು, ½ ಚಮಚ ಎಣ್ಣೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕುದಿಯಲು ಬಿಡಿ.
ನೀರು ಕುದಿಯುವಾಗ ಉರಿಯನ್ನು ಕಡಿಮೆ ಮಾಡಿ (Low Flame), 1 ಬಟ್ಟಲು ಚಿರೋಟಿ ರವೆಯನ್ನು ಸ್ವಲ್ಪ ಸ್ವಲ್ಪವೇ ಹಾಕುತ್ತಾ ಗಂಟಾಗದಂತೆ ಸೌಟಿನಿಂದ ವೇಗವಾಗಿ ತಿರುವಿ.
ರವೆ ನೀರನ್ನು ಹೀರಿಕೊಂಡು ಪಾತ್ರೆಯ ತಳ ಬಿಡುವಾಗ ಗ್ಯಾಸ್ ಆಫ್ ಮಾಡಿ, ಮುಚ್ಚಳ ಮುಚ್ಚಿ 5 ನಿಮಿಷ ಹಬೆಯಲ್ಲಿ (ದಮ್) ಬಿಡಿ.
ನಂತರ ಹಿಟ್ಟನ್ನು ತಟ್ಟೆಗೆ ಹಾಕಿ, ಕೈ ಮುಟ್ಟುವಷ್ಟು ಬಿಸಿ ಇರುವಾಗಲೇ ಕೈಗೆ ಸ್ವಲ್ಪ ಎಣ್ಣೆ ಸವರಿಕೊಂಡು ಚಪಾತಿ ಹಿಟ್ಟಿನಂತೆ ನಯವಾಗಿ, ಚೆನ್ನಾಗಿ ನಾದಿಕೊಳ್ಳಿ.
ಲಟ್ಟಿಸಿ ಬೇಯಿಸಿ
ನಾದಿದ ರವೆ ಹಿಟ್ಟಿನಿಂದ ನಿಂಬೆಹಣ್ಣಿನ ಗಾತ್ರದ ಉಂಡೆಗಳನ್ನು ಮಾಡಿ.
ಲಟ್ಟಿಸುವ ವಿಧಾನ: ಸ್ವಲ್ಪ ಒಣ ಗೋಧಿ ಹಿಟ್ಟು ಉದುರಿಸಿ ಚಪಾತಿಯಂತೆ ಎಷ್ಟು ಬೇಕಾದರೂ ತೆಳುವಾಗಿ ಲಟ್ಟಿಸಿಕೊಳ್ಳಬಹುದು (ಅಥವಾ ಹೋಳಿಗೆ ಶೀಟ್‌ಗೆ ಎಣ್ಣೆ ಸವರಿ ಲಟ್ಟಿಸಬಹುದು).
ಕಾದ ಹೆಂಚಿನ ಮೇಲೆ ಲಟ್ಟಿಸಿದ ಚಪಾತಿ ಹಾಕಿ, ಎರಡೂ ಬದಿ ಸ್ವಲ್ಪ ಎಣ್ಣೆ ಅಥವಾ ತುಪ್ಪ ಸವರಿ ಮಧ್ಯಮ ಉರಿಯಲ್ಲಿ ಬೇಯಿಸಿ.
ಇದು ಪೂರಿಯಂತೆ ಚೆನ್ನಾಗಿ ಉಬ್ಬಿ ಬರುತ್ತದೆ ಮತ್ತು ಇಡೀ ದಿನ ಇಟ್ಟರೂ ಹತ್ತಿಯಷ್ಟೇ ಮೃದುವಾಗಿರುತ್ತದೆ!
ಎರಡು ಮುಖ್ಯ ಟಿಪ್ಸ್
ನೀರಿನ ನಿಖರ ಅಳತೆ: 1 ಕಪ್ ರವೆಗೆ ಸರಿಯಾಗಿ 2 ಕಪ್ ನೀರು ಹಾಕಬೇಕು. ನೀರು ಹೆಚ್ಚಾದರೆ ಹಿಟ್ಟು ಜಿಗುಟಾಗುತ್ತದೆ, ಕಡಿಮೆಯಾದರೆ ಚಪಾತಿ ಬಿರುಕು ಬಿಡುತ್ತದೆ.
ಬಿಸಿ ಇರುವಾಗಲೇ ನಾದಿಕೊಳ್ಳಿ: ರವೆ ಬೆಂದ ನಂತರ ಹಿಟ್ಟು ಪೂರ್ತಿ ತಣ್ಣಗಾಗಲು ಬಿಡಬೇಡಿ, ಕೈ ಮುಟ್ಟುವಷ್ಟು ಬಿಸಿ ಇರುವಾಗಲೇ ಎಣ್ಣೆ ಸವರಿ ಚೆನ್ನಾಗಿ ನಾದಿದರೆ ಚಪಾತಿ ಮೃದುವಾಗಿ ಬರುತ್ತದೆ.
ಹೀರೆಕಾಯಿ ಪಲ್ಯ ಮಾಡಲು
ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಜೀರಿಗೆ, ಜಜ್ಜಿದ ಬೆಳ್ಳುಳ್ಳಿ ಮತ್ತು ಅರಿಶಿಣ ಹಾಕಿ ಘಮ ಬರುವವರೆಗೆ ಹುರಿಯಿರಿ.
ನಂತರ ಹೆಚ್ಚಿದ ಟೊಮೆಟೊ ಮತ್ತು ಸ್ವಲ್ಪ ಉಪ್ಪು ಸೇರಿಸಿ, ಟೊಮೆಟೊ ಮೆತ್ತಗಾಗಿ ಎಣ್ಣೆ ಬಿಡುವವರೆಗೆ ಬಾಡಿಸಿ.
ಇದಕ್ಕೆ ಹೆಚ್ಚಿದ ಹೀರೆಕಾಯಿ ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿ, ಮುಚ್ಚಳ ಮುಚ್ಚಿ 5 ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿ (ಹೀರೆಕಾಯಿ ನೀರು ಬಿಟ್ಟುಕೊಂಡು ಮೆತ್ತಗಾಗುತ್ತದೆ).
ನಂತರ ಮಸಾಲೆ ಖಾರ, ಗುರೆಳ್ಳು ಪುಡಿ, ಪುಟಾಣಿ ಪುಡಿ ಮತ್ತು 1 ಸಣ್ಣ ಬಟ್ಟಲು ನೀರು ಸೇರಿಸಿ ಮಿಕ್ಸ್ ಮಾಡಿ, ಮತ್ತೆ 5 ನಿಮಿಷ ಕುದಿಸಿದರೆ ರುಚಿಕರವಾದ ‘ರಸರಸ ಹೀರೆಕಾಯಿ ಪಲ್ಯ’ ರೆಡಿ.