Recipe : ಹೊಟೇಲ್‌ ನಲ್ಲಿ ನಾವು ಉದುರಾದ ಮಟರ್ ಪುಲಾವ್‌ ತಿಂದಿರ್ತೇವೆ. ಅದೇ ಮನೆಯಲ್ಲಿ ಬಟಾಣಿ ಪಲಾವ್‌ ಮಾಡೋಕೆ ಹೋದ್ರೆ ಮುದ್ದೆಯಾಗುತ್ತೆ. ಈಗ ನಾವು ಹೇಳೋ ಟಿಪ್ಸ್‌ ಫಾಲೋ ಮಾಡಿದ್ರೆ ನೀವೂ ಮನೆಯಲ್ಲಿ ಸುಲಭವಾಗಿ ರುಚಿಯಾದ, ಉದುರಾದ ಮಟರ್‌ ಪುಲಾವ್‌ ಮಾಡ್ಬಹುದು.

ಹಬ್ಬದ ಸೀಸನ್ ಶುರುವಾಗಿದೆ. ಮನೆಯಲ್ಲಿ ಹಬ್ಬದೂಟದ ಜೊತೆಗೆ ಅತಿಥಿಗಳಿಗಾಗಿ ವಿಶೇಷವಾದ ಅಡುಗೆ ಮಾಡ್ಬೇಕು ಅಂತ ಪ್ಲಾನ್‌ ಮಾಡ್ತಿರ್ತೀರಿ. ಹಿಂದೊಮ್ಮೆ ಮಾಡಿದ್ದ ಮಟರ್‌ ಪುಲಾವ್‌ ಮುದ್ದೆಯಾಗಿತ್ತು, ಅದನ್ನು ಮಾಡೋಕೆ ಭಯ ಅನ್ನೋರು ಕೆಲ ಟಿಪ್ಸ್‌ ಫಾಲೋ ಮಾಡಿ, ಸುಲಭವಾಗಿ ಹಸಿರು ಬಟಾಣಿ ಪುಲಾವ್‌ತಯಾರಿಸಿ.

ಮಟರ್‌ ಪುಲಾವ್‌

ಬಾಸ್ಮತಿ ಅಕ್ಕಿಯ ಪರಿಮಳ, ಹಸಿರು ಬಟಾಣಿ ಮತ್ತು ಘಮಘಮಿಸುವ ಮಸಾಲೆಗಳ ರುಚಿ ಸೇರಿಕೊಂಡರೆ ಪುಲಾವ್ ಇನ್ನಷ್ಟು ರುಚಿಯಾಗುತ್ತದೆ. ಆದರೆ ಕೆಲವರು ಮನೆಯಲ್ಲಿ ಪುಲಾವ್ ಮಾಡುವಾಗ ಮಾಡುವ ಸಣ್ಣ ತಪ್ಪುಗಳಿಂದ ಅನ್ನ ಅಂಟಿಕೊಂಡು ಬಿಡುತ್ತದೆ.

ಮಟರ್ ಪುಲಾವ್ ಗೆ ಬೇಕಾಗುವ ಸಾಮಗ್ರಿಗಳು

• ಬಾಸ್ಮತಿ ಅಕ್ಕಿ – ಒಂದೂವರೆ ಕಪ್

• ತುಪ್ಪ – 2 ಚಮಚ

• ಪಲಾವ್ ಎಲೆ – 1

• ಹಸಿರು ಏಲಕ್ಕಿ – 4

• ದೊಡ್ಡ ಏಲಕ್ಕಿ – 1

• ಚಕ್ಕೆ – 1 ಇಂಚಿನ ತುಂಡು

• ಲವಂಗ – 3

• ಕಾಳುಮೆಣಸು – 10ರಿಂದ 12

• ಜೀರಿಗೆ – ಅರ್ಧ ಚಮಚ

• ಗೋಡಂಬಿ – ಮೂರನೇ ಒಂದು ಕಪ್

• ತುರಿದ ಶುಂಠಿ – 1 ಚಮಚ

• ಹಸಿಮೆಣಸಿನಕಾಯಿ – 3ರಿಂದ 4

• ಹಸಿರು ಬಟಾಣಿ – 1 ಕಪ್

• ಉಪ್ಪು – ರುಚಿಗೆ ತಕ್ಕಷ್ಟು

• ಗರಂ ಮಸಾಲಾ – ಅರ್ಧ ಚಮಚ

• ನೀರು – ಸುಮಾರು ಎರಡೂವರೆ ಕಪ್

• ನಿಂಬೆ ರಸ – ಸ್ವಲ್ಪ

• ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ

ಮಟರ್ ಪುಲಾವ್ ಮಾಡುವ ವಿಧಾನ

ಮೊದಲು ಬಾಸ್ಮತಿ ಅಕ್ಕಿಯನ್ನು ಎರಡು ಅಥವಾ ಮೂರು ಬಾರಿ ಸ್ವಚ್ಛವಾದ ನೀರಿನಲ್ಲಿ ತೊಳೆಯಿರಿ. ನಂತರ ಸುಮಾರು 20 ನಿಮಿಷ ನೆನೆಸಿಡಿ. ಇದರಿಂದ ಅಕ್ಕಿ ಚೆನ್ನಾಗಿ ಹಿಗ್ಗುತ್ತದೆ. ಬಳಿಕ ನೀರನ್ನು ಸಂಪೂರ್ಣವಾಗಿ ಬಸಿದು ಅಕ್ಕಿಯನ್ನು ಪಕ್ಕಕ್ಕಿಡಿ. ಒಂದು ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ. ಅದಕ್ಕೆ ಪಲಾವ್ ಎಲೆ, ಹಸಿರು ಏಲಕ್ಕಿ, ದೊಡ್ಡ ಏಲಕ್ಕಿ, ಚಕ್ಕೆ, ಲವಂಗ, ಕಾಳುಮೆಣಸು ಮತ್ತು ಜೀರಿಗೆ ಸೇರಿಸಿ. ಮಸಾಲೆಗಳಿಂದ ಪರಿಮಳ ಬರುವವರೆಗೆ ಹುರಿಯಿರಿ. ನಂತರ ಗೋಡಂಬಿ ಸೇರಿಸಿ, ಸ್ವಲ್ಪ ಬಣ್ಣ ಬದಲಾಗುವವರೆಗೆ ಹುರಿಯಿರಿ. ಗೋಡಂಬಿ ಸೇರಿಸುವುದರಿಂದ ಪುಲಾವ್ಗೆ ಶಾಹಿ ರುಚಿ ಸಿಗುತ್ತದೆ.

ಈಗ ತುರಿದ ಶುಂಠಿ ಮತ್ತು ಕತ್ತರಿಸಿದ ಹಸಿಮೆಣಸಿನಕಾಯಿ ಸೇರಿಸಿ. ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ನಂತರ ಹಸಿರು ಬಟಾಣಿ ಸೇರಿಸಿ ಸುಮಾರು ಒಂದು ನಿಮಿಷ ಚೆನ್ನಾಗಿ ಮಿಶ್ರಣ ಮಾಡಿ. ನೆನೆಸಿಟ್ಟ ಅಕ್ಕಿಯನ್ನು ಪಾತ್ರೆಗೆ ಹಾಕಿ, ಅಕ್ಕಿ ಮುರಿಯದಂತೆ ನಿಧಾನವಾಗಿ ಮಿಕ್ಸ್ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಗರಂ ಮಸಾಲಾ ಸೇರಿಸಿ ಒಂದು ನಿಮಿಷ ಹುರಿಯಿರಿ.

ಈಗ ನೀರು ಮತ್ತು ಸ್ವಲ್ಪ ನಿಂಬೆ ರಸ ಸೇರಿಸಿ. ಪಾತ್ರೆಗೆ ಮುಚ್ಚಳ ಮುಚ್ಚಿ, ಅಕ್ಕಿ ಬೇಯುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸಿ. ಒಂದೂವರೆ ಕಪ್ ಬಾಸ್ಮತಿ ಅಕ್ಕಿಗೆ ಸುಮಾರು ಎರಡೂವರೆ ಕಪ್ ನೀರು ಬೇಕು. ಆದರೆ ಅಕ್ಕಿಯ ವಿಧ ಮತ್ತು ನೆನೆಸಿದ ಸಮಯಕ್ಕೆ ಅನುಗುಣವಾಗಿ ನೀರಿನ ಪ್ರಮಾಣ ಬದಲಾಗುತ್ತದೆ. ಆದ್ದರಿಂದ ಅಕ್ಕಿಯ ಪ್ಯಾಕೆಟ್ನ ಸೂಚನೆಗಳನ್ನೂ ಗಮನಿಸಿ.

ನೀರು ಸಂಪೂರ್ಣವಾಗಿ ಹೀರಿಕೊಂಡು ಅಕ್ಕಿ ಬೆಂದ ನಂತರ ಗ್ಯಾಸ್ ಆರಿಸಿ. ಕೆಲವು ನಿಮಿಷ ಮುಚ್ಚಳ ಮುಚ್ಚಿಯೇ ಬಿಡಿ. ಬಳಿಕ ಫೋರ್ಕ್ ಅಥವಾ ಚಮಚದಿಂದ ನಿಧಾನವಾಗಿ ಅನ್ನವನ್ನು ಬಿಡಿಬಿಡಿ ಮಾಡಿ. ಮೇಲೆ ಕತ್ತರಿಸಿದ ತಾಜಾ ಕೊತ್ತಂಬರಿ ಸೊಪ್ಪು ಉದುರಿಸಿ ಬಿಸಿಬಿಸಿಯಾಗಿ ಸರ್ವ್ ಮಾಡಿ. ನೀವು ಪನೀರ್ ಗ್ರೇವಿ, ಚೋಲೆ ಅಥವಾ ನಿಮ್ಮಿಷ್ಟದ ಸೈಡ್ ಡಿಶ್ ಜೊತೆ ಇದನ್ನು ಸೇವಿಸಬಹುದು.