Ande ka Halwa: ಮೊಟ್ಟೆ ಹಲ್ವಾ ತಿಂದಿದ್ದೀರಾ ?
ಹಲ್ವಾ (Halwa) ಅಂದ್ರೆ ಸಾಮಾನ್ಯವಾಗಿ ಗೋಧಿ ಹಲ್ವಾ, ರವೆ ಹಲ್ವಾ, ಕ್ಯಾರೆಟ್ ಹಲ್ವಾ ಮೊದಲಾದ ಹಲ್ವಾಗಳು ನೆನಪಾಗುತ್ತವೆ. ಆದ್ರೆ ರುಚಿ (Taste) ರುಚಿಯಾಗಿ ಮೊಟ್ಟೆ ಹಲ್ವಾನೂ ಮಾಡ್ತಾರೆ ಅನ್ನೋದು ನಿಮಗೆ ಗೊತ್ತಾ. ಅರೆ, ಮೊಟ್ಟೆ (Egg) ಹಲ್ವಾನಾ ಅಂತ ಮೂಗು ಮುರಿಬೇಡಿ. ಅಂಡೆ ಕಾ ಹಲ್ವಾ ಟೇಸ್ಟ್ ಮಾಡಿದ್ರೆ ನೀವು ಕೂಡಾ ಫಿದಾ ಆಗೋದು ಖಂಡಿತ.
ಭಾರತದಲ್ಲಿ ಹಲ್ವಾ ಎಂದರೆ ಹೆಚ್ಚು ಪ್ರಸಿದ್ಧಿ ಹೊಂದಿರುವ ಒಂದು ಸಿಹಿ ತಿಂಡಿಯಾಗಿದೆ. ಹಬ್ಬ ಹರಿದಿನಗಳು, ವಿಶೇಷ ಸಂದರ್ಭದಲ್ಲಿ ಹಲ್ವಾವನ್ನು ಖರೀದಿಸುವುದು ಅಥವಾ ಮನೆಯಲ್ಲಿಯೇ ತಯಾರಿಸುವುದನ್ನು ನೋಡಬಹುದು. ಹಲ್ವಾವನ್ನು ತಯಾರಿಸುವ ವಿಧಾನವು 1520-1566ರ ನಡುವೆ ಒಟ್ಟೋಮನ್ ಸಾಮ್ರಾಜ್ಯದಲ್ಲಿ ಹುಟ್ಟಿಕೊಂಡಿತು ಎಂದು ಹೇಳಲಾಗುತ್ತದೆ. ಹಲ್ವಾ ಎಂಬ ಪದವು 'ಹಲ್ವ್' ಎಂಬ ಅರೇಬಿಕ್ ಪದದಿಂದ ಬಂದಿದೆ, ಇದರರ್ಥ 'ಸಿಹಿಯಾದದ್ದು' ಎಂಬುದಾಗಿದೆ. ಹಲ್ವಾ ಅಂದ್ರೆ ಸಾಮಾನ್ಯವಾಗಿ ಗೋಧಿ ಹಲ್ವಾ, ರವೆ ಹಲ್ವಾ, ಕ್ಯಾರೆಟ್ ಹಲ್ವಾ ಮೊದಲಾದ ಹಲ್ವಾಗಳು ನೆನಪಾಗುತ್ತವೆ. ಆದ್ರೆ ಬಾಂಗ್ಲಾದಲ್ಲಿ ಇದೆಲ್ಲಕ್ಕಿಂತ ವಿಭಿನ್ನವಾದ ಹಲ್ವಾವೊಂದನ್ನು ತಯಾರಿಸಲಾಗುತ್ತದೆ.
ಮೊಟ್ಟೆಯ ವಿವಿಧ ಖಾದ್ಯಗಳನ್ನು ತಯಾರಿಸುವುದನ್ನು ನೀವು ನೋಡಿರಬಹುದು. ಮೊಟ್ಟೆಯ ಗ್ರೇವಿ, ಎಗ್ ಭುರ್ಜಿ, ಆಮ್ಲೆಟ್, ಎಗ್ ಬಿರಿಯಾಗಿ, ಎಗ್ ಫ್ರೈಡ್ ರೈಸ್ ಹೀಗೆ ಮೊಟ್ಟೆಯಿಂದ ವಿವಿಧ ತಿನಿಸುಗಳನ್ನು ತಯಾರಿಸುತ್ತಾರೆ. ಆದರೆ ಮೊಟ್ಟೆಯಿಂದ ಹಲ್ವಾವನ್ನು ತಯಾರಿಸುತ್ತಾರೆ ಅನ್ನೋದು ನಿಮಗೆ ಗೊತ್ತಾ. ಅಚ್ಚರಿ ಎನಿಸಿದರೂ ನಿಜ. ಬಾಂಗ್ಲಾದಲ್ಲಿ ಡೈಮರ್ ಹಲ್ವಾ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಅಂಡೆ ಕಾ ಹಲ್ವಾವನ್ನು ತಯಾರಿಸಲಾಗುತ್ತದೆ.
ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುವ ಸೋರೆಕಾಯಿ ಹಲ್ವಾ, ಮೊಸರು ಬಜ್ಜಿ ಮಾಡೋದ್ಹೇಗೆ?
ವಿಚಿತ್ರವೆನಿಸುವ ಈ ಮೊಟ್ಟೆಯ ಹಲ್ವಾ (Halwa) ಮೂಲತಃ ಬಾಂಗ್ಲಾದೇಶದ ಪಾಕವಿಧಾನವೆಂದು ಪರಿಗಣಿಸಲಾಗುತ್ತದೆ. ಈ ಸಿಹಿಭಕ್ಷ್ಯವನ್ನು 'ಅಂಡೆ ಕಾ ಮೀಠಾ' ಎಂದೂ ಕರೆಯುತ್ತಾರೆ. ಇದರರ್ಥ ಮೊಟ್ಟೆಗಳಿಂದ ಮಾಡಿದ ಸಿಹಿ ಖಾದ್ಯ ಎಂದಾಗಿದೆ. ಪ್ರೋಟೀನ್‌ನಲ್ಲಿ ಸಮೃದ್ಧವಾಗಿರುವ ಈ ಹಲ್ವಾವನ್ನು ಚಳಿಗಾಲದಲ್ಲಿ ತಯಾರಿಸಲಾಗುತ್ತದೆ. ಏಕೆಂದರೆ ಇದು ದೇಹವನ್ನು ಬೆಚ್ಚಗಿರಿಸುತ್ತದೆ. ವಿಶೇಷ ಅಂದ್ರೆ, ಇದು ಮೊಟ್ಟೆ (Egg)ಯ ಇತರ ರೆಸಿಪಿಗಳಂತೆ ಮೊಟ್ಟೆಯ ವಾಸನೆಯನ್ನು ಹೊಂದಿರುವುದಿಲ್ಲ. ಬದಲಾಗಿ ಸಿಹಿತಿನಿಸಿನ ಹಿತವಾದ ಸುವಾಸನೆಯನ್ನು ಹೊಂದಿದ್ದು, ಕೇವಲ 20-30 ನಿಮಿಷಗಳಲ್ಲಿ ಈ ಮೊಟ್ಟೆಯ ಹಲ್ವಾವನ್ನು ತಯಾರಿಸಬಹುದು. ಅಂಡೆ ಕಾ ಹಲ್ವಾ ಮಾಡುವ ಸರಳ ಪಾಕವಿಧಾನ ಇಲ್ಲಿದೆ.
ಬೇಕಾಗಿರುವ ಸಾಮಗ್ರಿಗಳು:
4 ಮೊಟ್ಟೆಗಳು
1 ಕಪ್ ಪೂರ್ಣ ಕೆನೆ ಹಾಲು
ಅರ್ಧ ಕಪ್ ಮಂದಗೊಳಿಸಿದ ಹಾಲು,
3-4 ಚಮಚ ರವೆ
4 ಹಸಿರು ಏಲಕ್ಕಿ
4 ಚಮಚ ಸಕ್ಕರೆ
1 ಪಿಂಚ್ ಕೇಸರಿ
ಅರ್ಧ ಕಪ್ ತುಪ್ಪ
1 ಟೀ ಸ್ಪೂನ್ ವೆನಿಲ್ಲಾ ಎಸೆನ್ಸ್,
ಅಲಂಕರಿಸಲು ಡ್ರೈ ಫ್ರೂಟ್ಸ್
ಮಾಡುವ ವಿಧಾನ:
ಒಲೆಯ ಮೇಲೆ ಕಡಾಯಿಯನ್ನಿಷ್ಟು ಗ್ಯಾಸ್ ಅನ್ನು ಮಧ್ಯಮ ಉರಿಯಲ್ಲಿ ತುಪ್ಪ (Ghee)ವನ್ನು ಬಿಸಿ ಮಾಡಿ. ತುಪ್ಪ ಸಾಕಷ್ಟು ಬಿಸಿಯಾದ ನಂತರ, ಕಡಿಮೆ ಉರಿಯಲ್ಲಿ ಅದಕ್ಕೆ ರವೆ ಸೇರಿಸಿ. ನಂತರ, ಅದಕ್ಕೆ ಹಸಿರು ಏಲಕ್ಕಿ ಸೇರಿಸಿ. ಈ ಮಧ್ಯೆ, ಒಂದು ದೊಡ್ಡ ಬಟ್ಟಲನ್ನು ತೆಗೆದುಕೊಂಡು ಅದರಲ್ಲಿ ಹಸಿಮೊಟ್ಟೆಗಳನ್ನು ಒಡೆದು ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಕಂಡೆನ್ಸ್ಡ್ ಮಿಲ್ಕ್, ಸಕ್ಕರೆ ಸೇರಿಸಿ ಮತ್ತು ಎಲ್ಲವನ್ನೂ ಚೆನ್ನಾಗಿ ಬೆರೆಸಿ ಉತ್ತಮ ಹಿಟ್ಟನ್ನು ತಯಾರಿಸಿ. ಕಡಾಯಿಯಲ್ಲಿರುವ ರವೆ ಕಂದು ಬಣ್ಣಕ್ಕೆ ಬಂದಾಗ, ಮೊಟ್ಟೆಯ ಹಿಟ್ಟನ್ನು ಕಡಾಯಿಗೆ ಸೇರಿಸಿ ಮತ್ತು ಚೆನ್ನಾಗಿ ಬೆರೆಸಿ.
ಬೀಟ್ರೂಟ್ ರೆಸಿಪಿ: ಹಲ್ವಾ, ಸೂಪ್ ಹಾಗೂ ಸಾಸಿವೆ ಮಾಡೋದ್ಹೀಗೆ!
ಎಲ್ಲಾ ಪದಾರ್ಥಗಳು ಚೆನ್ನಾಗಿ ಮಿಶ್ರಣವಾದ ನಂತರ, ಅದಕ್ಕೆ ವೆನಿಲ್ಲಾ (Vanilla) ಎಸೆನ್ಸ್ ಮತ್ತು ಕೇಸರಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ತಿಳಿ ಹಳದಿ ಬಣ್ಣ ಬರುವ ವರೆಗೆ ಬೇಯಿಸಿ. ಈ ಹಿಟ್ಟಿನಿಂದ ತುಪ್ಪ ಬೇರ್ಪಡುತ್ತಾ ಬಂದಾಗ ಹಲ್ವಾ ರೆಡಿಯಾಗುತ್ತಿದೆ ಎಂದರ್ಥ. ಡ್ರೈ ಫ್ರೂಟ್ಸ್‌ಗಳನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಈಗ ಸವಿಯಲು ಅಂಡೇ ಕಾ ಹಲ್ವಾ ಅಥವಾ ಮೊಟ್ಟೆಯ ಹಲ್ವಾ ಸಿದ್ಧ. ಇದನ್ನು ಬಿಸಿಯಿದ್ದಾಗಲೇ ಬಡಿಸಿದರೆ ಸವಿಯಲು ಇನ್ನಷ್ಟು ರುಚಿಕರ.