ಬೇಸಿಗೆಗಾಲದಲ್ಲಿ ದೇಹಕ್ಕೆ ಎಷ್ಟು ತಂಪು ಮಾಡಿದ್ರೂ ಕಡಿಮೇನೆ. ಎಷ್ಟು ನೀರು, ಜ್ಯೂಸ್ ಕುಡಿದ್ರೂ ಮತ್ತೂ ಬೇಕೆಂಬ ದಾಹ. ಅಲ್ಲದೆ,ದೇಹದ ಉಷ್ಣಾಂಶ ಹೆಚ್ಚಿ ನಾನಾ ಕಾಯಿಲೆಗಳು ಕೂಡ ಈ ಸಮಯದಲ್ಲಿ ಕಾಣಿಸಿಕೊಳ್ಳುತ್ತವೆ.ಹೀಗಾಗಿ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುವ ಹಣ್ಣುಗಳು ಹಾಗೂ ತರಕಾರಿಗಳನ್ನು ಯಥೇಚ್ಛವಾಗಿ ಸೇವಿಸಬೇಕು. ನೀರಿನಂಶ ಹೆಚ್ಚಿರುವ ತರಕಾರಿಗಳಲ್ಲಿ ಸೋರೆಕಾಯಿ ಕೂಡ ಒಂದು. ಶೇ.92ರಷ್ಟು ನೀರಿನಂಶ ಹಾಗೂ ಖನಿಜಾಂಶಗಳನ್ನು ಹೊಂದಿರುವ ಸೋರೆಕಾಯಿ ಅತ್ಯಂತ ಆರೋಗ್ಯಕಾರಿ ತರಕಾರಿಗಳಲ್ಲಿ ಒಂದಾಗಿದ್ದು,ದೇಹವನ್ನು ತಂಪಾಗಿರಿಸುತ್ತದೆ. ಸೋರೆಕಾಯಿ ರುಚಿಯಲ್ಲಿ ಸಪ್ಪೆಯೆನಿಸಿದ್ರೂ ಇದರ ಸೇವನೆಯಿಂದ ಆರೋಗ್ಯಕ್ಕೆ ಹತ್ತಾರು ಲಾಭಗಳಿವೆ.ನೀರಿನಂಶದ ಜೊತೆಗೆ ಸೋರೆಕಾಯಿಯಲ್ಲಿ ವಿಟಮಿನ್ ಸಿ, ಕೆ ಹಾಗೂ ಕ್ಯಾಲ್ಸಿಯಂ ಹೇರಳವಾಗಿವೆ. ಹೃದಯದ ಆರೋಗ್ಯ ಸಂರಕ್ಷಣೆ ಜೊತೆಗೆ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಲು ಇದು ನೆರವು ನೀಡುತ್ತದೆ. ಮಧುಮೇಹ ಹೊಂದಿರುವವರು ಸೋರೆಕಾಯಿಯ ನಿಯಮಿತ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ರಕ್ತದೊತ್ತಡ ತಗ್ಗಿಸಲು ಕೂಡ ಇದು ನೆರವು ನೀಡುತ್ತದೆ.ದೇಹದ ತಾಪಮಾನವನ್ನು ತಗ್ಗಿಸುವ ಜೊತೆಗೆ ದೇಹದ ನೀರಿನ ಪ್ರಮಾಣವನ್ನು ನಿಯಂತ್ರಿಸುವ ಮೂಲಕ ಬೇಸಿಗೆಯಲ್ಲಿ ನಿರ್ಜಲೀಕರಣವುಂಟಾಗದಂತೆ ತಡೆಯುತ್ತದೆ. ಸೋರೆಕಾಯಿ ಆರೋಗ್ಯಕ್ಕೆ ಒಳ್ಳೆಯದೇ ಆದ್ರೆ ಜ್ಯೂಸ್, ಪಲ್ಯ ನಮಗೆ ಇಷ್ಟವಾಗಲ್ಲ ಅನ್ನೋರು ಸೋರೆಕಾಯಿ ಹಲ್ವಾ ಹಾಗೂ ಮೊಸರುಬಜ್ಜಿ ಟ್ರೈ ಮಾಡಿ ನೋಡಿ. ನಿಮಗೆ ಖಂಡಿತಾ ಇಷ್ಟವಾಗುತ್ತೆ.

ವಿದೇಶಿ ಧಾನ್ಯಗಳಿಗೇಕೆ ಮಾಡುವಿರಿ ಹಣ ವೇಸ್ಟ್?

ಸೋರೆಕಾಯಿ ಹಲ್ವಾ

ಬೇಕಾಗುವ ಸಾಮಗ್ರಿಗಳು
ಸೋರೆಕಾಯಿ-500 ಗ್ರಾಂ, ತುಪ್ಪ-1/4 ಕಪ್, ಸಕ್ಕರೆ-1 ಕಪ್, ಹಾಲು-2 ಕಪ್, ಗೋಡಂಬಿ-5, ದ್ರಾಕ್ಷಿ-10,ಬಾದಾಮಿ-5, ಏಲಕ್ಕಿ ಪುಡಿ-1/2 ಟೀ ಚಮಚ

ಮಾಡುವ ವಿಧಾನ  

-ಸೋರೆಕಾಯಿಯನ್ನು ತೊಳೆದು, ಮೇಲಿನ ಸಿಪ್ಪೆಯನ್ನು ತೆಗೆಯಿರಿ. ಆ ಬಳಿಕ ಸೋರೆಕಾಯಿಯನ್ನು 2 ತುಂಡುಗಳನ್ನಾಗಿ ಕತ್ತರಿಸಿಕೊಂಡು ತುರಿಯಿರಿ. ತುರಿಯುವಾಗ ನಾಲ್ಕು ಕಡೆಯಿಂದ ಮಧ್ಯದಲ್ಲಿ ಬೀಜಗಳಿರುವ ಮೃದು ಭಾಗದ ತನಕ ತುರಿಯಿರಿ. ಬೀಜಗಳನ್ನೊಳಗೊಂಡ ಮಧ್ಯದ ಮೃದು ಭಾಗವನ್ನು ಎಸೆಯಿರಿ. ಯಾವುದೇ ಕಾರಣಕ್ಕೂ ಇದನ್ನು ಬಳಸಬೇಡಿ.
-ಪ್ಯಾನ್ ಅನ್ನು ಸ್ಟೌವ್ ಮೇಲಿಟ್ಟು ಬಿಸಿಯಾದ ತಕ್ಷಣ ಸ್ವಲ್ಪ ತುಪ್ಪ ಹಾಕಿ. ಆ ಬಳಿಕ ತುರಿದ ಸೋರೆಕಾಯಿ ಹಾಕಿ 3-4 ನಿಮಿಷಗಳ ಕಾಲ ಹುರಿಯಿರಿ.
-ಒಂದು ಪಾತ್ರೆಗೆ ಹಾಲು ಹಾಕಿ ಅದು ಅರ್ಧದಷ್ಟಕ್ಕೆ ಬರುವ ತನಕ ಚೆನ್ನಾಗಿ ಕುದಿಸಿ. 
-ಈಗ ಪ್ಯಾನ್‍ನಲ್ಲಿರುವ ಹುರಿದ ಸೋರೆಕಾಯಿಗೆ ಕಾಯಿಸಿದ ಹಾಲು ಸೇರಿಸಿ ಮಗುಚಿ. ಈ ಮಿಶ್ರಣವನ್ನು ಹಾಲು ಆವಿಯಾಗುವ ತನಕ ಬೇಯಿಸಿ.
-ಇದಕ್ಕೆ ಸಕ್ಕರೆ ಸೇರಿಸಿ ಮಗುಚಿ. ಸಕ್ಕರೆ ಸೇರಿಸಿದ ಬಳಿಕ ಮಿಶ್ರಣ ಮತ್ತೆ ನೀರಾಗುತ್ತದೆ. ಇದನ್ನು ಸೌಟ್‍ನಿಂದ ನಿರಂತರವಾಗಿ ತಿರುಗಿಸುತ್ತಿರಿ. ಇದರಲ್ಲಿರುವ ನೀರಿನಂಶ ಆವಿಯಾದ ಬಳಿಕ ಏಲಕ್ಕಿ ಪುಡಿ ಸೇರಿಸಿ ಸ್ಟೌವ್ ಆಪ್ ಮಾಡಿದ್ರೆ ಸೋರೆಕಾಯಿ ಹಲ್ವಾ ರೆಡಿ.
-ಈಗ ಇನ್ನೊಂದು ಪ್ಯಾನ್ ಸ್ಟೌವ್ ಮೇಲಿಟ್ಟು ಅದಕ್ಕೆ ಉಳಿದ ತುಪ್ಪ ಹಾಕಿ ಬಿಸಿಯಾದ ಬಳಿಕ ಗೋಡಂಬಿ, ಬಾದಾಮಿ ಚೂರುಗಳು ಹಾಗೂ ದ್ರಾಕ್ಷಿ ಹಾಕಿ ಫ್ರೈ ಮಾಡಿ ಸೋರೆಕಾಯಿ ಹಲ್ವಾಕ್ಕೆ ಸೇರಿಸಿ.

ಬೇಸಿಗೆಯಲ್ಲಿ ತಂಪಾಗಿಸುವ ಆರೋಗ್ಯಕರ ಜ್ಯೂಸ್!

ಸೋರೆಕಾಯಿ ಮೊಸರುಬಜ್ಜಿ

ಬೇಕಾಗುವ ಸಾಮಗ್ರಿಗಳು
ಸೋರೆಕಾಯಿ ತುರಿ-2 ಕಪ್, ಮೊಸರು-2 ಕಪ್, ಹಾಲು-1/4 ಕಪ್, ಅಚ್ಚ ಖಾರದ ಪುಡಿ-1 ಟೀ ಚಮಚ, ಹುರಿದ ಜೀರಿಗೆ ಪುಡಿ- 1 ಟೀ ಚಮಚ, ಸಕ್ಕರೆ-1 ಟೀ ಚಮಚ, ಉಪ್ಪು-ರುಚಿಗೆ ತಕ್ಕಷ್ಟು, ಎಣ್ಣೆ -2 ಟೇಬಲ್ ಚಮಚ, ಜೀರಿಗೆ-1/2 ಟೀ ಚಮಚ, ಸಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ – 1 ಟೀ ಚಮಚ, ಕತ್ತರಿಸಿದ ಹಸಿಮೆಣಸು-1/2 ಟೀ ಚಮಚ, ಕರಿಬೇವು, ಹಚ್ಚಿದ ಕೊತ್ತಂಬರಿ ಸೊಪ್ಪು,ಇಂಗು

ಮಾಡುವ ವಿಧಾನ
-ಒಂದು ಪಾತ್ರೆಗೆ ಒಂದು ಲೋಟ ನೀರು ಹಾಕಿ ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ಸ್ಟೌವ್ ಮೇಲಿಡಿ. ನೀರು ಕುದಿಯಲು ಪ್ರಾರಂಭಿಸಿದ ಬಳಿಕ ತುರಿದ ಸೋರೆಕಾಯಿ ಸೇರಿಸಿ ಒಂದು ಕುದಿ ಬಂದ ಬಳಿಕ ಸ್ಟೌವ್ ಆಪ್ ಮಾಡಿ.
-ಬೇಯಿಸಿದ ಸೋರೆಕಾಯಿಯನ್ನು ಒಂದು ಜರಡಿಗೆ ಬಸಿದು ಚಮಚದ ಸಹಾಯದಿಂದ ಸೋರೆಕಾಯಿಯನ್ನು ಒತ್ತಿ ಅದರಲ್ಲಿರುವ ಎಲ್ಲ ನೀರನ್ನು ತೆಗೆಯಿರಿ.
-ಈಗ ಒಂದು ಪಾತ್ರೆಯಲ್ಲಿ ಮೊಸರು ತೆಗೆದುಕೊಂಡು ಅದಕ್ಕೆ ಹಾಲು, ಉಪ್ಪು, ಸಕ್ಕರೆ, ಜೀರಿಗೆ ಪುಡಿ, ಅಚ್ಚ ಖಾರದ ಪುಡಿ ಹಾಕಿ ಮಿಕ್ಸ್ ಮಾಡಿ. 

ಪವರ್‌ಪ್ಯಾಕ್ ಮೊಳಕೆ ಕಾಳುಗಳಿಂದ ಸೂಪರ್ ಆರೋಗ್ಯ!

-ಬಳಿಕ ಇದಕ್ಕೆ ಬಿಸಿ ಆರಿದ ಸೋರೆಕಾಯಿ ಹಾಕಿ ಮಿಕ್ಸ್ ಮಾಡಿ.
-ಪ್ಯಾನ್ ಸ್ಟೌವ್ ಮೇಲಿಟ್ಟು ಅದಕ್ಕೆ ಎಣ್ಣೆ ಹಾಕಿ. ಎಣ್ಣೆ ಕಾದ ತಕ್ಷಣ ಜೀರಿಗೆ, ಹಸಿಮೆಣಸು, ಕರಿಬೇವು, ಬೆಳ್ಳುಳ್ಳಿ ಹಾಗೂ ಇಂಗು ಹಾಕಿ ಹುರಿಯಿರಿ. ಈ ಒಗ್ಗರಣೆಯನ್ನು ಸೋರೆಕಾಯಿ ಮೊಸರುಬಜ್ಜಿಗೆ ಸೇರಿಸಿ. ಇದಕ್ಕೆ ಹಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ. 
-ಸೋರೆಕಾಯಿ ಮೊಸರುಬಜ್ಜಿಯನ್ನು ಅನ್ನ, ಪಲಾವ್ ಅಥವಾ ಬಿರಿಯಾನಿ ಜೊತೆ ಸವಿಯಬಹುದು.