Crispy Moong Dal Vada: ಸಂಜೆ ಚಹಾ ಜೊತೆಗೆ ಗರಿಗರಿಯಾದ ವಡೆ ತಿನ್ನಬೇಕು ಅನ್ನಿಸಿದಾಗ, ಗ್ಯಾಸ್ಟ್ರಿಕ್ ಚಿಂತೆ ಇಲ್ಲದೆ ಆರಾಮವಾಗಿ ಸವಿಯಬಹುದಾದ ಬೆಸ್ಟ್ ಸ್ನ್ಯಾಕ್ಸ್ ‘ಹೆಸರುಬೇಳೆ ವಡೆ’. ಉದ್ದಿನ ವಡೆಗಿಂತಲೂ ಆರೋಗ್ಯಕರವಾದ ಈ ಕ್ರಿಸ್ಪಿ ವಡೆಯನ್ನು ಮನೆಯಲ್ಲೇ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ!

ಸಂಜೆಯ ಬಿಸಿ ಕಾಫಿ-ಟೀ ಜೊತೆಗೆ ಗರಿಗರಿಯಾದ ವಡೆ ತಿನ್ನಲು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಉದ್ದಿನ ವಡೆ ತಿಂದರೆ ಗ್ಯಾಸ್ಟ್ರಿಕ್ ಅಥವಾ ಹೊಟ್ಟೆ ಉಬ್ಬರವಾಗುವ ಭಯವಿರುತ್ತದೆ. ಅಂತಹವರು ಯಾವುದೇ ಅಜೀರ್ಣದ ಚಿಂತೆ ಇಲ್ಲದೆ ಸುಲಭವಾಗಿ ಜೀರ್ಣವಾಗುವ, ಪ್ರೋಟೀನ್ ಸಮೃದ್ಧ 'ಹೆಸರುಬೇಳೆ ವಡೆ'ಯನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು..

ಬೇಕಾಗುವ ಸಾಮಗ್ರಿಗಳು (Ingredients)

ಹೆಸರುಬೇಳೆ: 1 ಕಪ್ (200 ಗ್ರಾಂ)
ಅಕ್ಕಿ ಹಿಟ್ಟು: 3 ಚಮಚ (ವಡೆ ಗರಿಗರಿಯಾಗಿ ಬರಲು)
ಈರುಳ್ಳಿ: 1 (ಚಿಕ್ಕದಾಗಿ ಹೆಚ್ಚಿದ್ದು - 2 ಚಮಚ)
ಬೆಳ್ಳುಳ್ಳಿ: 4 ಎಸಳು
ಹಸಿಮೆಣಸಿನಕಾಯಿ: 2
ಒಣಮೆಣಸಿನಕಾಯಿ: 3
ಜೀರಿಗೆ: ಅರ್ಧ ಚಮಚ
ಕರಿಬೇವು: ಸ್ವಲ್ಪ
ಕೊತ್ತಂಬರಿ ಸೊಪ್ಪು: ಸ್ವಲ್ಪ (ಚಿಕ್ಕದಾಗಿ ಹೆಚ್ಚಿದ್ದು)
ಅರಿಶಿನ: ಕಾಲು ಚಮಚ
ಉಪ್ಪು: ರುಚಿಗೆ ತಕ್ಕಷ್ಟು
ಎಣ್ಣೆ: ಕರಿಯಲು ಬೇಕಾದಷ್ಟು

ಮಾಡುವ ಸುಲಭ ವಿಧಾನ (Step-by-Step Method)

*ಮೊದಲು ಹೆಸರುಬೇಳೆಯನ್ನು 2 ಬಾರಿ ಚೆನ್ನಾಗಿ ತೊಳೆದು, ನೀರು ಹಾಕಿ 2 ಗಂಟೆಗಳ ಕಾಲ ನೆನೆಯಲು ಬಿಡಿ. 2 ಗಂಟೆಯ ನಂತರ ನೀರನ್ನು ಸಂಪೂರ್ಣವಾಗಿ ಬಸಿದು ಪಕ್ಕಕ್ಕಿಡಿ.

*ಮಿಕ್ಸಿ ಜಾರಿಗೆ ಸಿಪ್ಪೆ ಸುಲಿದ ಬೆಳ್ಳುಳ್ಳಿ, ಜೀರಿಗೆ, ಕರಿಬೇವು, ಹಸಿಮೆಣಸಿನಕಾಯಿ ಮತ್ತು ಒಣಮೆಣಸಿನಕಾಯಿ ಹಾಕಿ ಮೊದಲು ತರಿತರಿಯಾಗಿ ಪುಡಿ ಮಾಡಿಕೊಳ್ಳಿ.

*ನೀರು ಬಸಿದಿಟ್ಟ ಹೆಸರುಬೇಳೆಯಿಂದ ಒಂದು ಹಿಡಿಯಷ್ಟು ಬೇಳೆಯನ್ನು ಪ್ರತ್ಯೇಕವಾಗಿ ಎತ್ತಿಡಿ. ಉಳಿದ ಬೇಳೆಯನ್ನು ಅದೇ ಮಿಕ್ಸಿ ಜಾರಿಗೆ ಹಾಕಿ, ನೀರು ಹಾಕದೆ ತರಿತರಿಯಾಗಿ ರುಬ್ಬಿಕೊಳ್ಳಿ (ತುಂಬಾ ನುಣ್ಣಗೆ ರುಬ್ಬಬೇಡಿ).

*ರುಬ್ಬಿದ ಮಿಶ್ರಣಕ್ಕೆ ಮೊದಲೇ ಎತ್ತಿಟ್ಟಿದ್ದ ಒಂದು ಹಿಡಿ ಹಸಿ ಹೆಸರುಬೇಳೆ, ಸಣ್ಣಗೆ ಹೆಚ್ಚಿದ ಈರುಳ್ಳಿ, ಅಕ್ಕಿ ಹಿಟ್ಟು, ಕೊತ್ತಂಬರಿ ಸೊಪ್ಪು, ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಿ.

*ಬಾಣಲೆಯಲ್ಲಿ ಎಣ್ಣೆ ಕಾಯಲು ಇಡಿ. ಎಣ್ಣೆ ಬಿಸಿಯಾದ ನಂತರ, ಕಲಸಿದ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ತೆಗೆದುಕೊಂಡು ಕೈಯಲ್ಲಿ ವಡೆಯಂತೆ ತಟ್ಟಿ ಎಣ್ಣೆಗೆ ಬಿಡಿ.

*ಮಧ್ಯಮ ಉರಿಯಲ್ಲಿ (Medium Flame) ಎರಡೂ ಬದಿ ಹೊಂಬಣ್ಣ ಬರುವವರೆಗೆ ಗರಿಗರಿಯಾಗಿ ಕರಿದು ತೆಗೆದರೆ, ಬಿಸಿಬಿಸಿಯಾದ ಗರಿಗರಿ ಹೆಸರುಬೇಳೆ ವಡೆ ಸವಿಯಲು ಸಿದ್ಧ!

ಆರೋಗ್ಯಕರ ಪ್ರಯೋಜನಗಳು

*ಉದ್ದಿನಬೇಳೆಗೆ ಹೋಲಿಸಿದರೆ ಹೆಸರುಬೇಳೆ ಹೊಟ್ಟೆಗೆ ತುಂಬಾ ಹಗುರ, ಗ್ಯಾಸ್ಟ್ರಿಕ್ ಅಥವಾ ಹೊಟ್ಟೆ ಉಬ್ಬರ ಉಂಟುಮಾಡುವುದಿಲ್ಲ.
*ಇದರಲ್ಲಿ ಪ್ರೋಟೀನ್ ಮತ್ತು ನಾರಿನಂಶ (Fiber) ಹೇರಳವಾಗಿದ್ದು, ಜೀರ್ಣಕ್ರಿಯೆಗೆ ಅತ್ಯಂತ ಸಹಕಾರಿ.
*ಹಿಟ್ಟಿಗೆ ಅಕ್ಕಿಹಿಟ್ಟು ಸೇರಿಸುವುದರಿಂದ ವಡೆ ಎಣ್ಣೆ ಹೀರದೆ, ದೀರ್ಘಕಾಲ ಗರಿಗರಿಯಾಗಿರುತ್ತದೆ.

ಪರ್ಫೆಕ್ಟ್ ಹೆಸರುಬೇಳೆ ವಡೆಗಾಗಿ ಕಿಚನ್ ಟಿಪ್ಸ್

*ಬೇಳೆಯನ್ನು ಬಸಿದ ನಂತರ, ರುಬ್ಬುವಾಗ ಒಂದು ಹನಿಯೂ ನೀರು ಸೇರಿಸಬೇಡಿ. ನೀರು ಹೆಚ್ಚಾದರೆ ಹಿಟ್ಟು ತೆಳುವಾಗಿ, ವಡೆಗಳು ಹೆಚ್ಚು ಎಣ್ಣೆ ಹೀರಿಕೊಳ್ಳುತ್ತವೆ.

*ಹಿಟ್ಟನ್ನು ನೈಸ್ ಆಗಿ ರುಬ್ಬಿದರೆ ವಡೆ ಗಟ್ಟಿಯಾಗುತ್ತದೆ ಅಥವಾ ಮೆತ್ತಗಾಗುತ್ತದೆ. ರವೆಗಿಂತ ಸ್ವಲ್ಪ ದಪ್ಪವಾಗಿ (ತರಿತರಿಯಾಗಿ) ರುಬ್ಬಿಕೊಂಡರೆ ವಡೆ ಕರುಂ-ಕುರುಂ ಎಂದು ಗರಿಗರಿಯಾಗಿ ಬರುತ್ತದೆ.

*ರುಬ್ಬುವ ಮುನ್ನ ಎತ್ತಿಟ್ಟುಕೊಂಡ ಒಂದು ಹಿಡಿ ಹಸಿ ಹೆಸರುಬೇಳೆಯನ್ನು ಕೊನೆಯಲ್ಲಿ ಹಿಟ್ಟಿಗೆ ಸೇರಿಸುವುದರಿಂದ, ವಡೆ ತಿನ್ನುವಾಗ ಬಾಯಿಗೆ ಸಿಗುವ ಆ ಬೇಳೆ ಕ್ರಿಸ್ಪಿ ರುಚಿಯನ್ನು ದುಪ್ಪಟ್ಟು ಮಾಡುತ್ತದೆ.

*ಹಿಟ್ಟಿಗೆ ಈರುಳ್ಳಿ ಮತ್ತು ಉಪ್ಪು ಸೇರಿಸಿದ ನಂತರ ಹೆಚ್ಚು ಹೊತ್ತು ಇಡಬೇಡಿ. ಈರುಳ್ಳಿಯಿಂದ ನೀರು ಬಿಟ್ಟುಕೊಂಡು ಹಿಟ್ಟು ತೆಳುವಾಗುತ್ತದೆ. ಹಾಗಾಗಿ ಹಿಟ್ಟು ಕಲಸಿದ ತಕ್ಷಣವೇ ವಡೆ ಕರಿಯಲು ಶುರುಮಾಡಿ.

*ಮಸಾಲೆ ರುಬ್ಬುವಾಗ ಒಂದು ಸಣ್ಣ ತುಂಡು ಶುಂಠಿ ಅಥವಾ ಹಿಟ್ಟಿಗೆ ಒಂದು ಚಿಟಿಕೆ ಇಂಗು (Hing) ಸೇರಿಸಿದರೆ, ವಡೆ ಘಮಘಮಿಸುವುದರ ಜೊತೆಗೆ ಹೊಟ್ಟೆಗೆ ಮತ್ತಷ್ಟು ಹಗುರವಾಗುತ್ತದೆ.

*ಉರಿ ತುಂಬಾ ಜಾಸ್ತಿಯಿದ್ದರೆ ವಡೆ ಹೊರಗಡೆ ಬೇಗ ಕಪ್ಪಾಗಿ ಒಳಗಡೆ ಹಸಿಯಾಗಿಯೇ ಉಳಿಯುತ್ತದೆ.

*ಉರಿ ಕಡಿಮೆಯಿದ್ದರೆ ವಡೆ ಎಣ್ಣೆ ಕುಡಿಯುತ್ತದೆ. ಹಾಗಾಗಿ ಮಧ್ಯಮ ಉರಿಯಲ್ಲಿ (Medium Flame) ಎರಡೂ ಕಡೆ ನಿಧಾನವಾಗಿ ಬೇಯಿಸಿ.

*ಅಕ್ಕಿ ಹಿಟ್ಟು ಇಲ್ಲದಿದ್ದರೆ ಅದರ ಬದಲಿಗೆ 2 ಚಮಚ ಚಿರೋಟಿ ರವೆ (ಬಾಂಬೆ ರವೆ) ಸೇರಿಸಬಹುದು. ಇದರಿಂದಲೂ ವಡೆ ಸೂಪರ್ ಕ್ರಿಸ್ಪಿಯಾಗಿ ಬರುತ್ತದೆ.