ಕಾಫಿ ಪ್ರೇಮಿಗಳಿಗೆ ಖುಷಿ ಸುದ್ದಿಯೊಂದಿದೆ. ಕಾಫಿಗೆ ಸಂಬಂಧಿಸಿದಂತೆ ನಡೆದ ಅಧ್ಯಯನವೊಂದರ ವರದಿ ಬಹಿರಂಗವಾಗಿದೆ. ಇದ್ರಲ್ಲಿ ಕಾಫಿಯಿಂದ ಏನೆಲ್ಲ ಲಾಭವಿದೆ ಎಂಬ ಮಹತ್ವದ ವಿಷ್ಯ ಹೊರಗೆ ಬಿದ್ದಿದೆ.

ಬೆಳಿಗ್ಗೆ ಎದ್ರೆ ಕಾಫಿ ಬೇಕು, ಸಂಜೆ ಮಲಗುವಾಗ ಕಾಫಿ ಬೇಕು ಎನ್ನುವ ಜನರು ನಮ್ಮಲ್ಲಿದ್ದಾರೆ. ಈ ಕಾಫಿ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವ ಮಾತೂ ಇದೆ. ಈ ಬಗ್ಗೆ ಅಧ್ಯಯನವೊಂದು ನಡೆದಿದೆ. 3.5 ಲಕ್ಷಕ್ಕೂ ಹೆಚ್ಚು ಜನರ ಆರೋಗ್ಯ ಮತ್ತು ಆಹಾರ ಪದ್ಧತಿಯನ್ನು ಸುಮಾರು 13 ವರ್ಷಗಳ ಕಾಲ ಗಮನಿಸಿದ ಅಧ್ಯಯನವೊಂದರಲ್ಲಿ, ನಿಯಮಿತವಾಗಿ ಕಾಫಿ ಕುಡಿಯುವುದರಿಂದ ಏನೆಲ್ಲ ಆಗುತ್ತೆ ಎನ್ನುವ ಮಾಹಿತಿ ಸಿಕ್ಕಿದೆ. ನಿತ್ಯ ಕಾಫಿ ಕುಡಿಯುವುದರಿಂದ ಲಿವರ್ಗೆ ಸಂಬಂಧಿಸಿದ ಕೆಲವು ಸಮಸ್ಯೆಗಳ ಅಪಾಯ ಕಡಿಮೆ ಕಂಡುಬಂದಿದೆ. ಈ ಅಧ್ಯಯನವನ್ನು ಗ್ಯಾಸ್ಟ್ರೋಎಂಟರಲಾಜಿಕಲ್ ಅಸೋಸಿಯೇಷನ್ನ (AGA) ಕ್ಲಿನಿಕಲ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ.

ಕಾಫಿ ಕುಡಿಯುವವರಲ್ಲಿ ಲಿವರ್ ಸಿರೋಸಿಸ್ ಕಡಿಮೆ?

ಅಧ್ಯಯನದಲ್ಲಿ ಸುಮಾರು 3,54,957 ಜನರ ಆರೋಗ್ಯ ಮತ್ತು ಆಹಾರ ಪದ್ಧತಿಯನ್ನು ಹಲವು ವರ್ಷಗಳ ಕಾಲ ಗಮನಿಸಲಾಯಿತು. ಕಾಫಿ ಕುಡಿಯದವರಿಗೆ ಹೋಲಿಸಿದರೆ, ನಿಯಮಿತವಾಗಿ ಕಾಫಿ ಕುಡಿಯುವವರಲ್ಲಿ ಲಿವರ್ ಸಿರೋಸಿಸ್ನ ಅಪಾಯ ಕಡಿಮೆ ಕಂಡುಬಂದಿದೆ. ಅಷ್ಟೇ ಅಲ್ಲದೆ, ಗಂಭೀರವಾದ ಲಿವರ್ ಕ್ಯಾನ್ಸರ್ನ ಒಂದು ವಿಧವಾದ ಹೆಪಟೋಸೆಲ್ಯುಲರ್ ಕಾರ್ಸಿನೋಮಾ (HCC) ಮತ್ತು ಲಿವರ್ಗೆ ಸಂಬಂಧಿಸಿದ ಸಾವಿನ ಪ್ರಮಾಣದಲ್ಲಿಯೂ ಇಳಿಕೆ ಕಂಡುಬಂದಿದೆ ಎಂದು ಸಂಶೋಧಕರು ಗಮನಿಸಿದ್ದಾರೆ.

ಲಿವರ್ನಲ್ಲಿ ಕೊಬ್ಬು ಮತ್ತು ಉರಿಯೂತವೂ ಕಡಿಮೆ?

ಅಧ್ಯಯನದಲ್ಲಿ ಭಾಗವಹಿಸಿದ್ದವರ ಲಿವರ್ ಅನ್ನು ಎಂಆರ್‌ ಐ ಮೂಲಕ ಪರಿಶೀಲಿಸಿದಾಗ, ಕಾಫಿ ಸೇವನೆಯೊಂದಿಗೆ ಲಿವರ್ನಲ್ಲಿ ಸಂಗ್ರಹವಾಗುವ ಕೊಬ್ಬು, ಒಳಗಿನ ಉರಿಯೂತ ಮತ್ತು ಫೈಬ್ರೋಸಿಸ್ ಕಡಿಮೆ ಇರುವ ಸಂಬಂಧ ಕಂಡುಬಂದಿದೆ. ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ, ಈ ಸಂಬಂಧ ಸಾಮಾನ್ಯ ಕ್ಯಾಫೀನ್ ಇರುವ ಕಾಫಿಯಲ್ಲಿ ಮಾತ್ರವಲ್ಲದೆ ಡಿಕ್ಯಾಫ್ ಕಾಫಿಯಲ್ಲಿಯೂ ಕಂಡುಬಂದಿದೆ. ಹೀಗಾಗಿ ಕಾಫಿಯಲ್ಲಿರುವ ಕ್ಯಾಫೀನ್ ಮಾತ್ರವಲ್ಲದೆ, ಕಾಫಿ ಬೀನ್ಗಳಲ್ಲಿ ಇರುವ ಕೆಲವು ಆ್ಯಂಟಿಆಕ್ಸಿಡೆಂಟ್ಗಳು ಕೂಡ ಇದಕ್ಕೆ ಕಾರಣವಾಗಿರಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ.

ದಿನಕ್ಕೆ ಎಷ್ಟು ಕಾಫಿ ಕುಡಿಯಬಹುದು?

ಅಧ್ಯಯನದ ಪ್ರಕಾರ ಕಾಫಿಯ ಪ್ರಮಾಣ ಪ್ರತಿಯೊಬ್ಬರಿಗೂ ಒಂದೇ ರೀತಿ ಇರಬೇಕೆಂದಿಲ್ಲ. ಸಾಮಾನ್ಯವಾಗಿ ಹೆಚ್ಚಿನ ವಯಸ್ಕರಿಗೆ ದಿನಕ್ಕೆ 2ರಿಂದ 3 ಕಪ್ ಕಾಫಿ ಮಿತವಾದ ಪ್ರಮಾಣವಾಗಿದೆ. ಆದರೆ ದಿನಕ್ಕೆ ಒಟ್ಟು ಕ್ಯಾಫೀನ್ ಸೇವನೆ 400 ಮಿಲಿಗ್ರಾಂ ಮೀರದಂತೆ ನೋಡಿಕೊಳ್ಳುವುದು ಮುಖ್ಯ. ಹೆಚ್ಚು ಕಾಫಿ ಕುಡಿಯುವುದರಿಂದ ಹೃದಯ ಬಡಿತ ಹೆಚ್ಚಾಗುವುದು, ನಿದ್ರೆಗೆ ತೊಂದರೆಯಾಗುವುದು ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು.

ಕಾಫಿ ಕುಡಿದರೆ ಕ್ಯಾನ್ಸರ್ ಬರುವುದಿಲ್ಲ ಎಂದರ್ಥವೇ?

ಇಲ್ಲ. ಇದು ಒಂದು ಆಬ್ಸರ್ವೇಷನಲ್ ಸ್ಟಡಿ ಆಗಿರುವುದರಿಂದ, ಕಾಫಿ ಕುಡಿಯುವುದೇ ಲಿವರ್ ಕ್ಯಾನ್ಸರ್ ಅಥವಾ ಸಿರೋಸಿಸ್ ತಡೆಯುತ್ತದೆ ಎಂದು ನೇರವಾಗಿ ಹೇಳಲು ಸಾಧ್ಯವಿಲ್ಲ. ಕಾಫಿ ಸೇವನೆ ಮತ್ತು ಲಿವರ್ ಆರೋಗ್ಯದ ನಡುವೆ ಸಂಬಂಧ ಕಂಡುಬಂದಿದೆ ಎಂಬುದನ್ನು ಮಾತ್ರ ಈ ಅಧ್ಯಯನ ಸೂಚಿಸುತ್ತದೆ. ಅಲ್ಲದೆ ಕಾಫಿ ಕುಡಿಯದವರು ಕಾಫಿ ಕುಡಿಯೋದನ್ನು ಶುರು ಮಾಡ್ಬೇಕು ಎಂಬುದು ಇದರ ಅರ್ಥವಲ್ಲ. ಕಾಫಿಯನ್ನು ಮಿತವಾಗಿ ಸೇವಿಸುವುದು ಕೆಲವರಿಗೆ ಲಿವರ್ ಆರೋಗ್ಯದ ದೃಷ್ಟಿಯಿಂದ ಪ್ರಯೋಜನಕಾರಿಯಾಗಿರಬಹುದು. ಆದರೆ ಕಾಫಿಯನ್ನು ಯಾವುದೇ ಕಾಯಿಲೆಗೆ ಚಿಕಿತ್ಸೆಯಾಗಿ ಪರಿಗಣಿಸಬಾರದು.