ಜೀ ಕನ್ನಡದ ಕಿಚನ್​ ಕಾರ್ಯಕ್ರಮದಲ್ಲಿ ಗಟ್ಟಿಮೇಳ ದಂಪತಿ ವೈದೇಹಿ-ಸೂರ್ಯನಾರಾಯಣ ಹಾಗೂ ನಟರಾದ ಚಿಕ್ಕಣ್ಣ- ಮಲೈಕಾ ಮಾಡಿದ್ದಾರೆ ಟೇಸ್ಟಿ ಟೇಸ್ಟಿ ಅಡುಗೆ...  

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಕಿಚನ್​ ಕಾರ್ಯಕ್ರಮದಲ್ಲಿ ಇದಾಗಲೇ ಹಲವು ಕಿರುತೆರೆ ಜೋಡಿಗಳು ಅಡುಗೆ ಮನೆಗೆ ಬಂದಿದ್ದು, ಹಲವಾರು ರೀತಿಯ ಭಕ್ಷ್ಯಗಳನ್ನು ಮಾಡಿ ತೋರಿಸಿದ್ದಾರೆ. ಇದೀಗ ಗಟ್ಟಿಮೇಳ ಸೀರಿಯಲ್​ನ ವೈದೇಹಿ ಮತ್ತು ಸೂರ್ಯನಾರಾಯಣ ಜೋಡಿ ಹಾಗೂ ಉಪಾಧ್ಯಕ್ಷ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿರುವ ಲೀಲಾ ಅಂದ್ರೆ ಮಲೈಕಾ ಹಾಗೂ ಈ ಚಿತ್ರದಲ್ಲಿ ನಾಯಕನಾಗಿ ಮಿಂಚುತ್ತಿರುವ ಚಿಕ್ಕಣ್ಣ ಜೋಡಿ ಕಿಚನ್ ಕಾರ್ಯಕ್ರಮಕ್ಕೆ ಕಾಲಿಟ್ಟಿದೆ. ಈ ಕುರಿತು ಪ್ರೊಮೋವನ್ನು ಜೀ ಕನ್ನಡ ವಾಹಿತಿ ಬಿಡುಗಡೆ ಮಾಡಿದೆ. 

ಗಟ್ಟಿಮೇಳ ಸೀರಿಯಲ್​ನಲ್ಲಿ ವೈದೇಹಿ ಮತ್ತು ಸೂರ್ಯನಾರಾಯಣ ದಂಪತಿ ಇನ್ನೂ ಒಂದಾಗಲಿಲ್ಲ. ಮನೆಯೊಡತಿಯಾಗಿದ್ದರೂ ತಂಗಿಯ ಕುತಂತ್ರದಿಂದ ತನ್ನದೇ ಮನೆಯಲ್ಲಿ ಕೆಲಸದಾಕೆಯಾಗಿ ಸೇರಿಕೊಂಡಿದ್ದ ವೈದೇಹಿಯ ನಿಜಾಂಶ ಈಗಷ್ಟೇ ಮನೆಯವರಿಗೆ ತಿಳಿದಿದೆ. ಇನ್ನೇನು ಗಟ್ಟಿಮೇಳ ಧಾರಾವಾಹಿ ಮುಗಿದೇ ಹೋಯ್ತು ಎನ್ನುವಷ್ಟರಲ್ಲಿಯೇ ಇನ್ನೊಂದಿಷ್ಟು ಟ್ವಿಸ್ಟ್​ಗಳನ್ನು ಸೀರಿಯಲ್​ಗೆ ಸೇರಿಸಲಾಗಿದೆ. ಸೂರ್ಯನಾರಾಯಣ ಕಿಡ್​ನ್ಯಾಪ್​ ಆಗಿದ್ದು ಇನ್ನೂ ಪತ್ತೆಯಾಗಿಲ್ಲ. ಸುಮಾರು 20-25 ವರ್ಷಗಳಿಂದ ದೂರವಾಗಿರುವ ಈ ದಂಪತಿ ಯಾವಾಗ ಒಂದಾಗುತ್ತಾರೋ ಎಂದು ಫ್ಯಾನ್ಸ್​ ಕಾದಿರುವ ನಡುವೆಯೇ, ಕಿಚನ್​ ಕಾರ್ಯಕ್ರಮದಲ್ಲಿ ಸೀರಿಯಲ್​ ದಂಪತಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ವೈದೇಹಿ ಅವರು ಸೀಗಡಿ ಬೆಳ್ಳುಳ್ಳಿ ಫ್ರೈ ಮಾಡಿರುವುದಾಗಿ ಪ್ರೊಮೋದಲ್ಲಿ ತಿಳಿಸಲಾಗಿದೆ.

ನುಗ್ಗೆ ಸೊಪ್ಪಿನ ಟೇಸ್ಟಿ, ಆರೋಗ್ಯಕರ ಸೂಪ್​ ಮಾಡೋದನ್ನ ನಟಿ ಅದಿತಿ ಹೇಳಿಕೊಟ್ಟಿದ್ದಾರೆ ನೋಡಿ...

View post on Instagram

ಅದೇ ಇನ್ನೊಂದೆಡೆ, ಹಾಸ್ಯನಟನಾಗಿ ಗುರುತಿಸಿಕೊಂಡಿರುವ ಚಿಕ್ಕಣ್ಣ ಅವರು ನಾಯಕರಾಗಿ ಉಪಾಧ್ಯಕ್ಷ ಚಿತ್ರದಲ್ಲಿ ಮಿಂಚುತ್ತಿದ್ದಾರೆ. ಇದೇ ಮೊದಲ ಬಾರಿಗೆ ಅವರು ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಇವರಿಗೆ ಹಿಟ್ಲರ್​ ಕಲ್ಯಾಣದ ನಾಯಕಿ ಎಡವಟ್ಟು ಲೀಲಾ ಎಂದೇ ಫೇಮಸ್​ ಆಗಿರೋ ಮಲೈಕಾ ವಸುಪಾಲ್​ ನಾಯಕಿಯಾಗಿ ನಟಿಸುತ್ತಿದ್ದಾರೆ. 'ರಾಬರ್ಟ್', 'ಹೆಬ್ಬುಲಿ', 'ಒಂದಲ್ಲಾ ಎರಡಲ್ಲಾ', 'ಮದಗಜ' ಸಿನಿಮಾಗಳನ್ನು ನಿರ್ಮಿಸಿರುವ ಉಮಾಪತಿ ಶ್ರೀನಿವಾಸ್ ಗೌಡ 'ಉಪಾಧ್ಯಕ್ಷ' ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಅನಿಲ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಸಾಧು ಕೋಕಿಲ, ವೀಣಾ ಸುಂದರ್, ರವಿಶಂಕರ್ ಮುಂತಾದವರು ಚಿತ್ರದಲ್ಲಿದ್ದಾರೆ. 2014ರಲ್ಲಿ ರಿಲೀಸ್ ಆದ ‘ಅಧ್ಯಕ್ಷ’ ಚಿತ್ರದ ಮುಂದುವರಿದ ಭಾಗವಿದು. ಇತ್ತೀಚೆಗಷ್ಟೆ ದುನಿಯಾ ವಿಜಯ್, ‘ನೆನಪಿರಲಿ’ ಪ್ರೇಮ್, ಅಭಿಷೇಕ್ ಅಂಬರೀಶ್, ಧನ್ವೀರ್, ಪ್ರಥಮ್ ಹಾಗೂ ಅದಿತಿ ಪ್ರಭುದೇವ ಚಿತ್ರದ ಟೀಸರ್ ರಿಲೀಸ್ ಮಾಡಿ ‘ಉಪಾಧ್ಯಕ್ಷ’ನಿಗೆ ಶುಭಹಾರೈಸಿದ್ದರು.

ಇನ್ನು ಗಟ್ಟಿಮೇಳದ ವೈದೇಹಿ ಅವರ ನಿಜವಾದ ಹೆಸರು ಸ್ವಾತಿ. ಸ್ವಾತಿ ನೂರಾರು ಧಾರಾವಾಹಿಗಳಲ್ಲಿ ನಟಿಸಿದ್ದು, ಮೊದಲು ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈಗ ತಾಯಿ ಪಾತ್ರದಲ್ಲಿ ನಟಿಸುತ್ತಿರುವ ಸ್ವಾತಿಯವರು ನೋಡುವುದಕ್ಕೆ ಈಗಲೂ ಅಂದಿನಂತೆಯೇ ಕಾಣುತ್ತಾರೆ. ಈಗಲೂ ಅದೇ ಸೌಂದರ್ಯವನ್ನು ಮೇಂಟೈನ್ ಮಾಡುತ್ತಿದ್ದಾರೆ. 'ಮನೆತನ' ಧಾರಾವಾಹಿಯಲ್ಲಿ ಪೂಜಾ ಎಂಬ ನಾಯಕಿ ಪಾತ್ರದಲ್ಲಿ ಸ್ವಾತಿ ನಟಿಸಿದ್ದರು. ಇದಾದ ಬಳಿಕ ಜನನಿ, ಹುಲಿವಾನ್ ಚಂದ್ರಶೇಖರ ಅವರ ನಿರ್ದೇಶನದ 'ಮಲೆಗಳಲ್ಲಿ ಮದುಮಗಳು' ಧಾರಾವಾಹಿಯಲ್ಲಿಯೂ ಮಿಂಚಿದರು. ನಂತರ ಧನಲಕ್ಷ್ಮೀ, ಸುಮಂಗಲಿ, ಮೋಹನ್ ಮಾಡಿದ ಮರ್ಡರ್, ಪಿ. ಶೇಷಾದ್ರಿ ಅವರ ಪ್ರಿಯಾ, ಟಿ ಎನ್ ಸೀತಾರಾಮ್ ಅವರ ಪತ್ತೇದಾರಿ ಪ್ರಭಾಕರ್, ಭಾರ್ಗವ ಅವರ ಉಯ್ಯಾಲೆ ಸೇರಿದಂತೆ ಹತ್ತಾರು ಧಾರಾವಾಹಿಗಳಿಂದ ಮನೆಮಾತಾಗಿದ್ದಾರೆ. ಕಿರುತೆರೆಯಲ್ಲಿ ರವಿಚಂದ್ರನ್ ಎಂದೇ ಖ್ಯಾತರಾಗಿರುವ ನಟ-ನಿರ್ದೇಶಕ ರವಿಕಿರಣ್ ಅವರು ಈ ಸೀರಿಯಲ್​ನಲ್ಲಿ ಸೂರ್ಯನಾರಾಯಣ ವಶಿಷ್ಠ ಪಾತ್ರ ನಿರ್ವಹಿಸುತ್ತಿದ್ದಾರೆ. 

View post on Instagram