ಏನೋ ಮಾಡಲು ಹೋಗಿ ಮತ್ತೇನೋ ಆಗಿ ಜನ್ಮ ಪಡೆದ ತಿಂಡಿಗಳ ಕತೆ
ಈಗೆಲ್ಲ ಹೊಸರುಚಿ ಕಂಡುಹಿಡಿಯುವುದು ಬಹುತೇಕರ ಹವ್ಯಾಸ. ಇರುವ ತಿಂಡಿಗೇ ಯಾವುದೋ ಒಂದು ಪದಾರ್ಥವನ್ನು ಸೇರಿಸಿಯೋ, ಸೇರಿಸದೆಯೋ ಹೊಸರುಚಿ ತಯಾರಿಸಿ ಅದಕ್ಕೊಂದು ಸ್ಟೈಲಿಶ್ ಆದ ಹೆಸರಿಟ್ಟು ತಮ್ಮದೇ ಪ್ರಯೋಗ ಎಂದು ಹೇಳಿಕೊಳ್ಳುವವರು ಹಲವರು. ಹಾಗಂಥ ಹಾಗೆ ಪ್ರಯೋಗದಿಂದ ಬಂದ ತಿಂಡಿಗಲೆಲ್ಲ ಜನಪ್ರಿಯವಾಗುವುದಿಲ್ಲ ಬಿಡಿ. ಆದರೆ, ಏನೋ ಮಾಡಲು ಹೋಗಿ ಕೆಲ ಆಹಾರಗಳ ಸೃಷ್ಟಿಯಾಗಿ ಅವು ಜಗದ್ವಿಖ್ಯಾತವಾದಂಥವುಗಳ ಬಗ್ಗೆ ಇಲ್ಲಿ ನೀಡಲಾಗಿದೆ.
ಜೀವನದಲ್ಲಿ ಏನಾದರೂ ಕಂಡು ಹಿಡಿಯಲು ಹೊರಟವರು ಹಲವಾರು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಐನ್‌ಸ್ಟೀನ್ ಹಾಗೂ ಎಡಿಸನ್ ಕತೆಯನ್ನೇ ನೋಡಿ, ಒಂದು ಗೆಲುವು ಕಾಣುವ ಮುನ್ನ ಅವರೆಷ್ಟು ಬಾರಿ ಸೋತಿದ್ದಾರೆಂಬುದು ಹಲವರಿಗೆ ಪ್ರೇರಣೆ ನೀಡುವ ಕತೆ. ಆದರೆ, ಎಲ್ಲ ಪ್ರಯೋಗಗಳೂ ಲೈಟ್ ಬಲ್ಬ್ ಹೊತ್ತಿಸಲು ಸಾವಿರಾರು ಬಾರಿ ಪ್ರಯೋಗಿಸಿದಷ್ಟು ಕಷ್ಟಕರವಲ್ಲ. ಈ ಗ್ರಹದ ಮೇಲೆ ಉಳಿದೆಲ್ಲವಂತೆಯೇ ಆಹಾರ ವೈವಿಧ್ಯಗಳನ್ನು ಕೂಡಾ ಪ್ರಯೋಗಗಳಿಂದಲೇ ಕಂಡುಕೊಂಡಿದ್ದೇವೆ. ಪ್ರತಿ ದಿನ ಹೊಸ ಹೊಸ ಆಹಾರ ಪದಾರ್ಥಗಳು, ಹೊಸರುಚಿಯ ಹುಡುಕಾಟವಾಗುತ್ತಲೇ ಇರುತ್ತದೆ. ಹೀಗೆ ಹೊಸ ರುಚಿಯ ಹುಡುಕಾಟದಲ್ಲಿ ಹಲವು ತಪ್ಪುಗಳಾಗುವುದು ಸಹಜ. ಆದರೆ, ಆ ತಪ್ಪುಗಳೇ ಚಮತ್ಕಾರ ಮಾಡಿ, ಅವನ್ನೇ ಜನ ಅದ್ಬುತ ಎಂದು ಹೊಗಳಿದ ಕೆಲವು ಉದಾಹರಣೆಗಳು ಇಲ್ಲಿವೆ.
ದಿನಾ ಒಂದ್ ಲೋಟ ರಸಂ ಕುಡೀರಿ, ರೋಗಕ್ಕೆ ಗುಡ್ ಬೈ ಹೇಳಿ......
ಆಲೂಗಡ್ಡೆ ಚಿಪ್ಸ್
ಕೆಲವೊಮ್ಮೆ ಮಿಸ್ಟೇಕ್‌ಗಳಿಗೂ ಥ್ಯಾಂಕ್ಸ್ ಹೇಳಲೇಬೇಕೆನಿಸುತ್ತದೆ. ಓರ್ವ ಗ್ರಾಹಕನ ಮೆಚ್ಚಿಸಲು ಆ ಬಾಣಸಿಗ ಹಟಕ್ಕೆ ಬೀಳದಿದ್ದಲ್ಲಿ ಇಂದು ನಾವು ಆಲೂಗಡ್ಡೆ ಚಿಪ್ಸ್‌ನಂಥ ಬಲುರುಚಿಯ ಕುರುಕಲನ್ನು ಸವಿಯಲು ಸಾಧ್ಯವಾಗುತ್ತಿರಲಿಲ್ಲ. ಜಾರ್ಜ್ ಕ್ರಮ್ ಎಂಬಾತ 1853ರಲ್ಲಿ ಆಲೂ ಚಿಪ್ಸನ್ನು ಕಂಡುಹಿಡಿದ. ಮೂನ್ ಲೇಕ್ ಎಂಬ ಲಾಡ್ಜ್‌ನಲ್ಲಿ ಹೆಡ್ ಕುಕ್ ಆಗಿದ್ದ ಕ್ರಮ್. ಫ್ರೈಡ್ ತಿಂಡಿಗಳಿಗೇ ಜನಪ್ರಿಯವಾಗಿದ್ದ ಈ ರೆಸ್ಟೋರೆಂಟ್‌ನಲ್ಲಿ ಒಮ್ಮೆ ಬಂದ ಗ್ರಾಹಕನೊಬ್ಬ ಫ್ರೈಸ್ ಬಹಳ ದಪ್ಪಗಿವೆ ಎಂದು ದೂರಿದ. ಆತನನ್ನು ಮೆಚ್ಚಿಸಲು ಕ್ರಮ್ ಫ್ರೈಸನ್ನು ಸ್ವಲ್ಪ ತೆಳ್ಳಗೆ ಮಾಡಿ ಕರಿದು ಕೊಟ್ಟ. ಆಗ ಕೂಡಾ ಗ್ರಾಹಕನಿಗೆ ಸಮಾಧಾನವಾಗಲಿಲ್ಲ. ತನ್ನ ಇಗೋಗೆ ಪೆಟ್ಟು ಬಿದ್ದಂತಾದ್ದರಿಂದ ಕ್ರಮ್ ಬಹಳ ತೆಳ್ಳಗೆ ಆಲೂಗಡ್ಡೆಗಳನ್ನು ಹೆಚ್ಚಿಕೊಂಡು ಕರಿದ ನೋಡಿ... ಇದನ್ನು ಕೇವಲ ಆ ಗ್ರಾಹಕ ಮಾತ್ರ ಮೆಚ್ಚಿದ್ದಲ್ಲ, ಜಗತ್ತೇ ಮೆಚ್ಚಿ ಕೊಂಡಾಡುತ್ತಿದೆ.
ಕೋಕ ಕೋಲಾ
ತನ್ನ ಕೋಕೇನ್ ಚಟಕ್ಕೆ ಬದಲಿಯಾಗಿ ಏನಾದರೂ ಕಂಡುಕೊಳ್ಳಬೇಕೆಂದು ಪ್ರಯೋಗ ನಡೆಸುತ್ತಿದ್ದ ಜಾನ್ ಪೆಂಬರ್ಟನ್ ಎಂಬಾತ ತನ್ನ ಪಾರಮಸಿಯಲ್ಲಿ ಸ್ವಲ್ಪ ಕೋಕೇನ್ ಜತೆಗೆ ಕೆಫಿನ್ ತುಂಬಿದ ಕೋಲಾ ನಟ್ ಬಳಸಿ ಟಾನಿಕ್ ಒಂದನ್ನು ಸೃಷ್ಟಿಸಿದ. ಇದನ್ನು ಮತ್ತೊಬ್ಬ ಫಾರ್ಮಾಸಿಸ್ಟ್ ಅಸಾ ಕ್ಯಾಂಡ್ಲೆರ್ ಎಂಬಾತ 2300 ಡಾಲರ್‌ಗೆ ಖರೀದಿಸಿ, ಇದರಲ್ಲಿ ಗುಳ್ಳೆಗಳು ಕಾಣುವಂತೆ ಮಾಡಲು ಸೋಡಾ ಬೆರೆಸಿದ. ಆ ನಂತರದಲ್ಲಿ ಕೋಕಾ ಕೋಲಾ ಎಂಬುದು ಅಮೆರಿಕದಲ್ಲಿ ಅತ್ಯಂತ ಖ್ಯಾತಿ ಪಡೆದ ಪೇಯ.
ವಿದೇಶಿ ಧಾನ್ಯಗಳಿಗೇಕೆ ಮಾಡುವಿರಿ ಹಣ ವೇಸ್ಟ್? ಸ್ಥಳೀಯ ಧಾನ್ಯಗಳೇ ಬೆಸ್ಟ್...
ಪಾಪ್ಸಿಕಲ್ಸ್(ಐಸ್ಕ್ಯಾಂಡಿ)
1905ರಲ್ಲಿ 11 ವರ್ಷದ ಹುಡುಗನಬ್ಬ ಇದನ್ನು ಕಂಡುಹಿಡಿದ ಎಂದರೆ ಆಶ್ಚರ್ಯವಾಗುತ್ತದೆ. ಮಕ್ಕಳ ನೆಚ್ಚಿನ ಪಾಪ್ಸಿಕಲ್ಸ್ ಹುಟ್ಟಿದ ಕತೆ ಹೀಗಿದೆ. ಫ್ರಾಂಕ್ ಎಪ್ಪರ್‌ಸನ್ ಎಂಬಾತ ಸೋಡಾ ತಯಾರಿಸುವ ಉಪಕರಣವನ್ನು ಅದನ್ನು ಮಿಕ್ಸ್ ಮಾಡುವ ಕಡ್ಡಿಯೊಂದಿಗೆ ರಾತ್ರಿಯಿಡೀ ತನ್ನ ಕೋಣೆಯಲ್ಲಿ ಬಿಟ್ಟಿದ್ದ. ಬೆಳಗ್ಗೆಯೆದ್ದು ನೋಡುವಾಗ ಅವನಿಗೊಂದು ರುಚಿಯಾದ ಸರ್ಪ್ರೈಸ್ ಕಾದಿತ್ತು. ಮಂಜಿನ ವಾತಾವರಣವಿದ್ದ ಕಾರಣ ಅಲ್ಲಿ ಸ್ಟಿಕ್‌ಗೆ ಅಂಟಿಕೊಂಡ ಐಸ್ ಪದಾರ್ಥವೊಂದು ಕುಳಿತಿತ್ತು. 17 ವರ್ಷಗಳ ಬಳಿಕ ಆತ ಅದಕ್ಕೆ ಬೇರೆ ಬೇರೆ ಫ್ಲೇವರ್ಸ್ ಹಾಗೂ ಬಣ್ಣ ಸೇರಿಸಿ ಮಾರಾಟ ಮಾಡತೊಡಗಿದ. ರಾತ್ರೋರಾತ್ರಿ ಪಾಪ್ಸಿಕಲ್ಸ್ ಎಂಬುದು ಜನಪ್ರಿಯತೆ ಪಡೆಯಿತು.
ಶಾಂಪೇನ್
ಅತಿ ಹೆಚ್ಚು ಸೇವಿಸಲ್ಪಡುವ ಈ ಪಾನೀಯದ ಸೃಷ್ಟಿಕರ್ತನ ಬಗ್ಗೆ ತಿಳಿದಿಲ್ಲವಾದರೂ ಶಾಂಪೇನ್ ಎಂಬುದು 1490ರಲ್ಲಿ ಹುಟ್ಟಿತು ಎಂಬುದಕ್ಕೆ ಸಾಕ್ಷ್ಯಗಳಿವೆ. ಶಾಂಪೇನ್ ಎಂಬ ಪ್ರದೇಶದ ವೈನ್‌ನಿಂದ ಇದನ್ನು ತಯಾರಿಸಲಾಗಿದೆ. ವೈನ್ ಫರ್ಮೆಂಟ್ ಆಗುವಾಗ ಅದರಲ್ಲಿ ಒಂದು ದಿನ ಇದ್ದಕ್ಕಿದ್ದಂತೆ ಸಿಕ್ಕಾಪಟ್ಟೆ ಗುಳ್ಳೆಗಳೇಳಲು ಆರಂಭಿಸಿತು. ಇದು ಎಲ್ಲೋ ಹದ ತಪ್ಪಿದೆ ಎಂದು ವೈನ್ ತಯಾರಕರು ಅಂದುಕೊಂಡರು. ಆದರೆ ಶಾಂಪೇನ್ ಪ್ರದೇಶದ ಉಷ್ಣತೆ ಹೆಚ್ಚಿದ್ದ ಕಾರಣ ಹುದುಗುವ ವಿಧಾನದಲ್ಲಿ ಅದು ಬಹು ಬೇಗ ವೈನ್‌ನಲ್ಲಿ ಬಬಲ್ ಬರುವಂತೆ ಮಾಡುತ್ತಿತ್ತು. ಕಡೆಗೆ ಈ ಬಬಲ್ ಎಷ್ಟೊಂದು ವೇಗದಲ್ಲಿ ಬೆಳೆಯತೊಡಗಿತೆಂದರೆ, ಬಾಟಲ್ ಮುಚ್ಚಳವನ್ನೇ ಹಾರಿಸಿಕೊಂಡು ಹೋಗಿ, ನಂತರ ಬಾಟಲಿಯನ್ನೇ ಸ್ಫೋಟಗೊಳಿಸುವಷ್ಟು. ತದನಂತರದಲ್ಲಿ ಒಂದು ಮಟ್ಟಕ್ಕೆ ತಾಪಮಾನ ನಿಯಂತ್ರಿಸಲು ಕಲಿತ ವೈನ್ ತಯಾರಕರು ಶಾಂಪೇನ್ ಎಂಬ ಉತ್ಪನ್ನದ ಸೃಷ್ಟಿಗೆ ಕಾರಣರಾದರು.
ಕೆಲಾಗ್ಸ್ ಕಾರ್ನ್ ಫ್ಲೇಕ್ಸ್
ವಿಲ್ ಕೆಲಾಗ್ ಎಂಬಾಂತ 1900ರ ಆರಂಭದ ಸಮಯದಲ್ಲಿ ಕಾರ್ನ್ ಫ್ಲೇಕ್ಸ್ ಕಂಡುಹಿಡಿದ. ತಮ್ಮ ರೋಗಿಗಳಿಗಾಗಿ ಆರೋಗ್ಯಕರವಾದ ಆಹಾರವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಗೋಧಿಯಿಂದ ಕಾರ್ನ್ ಫ್ಲೇಕ್ಸ್ ಸೃಷ್ಟಿಯಾಯಿತು. ಈಗ ಕಾರ್ನ್ ಫ್ಲೇಕ್ಸ್ ಎಂಬುದು ಬಹುಜನಪ್ರಿಯ ಬೆಳಗಿನ ತಿಂಡಿಯಾಗಿದೆ.