ಮನೆಯಲ್ಲೇ ರುಚಿಕರ ಮೀನು ಫ್ರೈಡ್ ರೈಸ್ ಮಾಡುವುದು ಸುಲಭ. ಮೀನನ್ನು ಮಸಾಲೆ ಹಾಕಿ ಹುರಿದುಕೊಳ್ಳಿ. ನಂತರ, ಅನ್ನವನ್ನು 80% ಬೇಯಿಸಿ ತಣ್ಣಗಾಗಲು ಬಿಡಿ. ಬಾಣಲೆಯಲ್ಲಿ ತರಕಾರಿಗಳನ್ನು ಹುರಿದು, ಮೊಟ್ಟೆ, ಅನ್ನ, ಸೋಯಾ ಸಾಸ್, ಕರಿಮೆಣಸು, ಮತ್ತು ಹುರಿದ ಮೀನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಿಸಿ ಚೀಲ್ಲಿ ಸಾಸ್ ಜೊತೆ ಸವಿಯಲು ನೀಡಿ.

ನೀವು ಮೀನನ್ನು ಸಾರು ಮಾಡಿ, ಹುರಿದು ತಿಂದಿರುತ್ತೀರಿ. ಕೆಲವು ಮೀನುಗಳನ್ನು ತೊಕ್ಕಾಗಿ ಕೂಡಾ ಮಾಡಿ ತಿಂದಿರುತ್ತೀರಿ. ಆದರೆ ಮೀನಿನಲ್ಲಿ ಫ್ರೈಡ್ ರೈಸ್ ಮಾಡಿ ತಿಂದಿದ್ದೀರಾ? ಅದರಲ್ಲಿಯೂ ರುಚಿಕರವಾದ ಮಸಾಲೆಗಳನ್ನು ಸೇರಿಸಿ ಮಾಡಿದರೆ ಅದರ ರುಚಿಯೇ ಬೇರೆ ಆಗಿರುತ್ತದೆ. ಒಮ್ಮೆ ಇದನ್ನು ತಿಂದರೆ ಮತ್ತೆ ಬಿಡಲು ಸಾಧ್ಯವೇ ಇಲ್ಲ. ಮನೆಯಲ್ಲೇ ರುಚಿಕರವಾದ ಮೀನು ಫ್ರೈಡ್ ರೈಸ್ ಮಾಡುವುದು ಹೇಗೆ ಎಂದು ತಿಳಿದುಕೊಂಡು ನೀವೂ ಟ್ರೈ ಮಾಡಿ ನೋಡಿ.

ಬೇಕಾಗುವ ಪದಾರ್ಥಗಳು:
ಮೀನಿನ ಮಸಾಲಾ ತಯಾರಿಸಲು ಬೇಕಾಗುವ ಪದಾರ್ಥಗಳು:

ಮೀನು (ನಿಮ್ಮ ಆಯ್ಕೆಯ ಮೀನು) – 200 ಗ್ರಾಂ
ಉಪ್ಪು – ರುಚಿಗೆ ತಕ್ಕಷ್ಟು
ಮೆಣಸಿನ ಪುಡಿ – 1 ಟೀಸ್ಪೂನ್
ನಿಂಬೆ ರಸ – 1 ಟೀಸ್ಪೂನ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಮೈದಾ / ಅಕ್ಕಿ ಹಿಟ್ಟು – 1 ಟೇಬಲ್ಸ್ಪೂನ್ (ಕ್ರಿಸ್ಪಿಯಾಗಿ ಹುರಿಯಲು)
ಎಣ್ಣೆ – ಕರಿಯಲು ಬೇಕಾದಷ್ಟು

ರಂಜಾನ್‌ ಉಪವಾಸದ ಬಳಿಕ ಸೇವಿಸುವ ಮೊಹಬ್ಬತ್ ಕಾ ಶರಬತ್, ಪಾಕವಿಧಾನ ಇಲ್ಲಿದೆ

ಫ್ರೈಡ್ ರೈಸ್‌ಗೆ ಬೇಕಾಗುವ ಮುಖ್ಯ ಪದಾರ್ಥಗಳು:
ಅಕ್ಕಿ – 1 1/2 ಕಪ್ (ಬಾಸ್ಮತಿ ಅಥವಾ ಸಾಮಾನ್ಯ ಅಕ್ಕಿ)
ಕ್ಯಾರೆಟ್ – 1/4 ಕಪ್ (ಕತ್ತರಿಸಿದ್ದು)
ಎಲೆಕೋಸು – 1/4 ಕಪ್ (ಕತ್ತರಿಸಿದ್ದು)
ಕ್ಯಾಪ್ಸಿಕಂ – 1/4 ಕಪ್ (ಕತ್ತರಿಸಿದ್ದು)
ಈರುಳ್ಳಿ – 1 (ಸಣ್ಣಗೆ ಕತ್ತರಿಸಿದ್ದು)
ಬೆಳ್ಳುಳ್ಳಿ – 5 ಎಸಳು (ಕತ್ತರಿಸಿದ್ದು)
ಮೊಟ್ಟೆ – 2
ಸೋಯಾ ಸಾಸ್ – 1 ಟೀಸ್ಪೂನ್
ಕರಿಮೆಣಸಿನ ಪುಡಿ – 1 ಟೀಸ್ಪೂನ್
ಅಜಿನೋಮೋಟೋ ಬೇಕಿದ್ದರೆ – ಸ್ವಲ್ಪ
ಎಣ್ಣೆ / ಬೆಣ್ಣೆ – ರುಚಿಗೆ ತಕ್ಕಷ್ಟು

ಮಾಡುವ ವಿಧಾನ :
ಮೀನು ಹುರಿಯುವ ವಿಧಾನ :

- ಮೊದಲಿಗೆ, ಚೆನ್ನಾಗಿ ತೊಳೆದ ಮೀನನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ.
- ಅದಕ್ಕೆ ಮೆಣಸಿನ ಪುಡಿ, ಉಪ್ಪು, ನಿಂಬೆ ರಸ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಚೆನ್ನಾಗಿ ಕಲಸಿ 10 ನಿಮಿಷ ನೆನೆಸಿಡಿ.
- ಸ್ವಲ್ಪ ಮೈದಾ ಅಥವಾ ಅಕ್ಕಿ ಹಿಟ್ಟು ಸೇರಿಸಿ ಮೀನನ್ನು ಚೆನ್ನಾಗಿ ಒಂದು ಬಾರಿ ಕಲಸಿ.
- ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಮೀನನ್ನು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿಯಿರಿ.
- ಕ್ರಿಸ್ಪಿಯಾಗಿರಲು, ಮೀನನ್ನು ಮಧ್ಯಮ ಉರಿಯಲ್ಲಿ ಹುರಿಯಿರಿ.

ಅಕ್ಕಿ ಬೇಯಿಸುವ ವಿಧಾನ :
- ಬಾಸ್ಮತಿ ಅಕ್ಕಿಯನ್ನು 30 ನಿಮಿಷಗಳ ಕಾಲ ಉಗುರುಬೆಚ್ಚಗಿನ ನೀರಿನಲ್ಲಿ ನೆನೆಸಿಡಿ.
- ನಂತರ, ಒಂದು ಪಾತ್ರೆಯಲ್ಲಿ 4 ಕಪ್ ನೀರು ಹಾಕಿ ಉಪ್ಪು, ಒಂದು ಹನಿ ಎಣ್ಣೆ ಸೇರಿಸಿ ಅಕ್ಕಿಯನ್ನು 80% ಮಾತ್ರ ಬೇಯಿಸಬೇಕು.
- ಬೆಂದ ನಂತರ, ಸೋಸಿ ತಣ್ಣಗಾಗಲು ಬಿಡಿ.

ಫ್ರೈಡ್ ರೈಸ್ ತಯಾರಿಸುವ ವಿಧಾನ :
- ಒಂದು ದೊಡ್ಡ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಅಥವಾ ಬೆಣ್ಣೆ ಹಾಕಿ ಬೆಳ್ಳುಳ್ಳಿ, ಈರುಳ್ಳಿ ಸೇರಿಸಿ ಹುರಿಯಿರಿ.
- ಈರುಳ್ಳಿ ಗೋಲ್ಡನ್ ಬ್ರೌನ್ ಆದ ನಂತರ ಕತ್ತರಿಸಿದ ತರಕಾರಿಗಳು (ಕ್ಯಾರೆಟ್, ಎಲೆಕೋಸು, ಕ್ಯಾಪ್ಸಿಕಂ) ಸೇರಿಸಿ 2 ನಿಮಿಷ ಹುರಿಯಿರಿ.
- ಮಧ್ಯದಲ್ಲಿ ಮೊಟ್ಟೆಗಳನ್ನು ಒಡೆದು ಹಾಕಿ ತಿರುಗಿಸಿ.
- ಬೆಂದ ಅನ್ನವನ್ನು ಇದಕ್ಕೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಸೋಯಾ ಸಾಸ್, ಕರಿಮೆಣಸಿನ ಪುಡಿ, ಅಜಿನೋಮೋಟೋ (ಬೇಕಿದ್ದರೆ), ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
- ಕೊನೆಯಲ್ಲಿ, ಹುರಿದ ಮೀನಿನ ತುಂಡುಗಳನ್ನು ಸೇರಿಸಿ, ಮಧ್ಯಮ ಉರಿಯಲ್ಲಿ 3-4 ನಿಮಿಷಗಳ ಕಾಲ ಹುರಿದು, ಇಳಿಸಿ.
- ಮಸಾಲೆಯುಕ್ತ ಮೀನು ಫ್ರೈಡ್ ರೈಸ್ ಸಿದ್ಧ. ಇದನ್ನು ಬಿಸಿ ಚೀಲ್ಲಿ ಸಾಸ್, ಹಳದಿ ಉಪ್ಪಿನಕಾಯಿ ಅಥವಾ ಮಯೋನೈಸ್‌ನೊಂದಿಗೆ ಬಡಿಸಿ. ಇದರ ರುಚಿ ಒಮ್ಮೆ ತಿಂದರೆ ಮರೆಯಲು ಸಾಧ್ಯವಿಲ್ಲ!

ರಂಜಾನ್ ಸ್ಪೆಷಲ್:ರುಚಿಕರ&ಪೌಷ್ಟಿಕವಾದ ಬನಾನ ಡೇಟ್ಸ್-ನಟ್ಸ್ ಸ್ಮೂಥಿ ತಯಾರಿ ಹೇಗೆ?

ರುಚಿಯನ್ನು ಹೆಚ್ಚಿಸಲು ಸಲಹೆಗಳು:

- ಅನ್ನವನ್ನು 80% ಮಾತ್ರ ಬೇಯಿಸಬೇಕು, ಇಲ್ಲದಿದ್ದರೆ ಮೆತ್ತಗಾಗುತ್ತದೆ.
- ಸೋಯಾ ಸಾಸ್ ಅನ್ನು ಹೆಚ್ಚಾಗಿ ಸೇರಿಸಬೇಡಿ, ಇಲ್ಲದಿದ್ದರೆ ಆಹಾರ ಕಪ್ಪಾಗುತ್ತದೆ.
- ಸಮುದ್ರಾಹಾರದ ರುಚಿಯನ್ನು ಕಾಪಾಡಲು, ಮೀನನ್ನು ಚೆನ್ನಾಗಿ ಹುರಿದು ಸೇರಿಸಬೇಕು.
- ಬಾಸ್ಮತಿ ಅಕ್ಕಿಯನ್ನು ಬಳಸಿದರೆ, ಫ್ರೈಡ್ ರೈಸ್ ತುಂಬಾ ಉದುರು ಉದುರಾಗಿರುತ್ತದೆ.
- ಸ್ವಲ್ಪ ಬೆಣ್ಣೆ ಸೇರಿಸಿದರೆ, ಆಹಾರದ ರುಚಿ ದುಪ್ಪಟ್ಟು ಹೆಚ್ಚಾಗುತ್ತದೆ.