ಪ್ರತಿದಿನ ಬೆಳಗಿನ ತಿಂಡಿಗೆ ಇಡ್ಲಿ, ದೋಸೆ, ಉಪ್ಪಿಟ್ಟು ತಿಂದು ಬೇಸರವಾಗಿದೆಯಾ? ಹಾಗಿದ್ದರೆ ಒಮ್ಮೆ ಬನ್ ದೋಸೆ ಮಾಡಿ ನೋಡಿ. ಸಾಫ್ಟ್‌ ಆಗಿ, ಸ್ಪಂಜಿನಂತಿರುವ ಈ ದೋಸೆ ತಿನ್ನಲು ತುಂಬಾ ರುಚಿಯಾಗಿರುತ್ತದೆ.

ಪ್ರತಿದಿನ ಬೆಳಗಿನ ತಿಂಡಿಗೆ ಇಡ್ಲಿ, ದೋಸೆ, ಉಪ್ಪಿಟ್ಟು ತಿಂದು ಬೇಸರವಾಗಿದೆಯಾ? ಹಾಗಿದ್ದರೆ ಒಮ್ಮೆ ಬನ್ ದೋಸೆ ಮಾಡಿ ನೋಡಿ. ಸಾಫ್ಟ್‌ ಆಗಿ, ಸ್ಪಂಜಿನಂತಿರುವ ಈ ದೋಸೆ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಅದರಲ್ಲೂ ತೆಂಗಿನಕಾಯಿ ಮತ್ತು ಅವಲಕ್ಕಿ ಸೇರಿಸುವುದರಿಂದ ದೋಸೆ ಮೃದುವಾಗಿ ಬರುತ್ತದೆ. ಹೆಚ್ಚಿನ ಕೆಲಸವಿಲ್ಲದೆ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಈ ಬನ್ ದೋಸೆಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ ಇಲ್ಲಿದೆ.

ಬನ್ ದೋಸೆ ಮಾಡಲು ಬೇಕಾಗುವ ಸಾಮಗ್ರಿಗಳು

ದೋಸೆ ಅಕ್ಕಿ – 2 ಕಪ್

ಮೆಂತೆ ಕಾಳು – 1 ಟೀ ಸ್ಪೂನ್

ತೆಂಗಿನಕಾಯಿ ತುರಿ – 1 ಕಪ್

ಅವಲಕ್ಕಿ – 1 ಕಪ್

ನೀರು – ಅಗತ್ಯವಿರುವಷ್ಟು

ಉಪ್ಪು – ರುಚಿಗೆ ತಕ್ಕಷ್ಟು

ಎಣ್ಣೆ – ಅಗತ್ಯವಿರುವಷ್ಟು

ಬನ್ ದೋಸೆ ಮಾಡುವ ವಿಧಾನ

ಮೊದಲಿಗೆ ದೋಸೆ ಅಕ್ಕಿ ಮತ್ತು ಮೆಂತೆ ಕಾಳನ್ನು ಚೆನ್ನಾಗಿ ತೊಳೆದು ಸಾಕಷ್ಟು ನೀರಿನಲ್ಲಿ ನೆನೆಸಿಡಿ. ಕನಿಷ್ಠ 4ರಿಂದ 5 ಗಂಟೆಗಳ ಕಾಲ ನೆನೆಸಿದರೆ ಉತ್ತಮ. ನಂತರ ಅವಲಕ್ಕಿಯನ್ನು ಪ್ರತ್ಯೇಕವಾಗಿ ತೊಳೆದು ಸ್ವಲ್ಪ ಸಮಯ ನೆನೆಸಿಡಿ. ನೆನೆಸಿದ ಅಕ್ಕಿ, ಮೆಂತೆ ಕಾಳು, ಅವಲಕ್ಕಿ ಹಾಗೂ ತೆಂಗಿನಕಾಯಿ ತುರಿಯನ್ನು ಮಿಕ್ಸಿಗೆ ಹಾಕಿ. ಅಗತ್ಯವಿರುವಷ್ಟು ನೀರು ಸೇರಿಸಿ ನಯವಾದ ಹಿಟ್ಟಿನಂತೆ ರುಬ್ಬಿಕೊಳ್ಳಿ. ರುಬ್ಬಿದ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ ಮುಚ್ಚಿಡಿ. ಹಿಟ್ಟು ಚೆನ್ನಾಗಿ ಹುದುಗಲು ಕೆಲವು ಗಂಟೆಗಳ ಕಾಲ ಬಿಡಿ. ಹುದುಗಿದ ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.

ಈಗ ತವಾ ಅಥವಾ ದೋಸೆ ಕಾವಲಿಯನ್ನು ಬಿಸಿ ಮಾಡಿ ಸ್ವಲ್ಪ ಎಣ್ಣೆ ಸವರಿ. ಒಂದು ಸೌಟಿನಷ್ಟು ದೋಸೆ ಹಿಟ್ಟನ್ನು ಹಾಕಿ ಸ್ವಲ್ಪ ದಪ್ಪವಾಗಿ ಹರಡಿ. ಬನ್ ದೋಸೆಯ ವಿಶೇಷತೆಯೇ ಅದರ ದಪ್ಪ ಮತ್ತು ಮೃದುವಾದ ವಿನ್ಯಾಸ. ದೋಸೆ ಕೆಳಭಾಗ ಚೆನ್ನಾಗಿ ಬೆಂದ ಬಳಿಕ ಸುತ್ತಲೂ ಸ್ವಲ್ಪ ಎಣ್ಣೆ ಹಾಕಿ ನಿಧಾನವಾಗಿ ತಿರುಗಿಸಿ. ಎರಡೂ ಬದಿಗಳು ಹೊಂಬಣ್ಣಕ್ಕೆ ಬರುವವರೆಗೆ ಬೇಯಿಸಿ.

ಅಷ್ಟೇ, ಬಿಸಿ ಬಿಸಿ ಸಾಫ್ಟ್‌ ಬನ್ ದೋಸೆ ಸವಿಯಲು ಸಿದ್ಧ!

ಇದನ್ನು ತೆಂಗಿನಕಾಯಿ ಚಟ್ನಿ, ಸಾಂಬಾರ್ ಅಥವಾ ತರಕಾರಿ ಸಾಗು ಜೊತೆ ಸವಿದರೆ ರುಚಿ ಇನ್ನಷ್ಟು ಹೆಚ್ಚುತ್ತದೆ. ಬೆಳಗಿನ ತಿಂಡಿ ಮಾತ್ರವಲ್ಲದೆ ಸಂಜೆಗೂ ಈ ದೋಸೆಯನ್ನು ತಯಾರಿಸಬಹುದು.