ಸಂಜೆ ಟೀ ಜೊತೆ ಏನಾದರೂ ರುಚಿಕರವಾದ ಸ್ನ್ಯಾಕ್ಸ್ ತಿನ್ನಬೇಕು ಅನ್ನಿಸಿದಾಗ, ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಅವಲಕ್ಕಿ ಚಾಟ್ಸ್ ಒಳ್ಳೆಯ ಆಯ್ಕೆ. ಕಡಿಮೆ ಸಮಯದಲ್ಲಿ ತಯಾರಾಗುವ ಈ ಚಾಟ್ಸ್‌ ರುಚಿಯಲ್ಲೂ ಸಖತ್ ಆಗಿರುತ್ತದೆ.

ಸಂಜೆ ಟೀ ಜೊತೆ ಏನಾದರೂ ರುಚಿಕರವಾದ ಸ್ನ್ಯಾಕ್ಸ್ ತಿನ್ನಬೇಕು ಅನ್ನಿಸಿದಾಗ, ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಅವಲಕ್ಕಿ ಚಾಟ್ಸ್ ಒಳ್ಳೆಯ ಆಯ್ಕೆ. ಕಡಿಮೆ ಸಮಯದಲ್ಲಿ ತಯಾರಾಗುವ ಈ ಚಾಟ್ಸ್‌ ರುಚಿಯಲ್ಲೂ ಸಖತ್ ಆಗಿರುತ್ತದೆ. ಮಕ್ಕಳು ಮಾತ್ರವಲ್ಲದೆ ದೊಡ್ಡವರಿಗೂ ಇದು ಇಷ್ಟವಾಗಬಹುದು. ಮನೆಯಲ್ಲೇ ಸುಲಭವಾಗಿ ಸಿಗುವ ಸಾಮಗ್ರಿಗಳಿಂದ ಈ ಅವಲಕ್ಕಿ ಚಾಟ್ಸ್ ತಯಾರಿಸಬಹುದು. ಹಾಗಾದರೆ ಇದಕ್ಕೆ ಬೇಕಾಗುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನ ಇಲ್ಲಿದೆ.

ಅವಲಕ್ಕಿ ಚಾಟ್ಸ್ ಮಾಡಲು ಬೇಕಾಗುವ ಸಾಮಗ್ರಿಗಳು

ಶೇಂಗಾ – ½ ಕಪ್

ಗಟ್ಟಿ ಅವಲಕ್ಕಿ – 3 ಕಪ್

ಹೆಚ್ಚಿದ ಟೊಮೇಟೊ – 1 ಕಪ್

ಹೆಚ್ಚಿದ ಈರುಳ್ಳಿ – 1 ಕಪ್

ಕೊತ್ತಂಬರಿ ಸೊಪ್ಪು – ಸ್ವಲ್ಪ

ಅರಿಶಿನ ಪುಡಿ – ¼ ಟೀ ಸ್ಪೂನ್

ಅಚ್ಚ ಖಾರದ ಪುಡಿ – ½ ಟೀ ಸ್ಪೂನ್

ಕೊತ್ತಂಬರಿ ಪುಡಿ – ½ ಟೀ ಸ್ಪೂನ್

ಚಾಟ್ ಮಸಾಲ – 1 ಟೀ ಸ್ಪೂನ್

ಉಪ್ಪು – ರುಚಿಗೆ ತಕ್ಕಷ್ಟು

ನಿಂಬೆರಸ – 1 ಟೀ ಸ್ಪೂನ್

ಎಣ್ಣೆ – ಕರಿಯಲು

ಸೇವ್ – ½ ಕಪ್

ಅವಲಕ್ಕಿ ಚಾಟ್ಸ್ ಮಾಡುವ ವಿಧಾನ

ಮೊದಲಿಗೆ ಗಟ್ಟಿ ಅವಲಕ್ಕಿಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ, ಅಗತ್ಯವಿದ್ದರೆ ಸ್ವಲ್ಪ ನೀರು ಸಿಂಪಡಿಸಿ ಕೆಲವು ನಿಮಿಷ ಇಡಿ. ನಂತರ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಶೇಂಗಾವನ್ನು ಚೆನ್ನಾಗಿ ಹುರಿದುಕೊಳ್ಳಿ. ಶೇಂಗಾ ಗರಿಗರಿಯಾಗುತ್ತಿದ್ದಂತೆ ಅದನ್ನು ತೆಗೆದು ಪಕ್ಕಕ್ಕೆ ಇಡಿ. ಈಗ ಅದೇ ಬಾಣಲೆಯಲ್ಲಿ ಅವಲಕ್ಕಿಯನ್ನು ಹಾಕಿ ಕಡಿಮೆ ಉರಿಯಲ್ಲಿ ಗರಿಗರಿಯಾಗುವವರೆಗೆ ಹುರಿದುಕೊಳ್ಳಿ. ಅವಲಕ್ಕಿ ಚೆನ್ನಾಗಿ ಕ್ರಿಸ್ಪಿಯಾಗಿರುವುದು ಚಾಟ್ಸ್‌ನ ರುಚಿಯನ್ನು ಹೆಚ್ಚಿಸುತ್ತದೆ.

ಒಂದು ದೊಡ್ಡ ಬೌಲ್‌ಗೆ ಹುರಿದ ಅವಲಕ್ಕಿ, ಶೇಂಗಾ, ಹೆಚ್ಚಿದ ಈರುಳ್ಳಿ, ಟೊಮೇಟೊ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ. ಇದಕ್ಕೆ ಅರಿಶಿನ ಪುಡಿ, ಖಾರದ ಪುಡಿ, ಕೊತ್ತಂಬರಿ ಪುಡಿ, ಚಾಟ್ ಮಸಾಲ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕೊನೆಯಲ್ಲಿ ನಿಂಬೆರಸ ಸೇರಿಸಿ ಮತ್ತೊಮ್ಮೆ ಕಲಸಿ. ಸವಿಯುವ ಮುನ್ನ ಮೇಲಿನಿಂದ ಸೇವ್ ಹಾಕಿ ಅಲಂಕರಿಸಿದರೆ ರುಚಿಕರವಾದ ಅವಲಕ್ಕಿ ಚಾಟ್ಸ್ ಸವಿಯಲು ಸಿದ್ಧ.

ಸಂಜೆಯ ಟೀ ಜೊತೆ ಈ ಗರಿಗರಿಯಾದ ಚಾಟ್ಸ್‌ ಅನ್ನು ಸವಿಯಬಹುದು. ಮನೆಯಲ್ಲಿರುವ ಸರಳ ಸಾಮಗ್ರಿಗಳಿಂದಲೇ ತಯಾರಾಗುವುದರಿಂದ ತಕ್ಷಣ ಸ್ನ್ಯಾಕ್ಸ್ ಬೇಕೆಂದಾಗ ಇದು ಸುಲಭವಾದ ಆಯ್ಕೆಯಾಗಿದೆ.