ರಾತ್ರಿ ಸಾಂಬಾರು,ಪಲ್ಯ,ಅನ್ನ ಮಿಕ್ಕಿದ್ರೆ ಹಾಳಾಗುತ್ತೆ ಎಂಬ ಮಹಿಳೆಯರ ಟೆನ್ಷನ್ ಕಡಿಮೆ ಮಾಡಿದ ಶ್ರೇಯಸ್ಸು ಫ್ರಿಜ್ಗೆ ಸಲ್ಲುತ್ತೆ. ಒಂದು ಕಾಲಕ್ಕೆ ಐಷಾರಾಮಿ ವಸ್ತುಗಳ ಪಟ್ಟಿಗೆ ಸೇರಿದ್ದ ಫ್ರಿಜ್,ಇಂದು ಭಾರತದ ಬಹುತೇಕ ಅಡುಗೆಮನೆಗಳ ಅತಿಮುಖ್ಯ ಸಾಧನಗಳಲ್ಲೊಂದು. ತರಕಾರಿ, ಹಣ್ಣು, ಹಾಲು, ಮಾಂಸ ಸೇರಿದಂತೆ ಕೆಲವು ಪದಾರ್ಧಗಳ ತಾಜಾತನ ಹಾಳಾಗದಂತೆ ಕಾಪಿಡಲು ಕೂಡ ಫ್ರಿಜ್ ಬೇಕು. ಇದೇ ಕಾರಣಕ್ಕೆ ಇಂದು ಫ್ರಿಜ್ ಕೆಟ್ಟರೆ ಮಹಿಳೆಯರ ಮೂಡ್ ಕೂಡ ಕೆಡುತ್ತೆ.ಅದ್ರಲ್ಲೂ ಉದ್ಯೋಗಸ್ಥ ಮಹಿಳೆಯರ ಜೊತೆ ಕೆಲವು ಸೋಮಾರಿಗಳಿಗೆ ಫ್ರಿಜ್ ಮೇಲೆ ತುಸು ಹೆಚ್ಚೇ ಅವಲಂಬನೆಯಿರುತ್ತೆ.ಆದ್ರೆ ಫ್ರಿಜ್ನಲ್ಲಿಟ್ಟ ಆಹಾರ ಸೇವಿಸೋ ಮುನ್ನ ಒಂದಿಷ್ಟು ವಿಷಯಗಳನ್ನುತಿಳಿದಿರೋದು ಆರೋಗ್ಯದ ಹಿತದೃಷ್ಟಿಯಿಂದ ಉತ್ತಮ.

ಬೇಯಿಸೋ ಮುನ್ನ ಅಕ್ಕಿ ನೆನೆಹಾಕೋ ಅಭ್ಯಾಸವಿದೆಯಾ? 

ಫ್ರಿಜ್ನಿಂದ ತೆಗೆದ ತಕ್ಷಣ ಸೇವಿಸಬಾರದು
ಕೆಲವರಿಗೆ ಫ್ರಿಜ್ನಿಂದ ಆಹಾರ ತೆಗೆದ ತಕ್ಷಣ ತಿನ್ನೋ ಅಭ್ಯಾಸವಿರುತ್ತೆ.ಇದು ಖಂಡಿತಾ ಅಪಾಯಕಾರಿ. ಫ್ರಿಜ್ನಿಂದ ತೆಗೆದ ಐಸ್ಕ್ರೀಮ್ ಕೂಡ ತಕ್ಷಣ ಸೇವಿಸೋದು ಒಳ್ಳೆಯದಲ್ಲ ಎನ್ನುತ್ತಾರೆ ಆಹಾರ ತಜ್ಞರು.ಯಾವುದೇ ವಸ್ತುವನ್ನಾದ್ರೂ ಸ್ವಲ್ಪ ಹೊತ್ತು ಕೋಣೆಯ ಸಾಮಾನ್ಯ ತಾಪಮಾನದಲ್ಲಿಟ್ಟು ಆ ಬಳಿಕ ಬಳಸೋದು ಆರೋಗ್ಯದ ದೃಷ್ಟಿಯಿಂದ ಉತ್ತಮ. ತರಕಾರಿ ಹಾಗೂ ಹಣ್ಣುಗಳಿಗೂ ಇದು ಅನ್ವಯಿಸುತ್ತದೆ.

ಬಿಸಿ ಮಾಡಿಯೇ ಬಳಸಿ
ಯಾವುದೇ ಆಹಾರವನ್ನು ಸಿದ್ಧಪಡಿಸಿದ ತಕ್ಷಣ ಬಿಸಿ ಬಿಸಿಯಾಗಿ ತಿನ್ನೋದು ಆರೋಗ್ಯಕ್ಕೆ ಉತ್ತಮ. ಕೊರೋನಾ ಕಾಣಿಸಿಕೊಂಡ ಬಳಿಕವಂತೂ ಈ ಮಾತನ್ನು ವೈದ್ಯರು ಪದೇಪದೆ ಒತ್ತಿ ಹೇಳುತ್ತಿದ್ದಾರೆ. ಇದಕ್ಕೆ ಕಾರಣ ಖಾದ್ಯಗಳನ್ನು ಸಿದ್ಧಪಡಿಸಿದ ತಕ್ಷಣ ಸೇವಿಸೋದ್ರಿಂದ ಅದರಲ್ಲಿರೋ ಪೋಷಕಾಂಶಗಳು ಗರಿಷ್ಠ ಪ್ರಮಾಣದಲ್ಲಿ ದೇಹಕ್ಕೆ ಲಭ್ಯವಾಗುತ್ತವೆ. ಆದ್ರೆ ಒತ್ತಡದ ಜೀವನಶೈಲಿಗೆ ಸಿಲುಕಿರೋ ನಮಗೆ ಅಡುಗೆಮನೆಯಲ್ಲಿ ಜಾಸ್ತಿ ಹೊತ್ತು ಸಮಯ ವ್ಯಯಿಸಲು ಸಾಧ್ಯವಿಲ್ಲದ ಕಾರಣ ಫ್ರಿಜ್ ಮೇಲಿನ ಅವಲಂಬನೆ ಹೆಚ್ಚಿಸಿಕೊಂಡಿದ್ದೇವೆ. ಅಲ್ಲದೆ, ಅವಿಭಕ್ತ ಕುಟುಂಬಗಳೇ ಹೆಚ್ಚಿರೋ ಕಾರಣ ಒಮ್ಮೆ ಮಾಡಿದ ಸಾಂಬಾರನ್ನು ಫ್ರಿಜ್ನಲ್ಲಿಟ್ಟು 2 ದಿನ ಸೇವಿಸೋ ಅಭ್ಯಾಸ ಬೆಳೆದು ಬಿಟ್ಟಿದೆ. ಆದ್ರೆ ಉಳಿದ ಆಹಾರ ಪದಾರ್ಥಗಳು ಕೆಡಬಾರದೆಂದು ಫ್ರಿಜ್ನಲ್ಲಿಟ್ಟಿರೋ ನೀವು ಅವುಗಳನ್ನು ಬಿಸಿ ಮಾಡದೆ ಸೇವಿಸಿದ್ರೆ ಹೊಟ್ಟೆ ಕೆಡೋದು ಗ್ಯಾರಂಟಿ. ಸಾಂಬಾರು, ಪಲ್ಯ ಮುಂತಾದ ಮಸಾಲೆಯುಕ್ತ ಆಹಾರ ಪದಾರ್ಥಗಳನ್ನು ಬರೀ ಬಿಸಿ ಮಾಡಿದರೆ ಸಾಲದು, ಬದಲಿಗೆ ಕುದಿಸಿ ಸೇವಿಸೋದು ಉತ್ತಮ. 

ಸೌತೆಕಾಯಿ ಕಹಿಯೇ?

ಬ್ಯಾಕ್ಟೀರಿಯಾ ಉತ್ಪತ್ತಿಯಾಗೋ ಸಾಧ್ಯತೆ
ಫ್ರಿಜ್ನಿಂದ ತೆಗೆದು ಹೊರಗಿಟ್ಟ ಆಹಾರದಲ್ಲಿ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗೋ ಸಾಧ್ಯತೆಯಿರುತ್ತೆ. ಹೀಗಾಗಿ ಫ್ರಿಜ್ನಿಂದ ತೆಗೆದ ಆಹಾರವನ್ನು ಬೇಯಿಸಿ ಸೇವಿಸಬೇಕು. ಹೀಗೆ ಮಾಡೋದ್ರಿಂದ ಅದರಲ್ಲಿರೋ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಅಲ್ಲದೆ, ಕೆಲವು ಬ್ಯಾಕ್ಟೀರಿಯಾಗಳು ಕಡಿಮೆ ತಾಪಮಾನದಲ್ಲಿ ಕೂಡ ಜೀವಿಸಬಲ್ಲವಾಗಿರೋ ಕಾರಣ ಹೆಚ್ಚು ದಿನಗಳ ಕಾಲ ಫ್ರಿಜ್ನಲ್ಲಿಟ್ಟ ಆಹಾರದಲ್ಲಿ ಕೂಡ ಬ್ಯಾಕ್ಟೀರಿಯಾಗಳು ಕಾಣಿಸಿಕೊಳ್ಳುತ್ತವೆ. ನೀವೇ ಬೇಕಿದ್ದರೆ ಗಮನಿಸಿ ನೋಡಿ, ಡಬ್ಬದಲ್ಲಿ ಮಿಕ್ಕಿದ ಪಲ್ಯ ಹಾಕಿ ಫ್ರಿಜ್ನಲ್ಲಿಟ್ಟಿರುತ್ತೀರಿ, ಆದ್ರೆ ಅದು ಮರೆತೇ ಹೋಗಿರುತ್ತೆ. ಒಂದೆರೆಡು ವಾರಗಳ ಬಳಿಕ ನೆನಪಾಗಿ ತೆಗೆದು ನೋಡಿದ್ರೆ ಮೇಲೆ ಕಪ್ಪನೆಯ ಪದರ ಕಾಣಿಸುತ್ತೆ. ಇದೇ ಬ್ಯಾಕ್ಟೀರಿಯಾ. 

ಜಾಸ್ತಿ ದಿನವಿಡಬೇಡಿ
ಫ್ರಿಜ್ನಲ್ಲಿ ಯಾವುದೇ ಆಹಾರ ಪದಾರ್ಥಗಳನ್ನು ದೀರ್ಘಕಾಲವಿಟ್ಟು ಸೇವಿಸೋದು ಒಳ್ಳೆಯದ್ದಲ್ಲ. ಅದ್ರಲ್ಲೂ ಬೇಯಿಸಿದ ಆಹಾರ ಪದಾರ್ಥಗಳನ್ನು ಎರಡಕ್ಕಿಂತ ಹೆಚ್ಚು ದಿನವಿಟ್ಟು ಸೇವಿಸಬಾರದು. ಇವು ಆರೋಗ್ಯಕ್ಕೆ ಹಾನಿಯುಂಟು ಮಾಡೋ ಸಾಧ್ಯತೆಯಿರುತ್ತೆ. 

ಜಾಸ್ತಿ ತಾಪಮಾನದಲ್ಲಿ ಬಿಸಿ ಮಾಡ್ಬೇಡಿ
ಫ್ರಿಜ್ನಲ್ಲಿಟ್ಟ ಆಹಾರಗಳನ್ನು ಜಾಸ್ತಿ ತಾಪಮಾನದಲ್ಲಿ ಬೇಯಿಸಿದಾಗ ಅದ್ರಲ್ಲಿರೋ ಪೋಷಕಾಂಶಗಳು ನಷ್ಟವಾಗುತ್ತವೆ. ಆದಕಾರಣ ಕಡಿಮೆ ಉರಿಯಲ್ಲಿ ಸ್ವಲ್ಪ ಹೆಚ್ಚು ಹೊತ್ತು ಬಿಸಿ ಮಾಡಿ ಆ ಬಳಿಕ ಸೇವಿಸೋದು ಉತ್ತಮ.

ನೀವು ಮೊಮೊಸ್ ಪ್ರಿಯರೆ?

ಈ ವಿಷಯಗಳು ನೆನಪಿರಲಿ
ಫ್ರಿಜ್ನಲ್ಲಿಆಹಾರ ಪದಾರ್ಥಗಳನ್ನಿಡೋವಾಗ ಕೆಲವು ವಿಷಯ ನೆನಪಿನಲ್ಲಿಡಬೇಕು.
-ಹಸಿ ತರಕಾರಿ ಹಾಗೂ ಹಣ್ಣುಗಳು ಅಥವಾ ಮಾಂಸವನ್ನು ಫ್ರಿಜ್ನಲ್ಲಿಡೋ ಮುನ್ನ ಚೆನ್ನಾಗಿ ತೊಳೆದಿಡೋದು ಉತ್ತಮ. ಪ್ರಸ್ತುತ ಪರಿಸ್ಥಿತಿಯಲ್ಲಂತೂ ಇದು ಅತ್ಯಗತ್ಯ.
-ಇತರ ಆಹಾರ ಪದಾರ್ಥಗಳಿಗೆ ಹೋಲಿಸಿದರೆ ಪ್ರೋಟೀನ್ ಅಂಶವುಳ್ಳ ಆಹಾರ ಬೇಗ ಹಾಳಾಗುತ್ತೆ. ಹೀಗಾಗಿ ಪ್ರೋಟೀನ್ ಹೆಚ್ಚಿರೋ ಹಾಲು, ಮೊಟ್ಟೆಗಳು, ಮಾಂಸ, ಚೀಸ್ ಮುಂತಾದ ಪದಾರ್ಥಗಳನ್ನು ಫ್ರಿಜರ್ನಲ್ಲಿಡೋದು ಉತ್ತಮ. ಇದ್ರಿಂದ ಇವು ತಾಜಾವಾಗಿರೋ ಜೊತೆ ಪೌಷ್ಟಿಕಾಂಶಗಳು ಕೂಡ ನಾಶವಾಗೋದಿಲ್ಲ.
-ಆಹಾರವನ್ನು ಸರಿಯಾದ ತಾಪಮಾನದಲ್ಲಿ ಸಂಗ್ರಹಿಸಿಡೋದು ಕೂಡ ಮುಖ್ಯ. ಮಾಂಸಕ್ಕೆ ಪ್ರಸಕ್ತವಾದ ತಾಪಮಾನ 4-5 ಡಿಗ್ರಿ ಸೆಲ್ಸಿಯಸ್.
-ಬೇಯಿಸಿದ ಆಹಾರ ತಣ್ಣಗಾದ ಮೇಲೆಯೇ ಫ್ರಿಜ್ನಲ್ಲಿಡಬೇಕು. ಹಾಗಂತ ಬೆಳಗ್ಗೆ ತಯಾರಿಸಿದ ಅಡುಗೆಯನ್ನು ಸಂಜೆ ಫ್ರಿಜ್ನಲ್ಲಿಡೋದು ಕೂಡ ತಪ್ಪು.