ಕಾಲಿಗೆ ಗಾಲಿ ಕಟ್ಟಿಕೊಂಡವರಂತೆ ಸದಾ ಬ್ಯುಸಿಯಾಗಿರೋ ನಮಗೆ ಇಂದು ಅಡುಗೆಮನೆಯಲ್ಲಿಜಾಸ್ತಿ ಹೊತ್ತು ಕಳೆಯುವಷ್ಟು ಸಮಯ ಹಾಗೂ ವ್ಯವಧಾನ ಎರಡೂ ಇಲ್ಲ.ಹೀಗಾಗಿ ಪುರಾತನ ಅಡುಗೆ ವಿಧಾನಗಳು ಮಹತ್ವ ಕಳೆದುಕೊಳ್ಳುತ್ತಿವೆ.ಆದ್ರೆ ಈ ಸಾಂಪ್ರದಾಯಿಕ ಅಡುಗೆ ಪದ್ಧತಿಗಳು ತಮ್ಮದೇ ಆದ ಆರೋಗ್ಯ ಪ್ರಯೋಜನಗಳನ್ನೊಳಗೊಂಡಿವೆ. ಉದಾಹರಣೆಗೆ ಹೇಳೋದಾದ್ರೆ ಹಿಂದೆ ಅನ್ನ ಮಾಡೋ ಮುನ್ನ ಅಕ್ಕಿಯನ್ನು ಕೆಲವು ಸಮಯ ನೀರಿನಲ್ಲಿ ನೆನೆ ಹಾಕುತ್ತಿದ್ದರು. ಆ ಬಳಿಕ ಸಣ್ಣ ಉರಿಯಲ್ಲಿಅಕ್ಕಿಯನ್ನು ಬೇಯಿಸಿ ಅನ್ನ ಮಾಡುತ್ತಿದ್ದರು. ಆದ್ರೆ ಇಂದು ನಮಗೆ ಅಕ್ಕಿಯನ್ನು ನೆನೆಹಾಕೋದು ಬಿಡಿ ಸರಿಯಾಗಿ ತೊಳೆಯಲು ಕೂಡ ಸಮಯದ ಅಭಾವ. ಅಕ್ಕಿಗೆ ನೀರು ಹಾಕಿ ತೊಳೆದಂತೆ ಮಾಡಿ ಕೆಲವರು ಕುಕ್ಕರ್ನಲ್ಲಿ ಎರಡು ಸೀಟಿ ಹೊಡೆಸಿದ್ರೆ, ಇನ್ನೂ ಕೆಲವರು ಮೈಕ್ರೋವೇವ್ನಲ್ಲಿಟ್ಟು ಪಟಾಪಟ್ ಅನ್ನ ಮಾಡುತ್ತಾರೆ. ಆದ್ರೆ ಅನ್ನ ಮಾಡೋ ಮುನ್ನ ಅಕ್ಕಿಯನ್ನು ನೆನೆ ಹಾಕೋದು ಎಷ್ಟು ಮುಖ್ಯ ಗೊತ್ತಾ? ಅದ್ರಿಂದ ಆರೋಗ್ಯಕ್ಕೆಷ್ಟು ಲಾಭ?

ಐಸ್‌ಕ್ರೀಮ್‌ ಪ್ರಿಯರೇ ನೀವು?

ಬೇಗ ಬೇಯುತ್ತೆ
ಹಿಂದೆಲ್ಲ ಈಗಿನಂತೆ ಕುಕ್ಕರ್, ಗ್ಯಾಸ್ ಇರಲಿಲ್ಲ. ಕಟ್ಟಿಗೆ ಒಲೆಯಲ್ಲಿ ಪಾತ್ರೆ ಅಥವಾ ಮಡಕೆಯಲ್ಲಿ ಅಕ್ಕಿ ಬೇಯಿಸಬೇಕಿತ್ತು. ಪರಿಣಾಮ ಅನ್ನ ಮಾಡಲು ಜಾಸ್ತಿ ಸಮಯ ಹಿಡಿಯುತ್ತಿತ್ತು. ಇದೇ ಕಾರಣಕ್ಕೆ ನಮ್ಮ ಹಿರಿಯರು ಅಕ್ಕಿಯನ್ನು ಬೇಯಿಸೋ ಮುನ್ನ 4-5ಗಂಟೆಗಳ ಕಾಲ ನೆನೆ ಹಾಕುತ್ತಿದ್ದರು.ಇದ್ರಿಂದ ಸಮಯ ಹಾಗೂ ಕಟ್ಟಿಗೆ ಎರಡೂ ಉಳಿಯುತ್ತಿತ್ತು. 12ನೇ ಶತಮಾನದ ಸಂಸ್ಕೃತ ವಿಶ್ವಕೋಶ ಮನಸೊಲ್ಲಾಸದ ಪ್ರಕಾರ ಅಕ್ಕಿಯನ್ನು ನೆನೆ ಹಾಕೋದು ಹಾಗೂ ತೊಳೆಯೋದು ಅತ್ಯಂತ ಮುಖ್ಯ ಹಂತವಾಗಿದ್ದು, ಇದು ಅಕ್ಕಿಯಲ್ಲಿನ ಅನಗತ್ಯ ಪದರಗಳನ್ನು ತೆಗೆದು ಮೃದು ಹಾಗೂ ಹಗುರವಾಗಿಸುತ್ತೆ. ಅಲ್ಲದೆ, ಅಕ್ಕಿ ನೀರನ್ನು ಚೆನ್ನಾಗಿ ಹೀರಿಕೊಳ್ಳೋದ್ರಿಂದ ಬಿಸಿಯಾದ ತಕ್ಷಣ ಮೃದುವಾಗುತ್ತೆ. 

ಪೌಷ್ಟಿಕಾಂಶ ಹೀರಿಕೊಳ್ಳಲು ನೆರವು
ಅಕ್ಕಿಯನ್ನು ನೆನೆ ಹಾಕೋದ್ರಿಂದ ಬೇಗ ಬೇಯೋದು ಮಾತ್ರವಲ್ಲ, ಜೀರ್ಣಾಂಗವ್ಯೂಹವನ್ನು ಪ್ರಚೋದಿಸಿ ಅನ್ನದಲ್ಲಿನ ಜೀವಸತ್ವಗಳು ಹಾಗೂ ಖನಿಜಾಂಶಗಳನ್ನು ಪರಿಣಾಮಕಾರಿಯಾಗಿ ಹೀರಿಕೊಳ್ಳಲು ನೆರವು ನೀಡುತ್ತದೆ ಎನ್ನುತ್ತಾರೆ ಆಹಾರ ತಜ್ಞರು. ಇನ್ನು ನಾವು ಕೂಡ ನೆನೆಹಾಕಿದ ಅಕ್ಕಿಯಿಂದ ಬೇಯಿಸಿದ ಅನ್ನವನ್ನು ಗಮನಿಸಿದ್ರೆ ಅದರ ಸ್ವರೂಪ ಹಾಗೂ ಪರಿಮಳವು ಅಕ್ಕಿಯನ್ನು ನೆನೆಹಾಕದೆ ಸಿದ್ಧಪಡಿಸಿದ ಅನ್ನಕ್ಕಿಂತ ಚೆನ್ನಾಗಿ ಹಾಗೂ ಆಕರ್ಷಕವಾಗಿರೋದು ಕಂಡುಬರುತ್ತೆ.

ಜ್ವರವಿದ್ದಾಗ ಚಿಕನ್ ತಿಂದರೆ ಓಕೇನಾ?

ಫೈಟಿಕ್ ಆಸಿಡ್ ತೆಗೆಯಲು ಸಹಾಯ
ಫೈಟಿಕ್ ಆಸಿಡ್ ಅನ್ನೋದು ಕಾಳುಗಳಲ್ಲಿ ಕಂಡುಬರೋ ಒಂದು ಅಂಶ. ಇದು ಶರೀರ ಕಬ್ಬಿಣಾಂಶ, ಜಿಂಕ್ ಹಾಗೂ ಕ್ಯಾಲ್ಸಿಯಂ ಹೀರಿಕೊಳ್ಳೋ ಪ್ರಕ್ರಿಯೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತೆ. ಫೈಟಿಕ್ ಆಸಿಡ್ ಕಾಳುಗಳು, ದ್ವಿದಳ ಧಾನ್ಯಗಳು ಹಾಗೂ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತೆ ಎಂದು ಅಧ್ಯಯನವೊಂದು. ಹೇಳಿದೆ. ಇದು ಬೀಜಗಳಲ್ಲಿ ಫೋಸ್ಪರಸ್ ಸಂಗ್ರಹಕವಾಗಿದ್ದು,ಖನಿಜಾಂಶಗಳನ್ನು ಹೀರಿಕೊಳ್ಳದಂತೆ ತಡೆಯುತ್ತೆ. ಆದ್ರೆ ಅಕ್ಕಿಯನ್ನು ನೀರಿನಲ್ಲಿ ನೆನೆಹಾಕೋದ್ರಿಂದ ಫೈಟಿಕ್ ಆಸಿಡ್  ಅಂಶವನ್ನು ತೆಗೆಯಬಹುದು. ಇದೇ ಕಾರಣಕ್ಕೆ ಜಿಂಕ್ ಹಾಗೂ ಕಬ್ಬಿಣಾಂಶ ಕೊರತೆ ಹೊಂದಿರೋರು ಅಕ್ಕಿಯನ್ನು ನೆನೆ ಹಾಕೋ ಅಭ್ಯಾಸ ರೂಢಿಸಿಕೊಳ್ಳಬೇಕೆಂದು ಹೇಳಲಾಗುತ್ತೆ.

ಎಲ್ಲ ಅಕ್ಕಿಯನ್ನು ನೆನೆ ಹಾಕ್ಬಹುದಾ?
ಹೌದು, ಇಂಥದೊಂದು ಪ್ರಶ್ನೆ ಕಾಡೋದು ಸಹಜ. ಏಕೆಂದ್ರೆ ಫುಲಾವ್, ಬಿರಿಯಾನಿಗೆ ಬಳಸೋ ಬಾಸುಮತಿ ಅಥವಾ ಸುಗಂಧಿತ ಅಕ್ಕಿಯನ್ನು ಹೆಚ್ಚು ಬೇಯಿಸಿದ್ರೆ ರುಚಿ ಕೆಡುತ್ತೆ. ಹಾಗಾಗಿ ಇಂಥ ಅಕ್ಕಿಗಳನ್ನು ನೆನೆ ಹಾಕದೆ ಬಳಸ್ಬಹುದು. ಆದ್ರೆ ನಿತ್ಯ ಅನ್ನಕ್ಕೆ ಬಳಸೋ ಪ್ಲೇನ್ ಅಕ್ಕಿ ಅಥವಾ ಸೋನಾ ಮಸೂರಿ, ಕೆಂಪಕ್ಕಿ, ಕುಚ್ಚಲಕ್ಕಿಯನನು ನೆನೆಸಿ ಬೇಯಿಸಿದ್ರೆ ಆರೋಗ್ಯದ ದೃಷ್ಟಿಯಿಂದ ಉತ್ತಮ.

ಊಟ ಆದ ಕೂಡಲೇ ಸಿಹಿ ತಿನ್ನೋದು ಆರೋಗ್ಯಕ್ಕೆ ಒಳ್ಳೇಯದಾ?

ಎಷ್ಟು ಸಮಯ ನೆನೆ ಹಾಕ್ಬೇಕು?
ಅಧ್ಯಯನವೊಂದರ ಪ್ರಕಾರ ಕೆಂಪು, ಕಂದು, ಕಪ್ಪು ಹಾಗೂ ಪಾಲಿಶ್ ಮಾಡದ ಅಕ್ಕಿಯನ್ನು 6-12 ಗಂಟೆಗಳ ಕಾಲ ನೆನೆ ಹಾಕ್ಬೇಕು. ಪಾಲಿಶ್ ಮಾಡಿದ ಕಂದು ಅಕ್ಕಿಯನ್ನು 4-6 ಗಂಟೆಗಳ ಕಾಲ ನೆನೆ ಹಾಕಿದ್ರೆ ಒಳ್ಳೆಯದು. ಬಾಸ್ಮತಿ, ಜಾಸ್ಮಿನ್ ಹಾಗೂ ಸುಶಿ ಅಕ್ಕಿಯನ್ನು15-20 ನಿಮಿಷಗಳ ಕಾಲ ನೆನೆಹಾಕಿದ್ರೆ ಸಾಕು.