Chicken Keema Unde Saaru: ರಾಗಿ ಮುದ್ದೆ ಅಥವಾ ಬಿಸಿ ಅನ್ನದ ಜೊತೆಗೆ ನಾನ್‌ವೆಜ್ ಸಾಂಬಾರ್ ಸವಿಯಬೇಕು ಅನ್ನಿಸಿದಾಗ, ಥೇಟ್ ಮಟನ್ ಸವಿಯನ್ನೇ ನೆನಪಿಸುವ ‘ಚಿಕನ್ ಕೈಮಾ ಉಂಡೆ ಸಾಂಬಾರ್’ ಬೆಸ್ಟ್ ಚಾಯ್ಸ್! ಸಾಂಬಾರಿನಲ್ಲಿ ಒಂದೂ ಉಂಡೆ ಒಡೆಯದಂತೆ ಬಾಯಲ್ಲಿ ಕರಗುವಷ್ಟು ಸಾಫ್ಟ್ ಆಗಿ ಮಾಡುವ ಸೀಕ್ರೆಟ್ ರೆಸಿಪಿ ಇಲ್ಲಿದೆ ನೋಡಿ.
ಸಾಮಾನ್ಯವಾಗಿ ಮಟನ್‌ನಲ್ಲಿ ಕೈಮಾ ಉಂಡೆ ಸಾರು ಮಾಡುವುದು ಎಲ್ಲರಿಗೂ ಗೊತ್ತು. ಆದರೆ ಮನೆಯಲ್ಲಿ ಚಿಕನ್ ತಂದಾಗ, ಅದರಲ್ಲಿರುವ ಬೋನ್‌ಲೆಸ್ ಪೀಸ್‌ಗಳಿಂದಲೇ ಥೇಟ್ ಮಟನ್ ಕೈಮಾದಷ್ಟೇ ಅದ್ಭುತ ರುಚಿ ಕೊಡುವ ಚಿಕನ್ ಕೈಮಾ ಉಂಡೆ ಸಾಂಬಾರ್ ತಯಾರಿಸಬಹುದು. ಉಂಡೆಗಳು ಒಡೆಯದಂತೆ ಸಾಫ್ಟ್ ಆಗಿ ಬರುವ ಸೀಕ್ರೆಟ್ ಟ್ರಿಕ್ಸ್‌ನೊಂದಿಗೆ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ..
ಬೇಕಾಗುವ ಸಾಮಗ್ರಿಗಳು (Ingredients)
ಸಾಂಬಾರ್ ಮಸಾಲೆ
ಚಿಕನ್ ಸಾಫ್ಟ್ ಪೀಸ್‌ಗಳು: 300 ಗ್ರಾಂ
ಈರುಳ್ಳಿ: 2 (ಹೆಚ್ಚಿದ್ದು)
ಬೆಳ್ಳುಳ್ಳಿ: 2 ಗೆಡ್ಡೆ
ಶುಂಠಿ: 1.5 ಇಂಚು
ಟೊಮೆಟೊ: 2
ತೆಂಗಿನಕಾಯಿ ತುರಿ: ಅರ್ಧ ಕಪ್
ಚಕ್ಕೆ: 3 ತುಂಡು, ಲವಂಗ: 4, ಏಲಕ್ಕಿ: 1
ಅಚ್ಚಖಾರದ ಪುಡಿ: 2 ಚಮಚ
ಧನಿಯಾ ಪುಡಿ: 3 ಚಮಚ
ಕೊತ್ತಂಬರಿ ಸೊಪ್ಪು: ಸ್ವಲ್ಪ
ಎಣ್ಣೆ, ಅರಿಶಿನ, ಉಪ್ಪು: ರುಚಿಗೆ ತಕ್ಕಷ್ಟು
ಕೈಮಾ ಉಂಡೆ ಮಿಶ್ರಣಕ್ಕೆ
ಹುರಿಗಡಲೆ (ಪುಡಿ ಮಾಡಿದ್ದು): 4 ಚಮಚ
ಮೊಟ್ಟೆ: 1
ಹಸಿಮೆಣಸಿನಕಾಯಿ: 1
ಕಾಳುಮೆಣಸು: 1 ಚಮಚ
ಅರ್ಧ ಈರುಳ್ಳಿ, 4-5 ಎಸಳು ಬೆಳ್ಳುಳ್ಳಿ, ಸಣ್ಣ ತುಂಡು ಶುಂಠಿ
ಖಾರದ ಪುಡಿ: ಅರ್ಧ ಚಮಚ
ಗರಂ ಮಸಾಲಾ: ಕಾಲು ಚಮಚ
ಕೊತ್ತಂಬರಿ ಸೊಪ್ಪು, ಅರಿಶಿನ ಮತ್ತು ಉಪ್ಪು: ಸ್ವಲ್ಪ
ಮಾಡುವ ಸುಲಭ ವಿಧಾನ (Step-by-Step Method)
ಸಾಂಬಾರ್‌ಗೆ ಮಸಾಲೆ ಹುರಿದು ರುಬ್ಬಿಕೊಳ್ಳಿ
*ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಚೆನ್ನಾಗಿ ಹುರಿಯಿರಿ.
*ಕೊನೆಯಲ್ಲಿ ತೆಂಗಿನ ತುರಿ ಹಾಕಿ ಒಂದೆರಡು ಸೆಕೆಂಡ್ ಬಾಡಿಸಿ ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಬಿಡಿ.
*ನಂತರ ಮಿಕ್ಸಿ ಜಾರಿಗೆ ಹುರಿದ ಮಿಶ್ರಣ, ಚಕ್ಕೆ, ಲವಂಗ, ಏಲಕ್ಕಿ, ಖಾರದ ಪುಡಿ, ಧನಿಯಾ ಪುಡಿ, ಕೊತ್ತಂಬರಿ ಸೊಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
ಸಾಂಬಾರ್ ಒಗ್ಗರಣೆ
*ಪಾತ್ರೆಗೆ ಎಣ್ಣೆ ಹಾಕಿ, ಹೆಚ್ಚಿದ ಈರುಳ್ಳಿ, 2 ಹಸಿಮೆಣಸಿನಕಾಯಿ, ಚಿಟಿಕೆ ಅರಿಶಿನ ಹಾಕಿ ಹುರಿಯಿರಿ.
*ಇದಕ್ಕೆ ಅರ್ಧ ಸೌಟು ರುಬ್ಬಿದ ಮಸಾಲೆ ಹಾಕಿ ಎಣ್ಣೆಯಲ್ಲಿ ಬಾಡಿಸಿ, ನಂತರ ಉಳಿದ ಸಂಪೂರ್ಣ ಮಸಾಲೆ ಮತ್ತು ಸಾಂಬಾರಿಗೆ ಬೇಕಾದಷ್ಟು ನೀರು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
*ಮುದ್ದೆಗೆ ಬೇಕಿದ್ದರೆ ಸಾಂಬಾರ್ ಸ್ವಲ್ಪ ತೆಳುವಾಗಿರಲಿ. ಇದನ್ನು ಸಣ್ಣ ಉರಿಯಲ್ಲಿ ಕುದಿಯಲು ಬಿಡಿ.
ಕೈಮಾ ಉಂಡೆ ತಯಾರಿ (ಸೀಕ್ರೆಟ್ ಟ್ರಿಕ್)
*ಚಿಕನ್ ತುಂಡುಗಳಲ್ಲಿ ನೀರಿಲ್ಲದಂತೆ ಚೆನ್ನಾಗಿ ಹಿಂಡಿ, ಮಿಕ್ಸಿಯಲ್ಲಿ ಕೇವಲ 1-2 ಸುತ್ತು ಪಲ್ಸ್ ಮಾಡಿ (ತುಂಬಾ ನುಣ್ಣಗೆ ಮಾಡಬೇಡಿ).
*ಮತ್ತೊಂದು ಜಾರಿಗೆ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು, ಕಾಳುಮೆಣಸು ಮತ್ತು ಕೊತ್ತಂಬರಿ ಸೊಪ್ಪನ್ನು ನೀರು ಹಾಕದೆ ತರಿತರಿಯಾಗಿ ರುಬ್ಬಿಕೊಳ್ಳಿ.
*ಒಂದು ಪಾತ್ರೆಯಲ್ಲಿ ರುಬ್ಬಿದ ಚಿಕನ್, ಈ ಮಸಾಲೆ, ಖಾರದ ಪುಡಿ, ಗರಂ ಮಸಾಲಾ, ಚಿಟಿಕೆ ಅರಿಶಿನ, ಉಪ್ಪು, 1 ಮೊಟ್ಟೆ ಮತ್ತು 4 ಚಮಚ ಹುರಿಗಡಲೆ ಪುಡಿ ಹಾಕಿ ಚೆನ್ನಾಗಿ ನಾದಿಕೊಳ್ಳಿ.
*ಈಗ ಕೈಗೆ ಎಣ್ಣೆ ಸವರಿಕೊಂಡು ಸಣ್ಣ ಸಣ್ಣ ಉಂಡೆಗಳನ್ನು (Koftas) ಮಾಡಿಟ್ಟುಕೊಳ್ಳಿ.
ಸಾಂಬಾರ್‌ನಲ್ಲಿ ಉಂಡೆಗಳನ್ನು ಬೇಯಿಸಿ
*ಕುದಿಯುತ್ತಿರುವ ಸಾಂಬಾರಿಗೆ ಈ ಹಸಿ ಕೈಮಾ ಉಂಡೆಗಳನ್ನು ಒಂದೊಂದಾಗಿ ಬಿಡಿಬಿಡಿಯಾಗಿ ಹಾಕಿ. (ಎಣ್ಣೆಯಲ್ಲಿ ಕರಿಯುವ ಅಥವಾ ಹಬೆಯಲ್ಲಿ ಬೇಯಿಸುವ ಅಗತ್ಯವಿಲ್ಲ).
*ಉಂಡೆಗಳನ್ನು ಹಾಕಿದ ತಕ್ಷಣ ಸೌಟು ಹಾಕಬೇಡಿ. ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ 15 ರಿಂದ 20 ನಿಮಿಷ ಬೇಯಿಸಿ.
*ಉಂಡೆಗಳು ಚೆನ್ನಾಗಿ ಬೆಂದ ನಂತರ ಸಾಂಬಾರಿನ ಮೇಲೆ ತೇಲುತ್ತವೆ (ಒಂದೂ ಉಂಡೆ ಒಡೆಯುವುದಿಲ್ಲ).
*ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಉದುರಿಸಿ ಗ್ಯಾಸ್ ಆಫ್ ಮಾಡಿದರೆ, ಬಿಸಿಬಿಸಿಯಾದ ರುಚಿಕರ ಚಿಕನ್ ಕೈಮಾ ಸಾಂಬಾರ್ ಸವಿಯಲು ಸಿದ್ಧ..
ಉಪಯುಕ್ತ ಕಿಚನ್ ಟಿಪ್ಸ್ (Tips for Perfect Keema Balls)
*ಚಿಕನ್‌ನಲ್ಲಿ ನೀರಿನಂಶ ಇರಲೇಬಾರದು, ನೀರಿದ್ದರೆ ಉಂಡೆಗಳು ಸಾಂಬಾರಿನಲ್ಲಿ ಕರಗಿಹೋಗುತ್ತವೆ.
*ಹುರಿಗಡಲೆ ಪುಡಿ ಅತಿಯಾಗಿ ಹಾಕಬೇಡಿ, 4 ಚಮಚಕ್ಕಿಂತ ಜಾಸ್ತಿ ಹಾಕಿದರೆ ಉಂಡೆಗಳು ಗಟ್ಟಿಯಾಗುತ್ತವೆ.
*ಮೊಟ್ಟೆ ಸೇರಿಸುವುದರಿಂದ ಉಂಡೆಗಳು ಸಾಂಬಾರಿನಲ್ಲಿ ಒಡೆಯುವುದಿಲ್ಲ ಮತ್ತು ಬಾಯಲ್ಲಿ ಕರಗುವಷ್ಟು ಸಾಫ್ಟ್ ಆಗಿ ಬರುತ್ತವೆ.