Bengaluru vegan cloud kitchen: ಬೆಂಗಳೂರಿನ 24 ವರ್ಷದ ದೃಷ್ಟಿ ಸಿಂಗ್, ತಮ್ಮ ಫ್ಲ್ಯಾಟ್ನಿಂದಲೇ ಪ್ರತಿದಿನ 10–15 ಆರ್ಡರ್ ಪಡೆಯುತ್ತಾ ತಿಂಗಳಿಗೆ ₹50,000 ಗಳಿಸುತ್ತಿದ್ದಾರೆ! ಕೇವಲ ₹2 ಲಕ್ಷ ಬ್ಯಾಂಕ್ ಸಾಲ ಮತ್ತು ಇನ್ಸ್ಟಾಗ್ರಾಮ್ ಕಂಟೆಂಟ್ ಬಲದಿಂದ ‘ದಿ ಮಿಸ್ಕಾ’ ವೀಗನ್ ಕ್ಲೌಡ್ ಕಿಚನ್ ಬೆಳೆಸಿದ ಈ ಯುವತಿಯ ಸ್ಫೂರ್ತಿದಾಯಕ ಕಥೆ ಇಲ್ಲಿದೆ.
ಸಸ್ಯಾಹಾರಕ್ಕೆ ಹೆಚ್ಚು ಪ್ರಾಮುಖ್ಯತೆ ಇರುವ ಭಾರತದಲ್ಲಿ, ಹಾಲು ಮತ್ತು ಡೈರಿ ಉತ್ಪನ್ನಗಳಿಲ್ಲದ ‘ವೀಗನ್’ (Vegan) ಆಹಾರ ಉದ್ಯಮವನ್ನು ಆರಂಭಿಸಿ ಬೆಂಗಳೂರಿನ 24 ವರ್ಷದ ಯುವತಿಯೊಬ್ಬರು ಗಮನ ಸೆಳೆದಿದ್ದಾರೆ. ದೃಷ್ಟಿ ಸಿಂಗ್ ಎಂಬ ಯುವತಿ 2025ರಲ್ಲಿ ಬೆಂಗಳೂರಿನಲ್ಲಿ ‘ದಿ ಮಿಸ್ಕಾ’ (The Miska) ಎಂಬ ವೀಗನ್ ಕ್ಲೌಡ್ ಕಿಚನ್ ಆರಂಭಿಸಿದ್ದು, ತಮ್ಮ ಫ್ಲ್ಯಾಟ್ನಿಂದಲೇ ಆರೋಗ್ಯಕರ ಆಹಾರವನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ತಿಂಗಳಿಗೆ ಸುಮಾರು ₹50,000 ಗಳಿಸುತ್ತಿದ್ದಾರೆ.
ದೆಹಲಿಯಿಂದ ಬೆಂಗಳೂರಿಗೆ: ದೃಷ್ಟಿ ಸಿಂಗ್ ಹಿನ್ನೆಲೆ ಏನು?
ಮೂಲತಃ ದೆಹಲಿಯವರಾದ ದೃಷ್ಟಿ ಸಿಂಗ್ ದ್ವಾರಕಾದಲ್ಲಿ ಶಾಲಾ ಶಿಕ್ಷಣ ಮುಗಿಸಿ, ಪಂಜಾಬ್ನ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯಲ್ಲಿ ಕೃಷಿ (Agriculture) ಪದವಿ ಪಡೆದಿದ್ದಾರೆ. 2024ರಲ್ಲಿ ಸ್ವಂತ ಉದ್ಯಮ ಕಟ್ಟುವ ಕನಸಿನೊಂದಿಗೆ ಬೆಂಗಳೂರಿಗೆ ಬಂದ ಅವರು, ನಂತರ ವೀಗನ್ ಜೀವನಶೈಲಿಯನ್ನು ಅಳವಡಿಸಿಕೊಂಡರು. ಸಾಮಾನ್ಯ ಸಸ್ಯಾಹಾರಿ ಆಹಾರಗಳಲ್ಲಿ ಚೀಸ್ ಹಾಗೂ ಡೈರಿ ಉತ್ಪನ್ನಗಳ ಬಳಕೆ ಹೆಚ್ಚಾಗಿದ್ದು, ಅವುಗಳಲ್ಲಿ ಕ್ಯಾಲೋರಿ ಹೆಚ್ಚು ಮತ್ತು ಪ್ರೊಟೀನ್ ಕಡಿಮೆ ಇರುವುದನ್ನು ಅವರು ಗಮನಿಸಿದರು. ಹೀಗಾಗಿ ಮಾಂಸ ಮತ್ತು ಹಾಲಿನ ಉತ್ಪನ್ನಗಳಿಲ್ಲದೆ, ಕಡಿಮೆ ಕ್ಯಾಲೋರಿ ಹಾಗೂ ಅಧಿಕ ಪ್ರೊಟೀನ್ ಇರುವ ಕೈಗೆಟುಕುವ ದರದ ‘ವೀಗನ್ ಬೌಲ್’ಗಳನ್ನು ಪರಿಚಯಿಸಲು ನಿರ್ಧರಿಸಿದರು ಎಂದು ‘ಸ್ಟಾರ್ಟಪ್ ಪೀಡಿಯಾ’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
₹2 ಲಕ್ಷ ಬ್ಯಾಂಕ್ ಸಾಲ: ಅಂಗಡಿ ಬದಲು ಫ್ಲ್ಯಾಟ್ನಲ್ಲೇ ಕಿಚನ್!
ತಮ್ಮ ಕನಸಿನ ಉದ್ಯಮ ಆರಂಭಿಸಲು ದೃಷ್ಟಿ ಬ್ಯಾಂಕಿನಿಂದ ₹2 ಲಕ್ಷ ಸಾಲ ಪಡೆದರು. ಮೊದಲು ವಾಣಿಜ್ಯ ಮಳಿಗೆಯಲ್ಲಿ (ಶಾಪ್) ಕಿಚನ್ ತೆರೆಯಲು ಯೋಚಿಸಿದ್ದರಾದರೂ, ಬೆಂಗಳೂರಿನ ದುಬಾರಿ ಬಾಡಿಗೆ ಮತ್ತು ಭಾರಿ ಸೆಕ್ಯುರಿಟಿ ಡೆಪಾಸಿಟ್ ಭರಿಸುವುದು ಅವರಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ಒಂದು ಫ್ಲ್ಯಾಟ್ ಹುಡುಕಿ, ರೂಮ್ಮೇಟ್ಗಳೊಂದಿಗೆ ಅಡುಗೆ ಸಮಯ ಮತ್ತು ಸ್ವಚ್ಛತೆಯ ಕುರಿತು ಒಪ್ಪಂದ ಮಾಡಿಕೊಂಡು ಅಲ್ಲಿಂದಲೇ ‘ದಿ ಮಿಸ್ಕಾ’ ಆರಂಭಿಸಿದರು. ಪಡೆದ ₹2 ಲಕ್ಷ ಸಾಲದ ಬಹುಪಾಲು ಹಣ ಫ್ಲ್ಯಾಟ್ ಬಾಡಿಗೆ ಹಾಗೂ ಡೆಪಾಸಿಟ್ಗೆ ಖರ್ಚಾದರೆ, ಉಳಿದ ಹಣದಲ್ಲಿ ಪಾತ್ರೆಗಳು, ಕೌಂಟರ್ ಟೇಬಲ್ ಮತ್ತು ಗ್ಯಾಸ್ ಸಿಲಿಂಡರ್ ಖರೀದಿಸಿದರು. ಅರೆಕಾಲಿಕ ಕೆಲಸಗಾರರಿಗೆ ಸ್ವಲ್ಪ ಹಣ ಹಾಗೂ ಅಡುಗೆ ಸಾಮಗ್ರಿಗಳಿಗಾಗಿ ₹10,000 ಮೀಸಲಿಟ್ಟಿದ್ದರು.
ಬ್ರ್ಯಾಂಡ್ ಪಾಲುದಾರಿಕೆ ಮತ್ತು ವಿಶೇಷ ಮೆನು
ಆರಂಭದಲ್ಲಿ ಬಜೆಟ್ ಕೊರತೆಯಿಂದಾಗಿ ಟೋಫು ಮತ್ತು ಟೆಂಪೆ (Tempeh) ಯನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಲು ಸಾಧ್ಯವಾಗದ ಕಾರಣ ಲಾಭದ ಪ್ರಮಾಣ ಕಡಿಮೆಯಿತ್ತು. ಆದರೆ ಇನ್ಸ್ಟಾಗ್ರಾಮ್ನಲ್ಲಿ ಅವರು ಹಂಚಿಕೊಂಡ ಕಂಟೆಂಟ್ನಿಂದಾಗಿ ‘ಡ್ಯಾನ್ಸಿಂಗ್ ಕೌ’ (Dancing Cow - ಓಟ್ ಮಿಲ್ಕ್ ಬ್ರ್ಯಾಂಡ್) ಮತ್ತು ‘ಹಲೋ ಟೆಂಪೆ’ (Hello Tempayy) ಬ್ರ್ಯಾಂಡ್ಗಳ ಪಾಲುದಾರಿಕೆ ಅವರಿಗೆ ಲಭಿಸಿತು.
ನಗರದ ಆರೋಗ್ಯ ಪ್ರಿಯರನ್ನು ಗುರಿಯಾಗಿಸಿಕೊಂಡು ಸಿದ್ಧಪಡಿಸಿರುವ ಅವರ ಮೆನುವಿನಲ್ಲಿ ಪಾಲಕ್-ತೆಂಗಿನ ಹಾಲಿನ ಟೆಂಪೆ ಬೌಲ್, ಶಾಹಿ ಟೋಫು ಬೌಲ್, ಪೆರಿ ಪೆರಿ ಟೋಫು ಬೌಲ್, ಮೆಕ್ಸಿಕನ್ ಬರಿಟೊ ಬೌಲ್, ಅವಕಾಡೊ ಟೋಸ್ಟ್, ಪ್ಲಾಂಟ್-ಪ್ರೊಟೀನ್ ಶೇಕ್ಸ್, ಕಡಲೆಕಾಳು ಹಾಗೂ ಸ್ವೀಟ್ಕಾರ್ನ್ ಚಾಟ್ ಮತ್ತು ವೀಗನ್ ಡೆಸರ್ಟ್ಗಳು ಲಭ್ಯವಿವೆ. ವೀಗನ್ ಡೆಸರ್ಟ್ ಹೊರತುಪಡಿಸಿ ಉಳಿದೆಲ್ಲ ಖಾದ್ಯಗಳನ್ನು ಅವರೇ ಸ್ವತಃ ತಯಾರಿಸುತ್ತಾರೆ.
ನಿತ್ಯ 10–15 ಆರ್ಡರ್, ತಿಂಗಳಿಗೆ ₹50,000 ಆದಾಯ
‘ದಿ ಮಿಸ್ಕಾ’ದಲ್ಲಿ ಖಾದ್ಯಗಳ ಬೆಲೆ ₹100 ರಿಂದ ₹400 ರವರೆಗೆ ಇದ್ದು, ಸಾಮಾನ್ಯವಾಗಿ ₹75 ರಿಂದ ₹82 ರಷ್ಟು ನಿವ್ವಳ ಲಾಭ ಸಿಗುತ್ತದೆ. ಪ್ರತಿದಿನ 10 ರಿಂದ 15 ಆರ್ಡರ್ಗಳು ಬರುತ್ತಿದ್ದು, ತಿಂಗಳಿಗೆ ಸುಮಾರು ₹50,000 ಆದಾಯ ಗಳಿಸುತ್ತಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಫುಡ್ ವಿಡಿಯೋಗಳು, ರೆಸಿಪಿಗಳು ಹಾಗೂ ಅಡುಗೆಮನೆಯ ಬಿಹೈಂಡ್-ದಿ-ಸೀನ್ಸ್ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ 27,000 ಫಾಲೋವರ್ಸ್ಗಳನ್ನು ಗಳಿಸಿದ್ದಾರೆ.
ಫ್ರೀಲ್ಯಾನ್ಸ್ ಡಿಸೈನರ್ ಆಗಿದ್ದ ಅನುಭವ ನೆರವಾಯಿತು!
ದೃಷ್ಟಿ ಅವರ ಲಿಂಕ್ಡ್ಇನ್ ಪ್ರೊಫೈಲ್ ಪ್ರಕಾರ, ಅವರು ಈ ಹಿಂದೆ 4 ವರ್ಷಗಳಿಗೂ ಹೆಚ್ಚು ಕಾಲ ಫ್ರೀಲ್ಯಾನ್ಸ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ. ಬ್ಲೂಹಾಕ್ಸ್ ಎಡ್ಟೆಕ್ (Bluehawks Edtech) ಬ್ರ್ಯಾಂಡ್ಗಾಗಿ ಕಂಟೆಂಟ್ ಮೂಲಕ ಕೇವಲ 2 ತಿಂಗಳಲ್ಲಿ ಶೂನ್ಯದಿಂದ 65 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹಾಗೂ 5 ಮಿಲಿಯನ್ಗೂ ಅಧಿಕ ರೀಚ್ ತಂದುಕೊಟ್ಟಿದ್ದರು. ಕಂಟೆಂಟ್ ಮಾರ್ಕೆಟಿಂಗ್ ಮೇಲಿನ ಆ ಆಸಕ್ತಿ ಮತ್ತು ಅನುಭವವೇ ಇಂದು ತಮ್ಮ ಕ್ಲೌಡ್ ಕಿಚನ್ ಅನ್ನು ಯಶಸ್ವಿಯಾಗಿ ಮುನ್ನಡೆಸಲು ಅವರಿಗೆ ನೆರವಾಗಿದೆ.









