ಮಾವಿನ ಕಾಯಿ ಹೆಸರು ಕೇಳಿದ್ರೆ ಗರ್ಭಿಣಿಯರಿಗೆ ಮಾತ್ರ ಬಾಯಿಯಲ್ಲಿ ನೀರು ಬರುತ್ತೆ ಎಂದು ಭಾವಿಸಬೇಕಾಗಿಲ್ಲ. ಮಾವು ಪ್ರಿಯರ ಬಾಯಲ್ಲೂ ನೀರಿಳಿಯುತ್ತೆ. ಉಪ್ಪು, ಖಾರ ಬೆರೆಸಿದ ಮಾವಿನ ಕಾಯಿ ಹೋಳೊಂದನ್ನು ಬಾಯಿಯಲ್ಲಿಟ್ಟರೆ ಸುತ್ತಮುತ್ತ ಯಾರಿದ್ದಾರೆ, ಏನಾಗುತ್ತಿದೆ ಎನ್ನುವುದನ್ನೇ ಮರೆತು ಆ ಸ್ವಾದದಲ್ಲಿ ಕಳೆದು ಹೋಗುತ್ತೇವೆ. ಹುಳಿ, ಸಿಹಿ, ಉಪ್ಪು, ಖಾರ ಒಟ್ಟಾಗಿ ನಾಲಿಗೆ ಮೇಲೆ ಹೊಸ ಲೋಕವೊಂದನ್ನೇ ಸೃಷ್ಟಿಸುತ್ತವೆ. ಚಟ್ನಿ, ಗೊಜ್ಜು, ಉಪ್ಪಿನಕಾಯಿ, ಚಿತ್ರನ್ನ...ಹೀಗೆ ಮಾವಿನ ಕಾಯಿಯಿಂದ ನಾನಾ ಖಾದ್ಯಗಳನ್ನು ಕೂಡ ಸಿದ್ಧಪಡಿಸಬಹುದು. ಉತ್ತರ ಭಾರತದಲ್ಲಿ ಮಾವಿನ ಕಾಯಿಯಿಂದ ಸಿದ್ಧಪಡಿಸುವ ಆಮ್ ಪನಾ ಎಂಬ ಜ್ಯೂಸ್ ತುಂಬಾನೇ ಫೇಮಸ್. ಮಾವಿನ ಕಾಯಿ ತಿನ್ನೋದ್ರಿಂದ ಆರೋಗ್ಯಕ್ಕೆ ಅನೇಕ ಲಾಭಗಳು ಕೂಡ ಇವೆ.

ಸುಲಭವಾಗಿ ಮಾಡೋ ಟೇಸ್ಟಿ ಅಮೃತಫಲ ರೆಸಿಪಿ

ಬೇಸಿಗೆಯಲ್ಲಿ ನಿರ್ಜಲೀಕರಣದಿಂದ ರಕ್ಷಣೆ 
ಬೇಸಿಗೆಯ ಬಿರು ಬಿಸಿಲಿಗೆ ದೇಹದಿಂದ ಬೆವರಿನ ರೂಪದಲ್ಲಿ ನೀರು ಸಾಕಷ್ಟು ಪ್ರಮಾಣದಲ್ಲಿ ಹೊರ ಹೋಗುತ್ತದೆ. ಹೀಗಾಗಿ ಬೇಸಿಗೆಯಲ್ಲಿ ದ್ರವಾಹಾರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಇಲ್ಲವಾದ್ರೆ ನಿರ್ಜಲೀಕರಣದಂತಹ ಸಮಸ್ಯೆ ಎದುರಾಗುತ್ತದೆ. ಆದ್ರೆ ಬೇಸಿಗೆಯಲ್ಲಿ ಮಾವಿನ ಕಾಯಿ ಜ್ಯೂಸ್ ಸೇವನೆಯಿಂದ ನಿರ್ಜಲೀಕರಣವನ್ನು ತಡೆಯಬಹುದು. ಈ ಜ್ಯೂಸ್ ಸೋಡಿಯಂ ಕ್ಲೋರೈಡ್ ಹಾಗೂ ಕಬ್ಬಿಣಾಂಶ ದೇಹದಿಂದ ಹೊರಹೋಗದಂತೆ ತಡೆಯುತ್ತದೆ. ಬೇಸಿಗೆಯಲ್ಲಿ ಈ ಎರಡು ಮಿನರಲ್ಸ್ ಬೆವರಿನ ಮೂಲಕ ದೇಹದಿಂದ ಹೆಚ್ಚಿನ ಪ್ರಮಾಣದಲ್ಲಿ ಹೊರ ಹೋಗೋದ್ರಿಂದ ನಿರ್ಜಲೀಕರಣವುಂಟಾಗುತ್ತದೆ.

ಹೊಟ್ಟೆ ಸಮಸ್ಯೆಗಳ ಪರಿಹಾರ
ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಮಾವಿನಕಾಯಿ ಸೇವನೆಯಿಂದ ಕಡಿಮೆ ಮಾಡಬಹುದು. ಬೇಸಿಗೆಯಲ್ಲಿ ಹೆಚ್ಚಾಗಿ ಕಾಡುವ ಅಜೀರ್ಣ, ಭೇದಿ, ಮಲಬದ್ಧತೆಯಂತಹ ಸಮಸ್ಯೆಗಳಿಗೆ ಮಾವಿನ ಕಾಯಿ ರಾಮಬಾಣವಾಗಿದೆ.

ಹೃದಯಕ್ಕೆ ಉತ್ತಮ
ಮಾವಿನ ಕಾಯಿಯಲ್ಲಿ ನಿಯಾಸಿನ್ ಅಂಶವಿದ್ದು, ಇದು ಹೃದಯದ ಆರೋಗ್ಯಕ್ಕೆ ಉತ್ತಮ. ನಿಯಾಸಿನ್ ಹೃದಯ ಸಂಬಂಧಿ ಕಾಯಿಲೆಗಳನ್ನು ತಗ್ಗಿಸುವ ಜೊತೆಗೆ ರಕ್ತದಲ್ಲಿನ ಉತ್ತಮ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸಲು ನೆರವು ನೀಡುತ್ತದೆ.

ಲಾಕ್‍ಡೌನ್ ಒತ್ತಡ ತಗ್ಗಿಸಿದ ಕುಕ್ಕಿಂಗ್

ವಸಡಿನ ರಕ್ತಸ್ರಾವ ತಗ್ಗಿಸುತ್ತೆ
ಮಾವಿನ ಕಾಯಿ ವಸಡಿನ ರಕ್ತಸ್ರಾವವನ್ನು ತಗ್ಗಿಸಲು ನೆರವು ನೀಡುತ್ತೆ. ಅಷ್ಟೇ ಅಲ್ಲ, ಹಲ್ಲುಗಳು ಹುಳುಕಾಗದಂತೆ ತಡೆಯುತ್ತೆ ಕೂಡ. ಮಾವಿನ ಕಾಯಿ ತಿಂದ ಬಳಿಕ ನಿಮ್ಮ ಬಾಯಿಗೆ ಕೈ ಅಡ್ಡಲಾಗಿ ಹಿಡಿದು ಉಸಿರನ್ನೊಮ್ಮೆ ಪರೀಕ್ಷಿಸಿದ್ರೆ ತಾಜಾತನದ ಅನುಭವವಾಗುತ್ತದೆ. ಅಂದ್ರೆ ಬಾಯಿಯಿಂದ ಬರುವ ದುರ್ಗಂಧವನ್ನು ಮಾವಿನ ಕಾಯಿ ದೂರ ಮಾಡುತ್ತೆ. 

ಕರುಳು ಹಾಗೂ ಯಕೃತಿನ ಆರೋಗ್ಯವರ್ಧನೆ
ಮಾವಿನ ಕಾಯಿ ಕರುಳು ಹಾಗೂ ಯಕೃತಿನ ಆರೋಗ್ಯಕ್ಕೂ ಉತ್ತಮ. ಮಾವಿನ ಕಾಯಿ ತಿನ್ನೋದ್ರಿಂದ ಯಕೃತ್ತಿನಲ್ಲಿ ಬೈಲ್ ಎಂಬ ದ್ರಾವಣದ ಉತ್ಪತ್ತಿ ಹೆಚ್ಚುತ್ತದೆ. ಇದು ಸಣ್ಣ ಕರುಳಿನಲ್ಲಿ ಫ್ಯಾಟ್ ಹಾಗೂ ಕೆಲವು ವಿಟಮಿನ್‍ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೀರಿಕೊಳ್ಳಲು ನೆರವು ನೀಡುತ್ತದೆ. ಅಲ್ಲದೆ, ಆಹಾರದಲ್ಲಿರುವ ಕೆಲವು ಅಪಾಯಕಾರಿ ಸೂಕ್ಷ್ಮಾಣುಗಳನ್ನು ನಾಶಪಡಿಸಲು ನೆರವು ನೀಡುತ್ತದೆ.

ಶಕ್ತಿವರ್ಧಕ
ಮಧ್ಯಾಹ್ನ ಊಟದ ಬಳಿಕ ಕಣ್ಣುಗಳು ಭಾರವಾಗಿ ನಿದ್ರೆಗೆ ಜಾರೋದು ಕಾಮನ್. ಆದ್ರೆ ಸ್ವಲ್ಪವೇ ಸ್ವಲ್ಪ ಮಾವಿನ ಕಾಯಿ ಪುಡಿಯನ್ನು ಬಾಯಿಗೆ ಹಾಕೊಂಡ್ರೆ ಮಧ್ಯಾಹ್ನದ ಮಂಪರು ಕೂಡ ಮಾಯವಾಗುತ್ತೆ. ಇದಕ್ಕೆ ಕಾರಣ ಮಾವಿನ ಕಾಯಿ ಶರೀರಕ್ಕೆ ಹೆಚ್ಚಿನ ಶಕ್ತಿ ಒದಗಿಸುವ ಮೂಲಕ ನೀವು ನಿದ್ರೆಗೆ ಜಾರದಂತೆ ತಡೆಯುತ್ತದೆ. ಜೊತೆಗೆ ಚೆನ್ನಾಗಿ ಕೆಲಸ ಮಾಡಲು ಕೂಡ ನೆರವು ನೀಡುತ್ತೆ. 

ಬೇಸಿಗೆಯಲ್ಲಿ ಮಕ್ಕಳಿಗೆ ಈ ಜ್ಯೂಸ್ ನೀಡಲು ಮರೆಯಬೇಡಿ

ತೂಕ ಇಳಿಕೆಗೆ ನೆರವು
ಮಾವಿನ ಕಾಯಿ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತೆ, ಆ ಮೂಲಕ ಕ್ಯಾಲೋರಿ ಬರ್ನ್ ಮಾಡಲು ನೆರವು ನೀಡುತ್ತೆ. ಮಾವಿನ ಕಾಯಿಯಲ್ಲಿ ಕ್ಯಾಲೋರಿ ಹಾಗೂ ಸಕ್ಕರೆ ಕೂಡ ಕಡಿಮೆ ಪ್ರಮಾಣದಲ್ಲಿರುವ ಕಾರಣ ಮಧುಮೇಹ ಕಾಯಿಲೆ ಹೊಂದಿರುವವರು ಕೂಡ ಇದನ್ನು ಸೇವಿಸಬಹುದು. 

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತೆ
ಮಾವಿನ ಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ. ಮಾವಿನ ಕಾಯಿಯಲ್ಲಿ ವಿಟಮಿನ್ ಎ, ಕ್ಯಾಲ್ಸಿಯಂ ಹಾಗೂ ಮೆಗ್ನೇಷಿಯಂ ಕೂಡ ಅಧಿಕ ಪ್ರಮಾಣದಲ್ಲಿದೆ.