ಬೇಸಿಗೆಯಲ್ಲಿ ಮಕ್ಕಳಿಗೆ ಈ ಜ್ಯೂಸ್ ನೀಡಲು ಮರೆಯಬೇಡಿ
ಬಿಸಿಲಿನ ಬೇಗೆಗೆ ತಂಪಾದ ಜ್ಯೂಸ್ ಬೇಕೆಂಬ ಬಯಕೆ ಸಹಜ. ಆದ್ರೆ ಪ್ರಸಕ್ತ ಸನ್ನಿವೇಶದಲ್ಲಿ ಆರೋಗ್ಯಕ್ಕೆ ಹಿತ ನೀಡುವ ನೈಸರ್ಗಿಕ ಜ್ಯೂಸ್‍ಗಳನ್ನೇ ಮಕ್ಕಳಿಗೆ ನೀಡೋದು ಉತ್ತಮ.
ಬಿಸಿಲಿನ ದಾಹಕ್ಕೆ ಎಷ್ಟು ನೀರು ಕುಡಿದ್ರೂ ಮತ್ತಷ್ಟು ಬೇಕು ಎಂದು ದೇಹ ಬೇಡಿಕೆಯಿಡುತ್ತದೆ. ದೊಡ್ಡವರೇನು ಬಾಯಿ ಒಣಗಿದ ತಕ್ಷಣ ನೀರು ಇಲ್ಲವೆ ಜ್ಯೂಸ್ ಕುಡಿದು ದಾಹ ತೀರಿಸಿಕೊಳ್ಳುತ್ತಾರೆ. ಆದ್ರೆ, ಮಕ್ಕಳು ಹಾಗಲ್ಲ. ಆಟವಾಡುವ ಮೂಡ್‍ನಲ್ಲಿ ಕೆಲವೊಮ್ಮೆ ಅವರಿಗೆ ಹಸಿವು, ಬಾಯಾರಿಕೆ ಯಾವುದೂ ಗಮನಕ್ಕೆ ಬರೋದಿಲ್ಲ. ಇದ್ರಿಂದ ಡಿಹೈಡ್ರೇಷನ್ ಆಗುವ ಸಾಧ್ಯತೆಯಿರುತ್ತದೆ. ಆದಕಾರಣ ಬೇಸಿಗೆಯಲ್ಲಿ ಮಕ್ಕಳು ಹೆಚ್ಚು ದ್ರವಾಹಾರಗಳನ್ನು ಸೇವಿಸುವಂತೆ ನೋಡಿಕೊಳ್ಳೋದು ಅಗತ್ಯ. ಈಗಂತೂ ಟಿವಿಯಲ್ಲಿ ಬರುವ ನಾನಾ ವಿಧದ ತಂಪು ಪಾನೀಯ ಬಾಟಲ್‍ಗಳಿಗೆ ಮಕ್ಕಳು ಬೇಡಿಕೆ ಇಡುತ್ತಾರೆ. ಆದ್ರೆ ರೆಡಿಮೇಡ್ ಜ್ಯೂಸ್‍ಗಳಲ್ಲಿ ಕೆಮಿಕಲ್ಸ್ ಅಂತೂ ಇದ್ದೇಇರುತ್ತೆ. ಹೀಗಾಗಿ ಬಾಯಿಗೆ ರುಚಿಸಿದ್ರೂ ಆರೋಗ್ಯದ ದೃಷ್ಟಿಯಿಂದ ಅವುಗಳನ್ನು ಕುಡಿಯೋದು ಒಳ್ಳೆಯದ್ದಲ್ಲ. ಆದಕಾರಣ ಮಕ್ಕಳಿಗೆ ಆದಷ್ಟು ನೈಸರ್ಗಿಕವಾದ ಆರೋಗ್ಯಕರ ಜ್ಯೂಸ್‍ಗಳನ್ನು ನೀಡೋದು ಉತ್ತಮ. ಅಂಥ ಕೆಲವು ಸಿಂಪಲ್ ಜ್ಯೂಸ್‍ಗಳು ಇಲ್ಲಿವೆ.
ಲಾಕ್‌ಡೌನಲ್ಲಿ ಆನ್‌ಲೈನಲ್ಲಿ ಹೆಚ್ಚು ಹುಡುಕಾಡಿದ ರೆಸಿಪಿಗಳಿವು
ಕೋಕಂ ಶರಬತ್
ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಬೆಳೆಯುವ ಕೋಕಂ ಹಣ್ಣುಗಳಿಂದ ತಯಾರಿಸಿದ ಶರಬತ್ ರುಚಿಯಾಗಿರುವ ಜೊತೆಗೆ ನೋಡಲು ಆಕರ್ಷಕವಾಗಿರುವ ಕಾರಣ ಮಕ್ಕಳು ಖಂಡಿತಾ ಇದನ್ನು ಇಷ್ಟಪಟ್ಟು ಕುಡಿಯುತ್ತಾರೆ. ಮಲೆನಾಡು ಹಾಗೂ ಮಂಗಳೂರು ಸ್ಟೋರ್‍ಗಳಲ್ಲಿ ಬಾಟಲ್‍ಗಳಲ್ಲಿ ಶೇಖರಿಸಿಟ್ಟಿರುವ ಕೋಕಂ ಸಿರಪ್ ಸಿಗುತ್ತದೆ. ಇದನ್ನು ಸಕ್ಕರೆಯೊಂದಿಗೆ ನೀರಿನಲ್ಲಿ ಬೆರೆಸಿದ್ರೆ ಕೋಕಂ ಜ್ಯೂಸ್ ಸಿದ್ಧವಾಗುತ್ತೆ. ಇದು ಅತ್ಯಂತ ಸುಲಭವಾಗಿ ಮಾಡಬಹುದಾದ ಜ್ಯೂಸ್ ಆಗಿರುವ ಕಾರಣ ಮಕ್ಕಳ ಬಳಿಯೇ ತಯಾರಿಸಿ ಕುಡಿಯುವಂತೆ ಹೇಳಿದ್ರೆ ಅವರು ಖುಷಿಯಿಂದ ಆ ಕೆಲಸ ಮಾಡುತ್ತಾರೆ. ಇದು ಜೀರ್ಣಕ್ರಿಯೆಯನ್ನು ಉತ್ತಮಪಡಿಸುವ ಜೊತೆಗೆ ಅನೇಕ ಆರೋಗ್ಯಕಾರಿ ಅಂಶಗಳನ್ನೊಳಗೊಂಡಿದೆ.
ನಿಂಬೆ ಹಣ್ಣಿನ ಜ್ಯೂಸ್
ನಿಂಬೆ ಹಣ್ಣಿನ ಜ್ಯೂಸ್ ಬಹುತೇಕ ಮಕ್ಕಳು ಇಷ್ಟಪಡುವ ಪಾನೀಯಗಳಲ್ಲಿ ಒಂದು. ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಇರುವ ಕಾರಣ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ. ಅಷ್ಟೇ ಅಲ್ಲದೆ, ದೇಹಕ್ಕೆ ಅಗತ್ಯವಿರುವ ಕ್ಯಾಲ್ಸಿಯಂ, ಮೆಗ್ನೇಷಿಯಂ, ಫಾಸ್ಪರಸ್, ಕಾಬೋಹೈಡ್ರೇಟ್ಸ್ ಹಾಗೂ ಪ್ರೋಟೀನ್‍ಗಳ ಪೂರೈಕೆಗೆ ನೆರವು ನೀಡುತ್ತೆ.
ಮನೆಯಲ್ಲೇ ಸುಲಭವಾಗಿ ಬೆಳೆಯೋ ತರಕಾರಿಗಳಿವು
ಬಾರ್ಲಿ ನೀರು
ಬಾರ್ಲಿಯಲ್ಲಿ ವಿಟಮಿನ್ಸ್, ಮಿನರಲ್ಸ್, ಆಂಟಿ ಆಕ್ಸಿಡೆಂಟ್ ಹಾಗೂ ಫೈಟೋಕೆಮಿಕಲ್ಸ್ ಹೆಚ್ಚಿನ ಪ್ರಮಾಣದಲ್ಲಿವೆ. ಇದು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡುತ್ತದೆ. ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತೆ. 6 ತಿಂಗಳು ತುಂಬಿದ ಮಗುವಿಗೆ ಕೂಡ ಬಾರ್ಲಿ ನೀರನ್ನು ಕುಡಿಸಬಹುದು ಎನ್ನುತ್ತಾರೆ ವೈದ್ಯರು. ಬಾರ್ಲಿಯನ್ನು ತೊಳೆದು ನೀರು ಹಾಕಿ ಕುಕ್ಕರ್‍ನಲ್ಲಿ ಬೇಯಿಸಬೇಕು. ನೀರನ್ನು ಸೋಸಿ ತಣ್ಣಗಾದ ಬಳಿಕ ಅದಕ್ಕೆ ಬೆಲ್ಲ ಸೇರಿಸಿ ಮಕ್ಕಳಿಗೆ ಕುಡಿಯಲು ನೀಡಿ.
ತೆಂಗಿನಕಾಯಿ ನೀರು
ಎಳನೀರು ಆರೋಗ್ಯಕ್ಕೆ ಒಳ್ಳೆಯದು ಎಂಬುದು ಎಲ್ಲರಿಗೂ ಗೊತ್ತು. ಬೇಸಿಗೆಯಲ್ಲಿ ಮಕ್ಕಳಿಗೆ ಎಳನೀರು ಕುಡಿಸೋದು ತುಂಬಾ ಒಳ್ಳೆಯದು. ಆದ್ರೆ ಪ್ರಸಕ್ತ ಪರಿಸ್ಥಿತಿಯಲ್ಲಿ ಮನೆಯಿಂದ ಹೊರಹೋಗಿ ಎಳನೀರು ಕೊಂಡು ತರೋದು ಸ್ವಲ್ಪ ಮಟ್ಟಿಗೆ ರಿಸ್ಕ್‍ನ ಸಂಗತಿಯೇ ಆಗಿದೆ. ಹೀಗಾಗಿ ಮನೆಯಲ್ಲಿ ತೆಂಗಿನಕಾಯಿ ಇದ್ರೆ ಅದರ ನೀರಿನಿಂದಲೇ ಮಕ್ಕಳಿಗೆ ಆರೋಗ್ಯಕರ ಜ್ಯೂಸ್ ತಯಾರಿಸಿ ನೀಡಬಹುದು. 2 ಕಪ್ ತೆಂಗಿನಕಾಯಿ ನೀರಿಗೆ ಅರ್ಧ ಕಪ್ ನೀರು ಸೇರಿಸಬೇಕು. ಇದಕ್ಕೆ 2 ಚಮಚ ನಿಂಬೆಹಣ್ಣಿನ ರಸ, 2 ಚಮಚ ಜೇನುತುಪ್ಪ ಹಾಗೂ ಚಿಟಿಕೆ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಇದು ಮಕ್ಕಳಿಗೆ ಇಷ್ಟವಾಗೋದ್ರಲ್ಲಿ ಅನುಮಾನವೇ ಇಲ್ಲ. ಅಲ್ಲದೆ, ತೆಂಗಿನಕಾಯಿ ನೀರು ವಿಟಮಿನ್ ಸಿ, ಕ್ಯಾಲ್ಸಿಯಂ, ಪೊಟ್ಯಾಷಿಯಂ, ಮೆಗ್ನೇಷಿಯಂ ಹಾಗೂ ಮ್ಯಾಂಗನೀಸ್‍ನಿಂದ ಸಮೃದ್ಧವಾಗಿರುವ ಕಾರಣ ಇದೊಂದು ಆರೋಗ್ಯಕಾರ ಪಾನೀಯ.
ತಂಪು ತಂಪು ತರಕಾರಿ ಜ್ಯೂಸ್, ಬಾಯಿಗೂ ರುಚಿ, ದೇಹಕ್ಕೂ ಹಿತ
ಕಾಮಕಸ್ತೂರಿ ಬೀಜದ ಜ್ಯೂಸ್
ಕಾಮಕಸ್ತೂರಿ ಬೀಜದಲ್ಲಿ ಜೀರ್ಣಕ್ರಿಯೆಯನ್ನು ಉತ್ತಮಪಡಿಸುವ ಕಿಣ್ವಗಳಿವೆ. ಇದು ಮಕ್ಕಳ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ನೀರಿನಲ್ಲಿ ಕಾಮಕಸ್ತೂರಿ ಬೀಜಗಳನ್ನು ನೆನೆ ಹಾಕಬೇಕು. ಅದಕ್ಕೆ ನಿಂಬೆಹಣ್ಣಿನ ರಸ ಹಾಗೂ ಸಕ್ಕರೆಯನ್ನು ಸೇರಿಸಿ ಮಿಕ್ಸ್ ಮಾಡಬೇಕು.