ಹೃದಯ ಸಮಸ್ಯೆಗಳನ್ನು ದೂರವಿಡಲು ಆಹಾರ ದೊಡ್ಡ ಪಾತ್ರ ವಹಿಸುತ್ತದೆ. ಹೃದ್ರೋಗಿಗಳಿಗಾಗಿ AIIMS ಡಯಟ್ ಥಾಲಿ ಸಿದ್ಧಪಡಿಸಿದೆ. ಈ ಥಾಲಿಯಲ್ಲಿ ಭಾರತೀಯರು ಸುಲಭವಾಗಿ ಬೇಯಿಸಿ ತಿನ್ನಬಹುದಾದ ಭಾರತೀಯ ಆಹಾರಗಳು ಸೇರಿವೆ. 

ಹೃದಯ (heart) ಸಮಸ್ಯೆ ಸದ್ಯ ಭಯ ಹುಟ್ಟಿಸಿದೆ. ಹೃದಯಾಘಾತ ಪ್ರಕರಣ ದಿನ ದಿನಕ್ಕೂ ಏರಿಕೆ ಆಗ್ತಾನೆ ಇದೆ. ಅತೀ ಚಿಕ್ಕ ವಯಸ್ಸಿನ ಮಕ್ಕಳು ಕೂಡ ಹೃದಯಾಘಾತ (heart attack)ಕ್ಕೆ ಬಲಿ ಆಗ್ತಿದ್ದಾರೆ. ನಮ್ಮ ಆರೋಗ್ಯ ನಮ್ಮ ಕೈನಲ್ಲಿದೆ. ನಮ್ಮ ಆಹಾರದಲ್ಲಿದೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಆಹಾರ ಬಹಳ ಮುಖ್ಯ. ಹೃದಯ ಸಮಸ್ಯೆಗೆ ಕೊಲೆಸ್ಟ್ರಾಲ್ ಹಾಗೂ ಬೊಜ್ಜು ಮುಖ್ಯ ಕಾರಣ. ನಾವು ತಿನ್ನುವ ಆಹಾರವೇ ಕೊಲೆಸ್ಟ್ರಾಲ್ ಮತ್ತು ಬೊಜ್ಜು ಹೆಚ್ಚಾಗಲು ಕಾರಣವಾಗ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ದೆಹಲಿಯ AIIMS ಇಂಡಿಯನ್ ಅಡಾಪ್ಟೆಡ್ ಮೆಡಿಟರೇನಿಯನ್ ಡಯಟ್ (IAMD) ಎಂಬ ಆಹಾರವನ್ನು ಸಿದ್ಧಪಡಿಸಿದೆ. ಇದು ಹೃದಯ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಉತ್ತಮ ಹೃದಯ ಆರೋಗ್ಯವನ್ನು ಕಾಪಾಡಿಕೊಳ್ಳಲು, ದುಬಾರಿ ಪದಾರ್ಥ ಮಾತ್ರವಲ್ಲದೆ ಅಗ್ಗದ ಮತ್ತು ಸ್ಥಳೀಯ ಪದಾರ್ಥವನ್ನು ಸಹ ನಿಮ್ಮ ಆಹಾರದ ಭಾಗವಾಗಿಸಬಹುದು. 30 ರೋಗಿಗಳ ಮೇಲೆ ನಡೆಸಿದ ಅಧ್ಯಯನದ ನಂತರ ಈ ಆಹಾರದ ಪಟ್ಟಿಯನ್ನು ತಯಾರಿಸಲಾಗಿದೆ.

AIIMS ತಯಾರಿಸಿದ ಡಯಟ್ ಆಹಾರ ಪಟ್ಟಿಯಲ್ಲಿ ಏನೆಲ್ಲ ಇದೆ? : AIIMS ಹೃದ್ರೋಗಿಗಳಿಗೆ ದೇಸಿ ಆಹಾರವನ್ನು ಸಿದ್ಧಪಡಿಸಿದೆ. AIIMS ನ ಈ ಆಹಾರದಲ್ಲಿ ಸಾಸಿವೆ ಅಥವಾ ಕಡಲೆಕಾಯಿ ಎಣ್ಣೆ, ಓಟ್ ಮೀಲ್, ಗೋಧಿ ಕಡಿ, ಅರಿಶಿನ, ತುಳಸಿ, ಅಜ್ವೈನ್, ಕ್ಯಾರೆಟ್, ಮಜ್ಜಿಗೆ, ಪುದೀನ, ಸೌತೆಕಾಯಿ, ಮೂಲಂಗಿ, ಕೊತ್ತಂಬರಿ ಮತ್ತು ರೊಟ್ಟಿ ಮುಂತಾದವು ಸೇರಿವೆ.

ಧಾನ್ಯಗಳು : ಗೋಧಿ, ಬಾರ್ಲಿ, ಸೋರ್ಗಮ್ (ಜೋಳ), ಕ್ವಿನೋವಾ, ರೋಲ್ಡ್ ಓಟ್ಸ್ ಮತ್ತು ಅಕ್ಕಿಯಲ್ಲಿ ಫೈಬರ್ ಸಮೃದ್ಧವಾಗಿವೆ. ಅವು ದೇಹಕ್ಕೆ ಆಂಟಿ-ಆಕ್ಸಿಡೆಂಟ್ಗಳು, ವಿಟಮಿನ್ಗಳು ಮತ್ತು ಖನಿಜಗಳನ್ನು ಸಹ ಒದಗಿಸುತ್ತವೆ. ಈ ಆಹಾರಗಳು ಹೆಚ್ಚಾಗಿರುವ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ದ್ವಿದಳ ಧಾನ್ಯಗಳು : ಕಡಲೆಕಾಯಿ, ಕಡಲೆ, ಕಿಡ್ನಿ ಬೀನ್ಸ್, ಚನ್ನಂಗಿ ಬೇಳೆ, ತೊಗರಿ ಬೇಳೆ ಸೋಯಾಬೀನ್ ಅನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಇವು ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ.

ಡ್ರೈ ಫ್ರೂಟ್ಸ್ : ಆರೋಗ್ಯರ ಆಹಾರ ಪಟ್ಟಿಯಲ್ಲಿ ಬಾದಾಮಿ, ವಾಲ್ನಟ್ಸ್, ಒಣದ್ರಾಕ್ಷಿ, ಅಂಜೂರದ ಹಣ್ಣುಗಳು,ಸೂರ್ಯಕಾಂತಿ ಬೀಜಗಳು, ಎಳ್ಳು, ಕುಂಬಳಕಾಯಿ ಬೀಜಗಳು ಮತ್ತು ಅಗಸೆ ಬೀಜಗಳು ಸೇರಿವೆ. ಇವು ಫೈಬರ್, ಮೊನೊಸಾಚುರೇಟೆಡ್ ಕೊಬ್ಬುಗಳು, ಫೀನಾಲ್ ಗಳು ಮತ್ತು ಫೈಟಿಕ್ ಆಮ್ಲವನ್ನು ಹೊಂದಿರುತ್ತವೆ. ಇವು ಹೃದಯ ಕಾಯಿಲೆಗಳ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ.

ತರಕಾರಿಗಳು : ಹೃದಯದ ಆರೋಗ್ಯಕ್ಕಾಗಿ ಹಸಿರು ಸೊಪ್ಪು ಮತ್ತು ತರಕಾರಿಗಳನ್ನು ಆಹಾರದಲ್ಲಿ ಸೇರಿಸಬೇಕು. ಇವು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಹೃದಯ ಸಮಸ್ಯೆಗಳನ್ನು ದೂರವಿಡುತ್ತವೆ.

ಹಣ್ಣುಗಳು : ಹಣ್ಣುಗಳಲ್ಲಿ, ದ್ರಾಕ್ಷಿ, ಟೊಮೆಟೊ, ದಾಳಿಂಬೆ, ಪೇರಳೆ, ಅಂಜೂರ, ನಿಂಬೆಹಣ್ಣು, ಪೀಚ್, ಸ್ಟ್ರಾಬೆರಿ, ಪ್ಲಮ್, ಕಿತ್ತಳೆ, ಸೇಬು ಮತ್ತು ಕಿವಿಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಅವು ಉತ್ತಮ ಪ್ರಮಾಣದ ಫೈಬರ್, ವಿಟಮಿನ್ಗಳು, ಖನಿಜಗಳು ಮತ್ತು ಫ್ಲೇವನಾಯ್ಡ್ಗಳನ್ನು ಹೊಂದಿರುತ್ತವೆ.

ಮಸಾಲೆ ಮತ್ತು ಗಿಡಮೂಲಿಕೆ : ಮಸಾಲೆಗಳಲ್ಲಿ, ಕರಿಮೆಣಸು, ಲವಂಗ, ಕೊತ್ತಂಬರಿ, ಜೀರಿಗೆ, ಬೆಳ್ಳುಳ್ಳಿ, ಪುದೀನ ಮತ್ತು ಅರಿಶಿನವನ್ನು ಆಹಾರದ ಭಾಗವಾಗಿ ಮಾಡುವುದು ಪ್ರಯೋಜನಕಾರಿ. ಇವು ದೇಹಕ್ಕೆ ಔಷಧೀಯ ಗುಣಗಳನ್ನು ಒದಗಿಸುತ್ತವೆ.

ಕೊಬ್ಬುಗಳು ಮತ್ತು ಎಣ್ಣೆಗಳು : ಆಲಿವ್ ಎಣ್ಣೆ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಎಣ್ಣೆ ದುಬಾರಿಯಾಗಿದೆ. ಆದ್ದರಿಂದ ಸಾಸಿವೆ ಎಣ್ಣೆ ಅಥವಾ ಕಡಲೆಕಾಯಿ ಎಣ್ಣೆಯನ್ನು ಸೇವಿಸಬಹುದು. ಈ ಎರಡೂ ಎಣ್ಣೆ, ಕೊಬ್ಬಿನಾಮ್ಲ ಪ್ರೊಫೈಲ್ ಆಲಿವ್ ಎಣ್ಣೆಯನ್ನು ಹೋಲುತ್ತದೆ.

ಡೈರಿ ಮತ್ತು ಮಾಂಸ : ಮೊಸರು ಮತ್ತು ಚೀಸ್ನಂತಹ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸಬಹುದು. ಮಾಂಸಗಳಲ್ಲಿ, ಕೋಳಿ, ಮೊಟ್ಟೆ ಮತ್ತು ಮೀನುಗಳನ್ನು ಆಹಾರದಲ್ಲಿ ಸೇರಿಸಿ.