ಹಲಸಿನ ಬಹುಬಗೆ ಖಾದ್ಯ;ಸಾಗರದ ಗೀತಾ ಹಲಸಿಂದ 400 ರೆಸಿಪಿ ಮಾಡ್ತಾರೆ!
ಮನೆಯ ಹೊರಗಡೆ ಧೋ.. ಎಂದು ಮಳೆ ಒಂದೇ ಸಮನೆ ಸುರಿಯುತ್ತಿದೆ. ಹಲಸಿನ ಸೀಸನ್ ಬೇರೆ, ಸಂಜೆ ಚಹಾ ಜೊತೆ ಹಲಸಿನ ಹಪ್ಪಳ, ಚಿಫ್ಸ್, ಮುಳಕ (ಸುಟ್ಟೇವು) ಹೀಗೆ ಒಂದೊಂದಾಗಿ ಉದರ ಸೇರುತ್ತಿದ್ದರೆ ಹಲಸು ಪ್ರಿಯರಿಗೆ ಸ್ವರ್ಗಕ್ಕೆ ಮೂರೇ ಗೇಣು. ಇವುಗಳ ಜೊತೆಗೆ ಹಸಲಿನ ಹೋಳಿಗೆ, ಸಮೋಸಾ, ಸಕ್ರುಂಡೆ, ಮಂಚೂರಿ, ಲಡ್ಡು, ರೊಟ್ಟಿ, ಪಾಯಸ, ಐಸ್ ಕ್ರೀಂ, ಚಾಕೊಲೇಟ್ ಹೀಗೆ ಒಂದಲ್ಲ, ಎರಡಲ್ಲ ನಾನೂರು ಬಗೆಯ ಹಲಸಿನದ್ದೇ ಖಾದ್ಯಗಳು ಒಟ್ಟಿಗೆ ಸೇರಿದರೆ ಕೇಳಬೇಕೇ? ಹೀಗೆ ಹಲಸಿನಿಂದ 400 ರಷ್ಟುಅಡುಗೆ ಮಾಡುವಾಕೆ ಸಾಗರದ ಗೋಳಗೋಡು ನಿವಾಸಿ ಗೀತಾ ಭಟ್
- ರಾಘವೇಂದ್ರ ಅಗ್ನಿಹೋತ್ರಿ
ಹಲಸಿನ ಊಟದ ಮೆನು
ಉಪ್ಪಿನಕಾಯಿ, ಕೋಸಂಬ್ರಿ, ಹಪ್ಪಳ, ಸಂಡಿಗೆ, ಪಲ್ಯ, ಸಾರು, ಸಾಂಬಾರು, ರವಾ ಫ್ರೈ, ಪೋಡಿ, ಪಾಯಸ, ಕಿಚಡಿ, ಹೋಳಿಗೆ, ಸುಕ್ರುಂಡೆ, ರಸಾಯನ, ಗೊಜ್ಜು, ಚಟ್ನಿ ಇತ್ಯಾದಿ ಊಟಕ್ಕೆ ಮಾಡುತ್ತಾರೆ.
ಹಲಸಿನ ತಿಂಡಿ ಮೆನು
ದೋಸೆ, ಇಡ್ಲಿ, ಕಡುಬು, ಪಾತ್ತೋಳಿ, ರೊಟ್ಟಿ, ಪೇಡಾ, ಹಲ್ವ, ಬರ್ಫಿ, ಮುಂಬ್ರಿ, ದೊಡ್ಡಕ, ರೊಟ್ಟಿ, ಪರೋಟ, ಸಮೋಸ, ಚಿಫ್ಸ್, ಬೋಂಡ, ಅಂಬಡೆ, ಬನ್ಸ್, ಮುಳಕ, ಮಾಂಬಳ ಇತ್ಯಾದಿ ಇತ್ಯಾದಿ. ಇವಿಷ್ಟಲ್ಲದೇ, ಪಾನಿಪುರಿ, ಮಸಾಲೆಪುರಿ, ಮಂಚೂರಿ, ಐಸ್ ಕ್ರೀಂ, ಜಾಮೂನು, ಚಾಕೊಲೇಟ್‌ನ್ನೂ ತಯಾರಿಸಿ ಚಪ್ಪರಿಸಬಹುದು ಎಂದು ಗೀತಾ ಅವರು ತೋರಿಸಿಕೊಟ್ಟಿದ್ದಾರೆ. ಮತ್ತೆ ಹಲಸಿನ ಬೀಜದಿಂದ ಇನ್ನಷ್ಟುಅಡುಗೆ, ಸಿಹಿ ಸಿಹಿ ಖಾದ್ಯಗಳು. ಹೀಗೆ ಖಾದ್ಯಗಳ ಪಟ್ಟಿಬೆಳೆಯುತ್ತಲೇ ಹೋಗುತ್ತಾ ಗೀತಾ ಅವರ ಮನೆಯಲ್ಲಿ.
ಕಸದಿಂದ ರಸ
ಎಲ್ಲರೂ ಎಸೆಯುವ ಹಲಸಿ ಗುಂಜುಅನ್ನೂ ಬಳಸಿ ಖಾದ್ಯ ಇವರು ತಯಾರಿಸಿದ್ದಾರೆ. ಗುಂಜನ್ನು ಕತ್ತರಿಸಿ ನೀರಲ್ಲಿ ಸ್ವಲ್ಪ ನೆನೆಸಿ ಇಟ್ಟು ಮೆತ್ತಗಾದ ಬಳಿಕ ಅದರಿಂದ ಚಟ್ನಿ, ಪೋಡಿ, ಸುಕ್ಕ ಮಾಡಿದ್ದಾರೆ. ಹಣ್ಣಿನ ತೊಳೆ ಬಿಡಿಸುವಾಗ ಸಿಗುವ ಬಿಳಿ ಪದರದಿಂದ ಚೌ ಚೌ ಸಿದ್ಧಪಡಿಸಿದ್ದಾರೆ. ಹಲಸಿನಲ್ಲಿರುವ ಮುಳ್ಳು ಮತ್ತು ತೊಟ್ಟು ಬಿಟ್ಟು ಉಳಿದೆಲ್ಲ ವಸ್ತುಗಳಿಂದಲೂ ಅಡುಗೆ ಮಾಡುತ್ತಾರೆ.
ಹಲಸು ತಿಂದು ಬೀಜ ಹೊರಗೆಸೆಯುವ ಮುನ್ನ ಇದನ್ನೊಮ್ಮೆ ಓದಿ
ಗೀತಾ ಮಾಡುವ ಹಲಸು ರೆಸಿಪಿ
1. ಹಲಸಿನ ಹಣ್ಣಿನ ಸೊಳೆ ರೊಟ್ಟಿ
ಸಾಮಗ್ರಿ: 2-3 ಹಿಡಿಯಷ್ಟುಹಲಸಿನ ಸೊಳೆ, ಕೊತ್ತೊಂಬರಿ ಸೊಪ್ಪು ಅರ್ಧ ಕಟ್ಟು, ಹಸಿಮೆಣಸು 2-3, ರುಚಿಗೆ ತಕ್ಕಷ್ಟುಉಪ್ಪು, 2-3 ಚಮಚ ತುಪ್ಪ.
ವಿಧಾನ: ಮೊದಲು ಹಲಸಿನ ಸೊಳೆಗಳನ್ನು ಹಬೆಯಲ್ಲಿ ಬೇಯಿಸಿ ನಯವಾಗಿ ರುಬ್ಬಿಕೊಳ್ಳಬೇಕು. ನಂತರ ಅದಕ್ಕೆ ಕೊತ್ತೊಂಬರಿ ಸೊಪ್ಪು ಹಸಿಮೆಣಸು, ಉಪ್ಪು ಹಾಕಿ ಎರಡು ಸುತ್ತು ತಿರುವಿ. ಅದಕ್ಕೆ 2-3 ಚಮಚ ತುಪ್ಪ ಹಾಕಿ ಅದಕ್ಕೆ ಹಿಡಿಯುವಷ್ಟುಅಕ್ಕಿ ಹಿಟ್ಟು ಬೆರೆಸಿ, ಗಟ್ಟಿಯಾಗಿ ಕಲಸಿಕೊಳ್ಳಬೇಕು. ನಂತರ ಸಣ್ಣ ಸಣ್ಣ ಉಂಡೆ ಮಾಡಿಕೊಂಡು ರೊಟ್ಟಿಲಟ್ಟಿಸಿ, ಒಲೆ ಮೇಲೆ ಇರಿಸಿದ ದೋಸೆ ಕಾವಲಿ ಮೇಲೆ ಹಾಕಿ. ಎರಡೂ ಬದಿ ಚೆನ್ನಾಗಿ ಬೆಂದ ಬಳಿಕ ಚಟ್ನಿಯೊಂದಿಗೆ ತಿನ್ನಲು ರುಚಿಯಾಗಿರುತ್ತದೆ.
2. ಹಲಸಿನಕಾಯಿ ಸೊಳೆ ಪೋಡಿ
ಸಾಮಗ್ರಿ: ಎರಡು ಹಿಡಿ ಹಲಸಿನ ಕಾಯಿ ಸೊಳೆ, ಅರ್ಧಲೋಟ ತೆಂಗಿನ ಎಣ್ಣೆ, 2-3 ಚಮಚ ಒಣಮೆಣಸಿನ ಪುಡಿ, ಅರ್ಧ ಪಾವು ಬಿಳಿ ರವೆ ಅಥವಾ ಅಕ್ಕಿ ಹಿಟ್ಟು, ರುಚಿಗೆ ತಕ್ಕಷ್ಟುಉಪ್ಪು ಮತ್ತು ಇಂಗು.
ವಿಧಾನ: ಮೊದಲು ಸೊಳೆಗಳನ್ನು ತೊಳೆದು ಉಪ್ಪು ಹಾಕಿ ತಿಕ್ಕಿ ಇಟ್ಟುಕೊಳ್ಳಬೇಕು. ಅದರ ಮೇಲೆ ಸ್ವಲ್ಪ ಇಂಗಿನ ನೀರು ಹಾಕಬೇಕು. ನಂತರ ದೋಸೆ ಕಾವಲಿಯನ್ನು ಒಲೆಯ ಮೇಲಿಟ್ಟು ಬಿಸಿ ಆದ ಕೂಡಲೇ ಬಿಳಿರವೆ ಅಥವಾ ಅಕ್ಕಿರವೆ ಅಥವಾ ಅಕ್ಕಿಹಿಟ್ಟಿಗೆ 2-3 ಚಮಚ ಮೆಣಸಿನ ಪುಡಿ ಬೆರೆಸಿ ಅದರಲ್ಲಿ ಸೊಳೆಗಳನ್ನು ಹೊರಳಾಡಿಸಿ ಕಾವಲಿಯಲ್ಲಿ ಸಾಲಾಗಿ ಇಟ್ಟು ಮೇಲಿಂದ ಸ್ವಲ್ಪ ಎಣೆ ಹಾಕಿ, ಸ್ವಲ್ಪ ನೀರು ಚಿಮುಕಿಸಿ ಮುಚ್ಚಿಡಿ. ಸ್ವಲ್ಪ ಹೊತ್ತಿನ ನಂತರ ಮಗುಚಿ ಹಾಕಿ ಸ್ವಲ್ಪ ಎಣ್ಣೆ ಹಾಕಬೇಕು. ಎರಡೂ ಬದಿ ಚೆನ್ನಾಗಿ ಬೇಯಿಸಬೇಕು. ಇದೇ ಸೊಳೆಗೆ ರವೆಯ ಬದಲು ಕಡ್ಲೆಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಕರಿದರೆ ಬೊಂಡ ರೆಡಿ.
#JackFruitDay ತ್ವಚೆಗೂ ಮದ್ದು, ಲೈಂಗಿಕ ಸಮಸ್ಯೆಗೂ ರಾಮಬಾಣ!3. ಹಲಸಿನ ಬೀಜದ ಜಾಮೂನು
ಸಾಮಗ್ರಿ: ಹಲಸಿನ ಬೀಜ, ಅರ್ಧ ಲೋಟ ಹಾಲು, ಸ್ವಲ್ಪ ಮೈದಾ, ಕರಿಯಲು ಎಣ್ಣೆ, ಒಂದು ಲೋಟ ಸಕ್ಕರೆ, ಏಲಕ್ಕಿ ಪುಡಿ.
ವಿಧಾನ: ಹಲಸಿನ ಬೀಜವನ್ನು ಸಿಪ್ಪೆ ತೆಗೆದು ಬೇಯಿಸಿ ಸ್ವಲ್ಪ ಹಾಲು ಹಾಕಿ ನಯವಾಗಿ ರುಬ್ಬಿ. ಅದಕ್ಕೆ ಸ್ವಲ್ಪ ಮೈದಾ ಸೇರಿಸಿ ಹದವಾಗಿ ಹಿಟ್ಟನ್ನು ನಾದಿ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ. ಹಿಟ್ಟು ತುಂಬಾ ಗಟ್ಟಿಯಾಗಿರಬಾರದು. ಬಾಣಲೆಯಲ್ಲಿ ಕರಿಯಲು ಎಣ್ಣೆ ಹಾಕಿ ಒಲೆಯ ಮೇಲೆ ಇಡಿ. ಎಣ್ಣೆ ಕಾದ ಬಳಿಕ ಮಾಡಿಟ್ಟಉಂಡೆಗಳನ್ನು ಕರಿದು ತೆಗೆಯಿರಿ. ಒಂದು ಪಾತ್ರೆಯಲ್ಲಿ ಒಂದು ಪಾವು ಸಕ್ರೆ, ಒಂದು ಲೋಟ ನೀರು ಹಾಕಿ ಸಕ್ಕರೆ ಪಾಕ ಮಾಡಿ, ಅದಕ್ಕೆ ಏಲಕ್ಕಿ ಪುಡಿ ಹಾಕಿ ಇಡಿ. ನಂತರ ಕರಿದಿಟ್ಟಉಂಡೆಗಳನ್ನು ಅದಕ್ಕೆ ಹಾಕಿ ಮುಚ್ಚಿಡಿ.
4. ಹಲಸಿನ ದಿಂಡಿನ (ಗುಂಜು) ಚಟ್ನಿ
ಸಾಮಗ್ರಿ: ಮೆತ್ತಗಿರುವ ಒಂದು ಗೇಣು ಉದ್ದದ ಗುಂಜು, ಸ್ವಲ್ಪ ಕಾಯಿತುರಿ, 4-5 ಚಮಚ ತೆಂಗಿನ ಎಣ್ಣೆ, ಒಂದು ಚಮಚ ಸಾಸಿವೆ, ನಾಲ್ಕೈದು ಹುರಿದ ಒಣಮೆಣಸು, ನೆಲ್ಲಿಗಾತ್ರದಷ್ಟುಹುಳಿ, ಸ್ವಲ್ಪ ಇಂಗು, ರುಚಿಗೆ ತಕ್ಕಷ್ಟುಉಪ್ಪು.
ವಿಧಾನ: ಮೊದಲು ದಿಂಡನ್ನು ಸಣ್ಣ ಸಣ್ಣ ಚೂರುಗಳನ್ನಾಗಿ ಕತ್ತರಿಸಿಕೊಳ್ಳಬೇಕು. ನಂತರ ಬಾಣಲೆಯಲ್ಲಿ ನಾಲ್ಕೈದು ಚಮಚ ಎಣ್ಣೆ ಹಾಕಿ ಸಾಸಿವೆ ಹಾಕಿ ಅದು ಸಿಡಿಯಲು ಪ್ರಾರಂಭವಾದ ಬಳಿಕ ಇಂಗನ್ನು ಹಾಕಿ ಮಗುಚುತ್ತಿರಬೇಕು. ಅದಕ್ಕೆ ಕತ್ತರಿಸಿಟ್ಟುಕೊಂಡ ಗುಂಜಿನ ತುಂಡುಗಳನ್ನು ಹಾಕಿ ಹುರಿಯಬೇಕು. ಅದು ತಣಿದ ಬಳಿಕ ಅದಕ್ಕೆ ಕಾಯಿತುರಿ, ಒಣಮೆಣಸು, ಹುಳಿ, ಉಪ್ಪು ಹಾಕಿ ಗಟ್ಟಿಯಾಗಿ ರುಬ್ಬಬೇಕು.
ಈ ಚಟ್ನಿಯನ್ನು ತೆಳುವಾಗಿ ಮತ್ತು ಗಟ್ಟಿಯಾಗಿ ಎರಡೂ ರೀತಿಯಲ್ಲೂ ಮಾಡಬಹುದು. ಇದು ಅನ್ನ, ದೋಸೆ, ಇಡ್ಲಿಗೂ ಹೊಂದಿಕೆಯಾಗುತ್ತದೆ.
ಸೂಪರ್‌ಫುಡ್ ಆಗಿ ಜಗತ್ತಿನ ಮನಸ್ಸು ಗೆಲ್ಲುತ್ತಿರುವ ಹಲಸು