* ಫಿಫಾ ವಿಶ್ವಕಪ್‌ ಫೈನಲ್‌ನಲ್ಲಿ ಮುಗ್ಗರಿಸಿದ ಫ್ರಾನ್ಸ್‌ ತಂಡ* ಅರ್ಜೆಂಟೀನಾ ಎದುರು ರೋಚಕ ಸೋಲು ಕಂಡ ಫ್ರಾನ್ಸ್* ಹ್ಯಾಟ್ರಿಕ್ ಗೋಲು ಬಾರಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ವಿಫಲವಾದ ಎಂಬಾಪೆ  

ಲುಸೈಲ್‌(ಡಿ.19): ಫಿಫಾ ವಿಶ್ವಕಪ್‌ ಫೈನಲ್‌ನಲ್ಲಿ ಫ್ರಾನ್ಸ್ ಎದುರು ಅರ್ಜೆಂಟೀನಾ ತಂಡವು ಶೂಟೌಟ್‌ನಲ್ಲಿ 4-2 ಅಂತರದ ಗೆಲುವು ದಾಖಲಿಸುವ ಮೂಲಕ ಮೂರನೇ ಬಾರಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಫೈನಲ್‌ನಲ್ಲಿ ಹ್ಯಾಟ್ರಿಕ್‌ ಗೋಲು ಬಾರಿಸಿ ಫ್ರಾನ್ಸ್‌ ಕೊನೆವರೆಗೂ ಹೋರಾಡಲು ನೆರವಾದ ಕಿಲಿಯಾನ್ ಎಂಬಾಪೆಯನ್ನು ಪಂದ್ಯದ ಬಳಿಕ ಫ್ರಾನ್ಸ್‌ನ ಅಧ್ಯಕ್ಷ ಎಮ್ಯಾನುಯಲ್‌ ಮ್ಯಾಕ್ರನ್‌ ಮೈದಾನಕ್ಕಿಳಿದು ಸಮಾಧಾನಪಡಿಸಿದರು.

ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯಲ್‌ ಮ್ಯಾಕ್ರನ್‌, ಪಂದ್ಯ ಮುಕ್ತಾಯದ ಬಳಿಕ ಕಿಲಿಯಾನ್ ಎಂಬಾಪೆಯನ್ನು ಭುಜ ಹಿಡಿದು ಸಮಾಧಾನಪಡಿಸಿದರು. ಈ ಸಂದರ್ಭದಲ್ಲಿ ಅರ್ಜೆಂಟೀನಾದ ಗೋಲ್ ಕೀಪರ್‌ ಎಮಿಲಿಯಾನೋ ಮಾರ್ಟಿನೆಜ್‌ ಕೂಡಾ ಈ ವೇಳೆ ಹಾಜರಿದ್ದರು.

ಕತಾರ್ ವಿಶ್ವಕಪ್‌ ಸಕ್ಸಸ್‌..!

ಲುಸೈಲ್‌: 2022ರ ಫಿಫಾ ಫುಟ್ಬಾಲ್‌ ವಿಶ್ವಕಪ್‌ ನೋಡನೋಡುತ್ತಿದ್ದಂತೆ ಮುಕ್ತಾಯಗೊಂಡಿದೆ. ಶುರುವಿನಿಂದ ಕೊನೆಯವರೆಗೂ ರೋಚಕತೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದ ಟೂರ್ನಿ, ಹಲವು ಅಚ್ಚರಿಯ ಫಲಿತಾಂಶಗಳಿಗೆ ಸಾಕ್ಷಿಯಾಗಿದ್ದಲ್ಲೇ, ಹತ್ತಾರು ದಾಖಲೆಗಳಿಗೂ ವೇದಿಕೆಯಾಯಿತು. ಒಮ್ಮೆಲೇ ಲಕ್ಷಾಂತರ ಪ್ರವಾಸಿಗರು, ಮೂಲಸೌಕರ್ಯದ ಕೊರತೆ, ತಾಪಮಾನದ ಆತಂಕ, ವೈರಸ್‌ ಭೀತಿ, ಆರ್ಥಿಕ ಸಮಸ್ಯೆ, ಸಾಂಪ್ರದಾಯಿಕ ನೀತಿ ನಿಯಮಗಳ ಪಾಲನೆ ಹೀಗೆ ಹಲವು ಗೊಂದಲ, ಟೀಕೆ, ಸವಾಲು, ಸಮಸ್ಯೆಗಳೆನ್ನೆಲ್ಲಾ ಮೆಟ್ಟಿನಿಂತು ಪುಟ್ಟರಾಷ್ಟ್ರ ಕತಾರ್‌ ಯಶಸ್ವಿಯಾಗಿ ಟೂರ್ನಿ ಆಯೋಜಿಸಿ ಸೈ ಎನಿಸಿಕೊಂಡಿದೆ.

FIFA World Cup: ಲಿಯೋನೆಲ್‌ ಮೆಸ್ಸಿಗೆ ಗೋಲ್ಡನ್‌ ಬಾಲ್‌, ಎಂಬಾಪೆಗೆ ಗೋಲ್ಡನ್‌ ಬೂಟ್‌..!

ವಿಶ್ವಕಪ್‌ ಆತಿಥ್ಯವನ್ನು ಕತಾರ್‌ಗೇಕೆ ಕೊಟ್ಟೆವು ಎಂದು ಪಶ್ಚಾತ್ತಾಪ ಪಡುತ್ತಿದ್ದೇವೆ ಎಂದು ಟೂರ್ನಿ ಆರಂಭಕ್ಕೂ ಮುನ್ನ ಫಿಫಾ ಮಾಜಿ ಅಧ್ಯಕ್ಷ ಸೆಪ್‌ ಬ್ಲಾಟರ್‌ ಹೇಳಿದ್ದರು. ಟೂರ್ನಿ ಮುಗಿಯುವ ವೇಳೆಗೆ ಹಾಲಿ ಅಧ್ಯಕ್ಷ ಗಿಯೋನಿ ಇನ್ಫಾಂಟಿನೋ ಇದು ಈ ವರೆಗಿನ ಶ್ರೇಷ್ಠ ವಿಶ್ವಕಪ್‌ ಎಂದಿದ್ದಾರೆ. ಒಂದು ತಿಂಗಳಲ್ಲಿ ಫಿಫಾ ಮಟ್ಟಿಗೆ ಕತಾರ್‌ ಕುರಿತ ಅಭಿಪ್ರಾಯ ಬದಲಾಗಿರುವುದು ಸತ್ಯ.

ಕತಾರ್‌ ಅಂದಾಜು 10ರಿಂದ 12 ಲಕ್ಷ ವಿದೇಶಿ ಪ್ರವಾಸಿಗರನ್ನು ನಿರೀಕ್ಷೆ ಮಾಡುತ್ತಿತ್ತು. ವರದಿಗಳ ಪ್ರಕಾರ 10 ಲಕ್ಷಕ್ಕೂ ಅಧಿಕ ವಿದೇಶಿ ಪ್ರವಾಸಿಗರು ಕತಾರ್‌ಗೆ ಬಂದು ಹೋಗಿದ್ದಾರೆ. ಕ್ರೀಡಾಂಗಣಗಳಲ್ಲಿ ಪಂದ್ಯಗಳ ವೀಕ್ಷಣೆ ಜೊತೆಗೆ ದೋಹಾ ನಗರದ ಸುತ್ತ ಮುತ್ತ ಆಯೋಜಿಸಿದ್ದ ಅನೇಕ ‘ಫ್ಯಾನ್‌ ಫೆಸ್ಟಿವಲ್‌’ಗಳಲ್ಲಿ ಪಾಲ್ಗೊಂಡಿದ್ದಾರೆ. ಈ ವಿಶ್ವಕಪ್‌ನಲ್ಲಿ ಅಂದಾಜು 30 ಲಕ್ಷಕ್ಕೂ ಹೆಚ್ಚು ಟಿಕೆಟ್‌ ಮಾರಾಟವಾಗಿದೆ. ಫಿಫಾ ಪ್ರಕಾರ ಅತಿಹೆಚ್ಚು ಟಿಕೆಟ್‌ ಮಾರಾಟಕ್ಕೆ ಸಾಕ್ಷಿಯಾದ ವಿಶ್ವಕಪ್‌ಗಳಲ್ಲಿ ಇದೂ ಒಂದು. 2018ರಲ್ಲಿ ರಷ್ಯಾದಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ 33 ಲಕ್ಷ ಟಿಕೆಟ್‌ಗಳು ಮಾರಾಟವಾಗಿದ್ದವು.