* ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಫ್ರಾನ್ಸ್‌ ಎದುರು ಗೆದ್ದು ಬೀಗಿದ ಅರ್ಜೆಂಟೀನಾ* ಗೋಲಾಗುವ ಮೊದಲೇ ಮೈದಾನಕ್ಕೆ ಮೀಸಲು ಆಟಗಾರರು* ರೆಫ್ರಿಗಳ ವಿರುದ್ಧ ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳ ಸಿಟ್ಟು 

ದೋಹಾ(ಡಿ.21): 2022ರ ಫುಟ್ಬಾಲ್‌ ವಿಶ್ವಕಪ್‌ ಮುಕ್ತಾಯಗೊಂಡು 3 ದಿನ ಕಳೆದರೂ ಇನ್ನೂ ಫೈನಲ್‌ ಪಂದ್ಯದ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಚರ್ಚೆ ನಿಂತಿಲ್ಲ. ಫೈನಲ್‌ನ ಹೆಚ್ಚುವರಿ ಸಮಯಲ್ಲಿ ಲಿಯೋನೆಲ್‌ ಮೆಸ್ಸಿ ಬಾರಿಸಿದ ಗೋಲಿನ ನ್ಯಾಯಸಮ್ಮತತೆಯ ಬಗ್ಗೆ ಕೆಲ ಅಭಿಮಾನಿಗಳು ಚಕಾರ ಎತ್ತಿದ್ದಾರೆ. 

ಮೆಸ್ಸಿ ಬಾರಿಸಿದ ಚೆಂಡು ಗೋಲು ಪೆಟ್ಟಿಗೆ ಸೇರುವ ಮೊದಲೇ ಅರ್ಜೆಂಟೀನಾದ ಇಬ್ಬರು ಮೀಸಲು ಆಟಗಾರರು ಮೈದಾನದೊಳಕ್ಕೆ ಪ್ರವೇಶಿಸಿದ್ದರು. ಇದು ನಿಯಮದ ವಿರುದ್ಧ. ಹೀಗಾಗಿ ಗೋಲನ್ನು ಅಮಾನ್ಯಗೊಳಿಸಬೇಕಿತ್ತು ಎಂದು ಫೋಟೋಗಳನ್ನು ಟ್ವೀಟ್‌ ಮಾಡಿ ವಾದಿಸಿದ್ದಾರೆ. 4ನೇ ರೆಫ್ರಿ ಈ ಪ್ರಸಂಗವನ್ನು ಗಮನಿಸುವಲ್ಲಿ ವಿಫಲರಾಗಿದ್ದಾರೆ. ಅವರ ಎಡವಟ್ಟಿನಿಂದ ಫ್ರಾನ್ಸ್‌ ಪರ ಬರಬಹುದಾಗಿದ್ದ ಫಲಿತಾಂಶಕ್ಕೆ ಅಡ್ಡಿಯಾಯಿತು ಎಂದು ಕೆಲವರು ಟ್ವೀಟರಲ್ಲಿ ಬರೆದಿದ್ದಾರೆ.

ವಿಶ್ವ ಚಾಂಪಿಯನ್ನರಿಗೆ ತವರಲ್ಲಿ ಅದ್ಧೂರಿ ಸ್ವಾಗತ!

ಬ್ಯೂನಸ್‌ ಐರಿಸ್‌: ವಿಶ್ವ ಚಾಂಪಿಯನ್‌ ಅರ್ಜೆಂಟೀನಾಗೆ ತವರಿನಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಮಂಗಳವಾರ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಬ್ಯೂಸನ್‌ ಐರಿಸ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದ ತಂಡಕ್ಕೆ ಕೆಂಪು ಹಾಸು ಹಾಸಿ ಸ್ವಾಗತಿಸಲಾಯಿತು. ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳತ್ತ ಕೈಬೀಸುತ್ತಾ ತೆರೆದ ವಾಹನ ಹತ್ತಿದ ಅರ್ಜೆಂಟೀನಾ ಆಟಗಾರರು ವಿಜಯ ಯಾತ್ರೆ ನಡೆಸಿದರು. ಬ್ಯೂನಸ್‌ ಐರಿಸ್‌ನ ಪ್ರಮುಖ ರಸ್ತೆಗಳಲ್ಲಿ ಯಾತ್ರೆ ಸಾಗಿತು. ಲಕ್ಷಾಂತರ ಮಂದಿ ಚಾಂಪಿಯನ್ನರನ್ನು ಭರಮಾಡಿಕೊಂಡರು. ಸಂಭ್ರಮಾಚರಣೆಗಾಗಿ ಮಂಗಳವಾರ ಅರ್ಜೆಂಟೀನಾದಲ್ಲಿ ಸಾರ್ವಜನಿಕ ರಜೆ ಘೋಷಿಸಲಾಗಿತ್ತು.

FIFA ವಿಶ್ವಕಪ್‌ ಟ್ರೋಫಿ ತಬ್ಬಿಕೊಂಡೇ ಮಲಗಿದ ಲಿಯೋನೆಲ್‌ ಮೆಸ್ಸಿ..!

ತಪ್ಪಿದ ಅನಾಹುತ: ವಿಜಯ ಯಾತ್ರೆ ವೇಳೆ ಬಸ್‌ನ ಮೇಲ್ಭಾಗದಲ್ಲಿ ಕುಳಿತಿದ್ದ ಮೆಸ್ಸಿ ಹಾಗೂ ಇನ್ನೂ ಕೆಲ ಆಟಗಾರರು ಭಾರೀ ಅನಾಹುತದಿಂದ ಪಾರಾದರು. ಆಟಗಾರರ ತಲೆಗೆ ವಿದ್ಯುತ್‌ ತಂತಿ ತಗುಲುವ ಸಾಧ್ಯತೆ ಇತ್ತು. ಆಟಗಾರನೊಬ್ಬನ ಸಮಯಪ್ರಜ್ಞೆಯಿಂದಾಗಿ ಅನಾಹುತ ತಪ್ಪಿತು.

ಮೆಸ್ಸಿ ಪೋಸ್ಟ್‌ಗೆ ಇನ್‌ಸ್ಟಾದಲ್ಲಿ 6.3 ಕೋಟಿ ಲೈಕ್‌: ದಾಖಲೆ!

ಮೆಸ್ಸಿಯ ವಿಶ್ವಕಪ್‌ ಗೆಲುವಿನ ಪೋಸ್ಟ್‌ ಇನ್‌ಸ್ಟಾಗ್ರಾಂನಲ್ಲಿ ದಾಖಲೆ ಬರೆದಿದೆ. ಟ್ರೋಫಿ ಎತ್ತಿಹಿಡಿದ ಫೋಟೋ ಜೊತೆ ಭಾವನಾತ್ಮಕ ಸಂದೇಶ ಬರೆದಿದ್ದ ಪೋಸ್‌ಗೆ ಬರೋಬ್ಬರಿ 6.3 ಕೋಟಿ ಇನ್‌ಸ್ಟಾಗ್ರಾಂ ಬಳಕೆದಾರರು ಲೈಕ್‌ ಒತ್ತಿದ್ದಾರೆ. ಇದು ಇನ್‌ಸ್ಟಾಗ್ರಾಂನಲ್ಲಿ ಅತಿಹೆಚ್ಚು ಲೈಕ್‌ ಪಡೆದ ಪೋಸ್ಟ್‌ ಎನಿಸಿಕೊಂಡಿದೆ. ಇನ್‌ಸ್ಟಾನಲ್ಲಿ ಮೆಸ್ಸಿ 40 ಕೋಟಿಗೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ.

ರನ್ನರ್‌-ಅಪ್‌ ಫ್ರಾನ್ಸ್‌ ತಂಡಕ್ಕೂ ಭರ್ಜರಿ ಸ್ವಾಗತ

ಫೈನಲ್‌ನಲ್ಲಿ ಅರ್ಜೆಂಟೀನಾಗೆ ಶರಣಾಗಿ ಸತತ 2ನೇ ಬಾರಿಗೆ ವಿಶ್ವಕಪ್‌ ಗೆಲ್ಲಲು ವಿಫಲವಾದ ಫ್ರಾನ್ಸ್‌ ತಂಡಕ್ಕೂ ತವರಿನಲ್ಲಿ ಭರ್ಜರಿ ಸ್ವಾಗತ ದೊರೆಯಿತು. ಪ್ಯಾರಿಸ್‌ನಲ್ಲಿ ಸಾವಿರಾರು ಅಭಿಮಾನಿಗಳು ಫ್ರೆಂಚ್‌ ತಂಡವನ್ನು ಭರಮಾಡಿಕೊಂಡರು.