FIFA World Cup: ಲಿಯೋನೆಲ್ ಮೆಸ್ಸಿಗೆ ಗೋಲ್ಡನ್ ಬಾಲ್, ಎಂಬಾಪೆಗೆ ಗೋಲ್ಡನ್ ಬೂಟ್..!
ಫಿಫಾ ವಿಶ್ವಕಪ್ ಗೆದ್ದು ಬೀಗಿದ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ
ಅದ್ಭುತ ಪ್ರದರ್ಶನ ತೋರಿದ ಮೆಸ್ಸಿಗೆ ಒಲಿದ ಗೋಲ್ಡನ್ ಬಾಲ್
ಅತಿಹೆಚ್ಚು ಗೋಲು ಬಾರಿಸಿದ ಕಿಲಿಯಾನ್ ಎಂಬಾಪೆ ಗೋಲ್ಡನ್ ಬೂಟ್ ಪ್ರಶಸ್ತಿ
ಲುಸೈಲ್(ಡಿ.19) ಫಿಫಾ ವಿಶ್ವಕಪ್ ಟೂರ್ನಿಯಲ್ಲಿ 4 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ವಿಜೇತ, 7 ಗೋಲುಗಳ ಜೊತೆಗೆ 3 ಗೋಲು ಬಾರಿಸಲು ನೆರವಾದ ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ 2014ರ ಬಳಿಕ ಮತ್ತೊಮ್ಮೆ ಗೋಲ್ಡನ್ ಬಾಲ್ ಪ್ರಶಸ್ತಿ ಗೆದ್ದುಕೊಂಡರು. ಈ ಮೂಲಕ ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಎರಡು ಬಾರಿ ಗೋಲ್ಡನ್ ಬಾಲ್ ಜಯಿಸಿದ ಏಕೈಕ ಫುಟ್ಬಾಲಿಗ ಎನ್ನುವ ಹಿರಿಮೆಗೆ ಲಿಯೋನೆಲ್ ಮೆಸ್ಸಿ ಪಾತ್ರರಾದರು. ಈ ಬಾರಿಯ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಮೆಸ್ಸಿ 7 ಗೋಲು ಬಾರಿಸುವ ಮೂಲಕ ಎರಡನೇ ಗರಿಷ್ಠ ಗೋಲ್ ಸ್ಕೋರರ್ ಆಗಿ ಹೊರಹೊಮ್ಮಿದ್ದರು.
ಇನ್ನು ಈ ಫಿಫಾ ವಿಶ್ವಕಪ್‌ನಲ್ಲಿ 8 ಗೋಲು ಬಾರಿಸಿದ ಫ್ರಾನ್ಸ್‌ನ ತಾರಾ ಆಟಗಾರ ಕಿಲಿಯಾನ್ ಎಂಬಾಪೆ ಗೋಲ್ಡನ್ ಬೂಟ್ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಎಂಬಾಪೆ ಫೈನಲ್ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಿದರಾದರೂ ತಂಡವನ್ನು ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿಸಲು ವಿಫಲವಾದರು. ಇನ್ನುಳಿದಂತೆ ಅರ್ಜೆಂಟೀನಾದ ಗೋಲ್‌ಕೀಪರ್ ಎಮಿಲಿಯಾನೊ ಮಾರ್ಟಿನೆಟ್ ಗೋಲ್ಡನ್ ಗ್ಲೌಸ್ ಪಡೆದುಕೊಂಡರೆ, ಅರ್ಜೆಂಟೀನಾದ 21 ವರ್ಷದ ಎನ್ಜೊ ಫೆರ್ನಾಂಡೆಜ್ ಟೂರ್ನಿಯ ಶ್ರೇಷ್ಠ ಕಿರಿಯ ಆಟಗಾರ ಪ್ರಶಸ್ತಿ ಜಯಿಸಿದರು.
ಲಿಯೋನೆಲ್ ಮೆಸ್ಸಿ 2016ರಲ್ಲಿ ನಿವೃತ್ತಿ; 2022ರಲ್ಲಿ ವಿಶ್ವಕಪ್!
ಲಿಯೋನೆಲ್ ಮೆಸ್ಸಿ 2016ರ ಕೋಪಾ ಅಮೆರಿಕಾ ಫೈನಲ್‌ನಲ್ಲಿ ಅರ್ಜೆಂಟೀನಾ ತಂಡ ಚಿಲಿ ವಿರುದ್ಧ ಸೋತಾಗ ಅಂ.ರಾ.ಫುಟ್ಬಾಲ್‌ಗೆ ಅಚ್ಚರಿಯ ರೀತಿಯಲ್ಲಿ ನಿವೃತ್ತಿ ಘೋಷಿಸಿದ್ದರು. ಆಗ ಲಿಯೋನೆಲ್ ಸ್ಕಾಲೊನಿ, ಮೆಸ್ಸಿಯನ್ನು ನಿವೃತ್ತಿ ಹಿಂಪಡೆಯುವಂತೆ ಟ್ವೀಟ್ ಮಾಡಿ ಬೇಡಿಕೊಂಡಿದ್ದರು. 2018ರಲ್ಲಿ ಅರ್ಜೆಂಟೀನಾ ತಂಡಕ್ಕೆ ಕೋಚ್ ಆದ ಸ್ಕಾಲೊನಿ, ಮೆಸ್ಸಿ ವಿಶ್ವಕಪ್ ಸೇರಿ 3 ಅಂತಾರಾಷ್ಟ್ರೀಯ ಟ್ರೋಫಿಗಳನ್ನು ಗೆಲ್ಲಲು ನೆರವಾದರು.
ಚಾಂಪಿಯನ್ ಅರ್ಜೆಂಟೀನಾಗೆ 347 ಕೋಟಿ ರುಪಾಯಿ!
ವಿಶ್ವಕಪ್ ಗೆದ್ದ ಅರ್ಜೆಂಟೀನಾ ತಂಡ ಬರೋಬ್ಬರಿ 42 ಮಿಲಿಯನ್ ಡಾಲರ್(ಅಂದಾಜು 347 ಕೋಟಿ ರು.) ಬಹುಮಾನದ ಮೊತ್ತ ತನ್ನದಾಗಿಸಿಕೊಂಡರೆ, ರನ್ನರ್-ಅಪ್ ಫ್ರಾನ್ಸ್ 30 ಮಿಲಿಯನ್ ಡಾಲರ್(ಅಂದಾಜು 248 ಕೋಟಿ ರು.) ನಗದು ಬಹುಮಾನ ಪಡೆಯಿತು.
172 ಗೋಲು: ಒಂದು ಆವೃತ್ತಿಯಲ್ಲಿ ಅತಿಹೆಚ್ಚು
ಈ ವಿಶ್ವಕಪ್‌ನಲ್ಲಿ ಒಟ್ಟು 172 ಗೋಲುಗಳು ದಾಖಲಾದವು. ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತಿಹೆಚ್ಚು ಗೋಲು ದಾಖಲಾದ ದಾಖಲೆ ಇದು. 2014ರಲ್ಲಿ ಬ್ರೆಜಿಲ್‌ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ 171 ಗೋಲುಗಳು ದಾಖಲಾಗಿದ್ದವು.
ವಿಶ್ವಕಪ್‌ಗೆ ವರ್ಣರಂಜಿತ ತೆರೆ!
ಲುಸೈಲ್: ಫಿಫಾ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ಕಿಕ್ಕಿರಿದು ತುಂಬಿದ್ದ ಲುಸೈಲ್ ಕ್ರೀಡಾಂಗಣದಲ್ಲಿ ಅದ್ಧೂರಿ ಸಮಾರೋಪ ಸಮಾರಂಭ ನಡೆಯಿತು. ಕತಾರ್‌ನ ಸಾಂಸ್ಕೃತಿಕ ಪರಂಪರೆಯ ಪ್ರದರ್ಶನದೊಂದಿಗೆ ಆರಂಭಗೊಂಡ ಕಾರ‍್ಯಕ್ರಮದಲ್ಲಿ ಅಮೆರಿಕದ ಖ್ಯಾತ ಗಾಯಕ ಡೇವಿಡೋ ಜೊತೆ ಕತಾರ್‌ನ ಗಾಯಕಿ ಆಯಿಶಾ ಟೂರ್ನಿಯ ಥೀಮ್ ಸಾಂಗ್ ‘ಹಯ್ಯಾ ಹಯ್ಯಾ’ ಹಾಡಿ ಪ್ರೇಕ್ಷಕರನ್ನು ರಂಜಿಸಿದರು.
FIFA World Cup ಮೆಸ್ಸಿ, ಅರ್ಜೆಂಟೀನಾ ಚಾಂಪಿಯನ್: ಆಘಾತದಿಂದ ಆರಂಭ, ಸಂಭ್ರಮದಲ್ಲಿ ಅಂತ್ಯ!
ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಾರೆಂದು ನಿರೀಕ್ಷಿಸಲಾಗಿದ್ದ ಬಾಲಿವುಡ್ ತಾರೆ ನೋರಾ ಫತ್ಹೇಹಿ ಸಮಾರೋಪ ಕಾರ‍್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದರು. ಫ್ರಾನ್ಸ್‌ನ ರ‍್ಯಾಪರ್ ಗಿಮ್ಸ್ ಸೇರಿದಂತೆ ಹಲವು ತಾರೆಯರು, ಜನಪ್ರಿಯ ಕಲಾವಿದರು ಪ್ರದರ್ಶನ ನೀಡಿದರು. 15 ನಿಮಿಷಗಳ ಕಾಲ ನಡೆದ ಸಮಾರಂಭದಲ್ಲಿ ಮಹಿಳಾ ತಾರೆಯರ ಆಕರ್ಷಕ ನೃತ್ಯ ಎಲ್ಲರ ಗಮನ ಸೆಳೆಯಿತು. ಈ ವೇಳೆ ಕ್ರೀಡಾಂಗಣ ಮನಮೋಹಕ ಬೆಳಕಿನ ಚಿತ್ತಾರದಿಂದ ಕಂಗೊಳಿಸಿತು.