ಅರ್ಜೆಂಟೀನಾ ವಿಶ್ವಕಪ್ ಗೆದ್ದ ಜೋಶ್: ಕೇರಳದಲ್ಲಿ ಕೋಟಿ ಕೋಟಿ ಮೌಲ್ಯದ ಮದ್ಯ ಸೇಲ್..! ಕುಡಿದು-ಕುಣಿದು ಕುಪ್ಪಳಿಸಿದ ಮಂದಿ
ಫುಟ್ಬಾಲ್ ಜಗತ್ತಿಗೆ ಅರ್ಜೆಂಟೀನಾ ತಂಡ ಅಧಿಪತಿ
ಜಗತ್ತಿನಾದ್ಯಂತ ಫೈನಲ್ ಪಂದ್ಯದ ವೇಳೆ ಮುಗಿಲು ಮುಟ್ಟಿದ ಸಂಭ್ರಮಾಚರಣೆ
ಫಿಫಾ ವಿಶ್ವಕಪ್ ಫೈನಲ್ ದಿನ 50 ಕೋಟಿ ರುಪಾಯಿ ಮೌಲ್ಯದ ಮದ್ಯ ಸೇಲ್
ತಿರುವನಂತಪುರಂ(ಡಿ.21): ಕತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್ ಟೂರ್ನಿ ಮುಗಿದು ಮೂರ್ನಾಲ್ಕು ದಿನ ಕಳೆಯುತ್ತಾ ಬಂದರೂ, ಫುಟ್ಬಾಲ್ ವಿಶ್ವಕಪ್ ಫೈನಲ್ ಗುಂಗಿನಿಂದ ಇನ್ನೂ ಫುಟ್ಬಾಲ್ ಅಭಿಮಾನಿಗಳು ಹೊರಬಂದಂತೆ ಕಾಣುತ್ತಿಲ್ಲ. ವಿಶ್ವ ಚಾಂಪಿಯನ್ ಅರ್ಜೆಂಟೀನಾ ತಂಡಕ್ಕೆ ಭಾರತದಲ್ಲೂ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಈ ಪೈಕಿ ಕೇರಳದಲ್ಲಿ ತುಸು ಹೆಚ್ಚೇ ಅಭಿಮಾನಿಗಳಿದ್ದಾರೆ. ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ದಿನ ಕೇರಳದಲ್ಲಿ ಮದ್ಯ ಮಾರಾಟ ಭರ್ಜರಿಯಾಗಿಯೇ ನಡೆದಿದೆ. ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡವು ಚಾಂಪಿಯನ್ ಆಗುತ್ತಿದ್ದಂತೆಯೇ ಫುಟ್ಬಾಲ್ ಅಭಿಮಾನಿಗಳು ಕುಡಿದು ಕುಣಿದು ಕುಪ್ಪಳಿಸಿದ್ದಾರೆ
ಕತಾರ್‌ನ ಲುಸೈಲ್ ಮೈದಾನದಲ್ಲಿ ಡಿಸೆಂಬರ್ 18ರಂದು ನಡೆದ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಹಾಗೂ ಅರ್ಜೆಂಟೀನಾ ತಂಡಗಳು ಮುಖಾಮುಖಿಯಾಗಿದ್ದವು. ನಿಗದಿತ ಸಮಯ ಹಾಗೂ ಹೆಚ್ಚುವರಿ ಸಮಯದ ಬಳಿಕ ಉಭಯ ತಂಡಗಳು ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋದವು. ಪೆನಾಲ್ಟಿ ಶೂಟೌಟ್‌ನಲ್ಲಿ ಅರ್ಜೆಂಟೀನಾ ತಂಡವು 4-2 ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಮೂರನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಯಿತು. ಫಿಫಾ ವಿಶ್ವಕಪ್ ಫೈನಲ್ ಪಂದ್ಯವು ನಡೆದ ದಿನ ಕೇರಳದಲ್ಲಿ ಸುಮಾರು 50 ಕೋಟಿ ರುಪಾಯಿ ಮದ್ಯ ಮಾರಾಟವಾಗುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಈ ವಿಚಾರವನ್ನು ಸ್ವತಃ ಕೇರಳ ರಾಜ್ಯ ಪಾನೀಯ ನಿಗಮ ಖಚಿತಪಡಿಸಿದೆ.
ಸಾಮಾನ್ಯವಾಗಿ ಕೇರಳದಲ್ಲಿ ವಾರಾಂತ್ಯದಲ್ಲಿ 33ರಿಂದ 34 ಕೋಟಿ ರುಪಾಯಿ ಮೌಲ್ಯದ ಮದ್ಯ ಮಾರಾಟವಾಗುತ್ತದೆ. ಆದರೆ ಕಳೆದ ಭಾನುವಾರ ಫಿಫಾ ವಿಶ್ವಕಪ್ ಫೈನಲ್ ಪಂದ್ಯ ಜರುಗಿದ ದಿನ ಸಾಮಾನ್ಯ ವ್ಯವಹಾರಕ್ಕಿಂತ 15 ಕೋಟಿ ರುಪಾಯಿ ಹೆಚ್ಚುವರಿ ಆದಾಯ ದೊರೆತಿದೆ ಎಂದು ಕೇರಳ ರಾಜ್ಯ ಪಾನೀಯ ನಿಗಮದ ವ್ಯವಸ್ಥಾಪಕ ಅಧ್ಯಕ್ಷ ಯೋಗೇಶ್ ಗುಪ್ತಾ ತಿಳಿಸಿದ್ದಾರೆ. ಆದರೆ ಈ ಅಂಕಿ-ಅಂಶಗಳು ಖಾಸಗಿ ಬಾರ್‌ಗಳ ಮದ್ಯ ಮಾರಾಟದ ಮಾಹಿತಿಯನ್ನು ಒಳಗೊಂಡಿಲ್ಲ ಎನ್ನುವುದು ವಿಶೇಷ.
FIFA ವಿಶ್ವಕಪ್ ಟ್ರೋಫಿ ತಬ್ಬಿಕೊಂಡೇ ಮಲಗಿದ ಲಿಯೋನೆಲ್ ಮೆಸ್ಸಿ..!
ಅದು ಭಾನುವಾರವಾಗಿದ್ದರಿಂದ ಹಾಗೂ ವಿಶ್ವಕಪ್ ಫೈನಲ್ ಪಂದ್ಯವು ಅಂದೇ ಇದ್ದಿದ್ದರಿಂದಾಗಿ ಮದ್ಯ ಮಾರಾಟದ ಆದಾಯದ ಪ್ರಮಾಣದಲ್ಲಿ ಹೆಚ್ಚಳವಾಗಿರುವ ಸಾಧ್ಯತೆಯಿದೆ ಎಂದು ಯೋಗೇಶ್ ಗುಪ್ತಾ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಕೇರಳ ರಾಜ್ಯದಾದ್ಯಂತ ಸರ್ಕಾರದ ಸುಮಾರು 301 ಮದ್ಯ ಮಾರಾಟದ ಮಳಿಗೆಗಳಿದ್ದು, ಕ್ರಿಸ್‌ಮಸ್ ವೇಳೆ ಸುಮಾರು 600 ಕೋಟಿ ರುಪಾಯಿ ಮದ್ಯ ಮಾರಾಟವಾಗುವ ನಿರೀಕ್ಷೆಯಿದೆ. ಡಿಸೆಂಬರ್ 21ರಿಂದ ಡಿಸೆಂಬರ್ 31ರವರೆಗೆ 10 ದಿನಗಳ ಅವಧಿಯಲ್ಲಿ ಕೇರಳ ರಾಜ್ಯ ಪಾನೀಯ ನಿಗಮ ಸುಮಾರು 600 ಕೋಟಿ ರುಪಾಯಿ ಮೌಲ್ಯದ ಮದ್ಯ ಮಾರಾಟವಾಗು ಸಾಧ್ಯತೆಯಿದೆ ಎಂದು ಅಂದಾಜಿಸಿದೆ.
ಕಳೆದ ಓಣಂ ಸಂದರ್ಭದಲ್ಲಿ ಸೆಪ್ಟೆಂಬರ್ 01ರಿಂದ 07ರವರೆಗೆ ಸುಮಾರು 624 ಕೋಟಿ ರುಪಾಯಿ ಮದ್ಯ ಮಾರಾಟದ ವ್ಯವಹಾರ ನಡೆದಿತ್ತು. ಈ ಮೂಲಕ ಕೇರಳ ರಾಜ್ಯದಲ್ಲಿ ಓಣಂ ಸಂದರ್ಭದಲ್ಲಿ ಹೊಸ ದಾಖಲೆ ಬರೆದಿತ್ತು.