Asianet Suvarna News Asianet Suvarna News

ನವಗ್ರಹಗಳಿಗೆ ಸಂಬಂಧಿಸಿದ ಈ ವೃಕ್ಷ ಪೂಜಿಸಿದರೆ ಸಮಸ್ಯೆಗಳಿಂದ ಮುಕ್ತಿ....

ಜಾತಕದಲ್ಲಿ ಗ್ರಹಗಳ ಸ್ಥಿತಿ ಚೆನ್ನಾಗಿ ಇದ್ದಾಗ ಮಾತ್ರ ಜೀವನದಲ್ಲಿ ಸಂತೋಷದಿಂದ ಇರಲು ಸಾಧ್ಯವಾಗುತ್ತದೆ. ಗ್ರಹ-ಗತಿಗಳು ಬದಲಾಗುತ್ತಾ ಇರುವುದರಿಂದ ಕೆಲವು ಗ್ರಹ ಉಚ್ಛಸ್ಥಿತಿಯಲ್ಲಿದ್ದರೆ, ಇನ್ನು ಕೆಲವು ಗ್ರಹಗಳು ನೀಚ ಸ್ಥಿತಿಯಲ್ಲಿದ್ದು ಸಮಸ್ಯೆಗಳನ್ನು ತಂದೊಡ್ಡುತ್ತವೆ. ಹಾಗಾಗಿ ನವಗ್ರಹಗಳನ್ನು ಆರಾಧಿಸಿದಲ್ಲಿ ಎಲ್ಲ ಗ್ರಹಗಳ ಕೃಪೆಗೆ ಪಾತ್ರರಾಗಬಹುದು. ಕೆಲವೊಮ್ಮೆ ನೀಚ ಸ್ಥಿತಿಯಲ್ಲಿರುವ ಗ್ರಹಗಳ ಬಗ್ಗೆ ತಿಳಿದಾಗ ಅದಕ್ಕೆ ತಕ್ಕ ಪರಿಹಾರವನ್ನು ಮಾಡಿಕೊಳ್ಳಬೇಕಾಗುತ್ತದೆ. ಹಾಗಾಗಿ ಪ್ರತಿಯೊಂದು  ಗ್ರಹಗಳನ್ನು ಬೇರೆ ಬೇರೆ ವೃಕ್ಷದ ರೂಪದಲ್ಲಿ ಆರಾಧಿಸಲಾಗುತ್ತದೆ. ಯಾವ ಗ್ರಹಕ್ಕೆ ಯಾವ ವೃಕ್ಷವನ್ನು ಪೂಜಿಸಬೇಕೆಂಬುದರ ಬಗ್ಗೆ ತಿಳಿಯೋಣ....

Worshipping navagraha vrikshas will give you luck and prosperity
Author
Bangalore, First Published Apr 30, 2021, 1:08 PM IST

ಜ್ಯೋತಿಷ್ಯ ಶಾಸ್ತ್ರದಲ್ಲಿ ನವಗ್ರಹಗಳ ಮಹತ್ವವನ್ನು ತಿಳಿಸಿದ್ದಾರೆ. ನವಗ್ರಹಗಳ ಆರಾಧನೆಯಿಂದ ಗ್ರಹಗಳಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳಿಗೆ ಮುಕ್ತಿ ದೊರೆಯುತ್ತದೆ. ನವಗ್ರಹಗಳನ್ನು ಪೂಜಿಸಲು ಹಲವಾರು ಮಾರ್ಗಗಳಿವೆ. ಅವುಗಳಿಗೆ ಸಂಬಂಧಿಸಿದ ದೇವತೆಗಳನ್ನು, ಪುಷ್ಪಗಳನ್ನು, ವೃಕ್ಷಗಳನ್ನು, ಧಾನ್ಯಗಳನ್ನು ಪೂಜಿಸುವ ಮೂಲಕ ನವಗ್ರಹಗಳನ್ನು ಸಂತೃಪ್ತಿ ಪಡಿಸುವುದರ ಜೊತೆಗೆ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಜಾತಕದಲ್ಲಿ ಗ್ರಹಗಳ ಸ್ಥಿತಿ ನೀಚವಾಗಿದ್ದಾಗ, ಆಯಾ ಗ್ರಹಗಳಿಗೆ ಸಂಬಂಧಿಸಿದ ಪೂಜೆ, ಹೋಮಾದಿಗಳನ್ನು ಮಾಡುವುದರಿಂದ ಗ್ರಹಗಳಿಗೆ ಬಲ ಬರುತ್ತದೆ. ಇದರಿಂದ ಆಯಾ ಗ್ರಹಗಳಿಂದ ಆಗುವ ತೊಂದರೆಯಿಂದ ಮುಕ್ತಿಯನ್ನು ಪಡೆಯಬಹುದಾಗಿದೆ. ಆದರೆ ಹೋಮ, ಹವನಾದಿಗಳನ್ನು ಮಾಡಲು ಎಲ್ಲರಿಂದಲು ಸಾಧ್ಯವಿರುವುದಿಲ್ಲ, ಅಂತಹ ಸಂದರ್ಭದಲ್ಲಿ ನವಗ್ರಹಗಳ ಕೃಪೆ ಪಡೆಯಲು ಸರಳವಾದ ವಿಧಾನಗಳನ್ನು ಸಹ ಜ್ಯೋತಿಷ್ಯದಲ್ಲಿ ಉಲ್ಲೇಖಿಸಿದ್ದಾರೆ. ಅವುಗಳ ಬಗ್ಗೆ ತಿಳಿದುಕೊಂಡರೆ ಶ್ರದ್ಧೆಯಿಂದ ಸುಲಭವಾಗಿ ನವಗ್ರಹಗಳಿಂದ ಉಂಟಾಗುವ ತೊಂದರೆಯನ್ನು ನಿವಾರಿಸಿಕೊಳ್ಳುವುದು ಸಾಧ್ಯವಾಗುತ್ತದೆ. 
ಗ್ರಹದೋಷವಿದ್ದಾಗ ಧನಹಾನಿ, ಅನಾರೋಗ್ಯ, ಕಲಹಗಳಂತಹ ಸಮಸ್ಯೆಗಳು ಎದುರಾಗುತ್ತವೆ. ಅಂತಹ ದೋಷಗಳನ್ನು ನಿವಾರಿಸಿಕೊಳ್ಳಲು ಆಯಾ ಗ್ರಹಕ್ಕೆ ಸಂಬಂಧಿಸಿದ ವೃಕ್ಷಗಳನ್ನು ಪೂಜಿಸುವುದರಿಂದ ಗ್ರಹಗಳಿಗೆ ಸಂಬಂಧಿಸಿದ ದೋಷಗಳು ನಿವಾರಣೆಯಾಗುತ್ತವೆ. ಆ ವೃಕ್ಷಗಳ ಬಗ್ಗೆ ತಿಳಿಯೋಣ..

ಸೂರ್ಯ
ಸೂರ್ಯಗ್ರಹದಿಂದ ಉಂಟಾಗುವ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಶ್ವೇತಾರ್ಕವನ್ನು ಅಂದರೆ ಬಿಳಿ ಎಕ್ಕೆ ಗಿಡವನ್ನು ಪೂಜಿಸಬೇಕು. ಇದರಿಂದ ಶುಭವಾಗುವುದಲ್ಲದೆ, ಸೂರ್ಯನ ಕೃಪೆ ಪ್ರಾಪ್ತವಾಗುತ್ತದೆ. ಜೊತೆಗೆ ಸೂರ್ಯ ನಮಸ್ಕಾರವನ್ನು ಮಾಡುವುದರಿಂದ ಒಳಿತಾಗುತ್ತದೆ.

ಇದನ್ನು ಓದಿ: ಮನೆಯ ನಕಾರಾತ್ಮಕ ಶಕ್ತಿ ಓಡಿಸಲು 'ವಾಸ್ತು' ಉಪಾಯಗಳು…!

ಚಂದ್ರ
ಚಂದ್ರ ಗ್ರಹದಿಂದ ಉಂಟಾಗುವ ದೋಷವನ್ನು ಪರಿಹರಿಸಿಕೊಳ್ಳಲು ಪಲಾಶ ವೃಕ್ಷವನ್ನು ಅಂದರೆ ಮುತ್ತುಗದ ಮರವನ್ನು ಆರಾಧಿಸುವುದು ಒಳ್ಳೆಯದು.ಅಷ್ಟೇ ಅಲ್ಲದೆ ಹಾಲು ಬರುವ ಮರಗಳನ್ನು ಪೂಜಿಸುವುದರಿಂದ ಚಂದ್ರನಿಗೆ ಸಂಬಂಧಿಸಿದ ಅನೇಕ ದೋಷಗಳು ಪರಿಹಾರವಾಗುತ್ತವೆ. ಇದರಿಂದ ಮಾನಸಿಕ ರೋಗಗಳಿಂದ ಸಹ ಮುಕ್ತಿ ದೊರೆಯುತ್ತದೆ.

Worshipping navagraha vrikshas will give you luck and prosperity



ಮಂಗಳ
ಮಂಗಳ ಗ್ರಹಕ್ಕೆ ಸಂಬಂಧಿಸಿದ ತೊಂದರೆಗಳಿಂದ ಮುಕ್ತಿ ಪಡೆಯಲು ಬೇವಿನ ಮರವನ್ನು ಅಥವಾ ಕಗ್ಗಲಿ ವೃಕ್ಷವನ್ನು ಪೂಜಿಸಬೇಕೆಂದು ಹೇಳಲಾಗುತ್ತದೆ. ಇದನ್ನು ಪೂಜಿಸುವುದರಿಂದ ರಕ್ತ ಸಂಬಂಧಿ ತೊಂದರೆಗಳು ನಿವಾರಣೆಯಾಗುತ್ತವೆ. ಮತ್ತು ಕುಜದೋಷವಿದ್ದರೆ ಅದರ ಪ್ರಮಾಣ ತಗ್ಗುತ್ತದೆ ಎಂದು ಹೇಳಲಾಗುತ್ತದೆ.

ಬುಧ
ಬುಧ ಗ್ರಹವನ್ನು ಪ್ರಸನ್ನಗೊಳಿಸಲು ಅಪಾ ಮಾರ್ಗ ಅಥವಾ ಉತ್ತರಾಣಿ (ಉತ್ತರಣೆ) ವೃಕ್ಷವನ್ನು ಪೂಜಿಸಬೇಕೆಂದು ಹೇಳಲಾಗುತ್ತದೆ. ಇದರಿಂದ ಬುಧ ಗ್ರಹದಿಂದ ಉಂಟಾಗುವ ದೋಷಗಳು ನಿವಾರಣೆಯಾಗುತ್ತವೆ.

ಇದನ್ನು ಓದಿ: ಮನೆ ಸುತ್ತ ಈ ಗಿಡ-ಮರ ಬೆಳೆಸಿ ಸಕಾರಾತ್ಮಕ ಶಕ್ತಿ ಹೆಚ್ಚಿಸಿಕೊಳ್ಳಿ... 

ಗುರು 
ಗುರು ಗ್ರಹದಿಂದ ಉಂಟಾಗುವ ದೋಷವನ್ನು ನಿವಾರಿಸಿಕೊಳ್ಳಲು ಅಶ್ವತ್ಥ ವೃಕ್ಷವ್ನನು ಪೂಜಿಸಬೇಕು. ಅಷ್ಟೇ ಅಲ್ಲದೆ ಈ ವೃಕ್ಷದ ಪ್ರದಕ್ಷಿಣೆ ಹಾಕುವುದರಿಂದ ಬೃಹಸ್ಪತಿಗೆ ಸಂಬಂಧಿಸಿದ ಹಲವಾರು ದೋಷಗಳಿಂದ ಮುಕ್ತಿ ದೊರೆಯುವುದಲ್ಲದೆ, ಜ್ಞಾನವು ವೃದ್ಧಿಸುತ್ತದೆ.

ಶುಕ್ರ
ಶುಕ್ರ ಗ್ರಹದಿಂದ ಉಂಟಾಗುವ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಔದುಂಬರ ಅಂದರೆ ಅತ್ತಿ ವೃಕ್ಷವನ್ನು ಪೂಜಿಸಬೇಕು. ಪ್ರತಿನಿತ್ಯ ಔದುಂಬರ ವೃಕ್ಷವನ್ನು ಪ್ರದಕ್ಷಿಣೆ ಹಾಕುವುದರಿಂದ ಶುಕ್ರ ಗ್ರಹಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗಿ, ಉತ್ತಮ ಆರೋಗ್ಯವು ಲಭಿಸುತ್ತದೆ.  

ಶನಿ
ಶನಿ ಗ್ರಹದಿಂದ ಉಂಟಾಗುವ ಕೆಟ್ಟ ಪ್ರಭಾವದಿಂದ ಪಾರಾಗಲು ಶಮೀ ವೃಕ್ಷವನ್ನು ಪೂಜಿಸಬೇಕು. ಶಮೀ ವೃಕ್ಷವನ್ನು ಪೂಜಿಸುವುದರಿಂದ ಅದೃಷ್ಟ ಬರುವುದಲ್ಲದೆ, ಧನ-ಧಾನ್ಯಗಳು ವೃದ್ಧಿಸುತ್ತವೆ. ಶನಿವಾರದಂದು ಶಮೀ ವೃಕ್ಷದ ಬಳಿ ಎಳ್ಳೆಣ್ಣೆಯ ದೀಪವನ್ನು ಹಚ್ಚುವುದರಿಂದ ಸಹ ಶನಿ ದೋಷ ನಿವಾರಣೆಯಾಗುತ್ತದೆ.   

ರಾಹು 
ರಾಹು ಗ್ರಹದಿಂದ ಉಂಟಾಗುವ ಗ್ರಹದೋಷವನ್ನು ಪರಿಹರಿಸಿಕೊಳ್ಳಲು ದೂರ್ವೆ(ಗರಿಕೆ)ಯನ್ನು ಪೂಜಿಸಬೇಕು ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಕಲ್ಪವೃಕ್ಷವನ್ನು ಪೂಜಿಸುವುದರಿಂದ ಸಹ ರಾಹು ಗ್ರಹದಿಂದ ಉಂಟಾಗುವ ಕೆಟ್ಟ ಪರಿಣಾಮಗಳು ತಗ್ಗುತ್ತವೆ ಎಂದು ಹೇಳಲಾಗುತ್ತದೆ.

ಇದನ್ನು ಓದಿ: ಈ ರಾಶಿಗೆ ಶನಿ ಸಾಡೇಸಾತ್‌ನಿಂದ ಮುಕ್ತಿ... ಅಂತಿಮ ಚರಣದಲ್ಲಿದ್ದಾನೆ ಶನಿದೇವ...

ಕೇತು
ಕೇತು ಗ್ರಹದಿಂದ ಆಗುವ ತೊಂದರೆಗೆ ದರ್ಬೆಯನ್ನು ಪೂಜಿಸಬೇಕೆಂದು ಹೇಳಲಾಗುತ್ತದೆ. ಇಲ್ಲವೇ ಹುಣಸೇ, ಅಶ್ವಗಂಧ ವೃಕ್ಷವನ್ನು ಪೂಜಿಸುವುದರಿಂದ ಕೇತು ದೋಷದಿಂದ ಮುಕ್ತಿ ದೊರೆಯುತ್ತದೆ. 

Follow Us:
Download App:
  • android
  • ios